Mankuthimmana kagga (ಮಂಕುತಿಮ್ಮನ ಕಗ್ಗ ) with meanings 51-60

 

ರಸಧಾರೆ – 051

ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ |

ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||

ಎಳೆದಾಟವೇಂ ಋಣಾಕರ್ಷಣೆಯೋ? ಸೃಷ್ಟಿ ವಿಧಿ |

ಯೊಳತಂತ್ರವೋ? ನೋಡು – ಮಂಕುತಿಮ್ಮ. ||

ಸೆಳೆಯುತಿರ್ಪುದೊಂದು = ಸೆಳೆಯುತ + ಇರುವುದು + ಅದು + ಒಂದು ಹೊರಬೆಡಗಿನೆಳೆಗಳೆ ನ್ನೊಳಗಿನಸುವೆಲ್ಲವನು = ಹೊರ + ಬೆಡಗಿನ + ಎಳೆಗಳು + ಎನ್ನ + ಒಳಗಿನ + ಅಸು +ಎಲ್ಲವನು, ಸೃಷ್ಟಿ ವಿಧಿ ಯೊಳತಂತ್ರವೋ = ಸೃಷ್ಟಿ + ವಿಧಿಯ + ಒಳತಂತ್ರವೋ.

ಬೆಡಗು = ಅಕ್ಕರ್ಷಣೆ. ಅಸು = ಪ್ರಾಣ, ಚೇತನ, ಋಣಾಕರ್ಷಣೆ = ಪೂರ್ವಕರ್ಮದ ಸೆಳೆತ.

ಹೊರಜಗತ್ತಿನ ಆಕರ್ಷಣೆಗಳು ನನ್ನೊಳಗಿನ ಚೇತನವನ್ನು ಯಾವುದೋ ಒಂದು ಶಕ್ತಿ ಬಿಗಿದು ಕಟ್ಟಿ ಹಾಕಿ ಎಳೆಯುತ್ತಿದೆ. ಇದು ಏನು ಎಲೆದಾಟವೋ ಅಥವಾ ಪೂರ್ವ ಕರ್ಮಗಳ ಸೆಳೆತವೋ?

ಅಥವಾ ಈ ಜಗತ್ತಿನ ಸೃಷ್ಟಿಯ ನಿಯಮದ ಒಳತಂತ್ರವೋ ಎನ್ನುವುದನ್ನು ನೀನೆ ಪರಕಿಸಿ ನೋಡು ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಹೌದು ಹೊರಜಗತ್ತಿನಲ್ಲಿರುವ ಎಲ್ಲ ವಸ್ತುಗಳೂ ನಮ್ಮನ್ನು ತುಂಬಾ ಆಕರ್ಷಿಸುತ್ತವೆ. ಹಾಗೆಯೇ ಎಲ್ಲ ಪ್ರಾಣಿಗಳಿಗೂ ಈ ಜಗತ್ತಿನ ಎಲ್ಲ ವಸ್ತುಗಳೂ ಆಕರ್ಷಣೀಯವೇ. ನಾವು ನಮ್ಮ ಅನುಭವವನ್ನು ಹೇಳಿಕೊಳ್ಳುತ್ತೇವೆ. ಅನ್ಯ ಪ್ರಾಣಿಗಳು ಹೇಳಿಕೊಳ್ಳಲಾಗದಿದ್ದರೂ ಅನುಭವಿಸುತ್ತವೆ.

ಇರಲಿ ” ದ್ರುಷ್ಯಮಾಣೆ ಭವೇತ್ ಪ್ರೀತಿ: ” ಎಂದರೆ ವಸ್ತುಗಳನ್ನು ಕಂಡರೆ ಅದರಲ್ಲಿ ನಮಗೆ ಪ್ರೀತಿಯುಂಟಾಗುತ್ತದೆ. ಪಡೆಯಬೇಕು ಎನ್ನುವ ಆಸೆಯುಂಟಾಗುತ್ತದೆ. ಪಡೆಯುವಂತಹ ಸಾಧ್ಯತೆಗಳಿದ್ದರೆ, ಪ್ರಯತ್ನವೂ ನಡೆಯುತ್ತದೆ. ಹಲ ಸಲ ಸಫಲತೆಯೂ ದೊರಕುತ್ತದೆ. ಸಿಗಲಿ ಬಿಡಲಿ ಆಸೆ ಪಡುವುದಂತೂ ಉಂಟು. ಆಕರ್ಷಿತರಾಗುವುದಂತೂ ಉಂಟು. ಆ ಆಕರ್ಷಣೆಯಿಂದ ನಮ್ಮ ಅಸ್ತಿತ್ವವು ಸಂತಸಪಡುವುದೂ ಉಂಟು, ಹಾಗೆ ನೋವುಣ್ಣುವುದೂ ಉಂಟು. ಏಕೆ ಈ ನೋವು ಏಕೆ ಈ ಆಕರ್ಷಣೆ ಎನ್ನುವುದೇ ಈ ಕಗ್ಗದ ಹೂರಣ.

ನೋಡಿ ನಮ್ಮಲ್ಲಿ ಶುದ್ಧವಾದ ಆತ್ಮ ಉಂಟು. ಯುಕ್ತಾಯುಕ್ತಗಳ ವಿವೇಚನೆಯೂ ಉಂಟು. ಬಹು ಚಂಚಲ ಮನಸ್ಸೂ ಉಂಟು. ಒಂದಕ್ಕೊಂದಕ್ಕೆ ಅವಿನಾಭಾವ ಸಂಬಂಧ. ಈ ಸಂಬಂಧಕ್ಕೆ ಕಾರಣಗಳು ಹಲವು. ನಾವು ಎಲ್ಲದರಿಂದಲೂ ಯಾವಗಲೂ ಆಕರ್ಷಿತರಾಗುವುದಿಲ್ಲ. ಈ ಆಕರ್ಷಣೆಯ ಸ್ವರೂಪ ಬದಲಾಗುತ್ತಾ ಇರುತ್ತದೆ. ಇಂದು ಇದ್ದಂತೆ ನಾಳೆ ಇಲ್ಲ. ಮುಂಜಾನೆಗಿದ್ದದ್ದು ಸಂಜೆಗಿಲ್ಲ. ಹೀಗೆ ಒಂದೇ ರೂಪದಲ್ಲಿ ಇರದೇ ನಮ್ಮನ್ನು ಬೇಕು ಬೇಡಗಳ, ಇಷ್ಟ, ಅನ್-ಇಷ್ಟಗಳ ನಡುವೆ ಗೊಂದಲಕ್ಕೆ ಸಿಲುಕಿಸುತ್ತದೆ. ನಾವು “ಇಲ್ಲಿ” ಅಂದರೆ ಈ ಜಗತ್ತಿನ ವಸ್ತು ವಿಷಯ ಸಂಪರ್ಕದಲ್ಲಿ ನಮ್ಮ ಮನಸ್ಸನ್ನು ಸದಾ ತೊಡಗಿಸಿಕೊಂಡರೆ ಈ ಗೊಂದಲಗಳು ಸಹಜ. ಹಾಗಂತ, ಇದನ್ನು ಬಿಡಬೇಕು ಎಂದಲ್ಲ. ಇರಬೇಕು, ಇರದಂತೆ ಇರಬೇಕು.

ಈ ಆಕರ್ಷಣೆಗಳು ಅಂಟುಗಳು ನಮ್ಮ ಮನಸ್ಸಿನ ತುಮಲ ತೊಯ್ದಾಟಗಳಿಗೆ ಕಾರಣವೇನು?. ನಮ್ಮ ಸ್ವಭಾವ,ಪೂರ್ವಸಂಚಿತ ಗುಣಗಳ ವಾಸನೆ, ಇಲ್ಲಿ ನಾವು ಜನಿಸಿದಂದಿನಿಂದ ಪಡೆದು ಕೊಂಡು, ಬೆಳೆಸಿಕೊಂಡ ಹತ್ತು ಹಲವಾರು ಗುಣ ಸ್ವಭಾವಗಳು. ಆ ವಸ್ತು ವಿಷಯಗಳ ಅಂದ ಚೆಂದ ರುಚಿ ಗುಣಗಳಲ್ಲವೂ ನಮ್ಮನ್ನು ಸೆಳೆಯುತ್ತವೆ. ಇವೆಲ್ಲವೂ ಈ ಆಕರ್ಷಣೆಗೆ ಕಾರಣ. ಆದರೆ ಇದು ಸರಿಯೇ ತಪ್ಪೇ? ಸರಿ ತಪ್ಪು ಎರಡೂ. ಸರಿ ಏಕೆಂದರೆ, ಜಗತ್ತಿನ ಎಲ್ಲರೂ ಈ ಜಗತ್ತಿನ ವಸ್ತು ವಿಷಯಗಳಿಂದ ವಿಮುಖರಾದರೆ ಈ ಜಗದ್ವ್ಯಾಪಾರದ ಗತಿ. ಎಲ್ಲವೂ ನಿಂತುಹೋದರೆ, ಎಲ್ಲ ನಿಸ್ತೇಜ, ನೀರವ ಮತ್ತು ನಿಸ್ಸತ್ವ. ಆ ಪರಮಾತ್ಮನ ಲೀಲಾವಿನೋದ ಕೊನೆಯಾದರೆ ಏನು ಚೆನ್ನ. ಹಾಗಾಗಿ ಈ ಆಕರ್ಷಣೆ ಸರಿ. ತಪ್ಪು ಏಕೆಂದರೆ ” ಸಿಂಬಳದ ಹುಳು”ವಿನ ತರಹೆ ಇದರಲ್ಲೇ ಅಂಟಿಕೊಂಡರೆ ಅದೂ ಅಸಹ್ಯ . ಹಾಗಾಗಿ ಎಲ್ಲವನ್ನೂ ನೋಡಬೇಕು ಆಕರ್ಷಿತರಾಗಬೇಕು, ಅನುಭವಿಸಬೇಕು, ಮತ್ತು ಬಿಡಬೇಕು. ಆಗಲೇ ಜೀವನದಲ್ಲಿ ಒಂದು ಚೆಂದ ಚೆಲುವು.

ಅದ್ದರೆ ಎಷ್ಟು ಆಕರ್ಷಿತರಾಗಬೇಕು, ನಮ್ಮನ್ನು ನಾವು ಅದರೊಳಗೆ ಎಷ್ಟರಮಟ್ಟಿಗೆ ಮುಳುಗಿಸಿಕೊಳ್ಳಬೇಕು, ಯಾವಾಗ ಬಿಡಬೇಕು ಎನ್ನುವುದೇ ನಮ್ಮ ಪ್ರಯತ್ನ. ಆ ಪ್ರಯಾಣವನ್ನು ಮಾಡ ಬೇಕು ಎನ್ನುವ ರೀತಿಯಲ್ಲಿ ” ನೋಡು ” ಎನ್ನುತಾರೆ ಮಾನ್ಯ ಗುನಪ್ಪನವ್ರು ಈ ಕಗ್ಗದಂತ್ಯದಲ್ಲಿ. ನಾವೂ ಸಹ ಈ ವಿಷಯದಲ್ಲಿ ನಮ್ಮ ನಮ್ಮ ವಿಶ್ಲೇಷಣೆಯನ್ನು ನಾವೇ ಮಾಡಿಕೊಳ್ಳುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?

ರಸಧಾರೆ – 052

ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ

ಮುಗಿವ ತರಣಿಯ ರಕ್ತ ಹಿತವೆನಿಸದೆಕೋ !

ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ

ಬಗೆವೆನ್ನ ಮನಸಿನೊಳೊ ? ಮಂಕುತಿಮ್ಮ.

ಗಗನದ ನೀಲಿಮೆಯು ಎನ್ನ ಕಣ್ಣಿಗೆ ಸೊಗವ ಈವಂತೆ, ಮುಗಿವ ತರಣಿ ರಕ್ತ ಹಿತವೆನಿಸದು ಏಕೋ!

ಸೊಗದ ಮೂಲವದು ಎಲ್ಲಿ ನೀಲದೊಳೊ ಕೆಂಪಿನೊಳೊ ಬಗೆವ ಎನ್ನ ಮನಸಿನೊಳೊ – ಮಂಕುತಿಮ್ಮ.

ನೀಲಿಮೆ = ನೀಲಿ ಬಣ್ಣ, ಎನ್ನ = ನನ್ನ, ಕಣ್ಗೆ = ಕಣ್ಣುಗಳಿಗೆ, ಸೊಗವ = ಆನಂದವ, ಈವಂತೆ= ಕೊಡುವಂತೆ, ಮುಗಿವ = ಮುಳುಗುವ, ತರಣಿ + ಸೂರ್ಯ, ರಕ್ತ = ಕೆಂಪು, ಸೊಗದ = ಸೊಗಸಿನ , ಬಗೆವ = ತಿಳಿಯುವ.

ಆಕಾಶದ ತಿಳಿನೀಲಿ ಬಣ್ಣವು ಎನ್ನ ಮನಸ್ಸಿಗೆ ಹಿತವನ್ನು ಕೊಡುತ್ತೆ. ಆದರೆ ಮುಳುಗುವ ಸೂರ್ಯನ ಕೆಂಪು ಬಣ್ಣ ಎನಗೇಕೋ ಹಿತವನ್ನು ಕೊಡುವುದಿಲ್ಲ. ಆ ಹಿತ ಎನ್ನುವುದು ಆಕಾಶದ ನೀಲಿ ಬಣ್ಣದಲ್ಲಿದೆಯೋ ಅಥವಾ ಮುಳುಗುವ ಸೂರ್ಯನ ರಕ್ತ ವರ್ಣದಲ್ಲಿದೆಯೋ ಅಥವಾ ಎರಡೂ ಅಲ್ಲದೆ, ಹಿತವೆಂದು ತಿಳಿಯುವ ನಮ್ಮ ಮನಸ್ಸಿನಲ್ಲಿ ಇದೆಯೋ ಎಂದು ಪ್ರಸ್ತಾಪ ಮಾಡುತ್ತಾರೆ, ಶ್ರೀ ಗುಂಡಪ್ಪನವರು.

ನೀಲಿ ಬಣ್ಣ ಪ್ರಶಾಂತತೆಯ ಪ್ರತೀಕ. ಅದಕ್ಕೆ ನಮ್ಮಲ್ಲಿ ಹಲವು ದೇವತೆಗಳಿಗೆ ನೀಲಿಬಣ್ಣದ ವರ್ಣನೆ. ಹಾಗಾಗಿ ನೀಲಿ ಬಣ್ಣ ಮನಸ್ಸಿಗೆ ಮುದವನ್ನು ಕೊಡುವುದು ಸಹಜ. ಆದರೆ ತನ್ನ ಕೆಲಸ ಮುಗಿಸಿ ಹಿಂತಿರುಗಿಹೋಗುವ ಆ ಸೂರ್ಯನ ರಕ್ತವರ್ಣವು ರುದ್ರತೆಯನ್ನು ತೋರುತ್ತದೆ. ಹಾಗಾಗಿ ನನಗೆ ಮನಸ್ಸಿಗೆ ಹಿತವೆನಿಸುವುದಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅಷ್ಟಕ್ಕೇ ನಿಲ್ಲಿಸದೆ, ಹೌದು ಆ ಹಿತವು ನೀಲಿ ಬಣ್ಣದಲ್ಲಿದೆಯೋ ಅಥವಾ ರಕ್ತವರ್ಣದಲ್ಲಿದೆಯೋ ಅಥವಾ ನನ್ನ ಭಾವನೆಯಲ್ಲಿ ಮಾತ್ರ ಆ ಹಿತ ಮತ್ತು ಅಹಿತಗಳಿವೆಯೋ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ.

ಹೌದು ಒಂದು ಆಂಗ್ಲ ನುಡಿ ” ಚೆಂದ ನೋಡುವವನ ಕಣ್ಣಲ್ಲಿ ‘ ಎಂದು ಹೇಳುತ್ತದೆ. ಒಬ್ಬರಿಗೆ ಚೆಂದವಾಗಿ ಕಂಡದ್ದು ಮತ್ತೊಬ್ಬರಿಗೆ ಚೆಂದವಲ್ಲದೆ ಇರಬಹುದು. ಒಬ್ಬರಿಗೆ ಇಂದು ಚೆಂದವಾಗಿ ಕಂಡದ್ದು ನಾಳೆ ಅವರಿಗೇ ಚಂದವಲ್ಲದೆ ಇರಬಹುದು. ಈ ಅದು ಚೆನ್ನ- ಇದು ಚೆನ್ನ, ಅದು ಚೆನ್ನಾಗಿಲ್ಲ, ಅಥವಾ ಇದು ಚೆನ್ನಾಗಿಲ್ಲ, ಇದು ಸುಮಾರು, ಇದು ಅಸಹ್ಯ, ಇದು ಅತೀ ಸುಂದರ, ಹೀಗೆ ಒಂದು ವಸ್ತು ಅಥವಾ ವಿಷಯದ ಬಗ್ಗೆ ನಮ್ಮ ಅಭಿಪ್ರಾಯಗಳು, ಅಭಿಪ್ರಾಯಗಳಷ್ಟೇ ಆಗಿರುತ್ತದೆ ಹೊರತು ನಾವು ಅಭಿಪ್ರಾಯ ವ್ಯಕ್ತಪಡಿಸುವ ಆ ವಸ್ತು ವಿಷಯದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ್ಲ, ಅಲ್ಲವೇ?

ಆದರೆ ಆ ಚೆಲುವು ಎನ್ನವುದು ನೋಡುವವನ ಮನಸ್ಸಿನಲ್ಲಿ ಇರುತ್ತದೆ ಎನ್ನುವುದು ವಾಡಿಕೆ.” ಯದ ಭಾವಂ ತತ್ಭವತಿ” ನಾವು ಹೇಗೆ ಅಂದುಕೊಂಡರೆ ಹಾಗೆ ಎನ್ನುವುದು ಸೂಕ್ತ. ಹಾಗಾಗಿ ಒಂದು ವಸ್ತುವಿನ ಚೆಂದ ನಮ್ಮ ಮನಸ್ಸಿನ ಮೇಲೆ ಅಧಾರಪಟ್ಟಿರುತ್ತದೆ. ನನಗೆ ಒಬ್ಬ ಸ್ನೇಹಿತರಿದ್ದಾರೆ. ನಮ್ಮ ಬೀದಿಯ ನಾಯಿಗಳ ಕಂಡು ಅವರಿಗೆ ತುಂಬಾ ಪ್ರೀತಿ ತುಂಬಾ ಮರುಕ ” ಅಯ್ಯೋ ಪಾಪ ಅದನ್ನು ನೋಡಿ ಹೇಗೆ ಸೊರಗೆ ಹೋಗಿದೆ” ಇವಕ್ಕೆಲ್ಲ ಯಾರು ಊಟ ಹಾಕ್ತಾರೋ” ಹೀಗೆ ಅವರ ಕರುಣಾ ಪೂರಿತ ಭಾವ ಲಹರಿ ಹರಿಯುತ್ತಲೇ ಇರುತ್ತದೆ. ಪುಟ್ಟ ಮರಿಗಳನ್ನು ನೋಡಿದಾಗ” ಅಯ್ಯೋ ಮುಂಡೇದು, ಎಷ್ಟು ಚೆನ್ನಾಗಿದೆ ನೋಡ್ರೀ” ಎಂದು ರಾಗ ಎಳೀತಾರೆ. ಕೆಲವರಿಗೆ ಆ ನಾಯಿಗಳನ್ನು ಕಂಡರೆ ಹೆದರಿಕೆ. ಕೆಲವರಿಗೆ ಅದನ್ನು ಕಂಡರೆ ಅಸಹ್ಯ. ಆದರೆ ಆ ನಾಯಿ ಚೆನ್ನವೂ ಅಲ್ಲ ಅಸಹ್ಯವೂ ಅಲ್ಲ. ಚೆನ್ನ ಅಥವಾ ಅಸಹ್ಯ ಎನ್ನುವುದು ನಮ್ಮ ನಮ್ಮ ಭಾವನೆ ಅಷ್ಟೇ.

” ಏ ತಿಂಗ್ ಆಫ್ ಬ್ಯೂಟಿ ಈಸ್ ಆ ಥಿಂಗ್ ಆಫ್ ಜಾಯ್ ಫಾರ್ ಎವರ್” ಎನ್ನುವ ಒಂದು ಆಂಗ್ಲ ನುಡಿ ಇದೆ ” ಸದಾ ಸೊಗವನೀಡುವುದೇ ಸೊಬಗು” ಅಂದರೆ ಯಾವುದು ಸದಾಕಾಲ ಮನಸ್ಸಿಗೆ ಹಿತವೆನಿಸುತ್ತದೋ ಅದೇ ಸುಂದರ. ಆದರೆ ಚೆನ್ನ, ಸೊಬಗು, ಸುಂದರ, ಸೊಗಸು ಎನ್ನುವ ಗುಣವಾಚಕಗಳೆಲ್ಲ ಮನೋಜನ್ಯ. ಹಾಗಾಗಿ ಇವೆಲ್ಲ (relative) ಒಂದೇ ರೀತಿ ಇರುವುದಿಲ್ಲ. ಮನಸ್ಸಿನ ಭಾವ ಬದಲಾಗುತ್ತಾ ಇದ್ದಂತೆ ನಮ್ಮ ಅಭಿಪ್ರಾಯಗಳೂ ಬದಲಾಗುತ್ತಾ ಇರುತ್ತವೆ.

ಆದರೆ ಒಂದು ಒಳ್ಳೆಯ ಮನಸ್ಸು ಎಲ್ಲದರಲ್ಲೂ ಸೊಬಗನ್ನೇ ನೋಡುತ್ತದೆ. ಈ ಪರಮಾತ್ಮನ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಅಂದವಿದೆ. ಅದು ಅವನ ಇಚ್ಚೆಯಿಂದ ಆದದ್ದು. ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದನ್ನು ವಿಮರ್ಶಿಸುವ ಅರ್ಹತೆ ಅಧಿಕಾರ ನಮಗಿಲ್ಲ. ಏಕೆಂದರೆ ನಾವೂ ಸಹ ಈ ಸೃಷ್ಟಿಯ ಒಂದು ಬಾಗ ಅಲ್ಲವೇ? ಅದು ಯಾರಾದರೂ ಚೆನ್ನಾಗಿಲ್ಲ ಎಂದರೆ, ಆ ಪರಮಾತ್ಮನ ಸೃಷ್ಟಿಯನ್ನೇ ಪ್ರಶ್ನಿಸಿದಂತಾಗುತ್ತದೆ. ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಪ್ರೀತಿಸಬೇಕು. ಯಾವುದನ್ನೋ ಇಷ್ತಪಡದಂತಾ ಮನೋಭಾವ ನಮಗೆ ಬರಲೇಬಾರದು.

ರಸಧಾರೆ – 053

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ ?

ದಿನಪನದೆ? ಚಂದ್ರನದೆ ? ನೀರಿನದೇ? ನಿನದೆ?

ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು?

ಗುಣಕೆ ಕಾರಣವೊಂದೆ? – ಮಂಕುತಿಮ್ಮ.

ತೃಣಕೆ = ಹುಲ್ಲಿಗೆ ದಿನಪ= ಸೂರ್ಯ. ತಣಿಣಿವ = ಆನಂದಿಸುವ

ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು. ಅದರ ಮೂಲವಾದ ಬೇರಿನದೋ ? ಅದು ಬೆಳೆವ ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಅಥವಾ ಚಂದ್ರನದೋ? ಬೆಲೆಗೆ ಪೂರಕವಾದ ನೀರಿನದೋ? ಅಥವಾ ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ನೋಡು ನೀ ಆ ಹಸಿರಿನ ಗುಣಕ್ಕೆ ಒಂದೇ ಕಾರಣವೋ? ಮಂಕುತಿಮ್ಮ.

ಹೌದಲ್ಲವಾ? ನಮಗೂ ಇಂತಹ ಪ್ರಶ್ನೆಗಳು ಮನದಲ್ಲಿ ಉದ್ಭವವಾಗಿರಬಹುದು, ಹಲವು ಬಾರಿ. ನಾವು ನೋಡುವ ಪ್ರತಿವಸ್ತುವಿನಲ್ಲೂ ಹಲವು ಸೋಜಿಗಗಳನ್ನು ನಾವು ಕಾಣಬಹುದು. ಆದರೆ ಆ ಸೋಜಿಗಕ್ಕೆ ಒಂದು ಕಾರಣವನ್ನು ಹುಡುಕಲು ನಮ್ಮಿಂದಾಗುವುದಿಲ್ಲ. ಏಕೆಂದರೆ ಒಂದು ಕಾರಣದಿಂದ ಆದಂತ ವಸ್ತುವಾವುದೂ ಈ ಪ್ರಪಂಚದಲ್ಲಿ ಇಲ್ಲವೆಂಬುದೆ ನನ್ನ ಗಟ್ಟಿ ನಂಬಿಕೆ. ಹಾರುವ ಹಕ್ಕಿಯ ಬಣ್ಣ, ರೆಕ್ಕೆಯ ವಿನ್ಯಾಸ, ಹಾವಿನ ರೂಪ, ಅದರ ಮೈಮೇಲಿನ ಚಿತ್ತಾರಗಳು, ಅಬ್ಬಾ ಎಂತಹ ವಿಚಿತ್ರ. ಇದೊಂದೂ ನಮಗೆ ಅರ್ಥವಾಗುವುದಿಲ್ಲ. ಎಲ್ಲವೂ ವಿಸ್ಮಯ.

ಈಗ a ಆ ಬೇರಿನ ವಿಷಯವನ್ನೇ ತೆಗೆದುಕೊಳ್ಳೋಣ. ಅದರ ಹಸಿರುಬಣ್ಣ ಎಲ್ಲಿಂದ ಬಂತು. ಅದರ ಮೂಲ ಬೇರಿನಿಂದ ಬಂತೆ ಅಲ್ಲ ಏಕೆಂದರೆ ಬೇರಿನ ಬಣ್ಣ ಹಸುರಲ್ಲ. ಅದು ಬೆಳೆದ ಭೂಮಿಯಿಂದ ಬಂತೆ, ಅಲ್ಲ ಭೂಮಿಯ ಬಣ್ಣ ಕೆಂಪು. ಸೂರ್ಯನಿಂದಲೇ ಅಥವಾ ಚಂದ್ರನಿಂದಲೇ ಎಂದರೆ, ಅವರದ ಬಣ್ಣವೂ ಹಸುರಲ್ಲ. ಇನ್ನು ಅದನ್ನು ಪೋಷಿಸಿ ಬೆಳೆಸಿದ ನೀರಿಂದ ಬಂತೆ ಎಂದರೆ ಅದೂ ಅಲ್ಲ. ಏಕೆಂದರೆ ನೀರಿನ ಬಣ್ಣವೂ ಹಸಿರಲ್ಲ, ಅಥವಾ ಅದನ್ನು ಬೆಳೆಸಿದ ನಿನ್ನಿಂದ ಬಂತೆ ಎಂದರೆ, ನೀನೋ ಕರಿಯ. ಅಥವಾ ಯಾವುದೋ ಪುಣ್ಯಶೇಷದಿಂದ ನಿನ್ನ ಕಣ್ಣಿಗೆ ಅದು ಹಸಿರಾಗಿ ಕಾಣುತ್ತದೆಯೇ ಎಂದರೆ ಅಲ್ಲ ಏಕೆಂದರೆ ಅದು ಕಾಣುವುದಷ್ಟೇ ಅಲ್ಲ ವಾಸ್ತವವಾಗಿಯೂ ಅದು ಹಸುರಾಗೆ ಇದೆ. ಹಾಗಾದರೆ ಆ ಹಸಿರಬಣ್ಣ ಎಲ್ಲಿಂದ ಬಂತು. ಇದು ಯಕ್ಷಪ್ರಶ್ನೆ. ವಿಜ್ಞಾನಿಗಳು ಹೇಳುತ್ತಾರೆ, “ಅದು ಅದೇನನ್ನೋ ಹೀರಿಕೊಂಡು, ಇದರೊಳಗೆ ಸೇರಿ, ಅದಾಗಿ ಅದರಿಂದ ಇದಾಗಿ ಹೀಗೆ ಹಸುರಾಗಿದೆ “ಎಂದು. ಅವರ ವಾದವನ್ನು ಸತ್ಯವೆಂದೊಪ್ಪಿಕೊಂಡರೂ ಅದನ್ನೆಲ್ಲ ಆಗ ಮಾಡಿಸಿದ ಶಕ್ತಿಯಾವುದು. ಅಂದರೆ ಒಂದು ಪರಮಾತ್ಮ ಶಕ್ತಿ ಮತ್ತೆ ಈ ಎಲ್ಲ ವಸ್ತುಗಳ ಬೇರೆ ಬೇರೆ ಪ್ರಮಾಣದ ಗುಣಗಳ ಮಿಶ್ರಣವೇ ಒಂದು ಬೇರೆ ರೂಪ. ಅದಕ್ಕೆ ಅದೇ ಸಾಟಿ.

ಇದೆನ್ನೇಕೆ ಹೇಳಿದ್ದಾರೆ ಗುಂಡಪ್ಪನವರು ಎಂದು ಯೋಚನೆ ಮಾಡಿದರೆ, ನನಗೆ ಒಂದು ವಿಷಯ ಹೊಳೆಯುತ್ತದೆ. ನಾವು ಮನುಷ್ಯರು, ನಾನು ಮಾಡಿದೆ ಅಥವಾ ನಾ ಹಾಗೆ ಮಾಡುತ್ತೇನೆ ಎಂದು ಡಂಬವಾಡುತ್ತೇವೆ. ಎಂತಹ ಹೀನ ಯೋಚನೆ ನಮ್ಮದು. ಒಂದು ತುತ್ತು ಆನ್ನ ತಿನ್ನ ಬೇಕಾದರೆ, ಅದಕ್ಕೆ ಕಾರಣವಾದ ಆ ಕಾಳು , ಆ ಭೂಮಿ, ಆ ಭೂಮಿಯ ಸತ್ವ, ನೀರು, ಬಿಸಿಲು, ಅದನ್ನು ಬೆವರು ಸುರಿಸಿ ಬೆಳೆದು ಕಾಪಾಡಿದ ಆ ರೈತನ ಶ್ರಮ, ಬತ್ತವನ್ನು ಅಕ್ಕಿಯನ್ನಾಗಿಸಲು ಸಾಗಿಸಿದ ಆ ಬಂಡಿ ಮತ್ತದನ್ನು ಮಾಡಿದ ಬಡಗಿ, ಆ ಬಂಡಿಯನ್ನು ಹೊತ್ತು ಎಳೆದ ಆ ಎತ್ತ್ತುಗಳು, ಅದನ್ನು ಕುಟ್ಟಿದ ಕೈಗಳು, ಆಯ್ಯೋ ಬಿಡಿ ಹೇಳುತ್ತಾ ಹೋದರೆ, ಹನುಮಂತನ ಬಾಲದಂತೆ ಬೆಳೆಯುತ್ತದೆ, ಪಟ್ಟಿ.ನಾವು ಕೇವಲ ತಿನ್ನುತ್ತೇವೆ ಅಷ್ಟೇ. ಒಂದಿಷ್ಟೂ ಕೃತಜ್ಞತೆ ಇಲ್ಲದೆ, ಕೇವಲ ದುಡ್ಡು ಕೊಟ್ಟಿದ್ದೇನೆ ಎನ್ನುವ ಅಹಂಕಾರ ಬಿಟ್ಟರೆ ಇನ್ನೇನೂ ಇಲ್ಲ. ಅಹಂಕಾರ ಪಡಲಿಕ್ಕೆ ಒಂದಿಷ್ಟೂ ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನಾವೂ ಸಹ ಹೀಗೆ ಮಾತನಾಡುತ್ತೇವೆ.

ಆ ಪರಮಾತ್ಮ ತನ್ನಿಚ್ಚೆಯಂತೆ ತನ್ನ ಸಂತೋಷಕ್ಕಾಗಿಯೇ ಎಲ್ಲವನ್ನೂ ಸೃಜಿಸಿ ತಾನು ಆನಂದಪಡುತ್ತಾನೆ. ಇದರಲ್ಲಿ ನಾವು ಅಹಂಕಾರಪಡಬಾರದು. ” ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚಿತ್ ಜಗತ್ಯಾಂ ಜಗತ್ I ತೇನ ತ್ಯಕ್ತೇನ ಭುನ್ಜೀತಾ ಮಾ ಗ್ರುಧಃ ಕಸ್ಯಸ್ವಿದ್ಧನಂ” ಎನ್ನುತ್ತದೆ ಈಶಾವಾಸ್ಯ. ಹಾಗಾಗಿ ಎಲ್ಲವೂ ಪರಮಾತ್ಮ, ಎಲ್ಲವೂ ಪರಮಾತ್ಮನಿನ, ಮತ್ತು ಎಲ್ಲವೂ ಪರಮಾತ್ಮನಿಗಾಗಿ ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಅಹಂಕಾರ ಬಿಡಬಹುದು. ಅಹಂಕಾರ ಬಿಟ್ಟರೆ ಆನಂದವಾಗಿರಬಹುದು.

ರಸಧಾರೆ – 054

ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ

ಸಿಳುಕದೆಮ್ಮೆಯ ತರ್ಕಕರ್ಕಶಾಂಕುಶಕೆ

ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ

ತಿಳಿಮನದೆ ನೋಳ್ಪಂಗೆ – ಮಂಕುತಿಮ್ಮ

ಫಲವಿಲ್ಲ ಕಾರ್ಯಕಾರಣ ವಾದದಿಂದ. ತತ್ವ ಸಿಲುಕದು ಎಮ್ಮಯ ತರ್ಕ ಕರ್ಕಶಾಂಕುಶಕ್ಕೆ ಸುಳಿವುದು ಆಗೀಗಳು ಅದು ಸೂಕ್ಷಾಮನುಭವದಲಿ ತಿಳಿಮನದಿ ನೋಳ್ಪಂಗೆ ಮಂಕುತಿಮ್ಮ.

ಈ ಜಗತ್ತಿನ ಸೃಷ್ಟಿಯ ಕರ್ತೃ,ಕರಣ, ಕಾರ್ಯ, ಕಾರಣ ಇವುಗಳ ಬಗ್ಗೆ ಅತಿಯಾದ ವಾದ ವಿವಾದದಿಂದ ನಮಗೆ ತತ್ವವು ಸಿಗುವುದೇ ಇಲ್ಲ. ಆದರೆ ನಿರ್ಮಲವಾದ ಮತ್ತು ತಿಳಿಯಾದ ಮನದಲ್ಲಿ ಆಗಾಗ ಸೂಕ್ಷ್ಮಾನುಭವಕ್ಕೆ ಅದು ಗೋಚರವಾಗಬಹುದು. ಯಾರಿಗೆ? ನೋಡಲು ಇಚ್ಚಿಸುವವರಿಗೆ ಮತ್ತು ನೋಡುವವರಿಗೆ ಅದು ಆಗಾಗ ಗೋಚರಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನೋಡಿ ಒಂದು ಸೃಷ್ಟಿಯಿದೆ. ಹಾಗಂದಮೇಲೆ ಅದಕ್ಕೊಂದು ಸೃಷ್ಟಿಕರ್ತನಿದ್ದಾನೆ. ಈ ಸೃಷ್ಟಿ ಕಾರ್ಯಕ್ಕೊಂದು ಕಾರಣವಿರಬೇಕು. ಇದರ ಬಗ್ಗೆ ಲಕ್ಷಾಂತರ ವಾದಗಳು ವಿವಾದಗಳು ತರ್ಕಗಳು ಇವೆ. ಆದರೂ ಅದು ಏನು ಎಂದು ಯಾರಿಗೂ ನಿಚ್ಚಳವಾಗಿ ತಿಳಿದಿಲ್ಲ. ಅದನ್ನು ತಿಳಿಯಲು ಪ್ರಯತ್ನಿಸಿದವರೆಲ್ಲಾ, ತಮ್ಮ ತಮ್ಮದೇ ಆದ ವಿಧಾನದಲ್ಲಿ ಅದನ್ನು ನೋಡಲು ಪ್ರಯತ್ನಿಸಿ, ತಮ್ಮದೇ ಆದ ತತ್ವವನ್ನು ಪ್ರತಿಪಾದಿಸಿದ್ದಾರೆ. ಯಾವುದೂ ಅಂತಿಮವಲ್ಲ. ಹಾಗಾಗಿ ನಮ್ಮ ತರ್ಕವೆಂಬ ಒರಟಾದ ಆಯುಧಗಳಿಂದ ಅದನ್ನು ಕೆದಕುವ ಬದಲು ಮನವನ್ನು ನಿರ್ಮಲವಾಗಿಸಿಕೊಂಡು ಅದರ ಬಗ್ಗೆ ಚಿ೦ತಿಸಿದರೆ, ಪ್ರತಿಯೊಬ್ಬರಿಗೂ ಅದು ಗೋಚರವಾಗುತ್ತದೆ. ಆದರೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವು ಬಾರಿ ನಮ್ಮ ಅನುಭವಕ್ಕೆ ಒಂದು ಮಿಂಚಂತೆ ಬಂದು ಹೋಗುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವ ವೇಧ್ಯ.

ಅದನ್ನು ಅರಿತುಕೊಳ್ಳಲು, ಪಾಂಡಿತ್ಯ ಬೇಕಿಲ್ಲ. ವಾದ ಬೇಕಿಲ್ಲ. ಚರ್ಚೆ ಬೇಕಿಲ್ಲ. ಏಕೆಂದರೆ ವಾದ ಮಾಡಿದರೆ ವಿವಾದವಾಗುತ್ತದೆ. ಚರ್ಚೆ ಮಾಡಿದರೆ, ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಸತ್ಯ ಗೋಚರವಾಗುವುದಿಲ್ಲ. ಸತ್ಯ ಗೋಚರವಾಗಬೇಕಾದರೆ, ಮನಸ್ಸಿನ, ಬುಧ್ಧಿಯ ಚಟುವಟಿಕಗಳನ್ನು, ಎಲ್ಲ ವಿಚಾರ, ತರ್ಕಗಳನ್ನೂ ಕುತರ್ಕಗಳನ್ನೂ ಬದಿಗಿಟ್ಟು ನಿರ್ಮಲ ಅಂತಃಕರಣದಲ್ಲಿ ಅದನ್ನು ಅನುಭವಿಸಿದರೆ, ಆಗಾಗ ನಮಗೆ ಗೋಚರವಾಗಬಹುದು. ಅಂತಹ ಸತ್ವಯುತವಾದ ಸತ್ಯವನ್ನು ಮನಸ್ಸಿನಲ್ಲಿ ಧೀರ್ಘಕಾಲ ಅನುಭವಿಸಿದರೆ, ನಮಗೆ ಶಾಂತಿ ಮತ್ತು ನೆಮ್ಮದಿ.

ಇದರ ಬಗ್ಗೆ ಹೆಚ್ಚು ವಿವರಣೆ ಅನಗತ್ಯ. ವಾಚಕರು ತಮ್ಮ ತಮ್ಮಲ್ಲೇ ಅನುಭವಿಸಬೇಕು. ದಯವಿಟ್ಟು ಅನುಭವಿಸಿ.

ಅಂತರನುಭವ ರಸಧಾರೆ – 055

ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?

ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ

ನರನುಮಂತೆಯೇ ಮನಸಿನನುಭವದಿ ಕಾಣುವನು

ಪರಸತ್ವಮಹಿಮೆಯನು – ಮಂಕುತಿಮ್ಮ.

ಇನ = ಸೂರ್ಯ, ಸೋಂಕಿಂದೆ = ಸ್ಪರ್ಶದಿಂದ, ತನಿವುಗಳ = ತಂಪನ್ನು, ನರನುಮಂತೆಯೇ = ನರನೂ ಹಾಗೆಯೇ, ಪರಸತ್ವ= ಪರಮಾತ್ಮ ತತ್ವವನು

ಕುರುಡನಿಗೆ ಸೂರ್ಯ ಚಂದ್ರರನು ಕಾಣಲಾಗುವುದೆ? ಬಿಸಿಲು ಮತ್ತು ತಂಪನ್ನು ಅವನು ಸ್ಪರ್ಶಮಾತ್ರದಿಂದಲೇ ಅರಿಯುವುದಿಲ್ಲವೇ ಮನುಷ್ಯನೂ ಸಹ ಮನಸ್ಸಿನ ಅನುಭವದಿಂದ ಪರಮಾತ್ವ ತತ್ವವನು ಕಾಣುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ.

ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ, ನರರೇನು ಭಾವಿಸುವರದರಂತೆ ಕಾಣುವನು” ನಿಜಗುಣ ಶಿವಯೋಗಿಗಳ ಮಾತು.

ಎಂತಹ ಸತ್ಯ. ಇಲ್ಲಿ ಕಣ್ಣಿಗೆ ಕಾಣುವುದು ಇಲ್ಲ. ಪರಮಾತ್ಮ ಎನ್ನುವುದು ಕೇವಲ ಭಾವನೆಗೆ ಬರುವ ವಿಚಾರ ಮತ್ತು ವಿಷಯ. ಹೇಗೆ ಒಬ್ಬ ಕಣ್ಣಿಲ್ಲದ ಮನುಷ್ಯ, ಸೂರ್ಯನ ತಾಪ ಮತ್ತು ಶೀತಲ ಚಂದ್ರನನ್ನು ತನ್ನ ಅನುಭವದಿಂದಲೇ ತಿಳಿದುಕೊಳ್ಳುತ್ತಾನೋ ಹಾಗೆಯೇ ಪ್ರತಿಯೊಬ್ಬ ನರನೂ ಆ ಪರಮಾತ್ವತತ್ವವನ್ನು ಕೇವಲ ಭಾವನೆಯಿಂದಲೇ ತಿಳಿದುಕೊಳ್ಳಬೇಕು ಎಂದು ಈ ಕಗ್ಗದ ಹೂರಣ.

ನೋಡಿ ಒಬ್ಬ ವಟುವಿಗೆ ಉಪನಯನವನ್ನು ಮಾಡುತ್ತಾರೆ. ಆಚಮನ, ಪ್ರಾಣಾಯಾಮ ಜಪ ತಪಗಳ ನಿಯಮವನ್ನು ಬಾಹ್ಯ ಚಟುವಟಿಕೆಗಳಿಂದ ಹೇಳಿಕೊಡುತ್ತಾರೆ. ಅವನೂ ಸಹ ಅವರು ಹೇಳಿ ಕೊಟ್ಟಂತೆಯೇ , ನಿಲ್ಲುವುದು, ಕೂರುವುದು, ಪ್ರಾಣಯಾಮ, ಅರ್ಗ್ಯ, ಮುಂತಾದ ಕರ್ಮಗಳನ್ನು ಮಾಡುತ್ತಾನೆ ಮತ್ತು ಆ ಸಮಯದಲ್ಲಿ ಬಾಯಿಂದ ಉಚ್ಚರಿಸುವ ಮಂತ್ರಗಳನ್ನೂ ಸ್ಫುಟವಾಗಿ ಉಚ್ಚಾರಮಾಡುತ್ತಾನೆ. ಗಾಯತ್ರಿ ಮಂತ್ರವನ್ನೂ ಹೇಳುತ್ತಾ ಜಪ ಮಾಡುತ್ತಾನೆ. ಇದೆಲ್ಲವನ್ನು ಹೇಳಿ ಕೊಡಬಹುದು ಆದರೆ ಅವನ ಅಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದೇ ಆದಂತ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ. ಗಾಯತ್ರಿಯನ್ನು ಹೇಳಿಕೊಡಬಹುದು. ಆದರೆ ಆ ಮಂತ್ರಕ್ಕೆ ಅದಿ ದೇವತೆಯನ್ನು ಮನಸ್ಸಿನಲ್ಲಿ ಅವಾಹಿಸಿಕೊಂಡು ಜಪಮಾಡುವುದು ಅವರವರಿಗೆ ಬಿಟ್ಟದ್ದು.ಇದು ಮತ, ಪಂಥ, ಭೇಧವಿಲ್ಲದೆ, ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ

ಪ್ರತಿಯೊಬ್ಬರ ಅಂತರಂಗವನ್ನು ಹೊಕ್ಕು ನೋಡಲು ಸಾಧ್ಯವಿಲ್ಲ. ಆದರೆ ಅದನ್ನು ಹೊಕ್ಕು ನೋಡಿದರೆ, ಯಾರಿಗೆ ಎಷ್ಟು ಭಾವಿಸಲು ಸಾಧ್ಯವೋ ಅವರಿಗೆ ಆ ಪರಮಾತ್ಮ ಅಷ್ಟು. ನೀವು ದೊಡ್ಡದಾಗಿ ಭಾವಿಸಿದರೆ, ದೊಡ್ಡದು, ಸಣ್ಣದಾಗಿ ಭಾವಿಸಿದರೆ ಸಣ್ಣದು. ಇಡೀ ಬ್ರಹ್ಮಾಂಡವನ್ನೇ ಪರಮಾತ್ಮನೆಂದೂ ಭಾವಿಸಬಹುದು ಅಥವಾ ನಿಮ್ಮ ಮನೆಯಲ್ಲಿರುವ ಒಂದು ಸಣ್ಣ ಮೂರ್ತಿಯನ್ನೇ ದೇವರೆಂದು ಭಾವಿಸಬಹುದು. ಮೊದಲನೆಯದು ಬೃಹತ್ ನಿರಾಕಾರ ಭಾವ, ಎರಡನೆಯದು ಸಂಕುಚಿತ ಮೂರ್ತಿ ಪೂಜೆ. ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ. ಹಾಗಾಗಿ ಆ ಪರಮಾತ್ಮ ಎನ್ನುವುದು ಬೃಹತ್ತಾಗಿ, ಮಹತ್ತಾಗಿ ಎಲ್ಲವೂ ತಾನೇ ತಾನಾಗಿ ತನ್ನ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತಿದ್ದರೂ, ಅದು ನಮಗೆ ನಮ್ಮ ಭಾವನೆಗೆ ಬರುವುದು ನಾವು ಎಷ್ಟು ಭಾವಿಸಿದರೆ ಅಷ್ಟು. ಹೇಗೆ ಭಾವಿಸಿದರೆ ಹಾಗೆ. ನಮ್ಮ ಭಾವನೆ, ನಮ್ಮ ಅನುಭವ, ನಾವು ಕಾಣುವ ರೂಪ, ನಮಗಷ್ಟೇ ಸೀಮಿತ, ಅದನ್ನು ಅನ್ಯರು ನೋಡುವುದಕ್ಕಾಗಲೀ ಅಥವಾ ನೀವು ಪರರಿಗೆ ಅದನ್ನು ತೋರಿಸುವುದಕ್ಕಾಗಲೀ ಸಾಧ್ಯವಿಲ್ಲ.

ಹಾಗಾಗಿ ವಾಚಕರೆ, ನಾವು ಭಾವಿಸಬೇಕು, ನಮ್ಮ ಭಾವನೆಗಳಲ್ಲಿ ಆ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ ದೀರ್ಘಕಾಲ ಇರಬೇಕೆಂಬುವ, ಪ್ರಯತ್ನ ನಮ್ಮದಾಗಬೇಕು.

ರಸಧಾರೆ – 056

ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ

ಭೂಲೋಕದರಚು ಕೆಳಗಿಂ ಮೂಳೆಯಳುವು

ಕೇಳಬರುತೀ ಮೂರುಕೂಗೆನ್ನ ಹೃದಯದಲಿ

ಮೇಳಯಿಸುತಿದೆ ಸಂತೆ – ಮಂಕುತಿಮ್ಮ

ಮೇಲಿಂದ ನಕ್ಷತ್ರ ಜಯಘೋಷ = ಆಕಾಶದಿಂದ ನಕ್ಷತ್ರಗಳ ಮಿಣುಕಾಟ, ಸುತ್ತಣಿಂ ಭೂಲೋಕದರಚು = ಸುತ್ತಲಿಂದ ಈ ಭೂಲೋಕದ ಪ೦ಚಭೂತಗಳ ನರ್ತನದ ಶಬ್ದ, ಕೆಳಗಿಂ ಮೂಳೆಯಳುವು = ಈ ಭೂಮಿಯಮೇಲೆ ಎಲ್ಲ ಪ್ರಾಣಿಗಳ ಕೊರಗು ಕೂಗಾಟ. ಕೇಳಬರುತೀ ಮೂರುಕೂಗೆನ್ನ ಹೃದಯದಲಿ ಮೇಳಯಿಸುತಿದೆ ಸಂತೆ = ಈ ಮೂರೂ ಸ್ತರಗಳಲ್ಲಿನ ಭಾವಗಳು ನನ್ನ ಹೃದಯದಲಿ ಸೇರಿ ಸಂತೆಮಾಡುತ್ತಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಇಡೀ ಸೃಷ್ಟಿಯ ವಿಸ್ಮಯಗಳು, ಅವುಗಳ ಬಗ್ಗೆ ನಮ್ಮ ಯೋಚನೆ ಕಾಣುವ, ಕಾಣದ, ಕೇವಲ ಊಹಿಸಿ ಅನುಭವಿಸಬಹುದಾದ ಆ ವಿಸ್ಮಯಭರಿತ ಲೋಕದ ಬಗ್ಗೆ ನಮ್ಮ ಆಲೋಚನೆ, ಕಂಡದ್ದು ,ಕೇಳಿದ್ದು, ಅನುಭವಿಸಿದ್ದು ಎಲ್ಲದರ ವಿಚಾರ ತಲೆಯಲ್ಲಿ. ಇನ್ನು ನಮಗೆ ಕಾಣುವ ಸೂರ್ಯ ಚಂದ್ರರು, ನಕ್ಷತ್ರ ಪುಂಜಗಳು, ಗಾಳಿ, ಮಳೆ, ಮೋಡ, ಮಿಂಚು, ಗುಡುಗು, ಸಿಡಿಲುಗಳಂತಹ ವಿಷಯಗಳು ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಕಡೆಯದಾಗಿ ನಮ್ಮ ಪ್ರಪಂಚದ ಮತ್ತು ಭೂಮಿಯ ಮೇಲಿನ ಸಕಲ ಪ್ರಾಣಿಗಳ ಬಗ್ಗೆ ವಿಚಾರ ವಿಷಯಗಳೆಲ್ಲ ನಮ್ಮ ತಲೆಗಳಲ್ಲಿ ಸೇರಿಕೊಂಡು ಒಂದು ಸಂತೆಯಲ್ಲಿ ಆಗುವಷ್ಟು ಗಲಭೆ ಶಬ್ಧ ನಮ್ಮ ಅಂತರ್ಯದಲ್ಲಿ ನಡೆಯುತ್ತಿರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.

ಹೌದಲ್ಲವೇ, ನಮಗೆ ಬೇಕೋ ಬೇಡವೋ ಎಲ್ಲ ವಿಚಾರಗಳನ್ನೂ ನಮ್ಮ ಅರಿವಿಗೆ ರವಾನಿಸುವ, ಪಂಚ ಸ್ಪರ್ಶ ಇಂದ್ರಿಯಗಳು ಮತ್ತ ಪಂಚ ಜ್ಞಾನೇಂದ್ರಿಯಗಳು ಸದಾ ಪೈಪೋಟಿ ಮಾಡುತ್ತಿರುತ್ತವೆ. ಏನೆಲ್ಲಾ ತುಂಬಿಕೊಂಡು ನಮ್ಮ ಮನಸ್ಸು ಬುಧ್ಧಿಗಳು ಒಂದು ಕಸದ ತೊಟ್ಟಿಯಾ ತರಹೆ ಆಗಿರುತ್ತೆ. ಹಲವು ಬಾರಿ ನಮಗೆ ಆಶ್ಚರ್ಯ ಮತ್ತು ಬೇಸರ ಎರಡೂ ಆಗುತ್ತದೆ. “ಥೂ!! ಇದೇನು ನಮ್ಮ ಮನಸ್ಸಲ್ಲಿ ಇಷ್ಟೊಂದು ಹೊಲಸು ತುಂಬಿದೆಯಲ್ಲ? ಎಂದು . “ಮನಸ್ಸು ನಿರ್ಮಲವಾಗಿರಿಸಿಕೊಳ್ಳಬೇಕು” ಎಂದು ಹೇಳುತ್ತಾರೆ. ಅಂದರೆ ಈಗ “ಮಲ” ಅಂದರೆ ಕಶ್ಮಲಭರಿತವಾಗಿದೆ ಎಂದು ಅರ್ಥ ಅಲ್ಲವೇ? ಆದರೆ ನಮ್ಮ ಸ್ವಭಾವ ಗುಣಕ್ಕೆ ಅನುಗುಣವಾಗಿ ನಮ್ಮ ವಿಚಾರಗಳಿರುತ್ತವೆ.

ಸರಿ ಅದಕ್ಕೆ ಏನುಮಾಡಬೇಕು. “ಹೀಗೆ ಬೇಡದ ವಿಚಾರಗಳೆಲ್ಲ ನನ್ನ ತಲೆಯಲ್ಲಿ ತುಂಬಿಕೊಳ್ಳಲು ನನ್ನ ಪ್ರಯತ್ನ ಮತ್ತು ಪ್ರಮೆಯವೇನೂ ಇಲ್ಲವಲ್ಲ!!!” ಎಂದು ನೀವು ಕೇಳಬಹುದು. ಹೌದು ಆದರೆ ನಮ್ಮ ಆಂತರಿಕ ಶುದ್ಧತೆಗೆ ಏನು ಬೇಕೋ ಅಂತಹ ಸದ್ವಿಚಾರಗಳನ್ನು ಮಾತ್ರ ಉಳಿಸಿಕೊಳ್ಳಲು ಬೆಳೆಸಿಕೊಳ್ಳಲು ನಮಗೆ ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಎರಡನ್ನೂ ಆ ಪರಮಾತ್ಮ ನಮಗೆ ಕರುಣಿಸಿದ್ದಾನೋ ಇಲ್ಲವೋ? ಪ್ರಯತ್ನ ಪಟ್ಟರೆ, ನಾವು ವೈಚಾರಿಕ ಶುದ್ಧತೆಯನ್ನು ಪಡೆದುಕೊಂಡು ರೂಢಿಸಿ ಕೊಳ್ಳಬಹುದು. ಅಂತಹ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲ ಓದು, ವಿಧ್ಯಾಭ್ಯಾಸ, ಆಚಾರ, ವಿಚಾರ, ಸ್ನೇಹ, ಸಂಬಂಧಗಳು, ಪೂಜೆ, ಧ್ಯಾನಗಳು, ಇದ್ದರೆ ನಾವು ಶುಧ್ಧರಾಗಲು ಸಾಧ್ಯ. ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ ಆ ಮಾನಸಿಕ ಸಂತೆಯಿಂದ ಹೊರಬರಲು ಸಾಧ್ಯ.

ರಸಧಾರೆ – 057

ಆಗುಂಬೆಯಸ್ತಮಯ ದ್ರೋಣಪರ್ವತದುದಯ

ತ್ಯಾಗರಾಜನ ಗಾಂ ವಾಲ್ಮೀಕಿ ಕವನ

ಆಗಿಸವೆ ತಾವಿವೆಮ್ಮತರಂಗದಿ

ಯೋಗಪುಲಕಾಂಕುರವ? – ಮಂಕುತಿಮ್ಮ.

ದ್ರೋಣ ಪರ್ವತ = ಬಾಬಾ ಬುಡನಗಿರಿ ಬೆಟ್ಟ. ಆಗಿಸಿವೆ = ಉಂಟು ಮಾಡಿವೆ. ಪುಲಕಾಂಕುರ = ರೋಮಾಂಚನ.

ಆಗುಂಬೆಯ ಸೂರ್ಯಾಸ್ತಮಾನ ದ್ರೋಣಪರ್ವತದ ಸೂರ್ಯೋದಯ, ತ್ಯಾಗರಾಜನ ಗಾನ ವಾಲ್ಮೀಕಿಯ ಕವನ ಇವೆಲ್ಲವೂ ನಮ್ಮ ಅಂತರಂಗದಲ್ಲಿ ಸತ್ಯದ ದರ್ಶನವನ್ನು ಮಾಡಿಸಿ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮಲ್ಲಿ ಬಹಳಷ್ಟು ಜನಕ್ಕೆ ಸೂರ್ಯೋದಯ ಮಾತು ಸೂರ್ಯಾಸ್ತಮಾನಗಳನ್ನು ನೋಡಿ ಗೊತ್ತೇ ಇಲ್ಲ. ಅಥವಾ ಹಿಂದೆ ಎಂದೋ ನೋಡಿರುವುದು ಮರೆತೇ ಹೋಗಿದೆ. ಇಡೀ ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದು ಮಾನವ ಸೃಷ್ಟಿ. ಏಕೆಂದರೆ ತಾನು ಇರುವುದಷ್ಟೇ ಅಲ್ಲ ತನ್ನೊಡನೆ ಆದಂತ ಎಲ್ಲ ಸೃಷ್ಟಿಯನ್ನೂ ನೋಡಿ ಆನಂದಿಸುವ ಕಲೆ ಕೇವಲ ಮಾನವನಿಗೆ ಮಾತ್ರ ಗೊತ್ತು. ಆದರೆ ಆನಂದ ಪಡುವುದನ್ನು ಮರೆತೆಹೋಗಿದ್ದಾನೆ ಈ ಮನುಷ್ಯ. ವಸ್ತು ವಿಷಯಗಳ, ಯಾಂತ್ರಿಕತೆಯ, ಸ್ವಾರ್ಥದ ಮತ್ತು ಅಹಂಕಾರದ ಕಾಡಿನಲ್ಲಿ ಮನುಷ್ಯ ಕಳೆದು ಹೋಗಿದ್ದಾನೆ. ಅವನಿಗೆ ಇಂದು ಒಂದು ಸೂರ್ಯೋದಯವೋ, ಸೂರ್ಯಾಸ್ತಮಾನವೋ ಸಂಗೀತವೋ ಅಥವಾ ಕಾವ್ಯ ರಸಧಾರೆಯೋ ಸಂತೋಷವನ್ನು ಕೊಡುವುದಿಲ್ಲ. ಅವುಗಳೆಲ್ಲ ಇಂದಿಗೂ ಸಂತೋಷಕ್ಕೆ ಮತ್ತು ಆನಂದಕ್ಕೆ ಕಾರಣವಾಗೆ ಉಳಿದಿವೆ. ಆದರೆ ಮನುಷ್ಯನಿಗೆ ಅವೆಲ್ಲವನ್ನು ನೋಡಿ, ಕೇಳಿ ಅಥವಾ ಓದಿ ಆನಂದಪಡುವ ಮನಸ್ತತ್ವವೇ ಇಲ್ಲವಾಗಿದೆ. ಇದು ದುರಂತ.

ಪಾಪ ಕೆಲವರಿಗೆ, ಜೀವನ ಜಂಜಾಟದಲ್ಲಿ, ಅನಿವಾರ್ಯತೆಯಲ್ಲಿ ಮತ್ತು ಒತ್ತಡದಲ್ಲಿ ಈ ವಿಷಯಗಳಿಗೆಲ್ಲಾ ಮನವ ಕೊಡುವುದಕ್ಕೆ ಸಾಧ್ಯವಿಲ್ಲ, ಅವರನ್ನು ಬಿಡುವ. ಅವರು ಕರ್ಮ ಯೋಗಿಗಳು. ಆದರೆ ಎಲ್ಲವೂ ಇದ್ದು ಆದರೂ ಕೊರಗುತ್ತಾ ಇರುವವರಿಗೆ ಅನಂದವಾಗಿರುವುದಕ್ಕೆ ಈ ಸೂರ್ಯೋದಯ ಸೂರ್ಯಾಸ್ತಮಾನ ಸಂಗೀತ ಮತ್ತು ಸಾಹಿತ್ಯಗಳು ಖಂಡಿತ ಸಹಾಯಮಾಡುತ್ತವೆ. ಅದರ ಕಡೆಗೆ ಒಲವ ತೋರಿಸಿ ತಮ್ಮನ್ನು ತಾನು ಅದರಲ್ಲಿ ತೊಡಗಿಸಿಕೊಂಡರೆ, ಸಂತೋಷಪಡಲಿಕ್ಕಾಗದ ಸ್ಥಿತಿಯಿಂದ ಪಡಬಹುದಾದ ಸ್ಥಿತಿಗೆ ಬರಬಹುದು.

ಇಡೀ ಸೃಷ್ಟಿಗೆ ಕರಣವಾದ ಈ ಸೂರ್ಯೋದಯ ಸೂರ್ಯಾಸ್ತಮಾನಗಳು, ಮಾನವನ ಅತ್ಯದ್ಭುತ ಆವಿಷ್ಕಾರವಾದ ಸಂಗೀತ ಜ್ಞಾನ ಮತ್ತು ಜಗತ್ತಿನಲ್ಲೆಲ್ಲೂ ಲಭ್ಯವಾಗದ ನಮ್ಮ ಭಾರತೀಯ ಸಾಹಿತ್ಯದ ಮುಕುಟದಂತಿರುವ ವಾಲ್ಮೀಕಿಯ ರಚನೆ ಇವೆಲ್ಲದರಲ್ಲಿ ಯಾವುದಾರೊಂದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಸತ್ಯವಾಗಿಯೂ ಮಾನಸಿಕ ನೆಮ್ಮದಿ ಮತ್ತು ಸಂತೋಷ ದೊರಕುತ್ತದೆಂದು ಹೇಳುತಾರೆ ಮಾನ್ಯ ಗುಂಡಪ್ಪನವರು. ನನ್ನ ಮಟ್ಟಿಗೆ ಸಾಹಿತ್ಯ ಮತ್ತು ಸಂಗೀತಗಳೆರಡೂ ಸಹ ಏಕಾಗ್ರತೆಯನ್ನು ನೀಡಿ ಧ್ಯಾನಕ್ಕೆ ಆಧ್ಯಾತ್ಮ ಚಿಂತನೆಗೆ ಬಹಳ ಸಹಾಯಮಾಡುತ್ತವೆ ಎಂಬುದನ್ನು ಮನಗಂಡಿದ್ದೇನೆ.

ವಾಚಕರೆ ಈ ಜಗತ್ತಿನಲ್ಲಿ ಆನಂದಪಡುವುದಕ್ಕೆ ಅಸಂಖ್ಯಾತ ಸಾಧನಗಳು ಮಾರ್ಗಗಳೂ ಇವೆ.. ಹಾಗೆಯೇ ದುಃಖಪಡುವುದಕ್ಕೆ, ಕೊರಗುವುದಕ್ಕೆ ಮತ್ತು ಗೋಳಾಡುವುದಕ್ಕೂ ಅಸಂಖ್ಯಾತ ಕಾರಣಗಳು ಮತ್ತು ಮಾರ್ಗಗಳಿವೆ. ನಮಗೆ ಏನು ಬೇಕು ಎನ್ನವುದು ಮುಖ್ಯ. ಈ ಜಗತ್ತಿನ ಅಂಗಡಿಯಲ್ಲಿ ಎಲ್ಲವೂ ಇದೆ. ಆಯ್ಕೆ ನಮ್ಮದು ಸುಖ ದುಃಖಗಳು ನಮ್ಮ ಕೈಲೆ ಇದೆ.

ರಸಧಾರೆ – 058

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು

ಕೆಳೆಯೊಲವು ನಲ್ಲೆಯ ವಿಯೋಗವಿಂತಹವು

ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ

ನೊಳದನಿಯದೊಂದರಿಂ – ಮಂಕುತಿಮ್ಮ

ಮಲೆ=ಬೆಟ್ಟ, ಕಣಿವೆ = ಕೊರಕುಗಳು, ಕೆಳೆ=ಗೆಳೆತನ, ನಲ್ಲೆ= ಪ್ರೇಯಸಿ, ವಿಯೋಗ = ದೂರ ಸರಿವಾಟ, ಮನದೋಟವನು = ಮನಸ್ಸಿನ ಚಂಚಲ ಪ್ರಕೃತಿಯನು, ಮೂಕಗೊಲಿಪುವುವು = ಸುಮ್ಮನಾಗಿಸುವುವು,

ಮೂಕಗೊಳಿಪುವುವೆನ್ನ = ಮೂಕ + ಗೊಲಿಪುವುವು + ಎನ್ನ, ನೊಳದನಿಯದೊಂದರಿಂ = ಒಳದನಿ + ಅದರ + ಒಂದರಿಂ

ಬೆಟ್ಟಗುಡ್ಡಗಳು ಅದರಲ್ಲಿರುವ ಕಣಿವೆಗಳು, ಪ್ರಕೃತಿ ವಿಕೋಪದ ಗುಡುಗು ಸಿಡಿಲು, ಮಳೆ, ಚಂದಮಾರುತದಂತಾ ವಿಷಯಗಳು, ಸ್ನೇಹಿತನ ಒಲವು, ಪ್ರೇಯಸಿಯ ವಿಯೋಗದಂತಾ ವಿಷಯಗಳು ನಮ್ಮ ಮನಸ್ಸನ್ನು ಆಳುವಾಗ, ಇವುಗಳನ್ನೆಲ್ಲ ನಿಲ್ಲಿಸಿ ಮನಸ್ಸನ್ನು ನನ್ನ ಒಳದನಿಯು ಮಾತ್ರ ಸುಮ್ಮನಾಗಿಸುವುದು ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ.

ಭಗವದ್ಗೀತೆಯಲ್ಲಿ ಒಂದು ಉಲ್ಲೇಖ ಬರುತ್ತದೆ. “ಈ ದೇಹವನ್ನು ಒಂದು ರಥವೆಂದು ತಿಳಿ. ಆತ್ಮನೇ ಯಜಮಾನ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು ಮತ್ತು ಓಡುವ ಆರು ಕುದುರೆಗಳೇ ಅರಿಷಡ್ವರ್ಗಗಳು ” ಎನ್ನುತ್ತಾನೆ

ಶ್ರೀ ಕೃಷ್ಣ. ಎಲ್ಲಿಯ ತನಕ ಓಡುವ ಕುದುರೆಗಳು ಲಗಾಮಿನ ಮೂಲಕ ಸಾರಥಿಯ ಹಿಡಿತದಲ್ಲಿರುತ್ತವೆಯೋ ಅಲ್ಲಿಯತನಕ ಆ ಯಜಮಾನನೆನ್ನಿಸಿಕೊಂಡವನು, ಸೇರಬೇಕಾದ ಸ್ಥಳವನ್ನು ಸೇರುತ್ತಾನೆ. ಎಂದು ಸಾರಥಿಯ ಹಿಡಿತ ಲಗಾಮಿನ ಮೇಲೆ ಸಡಿಲವಾಗಿ ಕುದುರೆಗಳು ಮನಸೋ ಇಚ್ಛೆ ಓಡುತ್ತದೋ, ಆಗ ಆ ಯಜಮಾನ ಮತ್ತು ಆ ಸಾರಥಿ ಇಬ್ಬರೂ ಕುದುರೆಗಳು ಎಲ್ಲಿ ಕೊಂಡು ಹೋಗುತ್ತದೋ ಅಲ್ಲಿಗೆ ಹೋಗುತ್ತಾರೆ. ಅಂದರೆ ಎಲ್ಲಿಯತನಕ ನಮ್ಮ ಮನಸ್ಸು ಬುಧ್ಧಿಯ ಹಿಡಿತದಲ್ಲಿರುತ್ತೋ ಅಲ್ಲಿಯತನಕ ನಮಗೆ ಶ್ರೇಯಸ್ಸು. ಎಂದು ನಮ್ಮ ಮನಸ್ಸು ವಿಷಯಗಳ ವ್ಯಕ್ತಿಗಳ ಮತ್ತು ವಸ್ತುಗಳ ಆಕರ್ಷಣೆಯ ಹಿಡಿತಕ್ಕೆ ಹೋಗುತ್ತದೋ, ಆಗ ಆತ್ಮ ಸೊರಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಸೂಚ್ಯವಾಗಿ “ನಿಲಿಸಿ ಮನದೋಟವನು ” ಎನ್ನುತ್ತಾರೆ ಈ ಕಗ್ಗದಲ್ಲಿ

ಮಿತ್ರರೇ, ನಾವು ನಮ್ಮ ನಮ್ಮನ್ನೇ ಅವಲೋಕಿಸಿಕೊಂಡು ನೋಡಿದಾಗ, ನಮಗೆ ತಿಳಿಯುತ್ತದೆ ನಮ್ಮ ಮನಸ್ಸು ಎಂಬ ಕೋತಿ ಕ್ಷಣ ಕ್ಷಣಕ್ಕೂ ಮರದಿಂದ ಮರಕ್ಕೆ ಕೊಂಬೆಯಿಂದ ಕೊಂಬೆಗೆ, ಅಂದರೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹೇಗೆ ಹಾರುತ್ತಾ, ವ್ಯರ್ಥವಾಗಿ ತಿರುಗುತ್ತಲೇ ಇರುತ್ತದೆ. ಇದು ಪ್ರತಿಯೊಬ್ಬರ ಸ್ಥಿತಿ. ” ಹರಿದಾಡುವಂಥಾ ಮಾನವ ನಿಲಿಸುವುದು ಬಲು ಕಷ್ಟ” ಎಂದು ದಾಸರು ಹೇಳಿದ್ದಾರೆ. ಅರೆ! ದಾಸರೇ ಹಾಗೆ ಹೇಳಿದ ಮೇಲೆ ನಾವು ಮಾಡುವುದು ಏನು? ಎಂದು ನಾವು ಸುಮ್ಮನಾಗಿಬಿಡಬಹುದು. ಆದರೆ ದಾಸರು ” ಕಷ್ಟ” ಎಂದರೆ ಹೊರತು”ಅಸಾಧ್ಯ” ಎಂದು ಹೇಳಲಿಲ್ಲವಲ್ಲ.

ಹಾಗಾದರೆ ಏನು ಮಾಡಬೇಕು? “ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನನೊಳದನಿಯದೊಂದರಿಂ” ನೋಡಿ ಇದು ಗುಂಡಪ್ಪನವರ ಸಲಹೆ. ಮನಸ್ಸಿನ ಓಟವನ್ನು ನಿಲ್ಲಿಸಿ ಮೂಕವಾಗಿಸಬೇಕು. ಹೇಗೆ? ಎಂದರೆ ಅಂತರಂಗದ ಅರಿವಿನಿಂದ ಮಾತ್ರ ಸಾಧ್ಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗಾಗಿ ನಾವು ಅಂತರ್ಮುಖಿಗಲಾಗಬೇಕು. ಗುಹ್ಯರಾಗಬೇಕು. ಒಳದನಿಯನ್ನು ಉತ್ತೇಜಿಸಬೇಕು. ಅದನ್ನು ಕೇಳಬೇಕು ಮತ್ತು ಅದರಂತೆ ನಡೆಯಬೇಕು. ಆಗ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಮತ್ತು ಆನಂದದ ಅನುಭವವನ್ನು ನಾವು ಪಡೆಯ ಬಹುದು. ಇಂದು ಪ್ರಯತ್ನದಿಂದ ಸಾಧ್ಯ. ಪರರಿಂದ ಉಪದೇಶ ಪಡೆದು ನಡೆಸುವ ಕ್ರಿಯೆಯಲ್ಲ.

ವಾಚಕರೆ, ಇದೊಂದು ಪರೀಕ್ಷೆ. ಪ್ರಶ್ನ ಪತ್ರಿಕೆಗಳನ್ನೂ, ನಾವೇ ತಯಾರುಮಾಡಿ ನಾವೇ ಉತ್ತರ ಬರೆದು, ನಮ್ಮನ್ನು ನಾವೇ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವಂಥಾ ಪರೀಕ್ಷೆ. ಇಲ್ಲಿ ಪ್ರಯತ್ನ ಗಟ್ಟಿ ಮತ್ತು ಧೀರ್ಘವಾದರೆ, ಯಶಸ್ಸು ನಿಶ್ಚಯ. ಅಂಥಹ ಪ್ರಯತ್ನವನ್ನು ಮಾಡುವ ಧೃಢ ನಿಶ್ಚಯಬೇಕು. ಒಮ್ಮೆ ತೀವ್ರವಾಗಿ ತೊಡಗಿಸಿಕೊಂಡರೆ, ಅದೇ ನಮ್ಮನ್ನು ಮುಂದಕ್ಕೆ ಎಳೆದುಕೊಂಡು ಹೋಗುತ್ತೆ. ಆದರೆ ನಾವು ಪ್ರಯತ್ನ ಪಡಬೇಕು . ಅಂಥಹ ಪ್ರಯತ್ನವನ್ನು ಮಾಡುವ ನಿರ್ಧಾರವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?

ಸಾಕ್ಷಿದ್ವಯ ರಸಧಾರೆ – 059

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ

ಮನಗಾಣಿಸಲು ನಿಮಗೆ ದೈವದದ್ಭುತವ ?

ಮನುಜರೊಳಗಾಗಾಗ ತೋರ್ವ ಮಹನೀಯಗುಣ

ವನುವಾದ – ಮಂಕುತಿಮ್ಮ

ಆ ಪರತತ್ವದ ಅದ್ಭುತ ಕ್ರಿಯೆಗಳನ್ನು ನೋಡಲು ಮನಗಾಣಲು, ನಾವು ಮಂತ್ರ ತಂತ್ರ ಸಿದ್ಧಿಗಳಿಗೆ ಏಕೆ ಶರಣಾಗಬೇಕು? ಮನುಜರಲ್ಲಿ ಅಗಾಗ ಕಾಣುವ ಮಹನೀಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮಗೆ ದೈವದ ಕ್ರಿಯೆ ಅರ್ಥವಾಗುತ್ತದೆ, ಎನ್ನುವುದೇ ಈ ಕಗ್ಗದ ಹೂರಣ.

ನಿಜ. ಇದೊಂದು ವೃತ್ತ. ಇದರ ಕ್ರಿಯೆ ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ನಮಗೆ ನೋಡಲು ಬರುವುದಿಲ್ಲ. ಅರ್ಥಮಾಡಿಕೊಳ್ಳಲು ಬರುವುದಿಲ್ಲ. ಈ ಜಗತ್ತನ್ನು ಸೃಷ್ಟಿಸಿ, ನಡೆಸಿಕೊಂಡು ಹೋಗುತ್ತಿರುವ ಆ ಅದ್ಭುತ ಚೇತನದ ಕಾರ್ಯ ವೈಖರಿಗೆ ಒಂದು ಪರಿಭಾಷೆಯನ್ನು ನೀಡುವುದು ಬಹಳ ಕಷ್ಟ. ನಮ್ಮ ಜೀವನದಲ್ಲಿ ನಡೆಯುವುದೆಲ್ಲವನ್ನೂ ಅರ್ಥೈಸುವುದು, ಕಾರಣಹುಡುಕುವುದು ಬಹಳ ಕಷ್ಟ. ಹಾಗೆ ನಾವು ಒಂದು ರೀತಿಯಲ್ಲಿ ಅರ್ಥಮಾಡಿಕೊಂಡರೂ, ಅದು ನಿಜವಾದ ಕಾರಣವಾಗಿಲ್ಲದೇ ಇರಬಹುದು.

ನಮ್ಮಲ್ಲಿ ಸಾಧಾರಣವಾಗಿ ಒಂದು ಮಾತನ್ನು ಕೇಳುತ್ತಲಿರುತ್ತೇವೆ. ಯಾರಾದಾರೂ ನಮಗೆ ಸಂಕಟ ಸಮಯದಲ್ಲಿ ಅನಪೇಕ್ಷಿತವಾಗಿ ಸಹಾಯ ಮಾಡಿದಾಗ ” ದೇವರು ಬಂದಂಗೆ ಬಂದ್ಯಪ್ಪ” ಎನ್ನುವ ರೂಢಿ ಇದೆ ಅಲ್ಲವೇ. ಅಂದರೆ ಏನು ಆ ವ್ಯಕ್ತಿಯಲ್ಲಿ ನಾವು ದೇವರನ್ನು ಕಾಣುತ್ತೇವೆ ಮತ್ತು ಅವರಿಂದ ಆದ ಉಪಕಾರವನ್ನು ಆ ದೇವರೇ ಮಾಡಿದ ಎನ್ನುವ ರೀತಿಯಲ್ಲಿ ಅರ್ಥೈಸುತ್ತೇವೆ. ನಮಗೆ ಸಹಾಯಬೇಕು. ಯಾರು ಮಾಡುತ್ತಾರೆಂದು ಗೊತ್ತಿಲ್ಲ. ಯಾವಾಗ ಗೊತ್ತಿಲ್ಲವೋ ಆಗ ದೇವರ ಮೇಲೆ ನಂಬಿಕೆ. ಆ ಸಮಯದಲ್ಲಿ ಯಾರೇ ಸಹಾಯ ಮಾಡಿದರೂ ಅದನ್ನು ದೇವರೇ ಮಾಡಿದನೆಂದು ವ್ಯಾಖ್ಯಾನ. ಇದೇ ಜಗತ್ತು.

ಎಂದೋ ಒಂದು ಕಾಲವಿತ್ತು. ಗಜೇಂದ್ರನಿಗೆ, ಪ್ರಹ್ಲಾದನಿಗೆ, ದ್ರುವನಿಗೆ, ಗೋಕರ್ಣನಿಗೆ, ಅರ್ಜುನ ಮುಂತಾದವರಿಗೆ, ಆ ಪರಮಾತ್ಮ ನೇರ ಸಹಾಯ ಮಾಡಿದ ದೃಷ್ಟಾಂತಗಳು. ಆದರೆ, ಇಂದು ನಾವು ಅಂತಹ ಅನುಭವಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಇಂದು ನಾವು ನಮ್ಮ ಸುತ್ತಲಿರುವ ಮನುಷ್ಯರಲ್ಲಿ ಅವರ ಕಲ್ಯಾಣ ಗುಣಗಳಿಂದ ಅವರ ಮೂಲಕವೇ ಆ ದೈವದ ಅನುಭವವನ್ನು ಪಡೆಯಬೇಕು. ಇಂದು ಮಂತ್ರ ತಂತ್ರಗಳಿಂದ ಆ ದೈವವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಟ್ರಾನ್ಸಿಮಿಟರ ಸಶಕ್ತವಾಗಿದ್ದರೂ, ರಿಸೀವರ್ ಹಾಳಾಗಿದೆಯಲ್ಲ. ಹಾಗಾಗಿ ನಮ್ಮ ಸುತ್ತಲಿನ ಜನರಲ್ಲಿ ಇರುವ ಆ ಪರಮಾತ್ಮನ ಕಲ್ಯಾಣಗುಣಗಳಾದ ಪ್ರೀತಿ, ಸಹನೆ, ದಯೆ , ಕರುಣೆ ಮುಂತಾದವುಗಳನ್ನು ಗುರುತಿಸಿದರೆ ಒಳ್ಳೆಯದು. ಅವುಗಳಲ್ಲೇ ನಾವು ದೈವವನ್ನು ಕಾಣಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಇಂದೂ ಸಹ ಸಾಕಷ್ಟು ಜನ ಅಂತಹ ಮಹನೀಯರು ಇದ್ದಾರೆ. ಪ್ರತ್ಯಕ್ಷವಾಗಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಜನರು, ಎಲೆಮರೆಕಾಯಿಗಳಂತೆ ಇದ್ದಾರೆ. ಇಡೀ ಕರುನಾಡು ಹೆಮ್ಮೆಪಡುವಂಥಾ, ಮೋಕ್ಷಗುಂಡಂ ವಿಶ್ವೇಶ್ವರೈಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ( ರಾಜ ಋಷಿ ಎಂದು ಅವರಿಗೆ ಬಿರುದು) ರಂಥವರು, ( ಅವರಿಗೆ ಅನುಕೂಲ ವಿತ್ತು) ಸಾಲುಮರದ ತಿಮ್ಮಕ್ಕ , ಮದರ್ ತೆರೇಸಾ ರಂಥವರು, ಲೋಕ ಕಲ್ಯಾಣವನ್ನು ಮಾತ್ರ ಗುರುಯಾಗಿರಿಸಿಕೊಂಡು ಸಾಧನೆಯನ್ನು ಮಾಡುವ ಸಾಧುಗಳು ಸಂತರು, ಮಠ ಮಾನ್ಯಗಳು ಏನೂ ಇಲ್ಲದೆ ಕೆಲಸ ಮಾಡುತ್ತಾ ಒಟ್ಟು ಸಮುದಾಯದ ಹಿತವನ್ನೇ ಬಯಸುವ ಮಹನೀಯರು ನಮ್ಮ ಸುತ್ತುಮುತ್ತಲ್ಲೇ ಇರುತ್ತಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾವು ದೈವ ಕೃಪೆ ಎಂದೇ ಪರಿಗಣಿಸಬೇಕಾಗುತ್ತದೆ. ಆ ಪರಮಾತ್ಮ ಪ್ರತ್ಯಕ್ಷವಾಗಿ ನಮಗೆ ಒದಗದಿದ್ದರೂ ಪರೋಕ್ಷವಾಗಿ ಇಂಥಹ ಮಹನೀಯರ ಮೂಲಕ ನಮಗೆ ಮತ್ತು ಇಡೀ ಸಮಾಜಕ್ಕೆ ಒದಗುತ್ತಲೇ ಇರುತ್ತಾನೆ. ನಾವೂ ಸಹ ಅಂತಹ ಗುಣಗಳನ್ನು ಗುರುತಿಸುತ್ತಾ, ನಾವೂ ಸಹ ಸಾಕಷ್ಟು ಒತ್ತಾಸೆಯನ್ನು ನೀಡುತ್ತಾ, ಅಂತಹ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.

ಸಾಕ್ಷಿದ್ವಯ ರಸಧಾರೆ – 060

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ

ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |

ದೇಶಕಾಲವಿಭಾಗ ಮನದ ರಾಜ್ಯದೊಳಿರದು

ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||

ಕಬ್ಬಗಳು = ಕಾವ್ಯಗಳು ಬೊಮ್ಮನದು = ಪರಮಾತ್ಮನದು

ಗ್ರೀಸಿನ ಕಬ್ಬಗಳನ್ನು ಓದುವರು ದೆಹಲಿಯವರು. ಕಾಶಿಯಾ ಶಾಸ್ತ್ರಗಳನ್ನು ಆಕ್ಸಫರ್ಡಿನವರು ದೇಶ ಕಾಲ ವಿಭಾಗ ಮನ ರಾಜ್ಯದೊಳು ಇರದು ಶ್ವಾಸವದು ಬೊಮ್ಮನದು ಮಂಕುತಿಮ್ಮ.

ಜಗತ್ತಿನ ವಿಶಾಲತೆಗೆ ಒಂದು ಕನ್ನಡಿ ಈ ಕಗ್ಗ. “ಗ್ಲೋಬಲ್ ವಿಲೇಜ್” ಎಂದು ಇತ್ತೀಚೆಗೆ ಒಂದು ಪದ ಪ್ರಯೋಗವನ್ನು ನಾವು ಕೇಳುತಿದ್ದೇವೆ. ನಾವು ಇಲ್ಲಿ ಕುಳಿತುಕೊಂಡು ಪ್ರಪಂಚದ ಯಾವುದೇ ಮೂಲೆಯಲಿರುವ ಜನರೊಡನೆ ನಾನಾ ವಿಧವಾದ ಸಂಪರ್ಕಗಳನ್ನು ಇಂದು ಹೊಂದಿದ್ದೇವೆ. ಎಲ್ಲಿಯೋ ಹುಟ್ಟಿ ಬೆಳೆದ, ಆಲ್ಬರ್ಟ್ ಕಾಮೂವಿನ ನಾಟಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇವೆ. ಶೇಕ್ಸಪಿಯರನ ನಾಟಕಗಳನ್ನೂ ಆಡುತ್ತೇವೆ. ಆಲ್ಲಿ ಅವರುಗಳು ನಮ್ಮ ಭಾರತೀಯ ಸಂಸ್ಕೃತಿಯ ಕತೆ ನಾಟಕ ಶಾಸ್ತ್ರಗಳನ್ನು ಓದುತ್ತಾರೆ. ಇಂಗ್ಲೆಂಡಿನ ಶಾಲೆಗಳಲ್ಲಿ ” ಸಹನಾವವತು” ಹೇಳುತ್ತಾರೆ ಪ್ರಾರ್ಥನೆಯಲ್ಲಿ. ಆದರೆ ದುರಂತವೆಂದರೆ, ಇಲ್ಲಿ ಭಾರತದಲ್ಲಿ ಅದನ್ನು ಶಾಲೆಗಳಲ್ಲಿ ಹೇಳಿದರೆ ಅದಕ್ಕೊಂದು ಬಣ್ಣ ಕಟ್ಟಿ ಗೊಂದಲವೇ ಆಗುತ್ತದೆ. ಇರಲಿ, ಹೀಗೆ ಬೇರೆ ಬೇರೆ ದೇಶಗಳ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಅನುಕರಿಸಿ, ಅನುಸರಿಸುವಾಗ ಇಡೀ ಜಗತ್ತೇ ಒಂದು ಮನೆಯಾಗುವ ಸಂಭವ ಇದೆ ಎಂದು ಅರ್ಥ ತಾನೇ.

“ವಿದ್ವತ್ವಂಚ ನೃಪತ್ವಂಚ ನೈವ ತುಲ್ಯಂ ಕದಾಚನ | ಸ್ವದೇಶೆ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ ” ಎನ್ನುತ್ತದೆ ಸುಭಾಷಿತ. ಹಾಗೆ ವಿದ್ಯೆಗೆ ದೇಶ ಕಾಲದ ಎಲ್ಲೆ ಇರುವುದಿಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಹೌದು ಮನಸ್ಸು ವಿಶಾಲವಾದರೆ, ಮನಸ್ಸಿನ ಚಿಂತನೆ ವಿಶಾಲವಾದರೆ ಅದು ಸಾಧ್ಯ. ಆದರೆ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ನಮ್ಮ ಸುತ್ತ ನಾವೇ ಎಳೆದುಕೊಂಡು ನಮ್ಮ ಜಾತಿ, ನಮ್ಮ ಭಾಷೆ, ನಮ್ಮ ವರ್ಣ, ನಮ್ಮ ರಾಜ್ಯ. ಹೀಗೆ ಬೇರೆ ಬೇರೆ ರೀತಿಯ ವೃತ್ತಗಳನ್ನು ಎಳೆದುಕೊಂಡು “ಕೂಪಸ್ಥ ಮಂಡೂಕ” ದ ರೀತಿ ಬಾಳುವ ನಮಗೆ ಜಗದ್ವೈಶಾಲ್ಯದ ಮನೋಭಾವ ಹೇಗೆ ಬರಬೇಕು ಹೇಳಿ? ಇಂದು ಜಗತ್ತು ಇರುವುದೇ ಹಾಗೆ. ಒಬ್ಬರು ಹಾಗಾದರೆ, ಮತ್ತೊಬ್ಬರೂ ತಮ್ಮ ಪ್ರತಿಷ್ಠೆ ತೋರುವುದಕ್ಕೋ ಅಥವಾ ತಮ್ಮನ್ನು ಮತ್ತು ತಮ್ಮತನವನ್ನು ಕಾಪಾಡಿಕೊಳ್ಳುವುದಕ್ಕೋ, ಇವರೂ ಹಾಗಾಗುತ್ತಾರೆ. ಇದಕ್ಕೆ ಕೊನೆ ಎಲ್ಲಿ. ಆ ದೇವರೇ ಬಲ್ಲ.

ಇಷ್ಟೆಲ್ಲಾ ವಿರೋಧ-ವೈವಿಧ್ಯತೆಗಳಲ್ಲಿ ಮನುಷ್ಯ ಒಂದು ವಿಚಾರ ಮರೆತು ಹೋಗಿದ್ದಾನೆ. ಎಲ್ಲ ಮನುಷ್ಯರೂ ಬದುಕಿರುವುದೇ ಉಸಿರಾಟದಿಂದ. ಮತ್ತು ಆ ಉಸಿರು ಪರಮ ಚೇತನದ ಕರುಣೆಯಿಂದ ನಮಗೆ ಸಿಕ್ಕಿದೆ. ವಾಚಕರೆ, ನೋಡಿ ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬರದಿದ್ದರೆ ಅಥವಾ ಹೊರಗೆ ಬಿಟ್ಟ ಉಸಿರು ಮತ್ತೆ ಒಳಗೆ ಹೋಗದಿದ್ದರೆ, ನಾವು ಇಲ್ಲ. ಇಷ್ಟು ದುರ್ಬಲ, ಸೂಕ್ಷ್ಮ, ನಾಜೂಕಾದದ್ದು ( fragile ) ನಮ್ಮ ಬದುಕು, ನಾವು ಎಷ್ಟು ದಿವಸ ಬದುಕಿರಬೇಕು ಎನ್ನುವುದು ಆ ಪರಮ ಶಕ್ತಿಯ ಇಚ್ಚೆಯ ಮೇಲೆ ನಿರ್ಭರವಾಗಿದೆ ಎಂಬುವುದು ಆಸ್ತಿಕರ ನಂಬಿಕೆ. ಇರಲಿ ಯಾವುದೋ ಒಂದು ಶಕ್ತಿಯ ಅಧೀನ ನಾವೆಲ್ಲಾ. ಹಾಗೆ ಅಷ್ಟು ನಾಜೂಕಾದ ಬದುಕನ್ನು ನಡೆಸುವ ನಾವು, ಈ ಕ್ಷಣ ಇದೆ-ಮತ್ತೊಂದು ಕ್ಷಣ ಇಲ್ಲ, ಎನ್ನುವಂಥಾ ಬದುಕಿಟ್ಟುಕೊಂಡು ನಾವು ಅಹಂಕಾರ ಪಡುವುದು ಮೂರ್ಖತನವಲ್ಲದೆ ಮತ್ತೇನು.

ಬನ್ನಿ ನಾವು ಈ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ಅಳಿಸಿ ಅಹಂಕಾರವನ್ನು ತೊರೆದು, ಪರಸ್ಪರ ಪ್ರೀತಿ, ಸದ್ಭಾವನೆ, ವಿಶ್ವಾಸಗಳನ್ನು ಬೆಳೆಸಿಕೊಂಡುವಿಶ್ವಮಾನವರಾಗೋಣ. ಇಡೀ ವಿಶ್ವವನ್ನೇ ಎಲ್ಲ ಪ್ರಾಣಿಗಳೂ ಪ್ರಶಾಂತವಾಗಿ ಜೀವಿಸಲು ಒಂದು ಸುಂದರ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡೋಣ.

You may Also Like :

 

Leave a Comment