Mankuthimmana kagga (ಮಂಕುತಿಮ್ಮನ ಕಗ್ಗ ) with meanings 71 -80

 

ಪ್ರಕೃತಿ ರಸತಂತ್ರ ರಸಧಾರೆ – 071

ತರಣಿ ಕಿರಣದ ನಂಟು ಗಗನ ಸಲಿಲದ ನಂಟು |

ಧರಣಿ ಚಲನೆಯ ನಂಟು ಮರುತನೊಳ್ ನಂಟು ll

ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |

ಕಿರಿದು ಪಿರಿದೊಂದಂಟು – ಮಂಕುತಿಮ್ಮ ||

ತರಣಿ = ಸೂರ್ಯ ಸಲಿಲ = ನೀರು, ಮರುತ = ಗಾಳಿ, ಕಿರಿದು = ಸಣ್ಣದು, ಪಿರಿದು = ದೊಡ್ಡದು.

ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ತೈತರೀಯ ಉಪನಿಷತ್ತಿನ ಬ್ರಹ್ಮಾನಂದ ವಲ್ಲಿಯಲ್ಲಿನ ಮೊದಲನೇ ಅನುವಾಕದಲ್ಲಿ “ತಸ್ಮಾದ್ವಾ ಏತಸ್ಮಾದಾತ್ಮನ ಅಕಾಶಃ ಸಂಭೂತಃ ಆಕಾಶಾತ್ದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ | ಪ್ರುಥಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ ಸವಾ ಏಷ ಪುರುಷೋನ್ನ ರಸಮಯಃ” ಎಂದು ಜಗತ್ತಿನ ವಸ್ತುಗಳಲ್ಲಿರುವ ಪರಸ್ಪರ ಸಂಬಂಧವನ್ನು ವಿವರಿಸಲ್ಪಟ್ಟಿದೆ. ಆ ಪರಮಾತ್ಮನ ಸೃಷ್ಟಿಯಾದ ಆಕಾಶ ಆ ಆಕಾಶದಲ್ಲಿರುವ ಕೋಟಿ ಕೋಟಿ ಆಕಾಶಕಾಯಗಳು, ಗಾಳಿ, ಸೂರ್ಯಕಿರಣಗಳಿಂದ ಉಂಟಾಗುವ ಶಾಖ. ಶಾಕದಿಂದ ಆವಿ, ಆವಿಯಿಂದ ಮೋಡ, ಮೋಡದಿಂದ ಗುಡುಗು ಮಿಂಚುಗಳು, ಆಗ ಸುರಿಯುವ ಮಳೆ, ಮಳೆಯಿಂದ ತಣ್ಣಗಾಗುವ ಇಳೆ, ತಣ್ಣಗಿನ ಇಳೆಯಲ್ಲಿ ಬೆಳೆಯುವ ಬೆಳೆ, ಬೆಳೆಯಿಂದ ಅನ್ನ ಅಂದರೆ ಆಹಾರ, ಆ ಆಹಾರದಿಂದ ಶಕ್ತಿ. ಆ ಶಕ್ತಿಯಿಂದ ನಡೆಯುವ ಜಗದ್ವ್ಯಾಪಾರ. ಒಂದಕ್ಕೊಂದು ಕೊಂಡಿ ತಗುಲಿಸಿಕೊಂಡು, ನಂಟು ಹಾಕಿಕೊಂಡು ಇವೆ. ಹೀಗೆ ಆಕಾಶ, ಗಾಳಿ, ಮಳೆ, ಬೆಳೆ, ಎಲ್ಲವೂ ಎಲ್ಲ ಜೀವಿಗಳಿಗೂ ಉಪಯೋಗವಾಗುವಂತೆ ಮತ್ತು ಜಗತ್ತಿನ ಎಲ್ಲ ಪ್ರಾಣಿಗಳೂ ಬದುಕುವಂತೆ ಒಂದು ನಂಟು ಹಾಕಿ ಆ ಪರಮಾತ್ಮ ಸೃಷ್ಟಿಸಿದ್ದಾನೆ. ಒಂದನ್ನು ಅಗಲಿ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಈ ಭುವಿಯ ಮೇಲೆ ಇರುವ ಸಕಲ ವಸ್ತುಗಳೂ ಒಂದಕ್ಕೊಂದು ನಂಟನ್ನು ಬೆಳೆಸಿ ಗಂಟನ್ನು ಹಾಕಿಕೊಂಡು ಸಕಲ ಜೀವರಾಶಿಗಳ ಅಸ್ತಿಸ್ಥಕ್ಕೆ ಪೂರಕವಾಗಿದೆ. ಇಲ್ಲಿನ ಯಾವುದಾದರೂ ಒಂದು ನಂಟು ಕಡಿದು ಗಂಟು ಬಿಚ್ಚಿ ಹೋದರೆ ಎಲ್ಲವೂ ಏರುಪೇರಾಗುತ್ತದೆ.

ನೋಡಿ ನಾವು ಉಸಿರಾಡುತ್ತೇವೆ ಆದರೆ ಆದರೆ ಆ ಗಾಳಿಯ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ. ಅದನ್ನು ಎಷ್ಟು ಬೇಕಾದರೂ ಕಲುಷಿತಗೊಳಿಸಲು ನಾವು ಹೇಸುವುದಿಲ್ಲ. ಹಾಗೆ ನೀರು ಭೂಮಿ ಗಿಡ ಮರ ಕಾಡು, ಗುಡ್ಡ ಬೆಟ್ಟ ಕಲ್ಲು ಮಣ್ಣು ಲೋಹ ಅದಿರು, ಪ್ರಾಣಿ ಪಕ್ಷಿ ಯಾವುದನ್ನೂ ನಾವು ಬಿಟ್ಟಿಲ್ಲ. ಬೇರೆ ಪ್ರಾಣಿಗಳು ಅವುಗಳನ್ನು ಕೇವಲ ಉಪಯೋಗಿಸಿಕೊಂಡು ಮಾತ್ರ ಜೀವಿಸುತ್ತವೆ. ಆದರೆ ಮನುಷ್ಯಮಾತ್ರ ತನ್ನ ಕಣ್ಣಿಗೆ ಬೀಳುವ ಸರ್ವವನ್ನೂ “ತನ್ನ” ಉಪಯೋಗಕ್ಕೆ ಆ ಪರಮಾತ್ಮ ಸೃಷ್ಟಿಸಿದ್ದಾನೆ ಎಂಬ ದುರ್ಭಾವದಿಂದ, ಸ್ವಾರ್ಥದಿಂದ, ಲೋಭದಿಂದ, ದುರಾಸೆಯಿಂದ, ಹೆಚ್ಚು ಹೆಚ್ಚು ಹಣ ಸಂಪಾದಿಸಲು ದುರ್ಮಾರ್ಗಕ್ಕೆ ಇಳಿದು ಎಲ್ಲವನ್ನೂ ನಾಶಮಾಡುತ್ತಿದ್ದಾನೆ. ಒಂದು ಇಂಚನ್ನೂ ಸೃಷ್ಟಿಮಾಡಲು ಯೋಗ್ಯತೆ ಇಲ್ಲದ ಈ ಮಾನವ ಕುನ್ನಿ ಎಲ್ಲವನ್ನೂ ನಾಶಮಾಡಲು ಉಧ್ಯುಕ್ತನಾಗಿದ್ದಾನೆ. ಆಹಾರಕ್ಕೆ ಬರ, ನೀರಿಗೆ ಬರ, ಶುದ್ಧಗಾಳಿಗೆ ಬರ, ಇವೆಲ್ಲ ಮಾನವನ ಲೋಭದಿಂದ ಉಂಟಾದ ಪರಿಸ್ತಿತಿ.ಇದರಿಂದ ಪ್ರೀತಿಗೆ ಬರ, ವಿಶ್ವಾಸಕ್ಕೆ ಬರ, ಸೌಹಾರ್ದಯುತವಾದ ಜೀವನಕ್ಕೆ ಬರ . ಈಗ್ಗೆ ೫೦-೬೦ ವರ್ಷಗಳಿಂದ, ಇಡೀ ಜಗತ್ತಿನ ವಾತಾವರಣವೇ ತೀವ್ರವಾಗಿ ಕಲುಷಿತವಾಗಿದೆ, ಈ ಮನುಷ್ಯನ ಲೋಭದಿಂದ. ” “ತಾನು ಬದುಕಿದರೆ, ಸಾಕು ಮತ್ತೆಲ್ಲರೂ ನಾಶವಾದರೂ ನನಗೆ ಚಿಂತೆಯಿಲ್ಲ” ಎನ್ನುವ ಪರಿ. ಮುಂದಿನ ಪೀಳಿಗೆಗೆ ಎಂತಹ ಸ್ತಿತಿಯನ್ನು ನಿರ್ಮಾಣ ಮಾಡಿ ಹೋಗುತ್ತಿದ್ದಾನೆ ಎನ್ನುವ ಪರಿಜ್ಞಾನವೇ ಇಲ್ಲದ ಮನುಷ್ಯ. ಆ ಪರಮಾತ್ಮನಿಗಾಗಿ ದೇವಸ್ಥಾನ, ಇಗರ್ಜಿ, ಮಸೀದಿಗಳನ್ನು ಕಟ್ಟಿ ಪೂಜೆಮಾಡುತ್ತೇನೆ ಎನ್ನುವ ಮನುಷ್ಯ ಆ ಪರಮಾತ್ಮ ಸೃಷ್ಟಿಸಿದ ಎಲ್ಲವನ್ನೂ ನಾಶಮಾಡುತ್ತಿರುವಾಗ, ಎಂತಹ ಪೂಜೆ ಎಂತಹ ಭಕ್ತಿ. ಧಿಕ್ಕಾರವಿರಲಿ ಇಂತಹ ಪ್ರಗತಿಗೆ.

ವಾಚಕರೆ , ಕಟುವಾದರೂ ಇದು ಸತ್ಯ. ಇಂದು ನಾವು ಸರಿಯಾಗದೆ ಇದ್ದರೆ, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಕ್ಷಮಿಸುವುದಿಲ್ಲ, ಜೋಕೆ !!!

ಪ್ರಕೃತಿ ರಸತಂತ್ರ ರಸಧಾರೆ – 072

ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |

ಆವನಾ ಬಂಧುತೆಯ ಜಡೆಯ ಬಿಡಿಸುವನು? ||

ಜೀವ ಜೀವಕೆ ನಂಟು ಜಡ ಚೇತನಕೆ ನಂಟು |

ಆವುದದಕಂಟಿರದು? – ಮಂಕುತಿಮ್ಮ.||

ವಿಶ್ವದಲಿ = ಜಗತ್ತಿನಲಿ, ನೋಡಲೆಲ್ಲರೆಲ್ಲರ = ನೋಡಲು+ಎಲ್ಲರ+ಎಲ್ಲರ, ನತು + ಬಾಂಧವ್ಯ, ಆವನಾ = ಯಾರು, ಬಂಧುತೆಯ=ಈಬಂಧನದ, ಆವುದದಕಂಟಿರದು = ಯಾವುದಕ್ಕೆ ಅಂಟಿರದು?

ಈ ಜಗತ್ತಿನ ಎಲ್ಲವೂ ಒಂದು ರೀತಿಯ ಪರಸ್ಪರ ಕೊಂಡಿಹಾಕಿಕೊಂಡು ಅಂಟಿಕೊಂಡಿವೆ. ಜಡೆಯ ತರಹ ಹೆಣೆದು ಕೊಂಡಿರುವ ಈ ಅಂಟಿನ ನಂಟನ್ನು ಮತ್ತು ಗಂಟನ್ನು ಯಾರು ಬಿಡಿಸುವವರು. ಜೀವ ಜೀವಕೆ ನಂಟು ಚೇತನ ಮತ್ತು ಜಡಕ್ಕೆ ನಂಟು, ಯಾವುದದಕಂಟಿರದು, ಅಂದರೆ ಯಾವುದಕ್ಕೆ ಅಂಟಿರದು ಹೇಳಿ ನೋಡುವಾ ಎಂಬಂತೆ ಜಗತ್ತಿನ ಬಾಂಧವ್ಯಗಳನ್ನು ಈ ಕಗ್ಗದಲ್ಲೂ, ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ವಾಚಕರೆ ಹೌದಲ್ಲವೇ, ಈ ಜಗತ್ತಿನಲ್ಲಿ ಪರಸ್ಪರ ಸಂಬಂಧವಿಲ್ಲದ ವಸ್ತುಗಳೇ ಇಲ್ಲ ಅಲ್ಲವೇ. ಆ ಪರಮ ಶಕ್ತಿಗೆ ಅದೇ ಸೃಷ್ಟಿಸಿದ ಜಗತ್ತಿನೊಂದಿಗೆ ನಂಟು, ಈ ಸೃಷ್ಟಿಯಲ್ಲಿರುವ ಎಲ್ಲವೂ ಆ ಬೃಹತ್ ಚೇತನದ ಮೂಲಕ ಪರಸ್ಪರ ಸಂಬಂಧವನ್ನು ಹೊಂದಿದೆ. ಯೋಚನೆ ಮಾಡಿದರೆ, ನಮಗೆ ತಿಳಿಯುವುದು ಏನೆಂದರೆ, ಸಂಬಂಧ ಇದೆ ಅಥವಾ ಇರಬೇಕು. ಆದರೆ ಆ ಸಂಬಂಧಗಳ ಸೂಕ್ಷ್ಮ ರೂಪಗಳು ನಮಗೆ ಅರಿವಿಲ್ಲ. ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಮತ್ತು ಅವುಗಳ ಶೀತೊಷ್ಣಗಳು ಸುತ್ತುವಿಕೆ ಇವೆಲ್ಲವೂ ಪ್ರಕೃತಿಯೊಂದಿಗೆ ನಂಟು. ಆ ಪ್ರಕೃತಿಯ ಎಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿದೆ. ಒಂದು ಇನ್ನೊಂದಕ್ಕೆ ಪೂರಕ, ಒಂದು ಇನ್ನೊಂದಕ್ಕೆ ಆಹಾರ. ಭೂಮಿಯಗುಣಗಳು ಆಕಾಶಕ್ಕೆ ಒಂದು ಸೂತ್ರದಲ್ಲಿ ಹೋಗುತ್ತವೆ. ಮತ್ತೆ ರೂಪ ಪರಿವರ್ತಿತವಾಗಿ ಭುವಿಗೆ ಇಳಿಯುತ್ತವೆ. ಹಾಗೆ ಇಳಿದ ಗುಣಗಳು ಮತ್ತೆ, ಗಿಡ ಮರಗಳ, ಹೂ ಹಣ್ಣುಗಳ ಗೆಡ್ಡೆ ಗೆಣಸುಗಳ ಮೂಲಕ ಮತ್ತೆ ಪ್ರಕಟವಾಗಿ ಅವನ್ನು ಸೇವಿಸಿದ ಪ್ರಾಣಿಗಳಲ್ಲಿ ಸೇರಿ ಆ ಗುಣಗಳು ಮತ್ತೆ ಆ ಪ್ರಾಣಿಗಳಲ್ಲಿ ರೂಪಾಂತರಗೊಂಡು ಪ್ರಕಟವಾಗುತ್ತದೆ. ಇದು ಜಡ ಮತ್ತು ಜಡ ಜಡಕ್ಕೆ ಇರುವ ಸಂಬಂಧ .

ಇನ್ನು ಚೇತನಕ್ಕೆ ಮತ್ತು ಜಡಕ್ಕೆ ಇರುವ ಸಂಬಂಧವನ್ನು ನೋಡಿದರೆ, ಅದು ಬಹಳ ಸೂಕ್ಷ್ಮ. ಜಡದ ಗುಣಗಳು ಜೀವಕ್ಕೆ ಸೂಕ್ಷ್ಮರೂಪದಿ ಹೋಗುವುದು ಮತ್ತು ಜೀವಿಗಳ ಮೇಲೆ ಅವುಗಳ ಪ್ರಭಾವ, ಗುಣ ಪರಿವರ್ತನೆ, ಗುಣ ಅಭಿವೃದ್ಧಿ ಇವೆಲ್ಲವನ್ನೂ ಆಲೋಚನೆ ಮಾಡಿ ಒಂದು ಗ್ರಂಥವನ್ನು ಬರೆದರೆ ಒಂದು ಹತ್ತು ಸಾವಿರ ಪುಟಗಳೂ ಸಾಲದೇನೋ. ಇರಲಿ ಇಂದು ಆ ಬಂಧ ಸಂಬಂಧಗಳು ಇವೆ ಆದರೂ ರೂಪ ಬದಲಾವಣೆಯಾಗುತ್ತಿದೆ. ಕಲುಷಿತಗೊಳ್ಳುತ್ತಿದೆ. ಭೌತಿಕ ಮತ್ತು ರಾಸಾಯನಿಕ ಸಂಕರವಾಗುತ್ತಿದೆ. ಆ ಸಂಕರದಿಂದ ಪ್ರಕೃತಿಯ ಗುಣಗಳೂ ಬದಲಾಗುತ್ತಿವೆ. ಬದಲಾವಣೆಯು ಪ್ರಕೃತಿ ನಿಯಮದಂತೆ ನಡೆಯುತ್ತಾದರೂ ಇಂದು ಪ್ರಕೃತಿಯಲ್ಲಿ ಆ ಭಗವದ್ ಸೃಷ್ಟಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದಿಂದ ಎಲ್ಲವೂ ಕಲುಷಿತವಾಗುತ್ತಿದೆ.

ನಾವು ಏನು ಮಾಡಬಹುದು ಎಂದರೆ. ನಾವು ಸಾಧ್ಯವಾದಷ್ಟು ಇದಕ್ಕೆ ಪೂರಕವಾದ ಕಾರ್ಯಗಳನ್ನು ಮಾಡದೆ ಕಾಲುಷ್ಯವನ್ನು ತಡೆಯಲು ಪ್ರಯತ್ನಿಸ ಬೇಕು.

ಪ್ರಕೃತಿ ರಸತಂತ್ರ ರಸಧಾರೆ – 073

ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |

ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||

ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |

ಒಂಟಿಸಿಕೊ ಜೀವನವ – ಮಂಕುತಿಮ್ಮ

ನಂಟು ತಂಟೆಗಳ ಗಂಟು ಈ ಬ್ರಹ್ಮಭಂಡಾರ ಅಂಟಿಲ್ಲ ಎನಗೆ ಇದರೊಳು ಎನ್ನದಿರು ಎಂದೆಂದೂ.

ಒಂಟಿ ನೀನು ಒಳಜಗಕೆ ಭಂಟ ಹೊರ ಜಗಕಾಗಿ ಒಂಟಿಸಿಕೋ ಜೀವನವ – ಮಂಕುತಿಮ್ಮ.

ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ , ನಂಟುಗಳು ಮತ್ತು ಅಂಟುಗಳು ಮತ್ತು ಗಂಟುಗಳು ಬಹಳಷ್ಟಿವೆ. “ಇದೆಕ್ಕೆಲ್ಲ ನನಗೆ ಸಂಬಂಧವಿಲ್ಲ” ಎಂದು ಹೇಳಬೇಡ ಎಂದೆಂದೂ. ಅಂತರ್ಯದಲ್ಲಿ ನೀನು ಒಬ್ಬಂಟಿಯಾಗಿರು, ಆದರೆ ಹೊರ ಜಗತ್ತಿಗೆ ನಿನ್ನ ನಂಟು ಒಬ್ಬ ಆಳಿನಂತೆ ಇದ್ದು ಈ ಜೀವನಕ್ಕೆ ನೀ ಅಂಟಿಸಿಕೊ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಒಂದಕ್ಕೊಂದು ನಂಟು ಹಾಕಿಕೊಂಡೇ ಇವೆ. ಯಾವೂದೂ ಸಹ ಅಂಟಿಲ್ಲದೆ ಸ್ವತಂತ್ರವಾಗಿ ಇಲ್ಲವೇ ಇಲ್ಲ ನಾವು ನಮ್ಮ ಇಚ್ಛೆ ಮತ್ತು ಪ್ರಮೇಯಗಳಿಲ್ಲದೆಯೇ ಎಲ್ಲಕ್ಕೂ ನಂಟು ಹಾಕಿಕೊಂಡಿರುತ್ತೇವೆ. ಎಷ್ಟೋ ನಂಟುಗಳು ನಮ್ಮ ಅರಿವಿಗೇ ಬಂದಿರುವುದಿಲ್ಲ. ಕೆಲವರು ” ಇದಕ್ಕೆ ನನಗೆ ಸಂಬಂಧವಿಲ್ಲ” ಎನ್ನುವ ಮಾತನ್ನು ಹೇಳುವುದು ನಾವು ಕೇಳಿರಬಹುದು. ಆದರೆ ಇರುವ ಸಂಬಂಧ ಅವರನ್ನು ಮುಟ್ಟುವ ತನಕ ಅದು ಅವರಿಗೆ ಅರಿವಾಗಿರುವುದಿಲ್ಲ, ಅಷ್ಟೇ. ಈ ಸಂಭಂಧಗಳಲ್ಲಿ ಕೆಲವು ವೈಯಕ್ತಿಕ, ಕೆಲವು ಸಾಮೂಹಿಕ, ಕೆಲವು ಸಾಮಾಜಿಕ ಮತ್ತು ಕೆಲವು ರಾಷ್ಟ್ರೀಯ. ಆದರೆ ಸಂಭಂದವಿಲ್ಲವೆನ್ನಲಾಗದು.

ನಮ್ಮ ಸಂಬಂಧಗಳು ಎಷ್ಟು ಗಟ್ಟಿ ಅಥವಾ ಎಷ್ಟು ಟೊಳ್ಳು ಎನ್ನುವುದು ಆ ವಸ್ತು, ವ್ಯಕ್ತಿ ಅಥವಾ ವಿಷಯದೊಂದಿಗೆ ನಮ್ಮ ಸಂಬಂಧದ ತೀವ್ರತೆ ಮತ್ತು ಆಳದ ಮೇಲೆ ಅಧಾರಪಟ್ಟಿರುತ್ತದೆ. ನಾವು ಬಹಳಷ್ಟುಜನ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳ ತರಹೆ ಇರುವವರನ್ನು ಕಂಡಿದ್ದೇವೆ ಮತ್ತು ಮತ್ತೆ ಹಲವರು ಬೇರೆ ಯಾವ ವಿಷಯದ ಬಗ್ಗೆಯೂ ಯೋಚನೆ ಮಾಡದೆ, ಕೇವಲ ಜಗತ್ತಿನಲ್ಲೇ ಮುಳುಗಿರುವವರೂ ಇದ್ದಾರೆ. ಇದು ಬಿಟ್ಟರೆ ಬೇರೆ ಇಲ್ಲವೇ ಇಲ್ಲ ಎಂದು ಭಾವಿಸಿ ಈ ಜಗತ್ತಿಗೆ ಮತ್ತು ಈ ಜಗತ್ತಿನ ಎಲ್ಲಕ್ಕ್ಕೂ ಅಂಟಿಕೊಂಡಿರುವವರು ಬೇಕಾದಷ್ಟು ಜನ ಸಿಗುತ್ತಾರೆ. ಇಲ್ಲೇ ಇದ್ದು ಎಲ್ಲ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೂ ಯಾವುದಕ್ಕೂ ಅಂಟದವರೂ ಇದ್ದಾರೆ. ಇದ್ದೂ ಇಲ್ಲದಂತಿರುವುದು ಒಂದು ಯೋಗ. ಅದು ಅಭ್ಯಾಸದಿಂದ ಮತ್ತು ಸಂಸ್ಕಾರದಿಂದ ಬರುತ್ತದೆ.

ಅದಕ್ಕೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುವುದನ್ನು ಮತ್ತೊಮ್ಮೆ ನೋಡಿ. ಹೊರಜಗತ್ತಿಗೆ ಎಲ್ಲವನ್ನೂ ತಲೆಯಮೇಲೆ ಹೊತ್ತುಕೊಂಡು, ತನ್ನ ಜವಾಬ್ದಾರಿ ಎಂಬಂತೆ, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವ ಒಬ್ಬ ಸೇವಕನಂತೆ(ಭಂಟ) ಎಲ್ಲಕ್ಕೂ ಅಂಟಿಕೊಂಡು ಕೆಲಸಮಾಡು. ಆದರೆ ಅಂತರಂಗದಲ್ಲಿ ಯಾವುದನ್ನೂ ಒಂದು ಅಭ್ಯಾಸವನ್ನಾಗಿಸಿಕೊಳ್ಳುವುದೋ ಅಥವಾ ಸ್ವಾಭಾವವಾಗಿಸಿಕೊಳ್ಳುವುದೋ ಮಾಡದೆ ಮನಸ್ಸು ಬುದ್ಧಿ ದೇಹಾತ್ಮಗಳಿಗೆ ಇವ್ಯಾವುದರ ಅಂಟೂ ಅಂಟದ ರೀತಿ ಇದ್ದರೆ ಒಳ್ಳೆಯದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಭಗವಂತನನ್ನೇ ನಂಬಿ, “ಪದ್ಮಪತ್ರಮಿವಾಂಭಸಿ – ನೀರಿನಲ್ಲಿರುವ ಕಮಲದೆಲೆಯಂತೆ ಅಂಟಿಯೂ ಅಂಟದಂತಿರುವ ನಿರ್ಲಿಪ್ತ” ಜೀವನವನ್ನು ನಡೆಸಿದರೆ, ಸುಖ – ದುಃಖಗಳ ವರ್ತುಲದಿಂದ ಹೊರಗೆ ನಿಂತು ಕೇವಲ ಸಾಕ್ಷೀ ಭಾವದಿಂದ ನೋಡುತ್ತಾ ಆನಂದವಾಗಿರಬಹುದು. ನಮ್ಮ ಸುಖ, ದುಃಖ, ನೋವು, ನಲಿವು, ಆನಂದ, ಪ್ರೀತಿ ಪ್ರೇಮ ಮುಂತಾದ ಎಲ್ಲ ಭಾವಗಳಿಗೂ ಈ ಜಗತ್ತಿನೊಂದಿಗೆ ನಮಗೆ ಇರುವ ಅಂಟಿನ ತೀವ್ರತೆಯ ಮೇಲೆ ಅಧಾರಪಟ್ಟಿದೆ. ನಮಗೇನು ಬೇಕು ಎಂದು ನಿರ್ಧರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನಿತ್ತಿದ್ದಾನೆ , ಪರಮಾತ್ಮ ಆಯ್ಕೆ ನಮ್ಮದು ಅದರಿಂದ ಬರುವ ಎಲ್ಲ ಫಲಗಳೂ ನಮ್ಮದು.

ಪಾಲ್ ಬೊಮ್ಮನ್ – ನೊರೆ ಸೃಷ್ಟಿ. ರಸಧಾರೆ – 074

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |

ಹೊಮ್ಮುವೆನು ಕೋಟಿರೂಪದಲಿ ನಾನೆಂದು ||

ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |

ನಮ್ಮಿರವು ಮಾಯೆಯಲಿ – ಮಂಕುತಿಮ್ಮ.

ಸುಮ್ಮನೆ ಒಬ್ಬಂಟಿ ಎಂತೆ ಇಹುದು? ಬೇಸರವಹುದು. ಹೊಮ್ಮುವೆನು, ಕೋಟಿ ರೂಪದಲಿ ನಾನು ಎಂದು ಬೊಮ್ಮನು ಎಳಸಿದನಂತೆ. ಆ ಎಳಸಿಕೆಯೆ ಮಾಯೆ. ನಮ್ಮ ಇರವು ಮಾಯೆಯಲಿ – ಮಂಕುತಿಮ್ಮ

ಹೊಮ್ಮುವೆನು = ಉಕ್ಕುವೆನು ಬೊಮ್ಮ= ಪರಬ್ರಹ್ಮ, ಯೆಳಸಿಕೆ= ಅನಿಸಿಕೆ, ನಮ್ಮಿರವು = ನಮ್ಮ ಈ ಜಗತ್ತಿನ ಅಸ್ತಿತ್ವ.

ಆ ಪರಮಾತ್ಮನಿಗೆ ಒಬ್ಬನೇ ಇರುವುದು ಹೇಗೆ ಎಂದು ಅನಿಸಿ ಬೇಸರಬಂದು, ನಾನು ಕೋಟಿ ಕೋಟಿ ರೂಪದಲಿ ಹೊರ ಹೊಮ್ಮುವೆನು ಎಂದುಕೊಂಡು ಆ ಮಾಯಾ ರೂಪದ ಜಗತ್ತನ್ನು ಸೃಷ್ಟಿಮಾಡಿದನಂತೆ. ಆ ಮಾಯೆಯೇ ಈ ಜಗತ್ತು. ನಾವಿರುವುದು ಈ ಮಾಯೆಯೊಳಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಹಾಗಾಗಿ ಪರಬ್ರಹ್ಮ ಹಾಲು. ಉಕ್ಕಿ ಹರಿಯುವ ನೊರೆಯೇ ಸೃಷ್ಟಿ.

ಕಣ್ಣಿಗೆ ಕಂಡೂ ನಮಗೆ ಅರ್ಥವಾಗದ್ದು ಮಾಯೆ. ಆದರೆ ಈ ಮಾಯೆಯ ವಿಸ್ತಾರವನ್ನು ನೋಡಿದರೆ ಅಬ್ಬಬ್ಬಾ ಎನ್ನುವಂತಾಗುತ್ತದೆ. ನಭೋ ಮಂಡಲದಲ್ಲಿ ಒಂದು ಮಹಾಸ್ಫೋಟ. ಅದು ವಿಜ್ಞಾನಿಗಳ ಪ್ರಕಾರ ಒಂದು ಸಾವಿರದಿಂದ ಎರಡು ಸಾವಿರ ಕೋಟಿ ವರ್ಷಗಳ ಹಿಂದೆ ನಡೆದಿರಬೇಕು. ಒಂದೇ ಅಗ್ನಿಗೋಳವಾಗಿದ್ದ ಈ ಜಗತ್ತು ಅಂತರ್ಯದಲ್ಲಿ ಅತ್ಯಧಿಕವಾದ ಶಾಖದಿ೦ದ ಉಂಟಾದ ಆಂತರಿಕ ಗುರುತ್ವ ಮತ್ತು ಬಾಹ್ಯ ವಿಕಿರಣದಿಂದ ಒಂದೇ ಬಾರಿಗೆ ಸ್ಪೋಟಗೊಂಡು ದೂರದೂರಕ್ಕೆಸೆಯಲ್ಪಟ್ಟದ್ದು ಕೇವಲ ಅನಿಲಗಳು. ಆಗ ಅದರ ಶಾಖವೇ ೧೦೦ ಬಿಲ್ಲಿಯನ್ ಡಿಗ್ರೀಗಳಿತ್ತಂತೆ. ಹಾಗೆ ಎಸೆಯಲ್ಪಟ್ಟ ಅನಿಲಗಳಲ್ಲಿನ ಅಯಾನಿಕ್ ಕಣಗಳು ಒಂದಕ್ಕೊಂದು ಘರ್ಷಣೆಗೊಂಡು ಅತೀ ಹೆಚ್ಚಾದ ಶಾಖ ಉಂಟಾಗಿ ಆ ಶಾಖದ ಕಾರಣದಿಂದ ಒಂದಕ್ಕೊಂದು ಸೇರಿ ನಕ್ಷತ್ರವಾಗಿ ಆವಿರ್ಭಾವವಾಯಿತಂತೆ . ಅಂತಹ ಸಮಯದಲ್ಲಿ ಕಡಿಮೆ ಶಾಖವಿದ್ದರೆ ಅದು ಒಂದು ಗ್ರಹವಾಗಿ ರೂಪಿತಗೊಂಡಿತಂತೆ. ಹಾಗೆ ರೂಪಿತಗೊಂಡ ಗ್ರಹಗಳು ಕೋಟಿ ಕೋಟಿ ವರ್ಷಗಳಲ್ಲಿ ತಣ್ಣಗಾಗಿ ತಣ್ಣಗಾಗಿ ಜೀವಿಯ ಅವಿರ್ಭಾವಕ್ಕೆ ಸೂಕ್ತ ವಾತಾವರಣ ನಿರ್ಮಾಣವಾದಾಗ ಇಲ್ಲಿ ನೀರು ಸಸ್ಯ ಆಹಾರ ಹೀಗೆ ಎಲ್ಲವೂ ಉತ್ಪತ್ತಿಯಾಯಿತಂತೆ. ಇದು ವಿಜ್ಞಾನದ ವಿವರಣೆ.

ಆದರೆ ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇನೆಂದರೆ ಇಡೀ ಸೃಷ್ಟಿಗೆ ಕಾರಣ ಒಂದು ಬೃಹತ್ ಚೇತನ. ಆ ಚೇತನ ತನ್ನ ಶಕ್ತಿಯಿಂದಲೇ ತಾನೇ ಈ ಜಗತ್ತಾಗಿ ಪ್ರಕಟಗೊಂಡಿದೆ. ಅದನ್ನೇ ” ತಾಳ್ಳಪಾಕ ಅನ್ನಮಾಚಾರ್ಯರು” ” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ ” ಎಂದು, ಅಂದರೆ ‘ಎಲ್ಲರಲ್ಲೂ ಹುಟ್ಟಿ ಎಲ್ಲರಲ್ಲೂ ಸೇರಿ ಎಲ್ಲರ ರೂಪವೂ ತಾನೇ ಆಗಿ’ಎಂದು ಹೇಳುತ್ತಾರೆ. ಅದಕ್ಕೆ ನಮಗೆ ಎಲ್ಲವೂ ಆ ಪರಮಾತ್ಮನೇ. ಆಕಾಶ, ಸೂರ್ಯ, ಭೂಮಿ ಗಾಳಿ, ಗುಡ್ಡ, ಬೆಟ್ಟ, ನದಿ, ಮರ, ಗಿಡ ಹೀಗೆ ಎಲ್ಲವೂ ನಮಗೆ ಪರಮಾತ್ಮ ಸ್ವರೂಪವಲ್ಲವೇ? ಆದರೆ ನಮಗೆ, ಯಾವುದೂ ಸ್ಪಷ್ಟ ಅಲ್ಲವಲ್ಲ. ಯಾವುದೂ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ನಮ್ಮ ಪರಿಮಿತ ಜ್ಞಾನಕ್ಕೆ ಅದನ್ನು ಭಾವಿಸುವುದೂ ಕಷ್ಟ. ಹಾಗಾಗಿ ಅದು ಮಾಯೆ. ನಮಗೆ ಗೊತ್ತಿರುವುದು ಅಥವಾ ನಾವು ನಂಬಿರುವುದು ಒಂದೇ. ಎಲ್ಲವೂ ಪರಮಾತ್ಮನಿಂದ ಆಗಿದೆ ಎಲ್ಲವೂ ಪರಮಾತ್ಮನಿಂದಲೇ ನಡೆಯುತ್ತದೆ. ಪರಮಾತ್ಮ ಎನ್ನವುದು ಒಂದು ಶಕ್ತಿ. ಆ ಶಕ್ತಿಯಿಂದಲೇ ಸಕಲವೂ. ಎಲ್ಲದಕ್ಕೂ ಅದೇ ಮೂಲ ಮತ್ತು ಎಲ್ಲದಕ್ಕೂ ಅದೇ ಗಮ್ಯ.

ನಾವು ಅದಕ್ಕೆ ಶರಣಾಗಿ, ನಿಯಮಿತ ಕಾರ್ಯಗಳನ್ನು ಮಾಡುತ್ತಾ ಅಹಂಕಾರ ತೊರೆದು ಅವನ ಸೃಷ್ಟಿಯಲ್ಲಿಯ ಎಲ್ಲದರಲ್ಲೂ ಆ ಪರಮ ಶಕ್ತಿಯ ರೂಪವನ್ನೇ ನೋಡುತ್ತಾ ಬಾಳಿದರೆ ಸುಖ. ಅದನ್ನು ಬಿಟ್ಟು ಬೇರೆ ಯಾವುದೇ ಭಾವನೆ ಇದ್ದರೆ ನಿರಂತರ ಸಂಕಟ, ನೋವು ಮತ್ತು ದುಃಖ. ನಂಬುವುದೂ ಬಿಡುವುದೂ ಅವರವರ ನಂಬಿಕೆಗೆ ಬಿಟ್ಟದ್ದು . ವಾಚಕರೆ ನೀವು ಸ್ವತಂತ್ರರು. ನಂಬುವುದೂ ಬಿಡುವುದೂ ನಮ್ಮ ಆಯ್ಕೆಗೆ ಸೇರಿದ್ದು.

ಪಾಲ್ ಬ್ರಹ್ಮ – ನೊರೆಸೃಷ್ಟಿ ರಸಧಾರೆ – 075

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ |

ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ||

ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ |

ನೊರೆಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ. ||

ಮರ ತನ್ನ ಹೆತ್ತ ಬೀಜನು ಇಲ್ಲವೆನಿಸಿ ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ ನೊರೆಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ.

ಒಂದು ಮರ ತನ್ನ ಮೂಲವಾದ ಬೀಜವನ್ನು ಇಲ್ಲವಾಗಿಸಿ ತಾನು ಬೆಳೆದು ರೆಂಬೆ ಕೊಂಬೆಗಳಿಂದ ವಿಸ್ತಾರವಾಗಿ ಬೆಳೆವಂತೆ ಈ ಜಗತ್ತೂ ಸಹ ತನ್ನ ಮೂಲವಾದ ಆ ಅಗ್ನಿಗೋಳವನ್ನು ಇಲ್ಲವಾಗಿಸಿ ಮೆರೆಯುತ್ತಿದೆ ಮತ್ತು ನಮಗೆ ಕಾಣುತ್ತಿದೆ. ಇದು ಹೇಗಿದೆ ಎಂದರೆ ಆ ಪರಬ್ರಹ್ಮ ಹಾಲಾದರೆ ಅತೀ ಉಷ್ಣತೆಯಿಂದ ಕಾದು ಕಾದು ಉಕ್ಕುವ ಹಾಲಿನ ನೊರೆಯಂತೆ ಈ ಸೃಷ್ಟಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಬೀಜದೊಳಗೆ ಒಂದು ಜೀವಕಣ ಅದಕ್ಕೆ ಒಂದು ಹೊದಿಕೆ. ಹೊದಿಕೆ ಪೂರಕ. ಸರಿಯಾದ ಪಾತ್ರ ದೊರಕಿದರೆ ಆ ಬೀಜ ಮೊಳೆತು ಸಸಿಯಾಗಿ ಗಿಡವಾಗಿ ಮರವಾಗಿ ತನ್ನ ಸ್ಥಾನದಲ್ಲೇ ಹರಡಿಕೊಳ್ಳುತ್ತದೆ. ಆದರೆ ಆ ಮರಕ್ಕೆ ಮೂಲವಾದ ಬೀಜ ತನ್ನನ್ನು ತಾನು ಇಲ್ಲವಾಗಿಸಿಕೊಂಡು, ತನ್ನ ಶಕ್ತಿಯಿಂದಲೇ ಆ ಮರದಲ್ಲಿ ಕೋಟ್ಯಾಂತರ ಬೀಜಗಳಿಗೆ ಕಾರಣವಾಗುತ್ತದೆ. ಈ ಜಗತ್ತಿನ ಸೃಷ್ಟಿಯೂ ಹಾಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಒಂದು ಗೋಳ. ಒಳಗೆ ಭಯಂಕರ ಶಾಖ. ಬೀಜ ತನ್ನೊಳಗಿನ ಶಕ್ತಿ ಮತ್ತು ಹೊರಗಿನ ಶಕ್ತಿಯ ಕ್ರಿಯೆಯಿಂದ ಸಿಡಿದು ಸಸಿಯಾದಂತೆ, ಆ ಗೋಳವೂ ಸಿಡಿದು ಈ ಜಗತ್ತೆಂಬ ಮಹಾವೃಕ್ಷವಾಗಿದೆ ಎನ್ನುವುದು ವಿಜ್ಞಾನ. ಕಾದ ಹಾಲು ಉಕ್ಕುವಂತೆ ಉಕ್ಕಿ ನೊರೆಯಲ್ಲ ಹರಡುವಂತೆ ಈ ಜಗತ್ತು ಊಹಾತೀತವಾದ ವಿಸ್ತಾರಕ್ಕೆ ಹರಡಿದೆ. ಹೇಗೆ ಬೆಳೆದ ಮರವೂ ಸಹ ತನ್ನ ಅಸ್ತಿತ್ವಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಸಾರ ಹೀರುತ್ತದೆಯೋ ಹಾಗೆಯೇ ಈ ಜಗತ್ತಿನ ಎಲ್ಲವೂ ತನ್ನ ಮೂಲವಾದ ಆ ಪರಮ ಚೇತನದ ಆಧಾರದ ಮೇಲೆ ನಿಂತಿದೆ. ಒಳಗೂ ಅದೇ ಚೇತನ ಹೊರಗೂ ಅದೇ ಚೇತನ. ” ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೆ” ಯಾವುದರಿಂದ ಯುಗದ ಆದಿಯಲ್ಲಿ ಎಲ್ಲವೂ ಪ್ರಕಟಗೊಂಡವೋ ಅದೇ ಆ ಬೃಹತ್ ಚೇತನ. ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಬೃಹತ್ ಚೇತನವೇ ಆ ಪರಮ ಶಕ್ತಿ. ಅದನ್ನೇ ಪರಬ್ರಹ್ಮ, ದೇವರು ಪರಮಾತ್ಮ ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ.

ಹಾಗಾದರೆ ನಮಗೆಲ್ಲ ಒಂದು ಪ್ರಶ್ನೆ ಇದೆ ಅಲ್ಲವಾ? ಅದು ” ನಾವು ಯಾರು”? ಎಂಬುದು. ನಾವೆಲ್ಲಾ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಹೋಗುವ ಆ ಬೃಹತ್ ಚೇತನದ ಒಂದು ಸೂಕ್ಷ್ಮ ಕಣವಷ್ಟೇ!!!!!. ಹಾಲ ಮೇಲಿನ ನೊರೆಯಂತೆ. ಮನಸ್ಸು ಬುದ್ಧಿ ದೇಹಾತ್ಮಗಳ ಒಂದು ಗೂಡು. ಈ ನಾಲ್ಕೂ ಒಂದು ಕಡೆ ಸೇರಿರುವ ಒಂದು ಮನೆ. ಸೃಷ್ಟಿಯ ಎಲ್ಲಕ್ಕೂ ಇದು ಅನ್ವಯ. ಪ್ರಮಾಣ ಮತ್ತು ಪರಿಮಾಣ ಬೇರೆ ಬೇರೆ ಅಷ್ಟೇ. ಮೇಲೆ ಕೊಂಚ ಅಹಂಕಾರ. ಅದು ನಮ್ಮನ್ನು ಈ ಜಗತ್ತಿನಲ್ಲಿ ಆಡಿಸುತ್ತದೆ. ನಮ್ಮ ಭಾಗಗಳಾದ ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಮೂಲವನ್ನು ಅರಿಯುವುದೇ ಆಧ್ಯಾತ್ಮ. ಆ ಪರಮಾತ್ಮನ ಲೀಲಾವಿನೋದವನ್ನು ಅರ್ಥಮಾಡಿಕೊಳ್ಳುವುದೇ ಆಧ್ಯಾತ್ಮದ ಗುರಿ.

ವಾಚಕರೆ ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನವೂ ಆ ಬೃಹತ್ ಚೇತನದ ಕಾರಣದಿಂದಲೇ ನಡೆಯುತ್ತದೆ. ಅದು ಹಾಲಾದರೆ ಈ ಜಗತ್ತು ನೊರೆ. ಇದು ಚಿಂತನೆ ಮತ್ತು ಮನನಕ್ಕೆ ಒಂದು ಸೂಕ್ತ ವಿಚಾರ.

ಪಾಲ್ ಬ್ರಹ್ಮ- ನೊರೆ ಸೃಷ್ಟಿ. ರಸಧಾರೆ – 076

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |

ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ ||

ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |

ವಿಹರಿಪನು ನಿರ್ಲಿಪ್ತ – ಮಂಕುತಿಮ್ಮ||

ತಾನೊಬ್ಬಂಟಿ = ಒಬ್ಬನೇ ಇದ್ದವನು, ಬಹುವಾಗಲೆಳಸಿ= ಬಹಳವಾಗಬೇಕೆಂದೆಣಿಸಿ, ಬೊಮ್ಮ = ಪರಬ್ರಹ್ಮ, ನಿಜಮಹಿಮೆಯಿಂ = ತನ್ನ ನಿಜ ಮಹಿಮೆಯಿಂದ ಸೃಜಿಸಿ = ಸೃಷ್ಟಿಸಿ, ವಿಶ್ವವನಲ್ಲಿನೆಲೆಸಿ = ವಿಶ್ವವ + ಅಲ್ಲಿ + ನೆಲೆಸಿ ಜೀವತೆಯ = ಜೀವನವ, ಸರಸವಿರಸದಲಿ = ಸರಸ ಮತ್ತು ವಿರಸದಲ್ಲಿ, ವಿಹರಿಪನು ನಿರ್ಲಿಪ್ತ = ತಾನು ನಿರ್ಲಿಪ್ತನಾಗಿ ವಿಹರಿಸುತ್ತಿದ್ದಾನೆ.

ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ, ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪತೆತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಒಂದೇ ಇದ್ದ ಆ ಭೃಹತ್ ಚೇತನ ಹಲವಾಗಿ ಆ ಹಲವು ಬಹಳವಾಗಿ ಪ್ರಕಟಗೊಂಡು, ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬೇರೆ ಬೇರೆ ಕಾರ್ಯಗಳನ್ನು ವಹಿಸಿಕೊಂಡು ಜಗತ್ತಿನ ಎಲ್ಲ ಚಿತ್ರ ವಿಚಿತ್ರಗಳಲ್ಲೂ ತಾನೇ ಇದ್ದುಕೊಂಡು ಒಂದು ರೂಪವಿಲ್ಲದೆ ಹಲವಾರು ರೂಪಗಳಿಂದ ಈ ಜಗತ್ತಿನಲ್ಲಿ ಪ್ರಕಟವಾಗಿದೆ, ಎಂಬುವುದು ವಿಜ್ಞಾನವೂ ಹೌದು ವೇದಾ೦ತವೂ ಹೌದು. ವೇದಾಂತ ಮತ್ತು ವಿಜ್ಞಾನ ಬೇರೆ ಅಲ್ಲ. ಅಧುನಿಕ ವಿಜ್ಞಾನ ಮಾತ್ರ ವೇದಾಂತದ ಜ್ಞಾನಕ್ಕಿಂತ ಬಹಳ ಹಿಂದಿದೆ, ಅಷ್ಟೇ.

ಈ ಪರಮಾತ್ಮನ ಸೃಷ್ಟಿ, ಎಷ್ಟು ಅಗಾಧವೆಂದರೆ, ಎಲ್ಲ ಆಯಾಮಗಳನ್ನೂ ನೋಡಲಾಗದೆ, ನಾವು ನೋಡಿದ್ದೇ ಸತ್ಯವೆಂಬ ಭ್ರಮೆಯಲ್ಲಿರುತ್ತೇವೆ, ಅದೇ ಮಾಯೆ. ನಮ್ಮ ದಿನಂದಿನ ಕೆಲಸಗಳು ಪ್ರೀತಿ, ಪ್ರೇಮ, ಸ್ನೇಹ , ವೈರ, ದಯೆ, ಕರುಣೆ, ಕೋಪ ತಾಪ, ಎಲ್ಲವೂ ಒಂದು ಭ್ರಮೆಯಷ್ಟೇ!! ಇಂಥ ಭ್ರಮೆಗೆ ಕಾರಣ ಸತ್ಯದರಿವಿನ ಅಭಾವ. ಮನುಷ್ಯರಷ್ಟೇ ಅಲ್ಲ ಸಕಲ ಜಗತ್ತು ಈ ಮಾಯೆಯಲ್ಲಿ ನಿಂತಿದೆ. ಅದಕ್ಕೆ ದಾಸರೆಂದರು ” ನೀ ಮಾಯೆಯೋ? ನಿನ್ನೊಳು ಮಾಯೆಯೋ? ” ಎಂದು. ಆ ಪರಮ ಪುರುಷನನ್ನು ಅರಿಯಲು ಮಾಯೆಯ ಪರದೆ ಅಡ್ಡ. ಈ ಮಾಯೆಯನ್ನು ಅರಿಯಲು ಅಹಂಕಾರದ ಪರದೆ ಅಡ್ಡ. ಪರದೆ ಸುಲಭವಾಗಿ ಸರಿಯೋಲ್ಲ. ಅದಕ್ಕೆ ಸಾಧನೆ ಬೇಕು ಕಷ್ಟಪಟ್ಟು ಸರಿಸಬೇಕು. ಮತ್ತೆ ಮತ್ತೆ ಹಿಂದಕ್ಕೆ ಬರುವ ಈ ಪರದೆ ಬಹಳ ಗಟ್ಟಿ. ನಾವು ಅದಕ್ಕಿಂತ ಗಟ್ಟಿಯಾದರೆ, ಪರದೆ ಸರಿಯುತ್ತದೆ. ಪರದೆ ಸರಿದರೆ ಸತ್ಯದರ್ಶನ .

ಹಾಗಾದರೆ, “ಈ ಪರಮಾತ್ಮ ಇದನೆಲ್ಲ ಯಾಕೆ ಸೃಷ್ಟಿ ಮಾಡಿದ ? ಅವನಿಗೇನು ಮಾಡೋಕೆ ಬೇರೆ ಕೆಲಸ ಇರಲಿಲ್ಲವೇ? ಸೃಷ್ಟಿ ಮಾಡಿ ನಮಗೆಲ್ಲ ಈ ಕೆಲಸಕ್ಕೆ ಬಾರದ ಭಾವನೆಗಳನ್ನು ಕೊಟ್ಟು, ಮಾಯೆ ಎಂಬ ಪರದೇನೂ ಇಟ್ಟು, “ಸಾಧ್ಯವಾದರೆ ಸರಿಸಿಕೊಂಡು ಬನ್ನಿ” ಅಂತ ನಮ್ಮನ್ನೆಲ್ಲ ನಮ್ಮ ಪಾಡಿಗೆ ಬಿಟ್ಟು ನಿರ್ಲಿಪ್ತನಾಗಿ ಏಕೆ ಕುಳಿತಿದ್ದಾನೆ ?” ಎಂದರೆ, ಇದು ಅವನ ” ಲೀಲಾ ವಿನೋದ” ಹಾಗೆ ನಮ್ಮ ಮನಸ್ಸಿಗೆ ಬರುವುಕ್ಕೆ ಕಾರಣ ಇಲ್ಲಿ “ನಾವು” ಇದ್ದೇವೆ ಎಂದುಕೊಂಡರೆ ಮಾತ್ರ. ಎಲ್ಲವೂ ಅವನೇ ಎಂದಾಗ ಆ ಪ್ರಶ್ನೆ ಉದ್ಭವವಾಗುವುದಿಲ್ಲ. ” ಈಶಾವಾಸ್ಯಮಿದಂ ಸರ್ವಂ ಯತ್ಕಿಂಚಿತ್ ಜಗತ್ಯಾಂ ಜಗತ್” ಎಂದು ಈಶಾವಾಸ್ಯ ಉಪನಿಷತ್ತು ಹೇಳುವಂತೆ ಎಲ್ಲವೂ ಆ ಪರಮಾತ್ಮನೇ. ಚಿಕ್ಕದು ,ದೊಡ್ಡದು, ಕಾಣುವುದು, ಕಾಣದ್ದು, ಗಿಡ, ಮರ, ಬೆಟ್ಟ ಗುಡ್ಡ, ಆಕಾಶ, ನದಿ, ಗ್ರಹಗಳು, ನಕ್ಷತ್ರಗಳು, ಪ್ರಾಣಿಗಳು, ಪಕ್ಷಿಗಳು ಹೀಗೆ ನಾವೇನೇನು ಕಾಣುತ್ತೆವೇಯೋ, ಊಹಿಸಿಕೊಳ್ಳುತ್ತೆವೆಯೋ, ನಾವು ಏನು ಕಾಣಲಾರೆವೋ ಯಾವುದನ್ನು ಊಹಿಸಿಕೊಳ್ಳಲಾರೆವೋ ಅದೆಲ್ಲವೂ ಆ ಬೃಹತ್ ಚೇತನವೇ ಆಗಿದೆ.

ಹಾಗಾಗಿ ವಾಚಕರೆ, ನೋಡಿ, ಯೋಚಿಸಿ, ಊಹಿಸಿ, ಅನುಭವಿಸಿ ಈ ಜಗತ್ತು ಸತ್ಯವೋ, ನಮ್ಮ ಇರವು ಸತ್ಯವೋ ಎಂದು ಅರಿತು ಸತ್ಯವಾವುದು ಎಂದು ಅರಿಯಲು ನಾವು ಪ್ರಯತ್ನ ಪಡೋಣ. ನಿರಂತರ ಪ್ರಯತ್ನದಿಂದ ನಮಗೆ ಅದರ ಅರಿವು ಮೂಡಬಹುದು.

ರಸಧಾರೆ – 077

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |

ರನ್ನವೋ ಬ್ರಹ್ಮ; ನೋಡವನು – ನಿಜಪಿಂಛ ||

ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು |

ತನ್ಮಯನೋ ಸೃಷ್ಟಿಯಲಿ – ಮಂಕುತಿಮ್ಮ ||

ನಿಜಪಿಂಛ = ನೈಜ ಬಣ್ಣಗಳ ನವಿಲುಗರಿ, ವರ್ಣದೆಣಿಕೆಯಲಿ = ಬಣ್ಣಗಳ ಎಣಿಕೆಯಲಿ, ನವಿಲಿನೊಲು = ನವಿಲಿನಂತೆ

ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣ ಗಳನ್ನೂ ಕಂಡು ತನ್ಮಯವಾಗುವಂತೆ, ತನ್ನಿಂದ ಆದ, ತಾನೇ ಆದ ಈ ಸೃಷ್ಟಿಯನ್ನು ಅನುಭವಿಸುವಾಗ ಆ ಪರಮಾತ್ಮನೂ ತನ್ಮಯನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಇಡೀ ಜಗತ್ತು, ಸೃಷ್ಟಿ ಆದದ್ದೇ ಆ ಪರಮ ಶಕ್ತಿಯಿಂದ. ಆ ಪರಮ ಶಕ್ತಿಯೇ ಜಡವನ್ನೂ ಸೃಷ್ಟಿಸಿ, ಆ ಜಡದೊಳಗೆ ಚೇತನವಾಗಿ ಪ್ರವೇಶಿಸಿ ಜಡಕ್ಕೆ ಚೈತನ್ಯವನ್ನು ತುಂಬಿ ಆಯಾಯಾ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತ ಆ ಅನುಭವದಲ್ಲಿ ಆ ಪರಮಾತ್ಮನೂ ಮಗ್ನನೋ? ಎನ್ನುವ ಪ್ರಶ್ನೆ.

ವಾಚಕರೆ ನೋಡಿ ನಾವು ನಮ್ಮ ದೇಹದ ಭಾಗಗಳನ್ನು ಹೇಗೆ ಹೇಳುತ್ತೇವೆ ಎಂದು. ” ನನ್ನ ಕೈ” ನನ್ನ ಕಾಲು” ನನ್ನ ತಲೆ” ನನ್ನ ಮನಸ್ಸು ” ನನ್ನ ಬುದ್ಧಿ ” ಹೀಗೆ ಎಲ್ಲಕ್ಕೂ “ನನ್ನ” ಎಂದು ಸೇರಿಸುತ್ತೇವೆ . ನಮ್ಮಲಿರುವ ಒಂದು ಪುಸ್ತಕಕ್ಕೂ “ನನ್ನ ಪುಸ್ತಕ” ಎನ್ನುತ್ತೇವೆ. ನಾವು ಪುಸ್ತಕವನ್ನು ಹೊಂದಿದ್ದೇನೆ ಆದ್ದರಿಂದ” ನನ್ನ ಪುಸ್ತಕ” ಹಾಗೆಯೇ ” ಕೈ, ಕಾಲು, ಮೈ, ತಲೆ, ಮನಸ್ಸು, ಬುದ್ಧಿ”ಗಳನ್ನು ನಾನು ಹೊಂದಿದ್ದೇನೆ ಆದ್ದರಿಂದ ” ನನ್ನ” ಸೇರಿಸುತ್ತೇವೆ. ಹಾಗಾದರೆ ಇವನ್ನೆಲ್ಲ ಹೊಂದಿರುವ ಆ ” ನಾನು ” ಯಾರು ಎಂದರೆ, ಅದೇ ಆ ಬೃಹತ್ ಚೇತನದ ಒಂದು ಅಂಶ. ಅಂದರೆ ಆ ಬೃಹತ್ ಚೇತನವೇ ಇವನ್ನೆಲ್ಲ ಹೊಂದಿ “ನನ್ನದು ನನ್ನದು” ಎಂದು ಹೇಳುತ್ತಾ ಅದರಿಂದ ಉಂಟಾಗಬಹುದಾದ ನೋವು ನಲಿವು ಆನಂದ ದುಃಖಗಳಂಥಾ ಅನುಭವಗಳನ್ನು ಅನುಭವಿಸುತ್ತಾ ಈ ಸೃಷ್ಟಿಯಲ್ಲೇ ಮಗ್ನವಾಗಿದೆ. ಆ ಬೃಹತ್ ಚೇತನವನ್ನು ನಮ್ಮ ಶಿವನಸಮುದ್ರದಲ್ಲಿ ಉಂಟಾಗುವ ವಿಧ್ಯುತ್ತಿಗೆ ಹೋಲಿಸಿದರೆ, ನಮ್ಮನ್ನು ನಾವು ನಮ್ಮ ಮನೆಗಳಲ್ಲಿ ಬೆಳಗುವ ಒಂದು ಸಣ್ಣ ಬಲ್ಬ್ ಹೋಲಿಸಿಕೊಳ್ಳಬಹುದು. ಇಲ್ಲಿ ಬೆಳಗುವುದು ಯಾವುದೆಂದರೆ ಅಲ್ಲಿನ ವಿಧ್ಯುತ್. ಆದರೆ ಅದು ಬೆಳಗಲು ಸಾಧನ ಈ ಸಣ್ಣ ಬಲ್ಬ್. ಇಡೀ ದೇಶದಲ್ಲಿ ಬೆಳಗುವ ಮತ್ತು ಕೆಲಸ ಮಾಡುವ ಎಲ್ಲ ವಿಧ್ಯುತ್ ಉಪಕರಣಗಳಿಗೂ ಆ ವಿಧ್ಯುತ್ತಿನ ಮೂಲ ಒಂದೇ. ಹಾಗೆಯೇ ಈ ಸೃಷ್ಟಿಯಲ್ಲಿ ನಾವೆಲ್ಲಾ ಒಂದೊಂದು ಬಲ್ಬಗಳು.ನಮ್ಮಲ್ಲಿ ಬೆಳಗುವ ಆ ಜ್ಯೋತಿಯೇ ಆ ಪರಮ ಚೇತನ.

ಇಲ್ಲಿ ನಾನು ಎನ್ನುವ ಭಾವ ಇದೆ. ಹಾಗಾಗಿ ನಾನು ನೋಡುತ್ತೇನೆ, ಮಾಡುತ್ತೇನೆ, ಓದುತ್ತೇನೆ, ಓಡುತ್ತೇನೆ…. ಇತ್ಯಾದಿಗಳ ಪ್ರಯೋಗ ಮಾಡುತ್ತೇವೆ. ಎಂದು ” ನಾನು” ಎನ್ನುವ ಭಾವವಿಲ್ಲವೋ ಅಂದು ನಾವೂ ಸಹ ಆ ಬೃಹತ್ ಚೇತನದ ರೀತಿಯೇ ಇಲ್ಲಿ ಆನಂದದಿಂದ ಮಗ್ನರಾಗಿರಬಹುದು. ಎರಡೆ೦ದುಕೊಂಡರೆ ಬೇಧ ಮತ್ತು ಅದಕ್ಕನ್ವಯಿತ ಭಾವ. ಒಂದೇ ಆದರೆ ಬೇಧವಿಲ್ಲ. ನವಿಲು ತನ್ನ ಮೈಮೇಲಿನ ಗರಿಗಳ ವಿವಿಧ ಬಣ್ಣಗಳನ್ನು ಕಂಡು ಆನಂದದಿಂದ ಮಗ್ನವಾಗಿ ಹೇಗೆ ನಾಟ್ಯ ಮಾಡುತ್ತದೋ ಹಾಗೆಯೇ ಆ ಪರಮಾತ್ಮ ತನ್ನಿಂದ ಆದ, ತಾನೇ ಇರುವ ಈ ಜಗತ್ತಿನ ಎಲ್ಲದರೊಳಗೂ ಇದ್ದು ಆ ಎಲ್ಲ ವಸ್ತುಗಳಲ್ಲಿ ಉಂಟಾಗುವ ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಾ ಮತ್ತನಾಗಿ , ತನ್ಮಯನಾಗಿ ಆನಂದದಿಂದ ಇದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.

ನಾನು ನಾನು ಅನುಭವಿಸುತ್ತಿದ್ದೇನೆ ಎಂದು ಭಾವಿಸದೆ, ಎಲ್ಲವೂ ಆ ಪರಮಾತ್ಮನಿಗೆ ಸೇರಿದ್ದು ಎನ್ನುವ ಭಾವ ತಳೆದಾಗ, ನಮ್ಮಲ್ಲಿರುವ ಅಹಂಕಾರವೂ ಕಡಿಮೆಯಾಗಬಹುದು ಅಲ್ಲವೇ ವಾಚಕರೆ?

ರಸಧಾರೆ – 078

ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |

ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||

ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |

ಮೆರೆಯುವನು ಪರಬೊಮ್ಮ – ಮಂಕುತಿಮ್ಮ ||

ತಳೆಯುತ್ತ = ಧರಿಸುತ್ತ , ಪರಿಕಿಸುತೆ = ಪರೀಕ್ಷಿಸುತ್ತಾ , ಮುಕುರದಲಿ = ಕನ್ನಡಿಯಲಿ, ಸೊಗಸುಗಳ = ಅಂದ ಚೆಂದಗಳ, ಪರಿಯ = ವಿಧಗಳನ್ನು ವಿಲಸಿಪಂತೆ = ವಿಲಾಸದಿಂದ (ಆನಂದದಿಂದ)

ಒಂದು ಹೆಣ್ಣು ಹೇಗೆ ತೊಟ್ಟ ಒಡವೆಗಳನ್ನು ತೆಗೆದು ಮತ್ತೆ ತೊಟ್ಟು ಕನ್ನಡಿಯಲಿ ತನ್ನ ಅಂದ ಚೆಂದವನ್ನು ನೋಡಿಕೊಳ್ಳುತ್ತಾ ಮೈ ಮರೆಯುತ್ತಾಳೋ, ಹಾಗೆ ತಾನೆ ಸೃಜಿಸಿದ ಈ ಜಗತ್ತಿನಲ್ಲಿ ಬೇರೆ ಬೇರೆ ದೇಹಗಳನ್ನು ಧರಿಸಿ ಅದರಲ್ಲಿ ಸಿಗುವ ಹತ್ತು ಹಲವಾರು ಭಾವನೆಗಳ ಆನಂದದಿಂದ ಅನುಭವಿಸುತ್ತಾ ಮೈ ಮರೆತಿದ್ದಾನೋ ಏನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಸಾಮಾನ್ಯ ತಿಳುವಳಿಕೆ ಏನೆಂದರೆ ಎಲ್ಲ ಪ್ರಾಣಿಗಳೂ ಹುಟ್ಟುತ್ತವೆ, ಕೆಲಕಾಲ ಬದುಕಿ ಸಾಯುತ್ತವೆ ಎಂದು. ಆದರೆ ವಾಸ್ತವಿಕತೆಯೇ ಬೇರೆ ಅಲ್ಲವೇ? ಹುಟ್ಟು ಸಾವುಗಳೆಂಬುದು ಕೇವಲ ನಮ್ಮ ಪರಿಭಾಷೆಗಳಷ್ಟೇ ಎಂದು ಅನಿಸುತ್ತದೆ. ಇದನ್ನು ರೂಪಾಂತರವೆಂದರೆ ಹೆಚ್ಚು ಸೂಕ್ತವೆಂದು ಅನಿಸುತ್ತದೆ. ಬೇರೆ ಬೇರೆ ಮೂಲಗಳಿಂದ ಬಂದ ದೇಹ ಮನಸ್ಸು ಬುದ್ಧಿ ಆತ್ಮಗಳು ಒಂದಾದಾಗ ಒಂದು ಪ್ರಾಣಿಯ ಆವಿರ್ಭಾವ. ಗಿಡ ಮರಗಳಿಗೂ ಇದು ಅನ್ವಯಿಸುತ್ತದೆ. ಆ ಎಲ್ಲ ಮೂಲಗಳಿಗೂ ಮೂಲ ಒಂದೇ.

ಹಾಗಾಗಿ ಒಂದೇ ಬೃಹತ್ ಚೇತನ ತನ್ನ ಮೂಲದಲ್ಲಿ ಇದ್ದುಕೊಂಡು ತಾನು ಬೇರೆ ಬೇರೆ ರೂಪಗಳಿಗೆ ಹೊಂದುವಂತೆ ತನ್ನನ್ನು ತಾನು ತನ್ನ ಮೂಲ ಗುಣವನ್ನು ಬಿಡದೆ, ಬದಲಾಯಿಸಿಕೊಳ್ಳುತ್ತಾ. ರೂಪಾಂತರಗೊಳ್ಳುತ್ತಾ, ಎಲ್ಲ ರೂಪಗಳಲ್ಲೂ ತಾನಿದ್ದುಕೊಂಡು ಎಲ್ಲ ರೂಪಗಳಲ್ಲಿ ಆಗಬಹುದಾದ ಅನುಭವ ಆನಂದ ಮುಂತಾದ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಆನಂದದಿಂದ ತನ್ಮಯವಾಗಿದೆ. ಇದನ್ನು ಅರಿಯದೆ ನಾವು ” ನಾನು ಸುಖವಾಗಿದ್ದೇನೆ” ನನಗೆ ದುಃಖವಾಗಿದೆ” “ನನಗೆ ನೋವಾಗುತ್ತದೆ” ಎಂದು ಹೇಳುತ್ತಾ ಪ್ರಾಕೃತ ಭಾವದಿಂದ ಮಾತನಾಡುತ್ತೇವೆ.

“ಸ ಏಕಾಕೀ ನ ರಮತ” ಅವನು ಒಬ್ಬನೇ ಇದ್ದ. ಬೇಜಾರಾಯಿತೋ ಏನೋ ಈ ಜಗತ್ತನ್ನು ಸೃಷ್ಟಿಸಿದ. ತನ್ನ ಶಕ್ತಿಯಿಂದಲೇ ಇದನ್ನು ಸೃಷ್ಟಿಸಿದ. ಈ ಜಗತ್ತಿನಲ್ಲಿರುವ ಎಲ್ಲದರಲ್ಲೂ ಚೇತನಾ ಸ್ವರೂಪದಲ್ಲಿ ಸೇರಿ ಆಯಾಯಾ ವಸ್ತುಗಳನ್ನು ಅನುಭವಿಸುತ್ತಾ ಆನಂದದಿಂದ ಇದ್ದಾನೆ.

ಎಲ್ಲವೂ ಅವನಿಂದಲೇ. ಎಲ್ಲವೂ ಅವನೇ. ಎಲ್ಲವೂ ಅವನಿಗಾಗಿಯೇ ಎಂದು ನಾವು ಯೋಚಿಸಿದಾಗ, ನಾವೂ ಅವನ ಆ ಬೃಹತ್ ರೂಪದ ಒಂದು ಅಂಶವೆಂದುಕೊಂಡಾಗ, ವಸ್ತು, ವ್ಯಕ್ತಿ ವಿಷಯ ಸಂಬಂಧವಾದ ಭಾವನೆಗಳು ನಶಿಸಿ ಅವುಗಳ ಬಗ್ಗೆ ಒಂದು ನಿರ್ಲಿಪ್ತತೆ ಬೆಳೆದಾಗ, ಮನಸ್ಸು ನಿರ್ಮಲವಾಗಿ, ಅನಂದವಾಗಿರಬಹುದು.

ವಿಶ್ವ ಲೀಲೆ. ರಸಧಾರೆ – 079

ಬರೆವ ಹಲಗೆಯನೊಡೆದು ಬಾಲಕನು ತಾನದನು |

ಮರಳಿ ಜೋಡಿಪೆವೆನ್ನುತಾಯಾಸಗೊಳುತ ||

ಸರಿ ಚೌಕಗೈವಾಟದಲಿ ಜಗವ ಮರೆವಂತೆ |

ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ ||

ಜೋಡಿಪೆವೆನ್ನುತಾಯಾಸಗೊಳುತ = ಜೋಡಿಸುವೆ ಎನ್ನುತ ಆಯಾಸಗೊಳುತ, ಬರೆವ ಹಲಗೆ = ಹಿಂದಿನ ಕಾಲದಲ್ಲಿ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು.

ಹಿಂದಿನ ಕಾಲದಲ್ಲಿ ಮಕ್ಕಳು ಬಳಪದಿಂದ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು ಒಂದು ರೀತಿಯ ಮೃದು ಕಲ್ಲಿನ ಹಲಗೆಯಾಗಿರುತ್ತಿತ್ತು. ಅದಕ್ಕೆ ಮೃದು ಮರದ ಚೌಕಟ್ಟಿರುತ್ತಿತ್ತು. ಅಕಸ್ಮಾತ್ ಅದು ಕೆಳಗೆ ಬಿದ್ದು ಒಡೆದು ಹೋದರೆ, ಮತ್ತೆ ಅಂಟಿಸಲಾಗುತ್ತಿರಲಿಲ್ಲ. ಹಾಗೆ ಒಡೆದ ಹಲಗೆಯನ್ನು ಅಂಟಿಸಲು ಪ್ರಯತ್ನಪಟ್ಟು ಆಯಾಸಪಡುವ ಮಗುವಿನಂತೆ, ಆ ಪರಮಾತ್ಮನೂ ಸಹ ಒಂದೇ ಆಗಿದ್ದ ತಾನು ಹಲವಾಗಿ, ಅದನ್ನೆಲ್ಲ ಮತ್ತೆ ಒಟ್ಟಿಗೆ ಅಂಟಿಸಲು ಮಾಡುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದಾನೋ ಎಂದು ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಒಂದೇ ಆಗಿದ್ದ ಆ ಪರಮ ವಸ್ತುವು ತನ್ನ ಸಂಕಲ್ಪದಿಂದಲೇ ಸಿಡಿದು ಬಹಳವಾಗಿ, ಆಕಾಶ, ಆಕಾಶ ಗಂಗೆಗಳು, ನಕ್ಷತ್ರ ಪುಂಜಗಳು, ಸೌರವ್ಯೂಹಗಳು ಗಾಳಿ ನೀರು, ಭೂಮಿ, ಇತರೆ ಗ್ರಹಗಳು, ಪ್ರತಿಗ್ರಹಗಳ ಮೇಲಿನ ಕೋಟ್ಯಾಂತರ ವೈವಿಧ್ಯತೆಗಳು,ಹೀಗೆ ನಮಗೆ ಕಾಣುವ, ನಾವು ಅನುಭವಿಸಬಹುದಾದ, ಊಹಿಸಬಹುದಾದ ಮತ್ತು ಊಹಿಸಲೂ ಅಸಾಧ್ಯವಾದ ಇಡೀ ಜಗತ್ತಾಗಿ ಮಾಡಿ, ತಾನೇ ಅದರೊಳಗೆ ಚೈತನ್ಯ ರೂಪದಲ್ಲಿ ಪ್ರಕಟಗೊಂಡು ಕ್ಷಣ ಕ್ಷಣಕ್ಕೂ ಸೃಷ್ಟಿ ಸ್ಥಿತಿ ಲಯಗಳೆಂಬ ಪ್ರಕ್ರಿಯೆಯನ್ನಿಟ್ಟು ಎಲ್ಲಕ್ಕೂ ಒಂದು ನಿಗಧಿತ ಸಮಯವನ್ನಿತ್ತು ಇಡೀ ಜಗತ್ತೇ ನಮಗೆ ಬೇರೆ ಬೇರೆಯಾಗಿ ಕಾಣುವಂತೆ ಇಟ್ಟಿದ್ದಾನೆ. ಬಾಲಕನು ಒಡೆದ ಬರೆಯುವ ಹಲಗೆಯನ್ನು ಜೋಡಿಸಲು ಪ್ರಯತ್ನಪಡುವುದರಲ್ಲಿ ತಲ್ಲೀನನಾದಂತೆ, ಬೇರೆ ಬೇರೆಯಾಗಿರುವ ಅಥವಾ ಬೇರೆಬೇರೆಯಾಗಿ ಕಾಣುವ, ಒಡೆದ ಹಲಗೆಯಂತೆ ಇರುವ ಈ ಜಗತ್ತಿನ ಹಲಗೆಯನ್ನು, ತಾನೂ ಜೋಡಿಸಲು ಪ್ರಯತ್ನಪಡುತ್ತಾ ತನ್ಮಯನಾಗಿದ್ದಾನೋ, ಈ ಪರಮಾತ್ಮ ಎಂದು ಒಂದು ಸಂದೇಹವನ್ನು ವ್ಯಕ್ತಪಡಿಸುತ್ತಾರೆ ಶ್ರೀ ಡಿ.ವಿ.ಜಿ. ಯವರು.

ಅವನ ಸೃಷ್ಟಿಯಲ್ಲಿ ಒಡಕು ಇಲ್ಲ. ಎಲ್ಲವೂ ಸಮರ್ಪಕವಾಗೆ ಇದೆ. ” ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ, ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ” ಎನ್ನುತ್ತದೆ ಈಶಾವಾಸ್ಯೋಪನಿಷತ್ತಿನ ಶಾಂತಿ ಮಂತ್ರ. ಪರಮಾತ್ಮ ಸೃಷ್ಟಿಯ ಪೂರ್ಣತ್ವವನ್ನು ಸಾರಿ ಸಾರಿ ಹೇಳುತ್ತದೆ. ಆದರೆ ಒಡೆದಿರುವುದು ಏನು. ನಾವುಗಳು ಅದನ್ನು ನೋಡುವ ಪರಿ ಅಥವಾ ಬಗೆ. ಮಾನವನ ಅಲ್ಪ ಬುಧ್ಧಿಯಿಂದ ಅತೀ ಸುಂದರವಾದ ಈ ಪ್ರಪಂಚವನ್ನು ಪ್ರಗತಿಯ ಹೆಸರಿನಲ್ಲಿ ಜಾತಿ, ಮತ, ಭಾಷೆ, ಧರ್ಮಗಳ ಹೆಸರಿನಲ್ಲಿ ಒಡೆದು ಒಡೆದು ಚೂರು ಚೂರು ಮಾಡಿದ್ದಾನೆ. ಎಲ್ಲಿ ನೋಡಿದರೂ ಜಗಳ, ಕಿತ್ತಾಟ, ದುರ್ಮಾರ್ಗ, ಇವೆಲ್ಲವುಗಳಿ0ದ ಚೂರಾಗಿದೆ ಈ ಜಗತ್ತು.

ಇನ್ನು ಮನುಷ್ಯನ ಅಂತರ್ಯವನ್ನು ನೋಡಿದರೆ, ಸಂಶಯಗಳಿಂದ, ಪಕ್ಷಪಾತದಿಂದ, ದ್ವೇಷದಿಂದ, ಅಹಂಕಾರದಿಂದ ದುರಾಸೆಯಿಂದ ಇದೂ ಸಹ ಇಂದು ಚೂರು ಚೂರಾಗಿದೆ. ಮನುಷ್ಯನ ಮನಸ್ಸಿನಲ್ಲಿ ಒಂದು ಸುಮುಖವಾದ, ಸರ್ವ ಹಿತ ಹೇತುವಾದ ಆಲೋಚನೆ ಇಲ್ಲವೇ ಇಲ್ಲ. ” ಕ್ಷಣಂ ಚಿತ್ತಂ, ಕ್ಷಣಂ ಪಿತ್ತಂ” ಎನ್ನುವಂತೆ ಸ್ಥಿಮಿತವೆ ಇಲ್ಲದೆ, ಅವನ ಶಾಂತಿಯೂ ಭಗ್ನವಾಗಿದೆ. ಇಂತಹ ಅಶಾಂತ ಮನಸ್ಸು ಪರರ ಶಾಂತಿಯನ್ನೂ ನಿರಂತರ ಕದಡುತ್ತಲೇ ಇರುತ್ತದೆ. ಹಾಗಾಗಿ ಶಾಂತಿಯ ಭಗ್ನ.

ಆ ಪರಮ ಚೇತನ ಹಲವಾರು ಬಾರಿ ತನ್ನ ಇರವನ್ನು ಸೂಕ್ಷ್ಮ ರೂಪದಲಿ ತೋರಿ, ಅರಿತುಕೊಳ್ಳುವ ಸಂದರ್ಭಗಳನ್ನು ತಂದೊಡ್ಡಿ, ಮಾನವನಿಗೆ ಅರಿತುಕೊಳ್ಳಲು ಯೋಗ್ಯ ಅವಕಾಶವನ್ನು ನೀಡಿದೆ, ನೀಡುತ್ತಿದೆ ಮತ್ತು ನೀಡುತ್ತಲೇ ಇರುತ್ತದೆ. ಕೇವಲ ಮೂರ್ಖತನದಿಂದ ಮಾನವ ಕಲಿಯುವುದಿಲ್ಲ. ಒಡೆದ ಈ ಜಗತ್ತಿನ ಜಾತಿ ಮತ ಧರ್ಮ ಭಾಷೆಗಳೆಂಬ ಚೂರುಗಳನ್ನೆಲ್ಲ ಒಂದಾಗಿಸಿ ಈ ಜಗತ್ತು ನಮಗೆ ಪರಮಾತ್ಮ ಕೊಟ್ಟ ಒಂದು ಪರಿಪೂರ್ಣ ತಾಣ, ಇದನ್ನು ಭಾಗ್ನಮಾಡಿದರೆ ನಮಗೆ ಉಳಿಗಾಲವಿಲ್ಲ ಎಂದು ಅರಿತು ಬಾಳಿದರೆ ಸುಖ ಇಲ್ಲದಿದ್ದರೆ ನಾಶ.

ಬನ್ನಿ ನಾವೂ ಸಹ ಒಡೆದ ಈ ಭಾಗಗಳನ್ನು ಅಂಟಿಸಲು ಪ್ರಯತ್ನ ಪಡೋಣ.

ವಿಶ್ವ ಲೀಲೆ. ರಸಧಾರೆ – 080

ಚೀಟಿಯಾಟದ ಬಿನದಿ ತಾನೋರ್ವನಿರ್ವರವೊಲ್ |

ಆಟವಾಡುತಲಿ ತನ್ನೊರ್ತನವ ಮರೆವಾ ||

ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |

ಪಾಟಿಯಲಿ ಮರೆತಿಹನು.- ಮಂಕುತಿಮ್ಮ ||

ಚೀಟಿಯಾಟ = ಇಸ್ಪೀಟಾಟ, ಬಿನದಿ = ತರಹೆ, ತಾನೋರ್ವ = ತಾನು ಒಬ್ಬನೇ, ಇರ್ವರೋಲ್ = ಇಬ್ಬರಂತೆ, ತನ್ನೊರ್ತನವ = ತನ್ನ ಒಂಟಿತನವ, ಮರೆವಾ ಮಾಟದಲಿ = ಮರೆವ ರೀತಿಯಲಿ, ಬೊಮ್ಮನುಂ = ಬ್ರಹ್ಮನು, ತನ್ನೇಕತೆಯ = ಒಂಟಿಯಾಗಿ, ಜೀವ ಪಾಟಿಯಲಿ = ಜೀವರಾಶಿಗಳ ಮಧ್ಯೆ

ನಮ್ಮ ಅಪ್ಪನ ಕಾಲಕ್ಕೆ ಹಲ ದೊಡ್ಡವರು ಇಸ್ಪೀಟಿನ ಒಂದು ಬಗೆಯ ಆಟವಾಡುತ್ತಿದ್ದರು. ಅದಕ್ಕೆ ಪೇಶೆನ್ಸ್ ಅಥವಾ ಸಾಲಿಟೇರ್ ಎಂದು ಕರೆಯುತ್ತಿದ್ದರು. ಒಬ್ಬರೇ ಕುಳಿತು ಆಡುವಾಟ. ಇನ್ನೊಂದು ರಮ್ಮಿ. ಅದರಲ್ಲಿ ಒಬ್ಬರಿಗಿಂತ ಹೆಚ್ಚುಜನ ಆಡುವುದು. ಆದರೆ ಕೆಲವರು ವಯಸ್ಸಾದವರು, ಕಾಲಯಾಪನೆಗೆ ಎರಡೂ ಕಡೆಯ ಆಟವನ್ನು ಒಬ್ಬರೇ ಆಡುತ್ತಿದ್ದರು. ಹಾಗೆ ಆಡುವಾಗ ಒಬ್ಬರೇ ಮೈ ಮರೆಯುತ್ತಿದ್ದರು. ಆ ರೀತಿ ತಾನೇ ಸೃಷ್ಟಿಸಿದ ಈ ಜಗತ್ತಿನಲ್ಲಿ ತಾನು ಮತ್ತೆಲ್ಲದರೊಳಗೆ ಸೇರಿ ತಾನೂ ಈ ಜಗತ್ತನ್ನು ಅನುಭವಿಸುತ್ತ ಮೈ ಮರೆತ್ತಿದ್ದಾನೋ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ಹಾಗೆ ತಾನೇ ಜಗವೆಲ್ಲ ಸೃಷ್ಟಿಸಿ, ಕೋಟ್ಯಾಂತರ ತುಣಕುಗಳನ್ನು ಇಸ್ಪೀಟಿನ ಎಲೆಗಳಂತೆ ಇಡೀ ನಭೋ ಮಂಡಲಕ್ಕೆ ಹರಡಿ ತಾನೂ ಇದರೊಳಗೆ ಚೈತನ್ಯವಾಗಿ ಸೇರಿ ಒಂದು ಲೀಲಾ ವಿನೋದವನ್ನು ಆಡುತ್ತಾ ತನ್ಮಯನಾಗಿ ಮರೆತು ಮೆರೆಯುತ್ತಿದ್ದಾನೆ ಎಂದು ಅಣಕವಾಡುತ್ತಾರೆ ಮಾನ್ಯ ಗುಂಡಪ್ಪನವರು. ಒಳಗೂ ಹೊರಗೂ ಅವನೇ, ಆ ಚೈತನ್ಯವೇ ಇದೇ. ” ಭಾವಮುಲೋನ ಬಾಹ್ಯಮುನಂದುನು” ಬಾಹ್ಯದಲ್ಲೂ ಭಾವದಲ್ಲೂ ಆ ಪರಮಶಕ್ತಿ ಸ್ವರೂಪನಾದ ಪರಮಾತ್ಮನೇ ಎನ್ನುತ್ತಾರೆ ಮಾನ್ಯ ತಾಳ್ಳಪಾಕ ಅನ್ನಮಾಚಾರ್ಯರು.

ನಾರಾಯಣೋಪನಿಷತ್ತಿನಲ್ಲಿ, ” ಅನತರ್ಬಹಿಸ್ಚ ತತ್ ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ ” ಎಂದು ಒಳಗೂ ಹೊರಗೂ ಇರುವ ಆ ಪರಮಾತ್ಮನ ಸ್ವರೂಪದ ಉಲ್ಲೇಖ ಇದೆ. ಆ ಪರಮಾತ್ಮನಿಗೆ ಒಂದು ದೇಹವಿಲ್ಲ. ಎಲ್ಲ ದೇಹಗಳೂ ಅವನೇ ಮತ್ತು ಅವನದೇ. ಅವನಿಲ್ಲದೆ ಈ ದೇಹಗಳೆಲ್ಲ ಇಲ್ಲವೇ ಇಲ್ಲ. ಏಕೆಂದರೆ ಅವನೇ ದೇಹ ಅವನೇ ಮನಸ್ಸು ಅವನೇ ಬುದ್ಧಿ ಮತ್ತು ಅವನೇ ಆತ್ಮ. ನಮಗಾಗುವ ನೋವು, ನಲಿವು, ದುಃಖ, ಸಂತೋಷ, ಪ್ರೀತಿ, ಪ್ರೇಮ ಎಲ್ಲವನ್ನೂ ಅನುಭವಿಸುವುದು ನಮ್ಮೊಳಗಿನ ಆ ಪರಮ ಚೇತನವೇ ಅಲ್ಲವೇ.

ಅಯ್ಯೋ ಎಲ್ಲವೂ ಅವರೇ ಆದರೆ ನಾವು ಯಾರು? ಎಂದರೆ, ನಾವು ಕೇವಲ ” ನಾವು ಅಥವಾ ನಾನು” ಎನ್ನುವ ಭಾವ ಮಾತ್ರ ನಾವಷ್ಟೇ. ಇದನ್ನು “ಅಹಂ”ಕಾರವೆನ್ನುತ್ತಾರೆ. ಅದು ಇರುವ ತನಕ ನಮಗೂ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲವೂ ಬೇರೆ ಬೇರೆ ರೂಪಗಳು ಕಾಣುತ್ತವೆ. ಅದು ನಶಿಸಿದರೆ ಎಲ್ಲವೂ, ಎಲ್ಲರಲ್ಲೂ, ಎಲ್ಲದರಲ್ಲೂ

ಆ ಪರಮಾತ್ಮನೇ ಕಾಣುತ್ತಾನೆ. “ಹಾಗಾದರೆ ನಾವು ಮಾಡುವುದನ್ನು ” ಸರಿ” ತಪ್ಪು” ಧರ್ಮ “ಅಧರ್ಮ” ಎಂದು ಏಕೆ ಹೇಳಬೇಕು? ಎಲ್ಲವೂ ಆ ಪರಮಾತ್ಮನೇ ಆಗಿ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾ ಅನುಭವಿಸುತ್ತಾ ತನ್ಮಯನಾಗಿದ್ದರೆ ನಾವು ಮಾಡುವುದು ಏನು ಇಲ್ಲವಲ್ಲ” ಎಂದರೆ ನಾವು ಲೌಕಿಕವಾಗಿ ಕಟ್ಟಿಕೊಂಡ ಸಮಾಜದ ಒಳಿತಿಗೆ ಒಂದು ಸುವ್ಯವಸ್ಥಿತ ಬದುಕಿಗೆ ಈ ಕಟ್ಟು ಪಾಡುಗಳು ಅವಶ್ಯಕ. ಲೌಕಿಕವನ್ನು ಬಿಟ್ಟು ಅಹಂಕಾರವನ್ನು ಬಿಟ್ಟರೆ, ಯಾವ ಕಟ್ಟುಪಾಡಿಗೂ ಒಳಪಡದೆ ಮುಕ್ತರಾಗಿಬಿಡಬಹುದು.

ಆದ್ಯಾತ್ಮಿಕ ಬೆಳವಣಿಗೆಯ ಅಂತಿಮಹಂತದಲ್ಲಿ ಬರುವ ಭಾವವೇ ಇದು. ಇಂತಹ ಭಾವನೆ ಬಂದರೆ ಅವರನ್ನು ದೇವಮಾನವರೆನ್ನುತ್ತಾರೆ.

ವಾಚಕರೆ ಬನ್ನಿ ನಾವೂ ಅಹಂಕಾರವನ್ನು ಬಿಡುವ, ಬಿಟ್ಟು ಎಲ್ಲೆಡೆಯಲ್ಲೂ ಆ ಪರಮಾತ್ಮನ ಲೀಲೆಯನ್ನು ನೋಡಿ ಆನಂದಿಸುವ.     

You may Also Like :

 

Leave a Comment