ಸತ್ಯಾನ್ವೇಷಣೆ ರಸಧಾರೆ – 031
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೋಲಿಹುದನೆ ಸತ್ಯವೆಂದು ? ||
ಅಚ್ಚರಿಯ ತಂತ್ರವಿದು ಬ್ರಹ್ಮ ಸೃಷ್ಟಿಗಳೇಕೋ |
ಮುಚ್ಚಿಹವು ಸಾಜತೆಯ- ಮಂಕುತಿಮ್ಮ ||
ನಚ್ಚುವುದು = ನೆಚ್ಚುವುದು, ನಂಬುವುದು, ಇಹುದನೆ = ಇರುವುದನ್ನು , ಸಾಜತೆಯ = ಸಹಜತೆಯ.
ಸತ್ಯವಾದ ಆ ಪರಮಾತ್ಮವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ಜಗತ್ತು ಕಾಣುತ್ತದೆ. ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು ಅಸಥ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲ ಅನುಭವ ವೇಧ್ಯ. ಅದನ್ನು ಸತ್ಯವೆನ್ನುತ್ತಾರೆ.ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ. ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಮುಚ್ಚಿಹುದು, ಸ್ಪಷ್ಟವಿಲ್ಲದೆ ,ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ನೋಡಿ ಒಂದು ಮಗುವಿಗೆ ಆನೆಯನ್ನು ನೀವು ಬಹಳ ಚೆನ್ನಾಗಿ ವಿವರಿಸುತ್ತೀರಿ. ದೊಡ್ಡ ಕಿವಿ, ಸಣ್ಣ ಕಣ್ಣು, ಸಣ್ಣ ಬಾಲ, ಬೃಹತ್ತಾದ ದೇಹ ಮತ್ತು ಕಾಲುಗಳು, ಒಂದು ದೊಡ್ಡ ಸೊಂಡಿಲು ಎಂದು ಎಷ್ಟು ಹೇಳಿದರೂ ಆ ರೂಪವನ್ನು ಆ ಮಗು ಕಲ್ಪಿಸಿಕೊಳ್ಳಲು ಸಾಧ್ಯವೇ?. ಇಲ್ಲ. ಬದಲಿಗೆ ಅದಕ್ಕೊಂದು ಆನೆಯನ್ನು ತೋರಿಸಿ, ಇದು ಆನೆ ಎಂದು ಹೇಳಿದರೆ. ಮುಂದೆ ಅದಕ್ಕೆ ಆನೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ನಿಜವಾದ ಆನೆಯ ರೂಪ ಅದರ ಮನಸ್ಸಿಗೆ ಬರುತ್ತದೆ ಮತ್ತು ಬೇರೆ ರೂಪವನ್ನಲ್ಲ. ಆದರೆ ನಮಗೆ ಯಾರೂ ಆ ಪರಮಾತ್ಮನನ್ನು ತೋರಿಸಿಲ್ಲ.
ಹಾಗಿರಬೇಕಾದರೆ ನಾವು ಯಾವುದನ್ನು ಪರಮಾತ್ಮ ಎಂದು ನಂಬುವುದು. ಹಾಗೆ ನಾವು ಕಾಣದೆ ಇರುವ, ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಒಂದು ವಸ್ತುವನ್ನು ಸತ್ಯವೆಂದೂ, ಕಣ್ಣಿಗೆ ಕಾಣುವ ಮತ್ತು ನಮ್ಮ ನಿತ್ಯಜೀವನದಲ್ಲಿ ನೋಡುವ ಅನುಭವಿಸುವ ಮತ್ತು ಒಡನಾಡುವ ವಸ್ತು, ವ್ಯಕ್ತಿ ವಿಷಯಗಳನ್ನು ಸುಳ್ಳು ಅಥವಾ ಮಿಥ್ಯೆ ಎನ್ನುವುದು, ಏನಿದು ತಂತ್ರ ಎನ್ನುತ್ತಾರೆ ಶ್ರೀ ಗುಂಡಪ್ಪನವರು.
ನಮ್ಮ ಋಷಿ ಮುನಿಗಳು ಬಹಳ ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಯಾರೂ ಕಾಣದನ್ನು ಬಹಳ ಹಿಂದೆಯೇ ಅನುಭವದಿಂದ ಕಂಡುಕೊಂಡಿದ್ದಾರೆ. ತೆಲುಗಿನಲ್ಲಿ ಒಬ್ಬ ನಮ್ಮ ಗುಂಡಪ್ಪನವರಂತೆಯೇ ಒಬ್ಬ ತತ್ವಪ್ರತಿಪಾದಕ ಕವಿ, ವೇಮನ. ಸರಿ ಸುಮಾರು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಈ ಕವಿ ನಮ್ಮ ಗುಂಡಪ್ಪನವರ ಕಗ್ಗಗಳ ರೂಪದಲ್ಲಿಯೇ ತತ್ವಪ್ರತಿಪಾದಕ ಕೃತಿ” ವೇಮನ ಶತಕ” ವನ್ನು ರಚಿಸಿದ್ದಾರೆ. ಅವರು ಬರೆಯುತ್ತಾರೆ ” ಇಂದು ಗಲಡು ಅಂದು ಲೇಡನಿ ಸಂದೇಹಮು ವಲದು, ಚಕ್ರಿ ಎದೆಂದು ವೆಥಿಕಿತೆ ಅದಂದೆ ಗಲಡು” ಎಂದು. ಇಲ್ಲಿರುವ ಅಲ್ಲಿ ಇಲ್ಲ ಎಂಬ ಸಂದೇಹವು ಬೇಡ ಆ ಚಕ್ರಧಾರಿಯು ಎಲ್ಲೆಲ್ಲಿ ಹುಡುಕಿದರೆ ಅಲ್ಲಲ್ಲಿ ಕಾಣುವ” ಎನ್ನುತ್ತಾರೆ.
ಆ ಪರಮಾತ್ಮನ ಸರ್ವಪ್ಯಾಪಕತ್ವವನ್ನು ಪ್ರತಿಪಾದಿಸುವ ಸಾಹಿತ್ಯ ನಮ್ಮಲ್ಲಿ ಹೇರಳವಾಗುಂಟು. ” ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ” ಎನ್ನುವ ಶಿವಶರಣರು, ” ಆ ಪರಮಾತ್ಮ ಎಲ್ಲಕಡೆಯೂ ಇರುವುದರಿಂದ, ಈ ಬಾಳೆ ಹಣ್ಣನ್ನು ನಾ ಮರೆಯಲ್ಲಿ ತಿನ್ನಲಾಗಲಿಲ್ಲ” ಎಂದು ತನ್ನ ಗುರುಗಳಿಗೆ ಹೇಳಿದ ನಮ್ಮ ಕನಕದಾಸರು. ಎಲ್ಲರೂ ಆ ಕಾಣದ ದೈವದ ಸರ್ವವ್ಯಾಪಕತ್ವವನ್ನು ಪ್ರತಿಪಾದಿಸಿದ್ದಾರೆ.
ಕಾಣದ್ದೆಲ್ಲ ಅಸತ್ಯವೆಂದು ಹೇಳುವುದು ತಪ್ಪು. ಪ್ರೀತಿ ಪ್ರೇಮಗಳು ಕಾಣದಿದ್ದರೂ ಅದರ ಅನುಭವವಾಗುವುದಿಲ್ಲವೇ? ಗಾಳಿ ಕಾಣದಿದ್ದರೂ ನಮ್ಮನ್ನೆಲ್ಲ ಜೀವಂತವಾಗಿರಿಸಿಲ್ಲವೇ? ನಮಗೆ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಬೆಳಕು ಬರುವುದಿಲ್ಲವೇ? ಕಾಣುವುದಿಲ್ಲವಲ್ಲ ಎಂದು ಪರೀಕ್ಷಿಸಲು ಕೈ ಇಟ್ಟು ನೋಡಿ. ಅಷ್ಟೇ ನಿಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತೆ. ಅಲ್ಲವೇ? ಹಾಗೆ ನಾವು ನಮಗೆ ಕಣ್ಣಿಗೆ ಕಾಣವುದು ಮಾತ್ರ ಸತ್ಯ ಕಾಣದ್ದೆಲ್ಲ ಸುಳ್ಳು ಅಸತ್ಯವೆಂದು ಹೇಳಲಾಗುವುದಿಲ್ಲ. ಇದ್ದರೂ ಕಾಣದ ಆದರೆ ಸತ್ಯವೆನ್ನಿಸಿಕೊಳ್ಳುವ, ಈಗ ಕಂಡರೂ ಬದಲಾಗುತ್ತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಸತ್ಯವೆನ್ನಿಸಿಕೊಳ್ಳುವ ಈ ಪರಮಾತ್ಮ ಜಗತ್ಸಂಬಂಧವನ್ನೇ ಗುಂಡಪ್ಪನವರು ಅಚ್ಚರಿಯ ತಂತ್ರ ಎನ್ನುತ್ತಾರೆ.
ಕಾಣದ ದೇವರು ಮತ್ತು ಕಾಣುವ ಈ ಜಗತ್ತು ಇವುಗಳ ಬಾಂಧವ್ಯವೆ ಈ ಜಗದ್ವ್ಯಾಪಾರ. ಆದರೆ ಒಂದು ಶಕ್ತಿ, ಕಣ್ಣಿಗೆ ಕಾಣದಿದ್ದರೂ ತನ್ನ ಪ್ರಭಾವ ಮತ್ತು ಪ್ರತಾಪವನ್ನು ಎಲ್ಲ ಕಡೆಯೂ ಬೀರುತ್ತಿರುವ ಅತ್ಯುತ್ತಮ ಶಕ್ತಿ, “ಪರಮ ಪೌರುಷವನ್ನು” ಪಡೆದಿರುವ ಪರಮ ಪುರುಷನೆಂದು ಕರೆಯಲ್ಪಡುವ ಆ ಶಕ್ತಿಯೇ ಎಲ್ಲವೂ ಆಗಿರುವಾಗ, ನಾವು ಅದನ್ನು ನಂಬದೆ ಬೇರೆ ಗತ್ಯಂತರವೇ ಇಲ್ಲ. ನಂಬದೆ ಸತ್ಯ-ಮಿಥ್ಯೆಗಳ ದ್ವಂದ್ವಗಳಲ್ಲಿ ತೊಳಲಾಡುವುದಕ್ಕಿಂತ, ನಂಬಿ ನೆಮ್ಮದಿಯಿಂದ ಇರಬಹುದಲ್ಲವೇ? ನಮ್ಮ ಭಾರತೀಯ ಸಿದ್ಧಾಂತಗಳಲ್ಲಿ ಪ್ರತಿಪಾದಿಸಲ್ಪತ್ತಂತೆ ಎಲ್ಲವೂ ಆ ಪರಮಾತ್ಮನೇ ಆದಮೇಲೆ ನಾನು, ನೀವು, ಅವನು, ಅವಳು, ಇದು, ಅದು, ಎಲ್ಲವೂ ಆ ಪರಮ ಶಕ್ತಿಯ ಸ್ವರೂಪವೇ ಎಂದಮೇಲೆ, ಎಲ್ಲವನ್ನೂ ಪ್ರೀತಿ ಪ್ರೇಮ ವಿಶ್ವಾಸದಿಂದ ಕಂಡು ಒಂದು ಸೌಹಾರ್ಧಯುತವಾದ ಬಾಳು ನಡೆಸಲು ಸಾಧ್ಯವಲ್ಲವೇ?
ಸತ್ಯಾನ್ವೇಷಣೆ ರಸಧಾರೆ – 032
ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೋ ನಿದ್ದೆ ಕಲವರವೋ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ ? – ಮಂಕುತಿಮ್ಮ.
ಈ ಪರಬೊಮ್ಮನು ಈ ಜಗವ ರಚಿಸಿದವನು ಆದೊಡೆ ಬರಿ ಆಟವೋ ಕನಸೋ ಕಲವರವೋ? |
ಮರುಳನು ಅವನು ಅಲ್ಲದೊಡೆ ನಿಯಮವು ಒಂದು ಇರಬೇಕು ಗುರಿ ಗೊತ್ತು ಅದು ಎನಿಹುದೋ ಮಂಕುತಿಮ್ಮ ಈ
ಪರಬೊಮ್ಮ = ಪರಬ್ರಹ್ಮ, ಪರಮಾತ್ಮ, ಜಗವ = ಜಗತ್ತನ್ನು, ಆದೊಡೆ = ಆದರೆ, ಕಲವರ = ಅರೆ ನಿದ್ರಾವಸ್ಥೆಯಲ್ಲಿ ಬಡಬಡಿಸುವುದು. ಮರುಳ = ಹುಚ್ಚ, ಗುರಿ = ಧ್ಯೇಯ, ಗೊತ್ತು = ಗತಿ ಮಾರ್ಗ.
ಆ ಪರಮಾತ್ಮನು, ನಾವು ಹಿಂದೆ ಹೇಳಿದಂತೆ, ಈ ಜಗತ್ತನ್ನು ಸೃಷ್ಟಿಸಿದ ಎಂದರೆ ಇದರ ಧ್ಯೇಯ ಮತ್ತು ದಿಶೆ ಎರಡೂ ಇಲ್ಲದೆ, ಒಂದು ನಿರ್ದಿಷ್ಟ ನಿಯಮವಿಲ್ಲದೆ ಏಕೆ ಹೀಗೆ ಇದೆ ? ಮಾನವರಿಗೆ ಅರ್ಥವಾಗದ ಈ ಜಗತ್ತನ್ನು ಸೃಷ್ಟಿಸಿ, ಈ ಜಗತ್ತನ್ನು, ಬರಿ ಅವನಾಟವೆಂದೋ, ಕನಸೆಂದೋ, ಮಾಯೆಯೆಂದೋ ಹೇಳಿ, ಅರ ನಿದ್ರೆಯಲಿ ಆಡುವ ಅಸ್ಪಷ್ಟಮಾತುಗಳಂತೆ, ಈ ಜಗತ್ತಿನ ವಿಷಯದಲ್ಲಿ ಒಂದು ಸ್ಪಷ್ಟ ನಿರೂಪಣೆ ಏಕಿಲ್ಲವೆಂದು ಮತ್ತು ಇಂತಹ ಜಗತ್ತನ್ನು ಸೃಷ್ಟಿಮಾಡಿದ, ಆ ಪರಮಾತ್ಮನು ಹುಚ್ಚನಲ್ಲವಷ್ಟೇ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ. ಈ ಕಗ್ಗಗಳನ್ನು ನೋಡಿದರೆ ಏಕೆ ಹೀಗೆ ಗುಂಡಪ್ಪನವರು ಮತ್ತೆ ಮತ್ತೆ ಇದೆ ಪ್ರಶ್ನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಕೇಳಿದ್ದಾರೆ ಎಂದು ಸಂದೇಹವು ಬರುವುದು, ಸಹಜ. ವಿಷಯವೇ ಹಾಗಿದೆ. ಇದರ ವಿಚಾರವನ್ನು ಮತ್ತೆ ಮತ್ತೆ ಜಿಜ್ಞಾಸೆಗೆ ಒಳಪಡಿಸಿದರೂ ಅರ್ಥವಾಗದಷ್ಟು ಕ್ಲಿಷ್ಟ. ಓದುಗರ ಮನಸ್ಸನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವ ಪ್ರಯತ್ನ ಮಾನ್ಯ ಗುಂಡಪ್ಪನವರದು.
ಹೀಗೆ ಅನ್ನಿಸುವುದು ಸಹಜ. ಆದರೆ ಇದರ ವ್ಯಾಪ್ತಿ ಮತ್ತು ವೈಶಾಲ್ಯ ಎಷ್ಟಿದೆ ಎಂದರೆ, ಸಮಗ್ರ ಸೃಷ್ಟಿಯನ್ನು ಅವಲೋಕನಮಾಡಲು ಮಾನವ ಮಾತ್ರರಿಂದೇನು, ದೇವತೆಗಳಿಗೆ ಅಸಾಧ್ಯವಾದ ವಿಷಯ. ಬ್ರಹ್ಮಾಂಡದ ಬೃಹದಾಕಾರವನ್ನು ಈಗಾಗಲೇ ಪ್ರಸ್ತಾಪ ಮಾಡಿದ್ದೇನೆ. ಕಣ್ಣಿಗೆ ಕಾಣದ್ದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು ಅಥವಾ ಊಹಿಸಿಕೊಳ್ಳಬಹುದು. ಆದರೆ ಊಹೆಗೆ ನಿಲುಕದ್ದನ್ನ, ಅರ್ಥಮಾಡಿಕೊಳ್ಳುವುದು ಹೇಗೆ?. ಆದರೆ ಮನುಷ್ಯನಿಗೆ ಚಿಂತನೆಯ ಶಕ್ತಿ ಎಂದಿನಿಂದ ಬಂತೋ ಅಂದಿನಿಂದ ಮೊದಲುಗೊಂಡು ಇಂದಿನವರೆಗೆ, ಹಲವಾರು ಮಹನೀಯರು, ತಮ್ಮ ತಮ್ಮ ಅರಿವಿನ ಮಿತಿಯೊಳಗೆ ಈ ಜಗತ್ತಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಎಲ್ಲೂ ಸಮಗ್ರ ಚಿತ್ರ ನಮಗೆ ಕಾಣುವುದಿಲ್ಲ.
ಒಬ್ಬೊಬ್ಬರದು ಒಂದೊಂದು ವಿಶ್ಲೇಷಣೆ. ದೂರದಲ್ಲಿ ನಿಂತು ಒಬ್ಬೊಬರ ವಿವರಣೆಯನ್ನು ಕಂಡಾಗ, ನಾವು ಬಹಳ ವಿಚಲಿತರಾಗಿ ಪರದಾಡುವಂತಾಗುತ್ತದೆ. ಏಕೆಂದರೆ, ಅಷ್ಟೊಂದು ವೈವಿದ್ಯಮಯ ಚಿತ್ರಗಳು ನಮಗೆ ಕಾಣುತ್ತದೆ. ಇದೇನು ಬೊಂಬೆಯಾಟದಲ್ಲೋ ಅಥವಾ ಕನಸಿನಲ್ಲೋ ಘಳಿಗೆಗೊಂದು ಚಿತ್ರಮೂಡುವಂತೆ ಇದೆಯಲ್ಲ, ಈ ಸೃಷ್ಟಿಯ ವಿಧ್ಯಮಾನಗಳೆಲ್ಲ, ಒಂದೇ ರೀತಿಯಲ್ಲಿ ಇಲ್ಲದಿರುವುದರಿಂದ ಅರ್ಥಮಾಡಿಕೊಳ್ಳಲು ಮತ್ತು ಮುಂದಣ ಚಿತ್ರವನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲವಲ್ಲ ಎಂದು ನಾವು ಪರದಾಡುವಾಗ, ” ಇದೊಂದು ಹುಚ್ಚು ಪ್ರಪಂಚ” ಎನ್ನುವ ಭಾವ ನಮಗೆಲ್ಲರಿಗೂ ಯಾವುದಾದರೂ ಸಮಯದಲ್ಲಿ ಬಂದಿರಬಹುದು ಅಥವಾ ಮುಂದೆ ಬರಬಹುದು. ಇದನ್ನೇ ಮಾನ್ಯ ಗುಂಡಪ್ಪನವರು ” ಬರಿ ಆಟವೋ ಕನಸೋ ಕಲವರವೋ ” ಎಂದಿದ್ದಾರೆ.
ವಾಚಕರೆ, ದಯವಿಟ್ಟು ಆಲೋಚಿಸಿ. ನಮ್ಮ ನಮ್ಮ ಜೀವನದಲ್ಲೂ ಸಹ ನಮಗೆ ಈ ರೀತಿಯ ಭಾವನೆ ಬಂದಿರಬಹುದು. ಅರ್ಥವಾಗದ್ದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತೇವೆ. ನಮ್ಮ ಜೀವನದ ಗತಿಗೇಕೆ ಒಂದು ನಿಯಮವಿಲ್ಲ ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ. ಆದರೆ ನಿಯಮ ಇದೆ. ನಮಗೆ ಕಾಣುವುದಿಲ್ಲ. ಕಂಡರೂ ಅರ್ಥವಾಗುವುದಿಲ್ಲ. ಅರ್ಥವಾದರೂ ನಮ್ಮ ಮತಿಯ ಮಿತಿಯಿಂದ ಸಮಗ್ರ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುವುದಿಲ್ಲ. ಯಾವುದು ನಮಗೆ ಅರ್ಥವಾಗುವುದಿಲ್ಲವೋ ಅದನ್ನು ನಾವು, ಈ ಜಗತ್ತು ಒಂದು ಮಾಯೆ, ಮಿಥ್ಯಾ ಲೋಕ ಮತ್ತು ನಮಗೆ ಈ ಜೀವನದಲ್ಲಿ ಸಂಧಿಸುವುದೆಲ್ಲಾ ಆ ಪರಮಾತ್ಮನ ಇಚ್ಚೆಯಂತೆ ನಡೆಯುವುದು, ವಿಧಿ, ಹಣೆಬರಹ ಎಂದೆಲ್ಲ ಪರಿಭಾಷೆಯನ್ನು ಕೊಡುತ್ತಾ ಇರುತ್ತೇವೆ.
ನಮಗಿರುವುದು ಅಲ್ಪ ಆಯಸ್ಸಿನ ಜೀವನ. ಎಂದು ಕೊನೆಯೋ ಗೊತ್ತಿಲ್ಲ. ಹತ್ತಾರು ಜನ್ಮದಲ್ಲಿ ಅದನ್ನೇ ಸಂಶೋಧನೆಯ ರೀತಿಯಲ್ಲಿ ಅರ್ಥೈಸುವುದಕ್ಕೆ ಪ್ರಯತ್ನಪಟ್ಟರೂ ಅರ್ಥವಾಗದ ಈ ಪರಮಾತ್ಮನ ಲೀಲೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ವೃಥಾ ವ್ಯರ್ಥ. ನಮಗಿಂತ ಹಿರಿಯರು, ಅನುಭವಿಗಳು, ಜ್ಞಾನವಂತರು, ಬುದ್ಧಿವಂತರು ನಮ್ಮದುರಿಗೆ ಇರುವಾಗ, ಅವರಾಡುವ ಮಾತುಗಳನ್ನು ಆಲಸಿ, ಒಳಗೆ ಮಂಥನ ಮಾಡಿ ಸಾರವನ್ನು ಹೀರುವ ಕೆಲಸ ಮಾಡಬೇಕೆ ಹೊರತು ವಾದ ತರ್ಕದಲ್ಲಿ ಸಮಯ ಕಳೆದು ಸಿಕ್ಕ ಅವಕಾಶವನ್ನು ವೃಥಾ ಮಾಡುವುದು ಅವಿವೇಕದ ಕೆಲಸ.
ಒಂದು ಜೀವನ ಸಿಕ್ಕಿದೆ. ಅರ್ಥಪೂರ್ಣವಾಗಿ ಜೀವಿಸುವುದು ಬಿಟ್ಟು ಅದರ ವಿಶ್ಲೇಷಣೆ ಮಾಡುತ್ತಾ, ಕೈಲಿರುವ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಈ ವಿಷಯದಲ್ಲಿ ನಾವು ನಮ್ಮದೇ ನಿಲುವನ್ನು ತಳೆಯಬೇಕು. ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಬೇಕು. ಅರ್ಥವಾಗದ್ದನ್ನು ಅವನಿಚ್ಛೆ, ವಿಧಿ ಎಂದು ಬಿಟ್ಟುಬಿಟ್ಟು ನಮ್ಮದಿಯಾಗಿ ಜೀವನ ಮಾಡಬೇಕು. ನಾವೂ ನೆಮ್ಮದಿಯಾಗಿದ್ದು ಮತ್ತೊಬ್ಬರ ನೆಮ್ಮದಿಯನ್ನು ಕೆಡಿಸದೆ ಜೀವನ ಮಾಡಿದರೆ ಅದು ಸಾರ್ಥಕ ಜೀವನ.
ಸತ್ಯಾನ್ವೇಷಣೆ ರಸಧಾರೆ – 033
ನರಪರೀಕ್ಷೆಯೇ ಬೊಮ್ಮನಾಶಯವೇ? ನಮ್ಮ ಬಾಳ್ |
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ? ಮಂಕುತಿಮ್ಮ ||
ನರ = ಮಾನವ, ಬೊಮ್ಮ = ಪರಬ್ರಹ್ಮ, ಪೂರಣ = ಮುಗಿವು, ಅಂತ್ಯ, ಕುಡೆ = ಕೂಡ, ಬಾರದನ = ಬಾರದವನ
ಮಾನವರನ್ನು ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೇ? ನಮ್ಮ ಬಾಳು ಬರೀ ಸಮಸ್ಯೆಗಳ ಆಗರವೇ? ಇದಕ್ಕೆ ಅಂತ್ಯವೆಲ್ಲಿ? ಈ ರೀತಿಯ ಪ್ರಶ್ನೆಗಳನ್ನು ಕೇಳಿಸಿಕೊಂಡೂ ಸಹ ಅದಕ್ಕುತ್ತರಬಾರದವನನ್ನು ಗುರುವೆಂದು ಕರೆಯುವೆಯ?
” ಬಸ್ಸಿನಲ್ಲಿ ಹೋಗುವಾಗ, ಹಿಂದೆ ನೋಡಲು ತಲೆ ಹೊರಗೆ ಹಾಕಿ, “ತಲೆ ಒಡೆಸಿಕೊಂಡವ”ನಂತೆ, ನಮಗೆ ನಮ್ಮ ಜೀವನದಲ್ಲಿ ಮರುಕ್ಷಣ ಏನಾಗುತ್ತದೆ ಎಂದು ಗೊತ್ತಿಲ್ಲ. ನಾವು ನೆನೆವುದು ಒಂದು, ನಡೆಯುವುದೇ ಒಂದು. ಇಲ್ಲಿ “ನಾವು ನೆನೆದದ್ದೇ ಸರಿ ಇರಲಿಲ್ಲ, ಹಾಗಾಗಿ ಹೀಗಾಯಿತು” ಎಂದು ಅಂದುಕೊಳ್ಳುವವರು ಎಷ್ಟು ಜನ. ” ಅಯ್ಯೋ ದೇವರೇ ಇದೇನು ನಿನ್ನ ಆಟ” ” ನಮ್ಮ ಹಣೆಬರಹವೇ ಸರಿ ಇಲ್ಲ” ” ಆ ದೇವರು ನಮ್ಮನ್ನು ಏಕೆ ಹೀಗೆ ಪರೀಕ್ಷೆ ಮಾಡುತ್ತಾನೆ” ಎಂದು ಅಂದುಕೊಳ್ಳುವವರೇ ಬಹಳ ಜನ. ಅದನ್ನು ದೇವರಾಟ, ನಮ್ಮ ಹಣೆಬರಹ, ವಿಧಿಲಿಖಿತ ಎಂದು ಏನೇನೋ ವ್ಯಾಖ್ಯಾನವನ್ನು ನಾವು ಮಾಡುತ್ತಿರುತ್ತೇವೆ. ಅದನ್ನೇ ಮಾನ್ಯ ಗುಂಡಪ್ಪನವರು ‘ನರಪರೀಕ್ಷೆಯೇ ಬೊಮ್ಮನಾಶಯವೇ ?” ಎಂದು ಕೇಳುತ್ತಾ ನರರನ್ನು ಅವರವರ ಜೀವನದಲ್ಲಿ ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೋ? ಎಂದು ಪ್ರಸ್ತಾಪಿಸುತ್ತಾರೆ.
ಕೆಲವರಿಗೆ ಕೊರತೆಯ ಅಥವಾ ಆಧಿಕ್ಯದ ಸಮಸ್ಯೆ, ಹಣದ, ಆರೋಗ್ಯದ, ವೃತ್ತಿಯ, ಮಕ್ಕಳ ಓದು ವಿಧ್ಯಾಭ್ಯಾಸದ, ಮಕ್ಕಳೇ ಇಲ್ಲದ, ಅಕ್ಕ ಪಕ್ಕದ ಜನರ, ಪ್ರೇಮದಲ್ಲಿ, ದಾಂಪತ್ಯದಲ್ಲಿ ಹೀಗೆ ಎಲ್ಲರಿಗೂ ಯಾವುದೋ ಒಂದು ರೀತಿಯ ಸಮಸ್ಯೆ ಇದೆ. ಇದು ಪ್ರಪಂಚದಲ್ಲಿರುವ ಎಲ್ಲ ಮನುಷ್ಯರಿಗೂ ಅನ್ವಯವಾಗುತ್ತದೆ.ಸಮಸ್ಯೆಗಳಿಲ್ಲದವರು ಈ ಪ್ರಪಂಚದಲ್ಲೇ ಅತೀ ವಿರಳ. ಆ ಪರಮಾತ್ಮನಿಗೂ ಇಷ್ಟು ಜೀವರಾಶಿಗಳು ಮತ್ತು ಇಡೀ ಜಗತ್ತಿನ ನಿಯಮವನ್ನು ಪಾಲಿಸುವುದೇ ಒಂದು ದೊಡ್ಡ ಸಮಸ್ಯೆ. ಪ್ರತಿ ನಿಯಮಕ್ಕೂ ಒಂದು ಅಪವಾದವಿರುವಂತೆ, ಎಲ್ಲೋ ಕೋಟಿಗೊಬ್ಬನಿಗೆ ಯಾವ ಸಮಸ್ಯ್ಯೂ ಇಲ್ಲದಂತೆ ಇರಬಹುದು. ” ಇರಬಹುದು ” ಎಂದೆ. ಎಲ್ಲವನ್ನೂ ಆ ಪರಮಾತ್ಮನೇ ಸೃಜಿಸುವವನು ಎಂಬುವುದನ್ನು ಒಪ್ಪಿಕೊಂಡರೆ, ಈ ರೀತಿಯ ಸಮಸ್ಯೆಗಳನ್ನು ಕೊಟ್ಟು ಆ ಪರಮಾತ್ಮ ಮನುಷ್ಯರನ್ನು ಪರೀಕ್ಷಿಸುವುದೇ ಆಶಯವೇನು. ಈ ಸಮಸ್ಯೆಗಳಿಗೆ ಕೊನೆಯಾವುದು? ಎಂದು ಗುಂಡಪ್ಪನವರು ಕೇಳುತ್ತಾರೆ.
ಹಾಗೆ ಸಮಸ್ಯೆ ಇರುವವರೆಲ್ಲರೂ ತಮ್ಮ ತಮ್ಮ ಸಮಸ್ಯೆಗಳಿಗೆ ಕಾರಣವನ್ನೋ ಅಥವಾ ಪರಿಹಾರವನ್ನೋ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ತೃಪ್ತಿ ಇಲ್ಲದವರಿಗೆ, ಒಂದು ಸಮಸ್ಯೆ ಪರಿಹಾರವಾದರೆ ಇನ್ನೊದು ಉದ್ಭವವಾಗುತ್ತದೆ. ನಮ್ಮ ಅರಿವಿಗೆ ಬಾರದ ಕಾರಣಗಳಿಗಾಗಿ ನಾವು ಏನನ್ನಾದರೂ ಅನುಭವಿಸುತ್ತೇವೆ ಅದನ್ನು ತಿಳಿದುಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ನಮಗಿಂತ ಅಧಿಕವಾಗಿ ತಿಳಿದವರೆನಿಸಕೊಂಡವರಲ್ಲಿ, ಸಂದೇಹ ನಿವಾರಣೆಗೋ ಅಥವಾ ಸೂಕ್ತ ಪರಿಹಾರಕ್ಕಾಗಿಯೋ ಹೋಗುವುದು ಸಹಜ. ಆದರೆ ಇಂದಿಗೂ ಈ ಜೀವನದಲ್ಲಿ ನಮಗೆ ನಡೆದ ವಿಷಯಗಳ ವಿಶ್ಲೇಷಣೆಯನ್ನು ಕರಾರುವಾಕ್ಕಾಗಿ ಹೇಳಿದವರಾಗಲೀ ಅಥವಾ ಸತ್ಯವನ್ನು ಅರ್ಥಮಾಡಿಕೊಂಡವರಾಗಲೀ ಇಲ್ಲ. ಮಾತ್ರ ಊಹೆಯಿಂದ ಮತ್ತು ತಮ್ಮ ವಾಗ್ಜರಿಯಿಂದ ಜನರನ್ನು ನಂಬಿಸುವುದೋ ಅಥವಾ ತೋರಿಕೆಯ ಶಾಸ್ತ್ರಗಳನ್ನು ಹೇಳಿ ಉಪಾಯವನ್ನು ಸೂಚಿಸುವುದೋ ಮಾಡುತ್ತಾರೆ. ಅದನ್ನು ಕೇಳಿದ ನಮ್ಮ “ಸಮಸ್ಯಾ ಪ್ರಾಣಿ” ಒಂದು ಮಾನಸಿಕ ನೆಮ್ಮದಿಯನ್ನು ಪಡೆದು ಅದನ್ನು ಪಾಲಿಸುವುದೋ ಅಥವಾ ಒಂದು ತಾತ್ಕಾಲಿಕ ಸಾಂತ್ವನವನ್ನು ಕಂಡುಕೊಳ್ಳುವುದೋ ನಡೆಯುತ್ತದೆ. ಅಂದರೆ ನಮ್ಮ ಪ್ರಶ್ನೆಗಳನ್ನು ಅರ್ಥವೇ ಆಗದ ಮತ್ತು ಸತ್ಯದ ಆಧಾರದಮೇಲೆ ನಮಗೆ ಸೂಕ್ತ ಮಾರ್ಗದರ್ಶನ ಮಾಡಲಾಗದ ವ್ಯಕ್ತಿಯನ್ನು ನಾವು “ಗುರು” ಎಂದು ಹೇಗೆ ಒಪ್ಪಿಕೊಳ್ಳುವುದು ಎಂದು ಮಾನ್ಯ ಗುಂಡಪ್ಪನವರು ಪ್ರಶ್ನಿಸುತ್ತಾರೆ.
ಏನು ಮಾಡಬೇಕು ಎನ್ನುವುದೇ ಸಮಸ್ಯೆ. ಒಂದು ಹುಟ್ಟಿಯಾಗಿದೆ. ಸಾಯುವತನಕ ಕಷ್ಟವೋ ನಿಷ್ಟೂರವೋ ಅನುಭವಿಸಲೇ ಬೇಕು. ನಮಗೆ ಈ ಜೀವನದಲ್ಲಿ ನಡೆಯುವ ಗತಿ ವಿಧಿಗಳನ್ನು ಸಂಪೂರ್ಣವಾಗಿ” ಏಕೆ ಹೀಗೆ ನಡೆಯುತ್ತದೆ” ಎಂದು ಅರ್ಥವಾಗುವುದೇ ಇಲ್ಲ. ನಮಗೆ ಅರ್ಥವಾಗದ ವಿಷಯವಾದ್ದರಿಂದ ಗತ್ಯಂತರವಿಲ್ಲದೆ ಬೇರೆ ಏನನ್ನೋ ನಂಬಬೇಕು. ಅನ್ಯ ದಾರಿಯಿಲ್ಲ. ಈ ಜಗತ್ತು ಮತ್ತು ಅದರಲ್ಲಿ ನಮ್ಮ೦ತಹ ಪಾತ್ರಧಾರಿಗಳ ನಡುವೆ ನಡೆಯುವ ನಾಟಕವೆಲ್ಲ, ಆ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎನ್ನುವುದನ್ನು ಒಪ್ಪುವುದಾದರೆ, ಆ ದೇವರನ್ನು ನಂಬಬೇಕು. ಪರೀಕ್ಷೆಯೋ ವಿಧಿಲಿಖಿತವೋ ಅನುಭವಿಸಬೇಕು. ಏಕೆಂದರೆ ಬೇರೆ ದಾರಿ ಅಥವಾ ಪರಿಹಾರ ಇಲ್ಲ ಅಥವಾ ಇದ್ದರೂ ಗೊತ್ತಿಲ್ಲ. ಅಪರಿಹಾರ್ಯವನ್ನು ನಿವಾರಿಸಲು ಸಾಧ್ಯವಾಗದಾಗ ಆ ದೇವರನ್ನು ನಂಬಿ ಬಂದದ್ದನ್ನೆಲ್ಲಾ ಅನುಭವಿಸುವುದು, ನೆಮ್ಮದಿ. ಮಾಡುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಾ, ಎಲ್ಲವೂ ಆ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎಂದು ಆ ” ವಿಚಿತ್ರಕೆ” ಶರಣಾದರೆ ಸುಖ, ಶಾಂತಿ ಮತ್ತು ನೆಮ್ಮದಿ. ನಂಬದೆ ತೊಳಲಿ ಬಳಲುವುದೋ, ನಂಬಿ ಆನಂದಿಸುವುದೋ ನಮ್ಮ ಕೈಯಲ್ಲೇ ಇದೆ.
ಸತ್ಯಾನ್ವೇಷಣೆ ರಸಧಾರೆ – 034
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ
ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೋ!
ಅಷ್ಟೇ ನಮ್ಮಯ ಪಾಡು ? ಮಂಕುತಿಮ್ಮ
ಚಿಂತಿಸಿದೊಡಂ = ಚಿಂತಿಸಿದರೂ, ಶಂಕೆಯನು = ಸಂದೇಹವನ್ನು, ಬೆಳೆಸುವೀ = ಅಧಿಕವಾಗಿಸುವ
ಈ ಜಗದ್ಸೃಷ್ಟಿಯ ಬಗ್ಗೆ ಎಷ್ಟು ಚಿ೦ತಿಸಿದರೂ ನಿವಾರಣೆಯಾಗದ ಅನುಮಾನಗಳು, ಸಂದೇಹಗಳು ಹಾಗೆ ಉಳಿದಿವೆ. ಈ ಸೃಷ್ಟಿಯ ರಹಸ್ಯವನ್ನು ಚೇಧಿಸುವುದಕ್ಕಾಗಿ, ತತ್ವಗಳ ಹುಡುಕಿ, ತಡಕಿ ಕಷ್ಟಪದುವುದೇ ಮಾನವರಿಗೆ ಆ ಪರಮಾತ್ಮ ಬರೆದ ಹಣೆಬರಹವೋ, ಇಷ್ಟೇಯೇ ನಮ್ಮ ಪಾಡು ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಗಾಳಿ ಹೇಗೆ ಬೀಸುತ್ತದೆ, ಮಳೆ ಹೇಗೆ ಬೀಳುತ್ತದೆ, ಬೆಂಕಿ ಏಕೆ ಸುಡುತ್ತದೆ, ಸೂರ್ಯನಾರು, ಚಂದ್ರನಾರು ಈ ಗ್ರಹಗಳೇನು?? ನಕ್ಷತ್ರಗಳೇನು? ಇಡೀ ಸೃಷ್ಟಿಯಲ್ಲಿ ಇಷ್ಟೊಂದು ಬಗೆ ಏಕೆ? ಹುಟ್ಟು ಎಂದರೆ ಏನು? ಯಾವುದರ ಹುಟ್ಟು? ಸಾವು ಎಂದರೇನು? ಸಾವಿನ ನಂತರ ಏನು? ಕೋಟಿ ಕೋಟಿ ವೈವಿಧ್ಯತೆಯನ್ನು ಹೊಂದಿರುವ ಈ ಜಗತ್ತಿನ ಸೃಷ್ಟಿಯ ಉದ್ದೇಷ್ಯವೇನು? ಸೃಷ್ಟಿಯು ಹೀಗೆ ಯಾಕೆ ಇದೆ? ಇದರ ಹಿಂದಿನ ಶಕ್ತಿಯಾವುದು? ಅದರ ಸ್ವರೂಪವೇನು? ಇದು ಹೀಗಿರಬಹುದೇ ಅಥವಾ ಹಾಗಿರಬಹುದೇ? ಹೀಗೆ ಮಾನವನಲ್ಲಿ ವಿಚಾರ ಶಕ್ತಿ ಮೂಡಿದಾಗಿನಿಂದ ಇಂದಿನವರೆಗೆ ಹತ್ತು ಹಲವಾರು ಸಾವಿರಾರು ಪ್ರಶ್ನೆಗಳು ಮನುಷ್ಯರನ್ನು ಅನಾದಿಕಾಲದಿಂದ ಕಾಡಿದೆ. ಪ್ರಾಣಿಗಳನ್ನೂ ಕಾಡುತ್ತದೆಯೋ ಏನೋ! ನಮಗೆ ಗೊತ್ತಿಲ್ಲ.
ಈ ಸೃಷ್ಟಿಯನ್ನು ಪರಮಾತ್ಮನ ಲೀಲಾ ವಿನೋದವೆಂದರು. ಇದು ಅವನ ಸಂಕಲ್ಪದಿಂದ ಆದದ್ದು ಎಂದರು. ಆ ಸಂಕಲ್ಪಕ್ಕೆ ಕಾರಣವನ್ನು ಬೆದಕಿ ಬೆದಕಿ, ಅವರವರಿಗೆ ಏನೇನು ತೋಚಿತೋ ಅದನ್ನೇ ಒಂದು ಸಿದ್ಧಾಂತದ ರೂಪದಲ್ಲಿ ಪ್ರತಿಪಾದಿಸಿದರು. ಅದಕ್ಕೊಂದು ಕ್ರಮವನ್ನು ವಿವರಿಸಿದರು. ” ತಸ್ಮಾದ್ವಾ ಏತಸ್ಮಾದಾತ್ಮನ ಅಕಾಶಃ ಸಂಭೂತಃ ಆಕಾಶಾದ್ವಾಯು: ವಾರೋರಗ್ನಿ: ಅಗ್ನೇರಾಪಃ ಅದ್ಭ್ಯಃಪೃಥಿವೀ, ಪ್ರುಥಿವ್ಯಾ ಓಷದಯಃ ಓಷದೀಭ್ಯೋನ್ನಂ, ಅನ್ನಾತ್ ಪುರುಷಃ” ಹೀಗೆ ಆತ್ಮನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಗಿಡಮರಗಳು, ಗಿಡಮರಗಳಿಂದ ಆಹಾರ, ಆಹಾರದಿಂದ ಶಕ್ತಿ ಆಯಿತು ಎಂದು ಒಂದು ಕ್ರಮವಾದ ಸೃಷ್ಟಿಯ ಪ್ರಕ್ರಿಯೆಯನ್ನು ಹೇಳುತ್ತಾರೆ. ಬಹಳ ವೈಜ್ಞಾನಿಕವಾಗಿ ಕಾಣುತ್ತದೆ. ನಮ್ಮ ಅನುಭವಕ್ಕೆ ಹತ್ತಿರವಾಗಿ ಕಾಣುತ್ತದೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲವೇ? ಹಾಗಾಗಿ ಇದು ಸರ್ವ ಮಾನ್ಯವಾಗಿಲ್ಲ. ಬೇರೇನೋ ಇರಬೇಕೆಂಬ ಹುಡುಕಾಟ ನಡೆದೇ ಇರುತ್ತದೆ. ಈ ರೀತಿ ಹುಡುಕಾಡುವುದೇ ಮಾನವನ ಹಣೆ ಬರಹವೋ? ಎಂದು ಶ್ರೀ ಗುಂಡಪ್ಪನವರು ಕೇಳುತ್ತಾರೆ.
ನಮಗೆ ಯಾವುದೋ ತಿಳಿದಿಲ್ಲವೆಂದು ಇಟ್ಟುಕೊಳ್ಳೋಣ. ಆಗ ಯಾರೋ ಒಬ್ಬರು ತಮ್ಮ ಆತ್ಮವಿಶ್ವಾಸದಿಂದ ಮತ್ತು ವಾಗ್ಜರಿಯಿಂದ ಹೇಳಿದ ಮಾತುಗಳನ್ನು ನಂಬುವುದು ನಮ್ಮ ಪರಿಪಾಠ. ಏಕೆಂದರೆ ಮಹಾಸಾಗರದಲ್ಲಿ ಈಜಲು ಬಾರದವನಿಗೆ ಒಂದು ಹುಲ್ಲು ಕಡ್ಡಿಯನ್ನಾದರೂ ಸಹ ಹಿಡಿದುಕೊಳ್ಳಲು ಪ್ರಯತ್ನಪಡುತ್ತಾನೆ ಅಲ್ಲವೆ. ಹಾಗಿದೆ ನಮ್ಮ ಸ್ಥಿತಿಯೂ ಕೂಡ. ದೇಶ ಕಾಲ ಪ್ರದೇಶಗಳಿಗೆ ಅನುಗುಣವಾಗಿ ಆಯಾಯಾ ಸಮಯದಲ್ಲಿ ಯಾರು ಯಾರು ಏನೇನನ್ನು ಹೇಳಿದರೋ ಅದೆಲ್ಲ ಬೇರೆ ಬೇರೆ ತತ್ವಗಳಾಗಿ ಪ್ರತಿಪಾದಿಸಲ್ಪಟ್ಟು ಬೇರೆ ಬೇರೆ ಸಿದ್ಧಾಂತಗಳು ಆಗಿವೆ. ಅಂದರೆ ಅಂತರ್ಯದಲ್ಲಿ ಎಲ್ಲ ಸಿದ್ಧಾಂತಗಳೂ ಹೇಳುವುದು ಒಂದೇ ಸತ್ಯವನ್ನಾದರೂ, ಹೇಳುವ ರೀತಿ ಬೇರೆ ಆದ್ದರಿಂದ ಮತ್ತು ಅದರ ಬಾಹ್ಯ ರೂಪ ಬೇರೆ ಆದ್ದರಿಂದ ಅದು ಮತ್ತು ಇದು ಬೇರೆ ಬೇರೆ ಎನ್ನುವ ರೀತಿಯಲ್ಲಿ ನೋಡಲಾಗಿದೆ. ಹಾಗೆ ಬಂದುದೇ ಅನೇಕಾನೇಕ ಸಿದ್ಧಾಂತಗಳು. ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೈವ, ವೈಷ್ಣವ, ಭೌದ್ಧ, ಜೈನ, ಪ್ಹಾರಸೀಕ, ಕ್ರೈಸ್ತ, ಇಸ್ಲಾಮಿಕ ಹೀಗೆ ಹತ್ತು ಹಲವಾರು ಮತಗಳು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರತಿಸಾದಿಸಿದ ತತ್ವಗಳು ಮೂಲದಲ್ಲಿ ಒಂದೇಯಾದರೂ ಹೊರಗೆ ಭಿನ್ನ ಭಿನ್ನವಾಗಿ ಕಂಡು ಜನರ ” ಇದು ಸರಿಯೋ ಅಥವಾ ಅದು ಸರಿಯೋ” ಎನ್ನುವ ಸಂದೇಹಗಳಿಗೆ ಕಾರಣವಾಗುತ್ತದೆ. ಒಂದು ತತ್ವ ಎಲ್ಲರಿಗೂ ಸಮಾನವಾಗಿ ಅರ್ಥವಾಗುವಂತೆ ಇಲ್ಲದೆ, ಜನರ ಈ ಸೃಷ್ಟಿಯನ್ನು ಅರ್ಥೈಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಈ ಕಗ್ಗದ ಭಾವ.
ಒಂದು ಶಕ್ತಿ ಈ ಸೃಷ್ಟಿಯ ಮೂಲ. ಅದರ ರೂಪಗಳು ಹಲವಾರು. ನಾವು ರೂಪಗಳನ್ನು ಬಿಡುವ, ನಾಮಗಳನ್ನು ಬಿಡುವ, ಬೇಧಗಳನ್ನು ಬಿಡುವ, ಪ್ರಭೇಧಗಳನ್ನು ಬಿಡುವ, ವೈರಿನಲ್ಲಿ ಹರಿಯುವ ಕರೆಂಟ್ ಬೇರೆ ಬೇರೆ ಸಾಧನಗಳ ಮೂಲಕ ಬೇರೆ ಬೇರೆ ಕೆಲಸಗಳಿಗಾಗಿ ಉಪಯೋಗಿಸಿದರೂ ತಾನು ಒಂದೇ ರೀತಿ ಇದ್ದಂತೆ ನಮ್ಮ ನಿಮ್ಮಲ್ಲಿ ಮತ್ತು ಎಲ್ಲ ಪ್ರಾಣಿಗಳಲ್ಲೂ ಏಕ ರೂಪದಲ್ಲಿ ಚೇತನಾ ಸ್ವರೂಪದಲ್ಲಿರುವ ಆ ಪರಮಾತ್ಮ ಶಕ್ತಿಯನ್ನು ನಾವು ಈ ಜಗತ್ತಿನಲ್ಲಿ ನಮ್ಮ ಅಸ್ಥಿತ್ವಕ್ಕೆ ಕಾರಣವೆಂದು ಸ್ಮರಿಸಿ, ನಮಿಸಿ, ಕೃತಜ್ಞತೆಯನ್ನು ಸಲ್ಲಿಸುತ್ತಾ, ನಮ್ಮ ನಮ್ಮಲ್ಲಿರುವ ಬೇಧಗಳನ್ನು ಅಳಿಸುವ ಪ್ರಯತ್ನವನ್ನು ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?
ಸತ್ಯಾನ್ವೇಷಣೆ ರಸಧಾರೆ – 035
ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? – ಮಂಕುತಿಮ್ಮ ||
ಅರಿತೆನಾನೆನ್ನುವಂತಾಗೆ = ಅರಿತೆ + ನಾನು + ಎನ್ನುವಂತೆ + ಆಗೆ, ಹಿರಿಮೆಗದು = ಹಿರಿಮೆಗೆ + ಅದು
ಬೊಮ್ಮ = ಪರಬ್ರಹ್ಮ, ಪರಮಾತ್ಮ, ನಿರವಿಸಿಹ = ನಿರ್ಮಿಸಿರುವ, ವಿಶ್ವಚಿತ್ರವ = ಈ ಜಗತ್ತಿನ ರಹಸ್ಯವನ್ನು, ಮರ್ತ್ಯನರನು = ಮರಣವನ್ನು ಹೊಂದುವ ಮನುಷ್ಯನು, ಅರಿತೆನಾನೆನ್ನುವಂತಾಗೆ = ನಾನು ಅರಿತಿದ್ದೇನೆ ಎನ್ನುವಂತಾದರೆ, ಕೃತಿಕೌಶಲದ = ಕುಶಲತೆಯಿಂದ ಮಾಡಿದ ಈ ಕೃತಿಯ ( ಜಗತ್ತು), ಹಿರಿಮೆ = ಹೆಗ್ಗಳಿಕೆ, ಕುಂದಲ್ತೆ= ಕುಂದಲ್ಲವೇ?
ಬಹಳಕಾಲ ಯೋಚನೆ ಮಾಡಿ ಶ್ರಮಪಟ್ಟು ಆ ಪರಮಾತ್ಮ ಈ ಅದ್ಭುತವಾದ ಜಗತ್ತನ್ನು ನಿರ್ಮಿಸಿರುವಾಗ, ಕೆಲಕಾಲ ಬದುಕಿ ಸಾವನ್ನಪ್ಪುವ ಯಃಕಶ್ಚಿತ್ ಮಾನವನೆಂಬ ಪ್ರಾಣಿ ಇದರ ರಹಸ್ಯವನ್ನು ತಾನು ಅರಿತುಕೊಂಡು ಬಿಟ್ಟೆ ಎಂದರೆ , ತನ್ನ ಹಿರಿಮೆ, ಶ್ರಮ ಮತ್ತು ಕುಶಲತೆಗಳಿಗೆ ಕುಂದು ಅಥವಾ ಕಳಂಕ ಬಂದಂತೆ ಆಗುತ್ತದೆ ಎಂದು, ಆ ಪರಮಾತ್ಮ, ಆ ಜಗತ್ತಿನ ರಹಸ್ಯಗಳನ್ನು ಸಂಪೂರ್ಣವಾಗಿ ಮಾನವರು ಅರಿತುಕೊಳ್ಳುವ ಶಕ್ತಿಯನ್ನು ಕೊಡಲಿಲ್ಲವೋ ಏನೋ? ಎಂಬ ಕುಹಕವನ್ನಾಡುತ್ತಾರೆ, ಮಾನ್ಯ ಗುಂಡಪ್ಪನವರು.
ಒಂದು ವಿಡಂಬನಾತ್ಮಕವಾದ ವಿಚಾರಧಾರೆಯನ್ನು ನಮ್ಮ ಮುಂದಿಡುತ್ತಾ, ಎರಡು ವಿಚಾರಗಳನ್ನು ನಮಗೆ ತಿಳಿಸುತ್ತಾರೆ ಶ್ರೀ ಗುಂಡಪ್ಪನವರು.
ಒಂದು ಈ ಜಗತ್ತಿನ ಸೃಷ್ಟಿಯ ವೈಶಾಲ್ಯತೆ ಮತ್ತು ಸುಂದರತೆ. ಎಲ್ಲವೂ ಸಮರ್ಪಕವಾಗಿ ಎಲ್ಲೆಲ್ಲಿ, ಹೇಗೆ, ಯಾವ ಪ್ರಮಾಣದಲ್ಲಿ ಇರಬೇಕೋ ಎಲ್ಲವೂ ಹಾಗೆ ಇದೆ ಈ ಸೃಷ್ಟಿ. ಅದಕ್ಕೆ ನಮ್ಮ ದೇಹಗಳನ್ನೇ ತೆಗೆದುಕೊಳ್ಳೋಣ. ತಲೆ, ಮೆದುಳು, ಕಣ್ಣು, ಕಿವಿ, ಕತ್ತು, ಮೂಳೆಗಳು, ಚರ್ಮ, ಎಲ್ಲ ಅಂಗಾಂಗಗಳೂ ಸಹ ಒಂದಕ್ಕೊಂದು ಪೂರಕವಾಗಿ ಕೆಲಸಮಾಡುವಂತೆ ಎಷ್ಟು ಸುಂದರವಾಗಿದೆ. ಸೂರ್ಯ ಚಂದ್ರರು, ಎಲ್ಲ ಗ್ರಹಗಳು, ಅವುಗಳಲ್ಲಿನ ಪರಸ್ಪರ ಅಂತರ ಮತ್ತು ಆ ಅಂತರದಿಂದಾಗುವ ಋತುಮಾನಗಳು ಮತ್ತು ಋತುಮಾನ ಬದಲಾವಣೆಯ ಸಮಯಕ್ಕೆ ಸರಿಯಾಗಿ ಆಗಬೇಕಾದ ಬದಲಾವಣೆಗಳು.ಇದು ಏಕೆ ಹೀಗೆ? ಹಾಗೆ ಯಾಕಿರಬಾರದು ಎಂದು ಪ್ರಶ್ನೆಯೇ ಉದ್ಭವವಾಗಬಾರದು, ಹಾಗಿದೆ ಆ ಪರಬ್ರಹ್ಮನ ಕುಶಲತೆ. ಹೇಗೇ ವರ್ಣಿಸುತ್ತಾ ಹೋದರೆ ಪದಗಳು ಮತ್ತು ಪುಟಗಳು ಸಾಲುವುದೇ ಇಲ್ಲ. ಅಷ್ಟು ಸಮರ್ಪಕ ಮತ್ತು ಪರಿಪೂರ್ಣ ಮತ್ತು ಅಷ್ಟು ಸುಂದರ.
ಮತ್ತೊಂದು ಕಡೆ ಇರುವುದು, ಮಾನವರ ಅಪರಿಪೂರ್ಣತೆ, ಅಸಹಾಯಕತೆ ಮತ್ತು ನ್ಯೂನತೆಗಳು. ನಮಗೆ ಯಾವುದೂ ಸಂಪೂರ್ಣ ಅರ್ಥವಾಗುವುದಿಲ್ಲ. ಯಾವುದೂ ಸರಿಯಾದ ದಿಕ್ಕಿನಲ್ಲಿ ಯೋಚಿಸಲಾಗುವುದಿಲ್ಲ. ಎಲ್ಲವೂ ಅಯೋಮಯ. ದಿಕ್ಕು ತೋಚದ ಪರಿಸ್ಥಿತಿ. ನಮ್ಮ ಮಿತಿಗಳು ಹೇಗಿವೆ ಎಂದರೆ, ಕೆಲವರು ಯೋಚಿಸಲು ಅಸಮರ್ಥರು. ಕೆಲವರಿಗೆ ಯೋಚಿಸಲು ಸಮಯವಿಲ್ಲ. ಕೆಲವರು ಯೋಚಿಸಲು ಸೋಂಬೇರಿಗಳು. ಕೆಲವರು ಪೂರ್ವಾಗ್ರಹಪೀಡಿತರು. ಕೆಲವರು ಯೋಚಿಸಲು ಇಷ್ಟಪಟ್ಟರೂ ಸಾಮರ್ಥ್ಯದ ಮಿತಿ ಇರುವವರು. ಅಂದರೆ ಒಂದು ಮಿತಿಗೆ ಮೀರಿ ಅವರು ಯೋಚಿಸಲಾರರು. ಕೆಲವರು ಅಹಂಕಾರದಿಂದ ಇಲ್ಲದ್ದನ್ನು ಇದೆಯಂದು ಕಲ್ಪಿಸುತ್ತಾ ತಮ್ಮ ವಾದವೇ ಸರಿಯಾದದ್ದ್ದು ಎಂದು ಮೊಂಡು ವಾದ ಮಾಡುವವರು. ಹಾಗಾಗಿ ನಮಗೆ ಯಾವುದೂ ಅರ್ಥವಾಗುವುದಿಲ್ಲ. ಇದೊಂದು ಬಹಳ ವೈಶಾಲ್ಯವಿರುವ ಚಿತ್ರ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋಡುವುದಕ್ಕೆ ನಮ್ಮ ಕಣ್ಣ ದೃಷ್ಟಿಯ ಹರಹು ಸಾಲದು.
ಯಾವುದೋ ಒಂದು ಚೂರನ್ನು ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವಷ್ಟರಲ್ಲೇ, ಮತ್ಯಾವುದೋ ಹೊಸದೊಂದು ಆಯಾಮ ಕಾಣುತ್ತದೆ. ಹೀಗೆ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಇರುವಾಗಲೇ, ನಮ್ಮ ಇಹ ಲೋಕ ಯಾತ್ರ ಮುಗಿಯುತ್ತದೆ. ಮತ್ತೆ ಮೊದಲಿಂದ ಎಲ್ಲ ಶುರು. ಹಾಗಾಗಿ ಈ ಸೃಷ್ಟಿಯನ್ನು ಮನುಷ್ಯರಿಗೆ ಅರ್ಥವಾಗದ ರೀತಿಯಲ್ಲಿ ಅಥವಾ ಮನುಷ್ಯರಿಗೆ ಇದರ ರಹಸ್ಯ ಅರ್ಥವಾಗಬಾರದೆಂದು ಆ ಪರಮಾತ್ಮ ಈ ರೀತಿ ಸೃಷ್ಟಿಸಿದ್ದಾನೆಯೇ? ಎಂದು ಪ್ರಶ್ನೆ.ಹೆಚ್ಚು ಕ್ಷಮತೆ ಇರುವವರು ಇದನ್ನು ತಮ್ಮ ಧ್ಯಾನದಿಂದ ತಪಸ್ಸಿನಿಂದ ವಿಜ್ಞಾನದ ಸಂಶೋಧನೆಗಳಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಸಿಕ್ಕ ಯಶಸ್ಸು ಕೇವಲ ಅಲ್ಪ ಮಾತ್ರ ಮತ್ತು ಆ ಯಶಸ್ಸೂ ಸಹ ತಾತ್ಕಾಲಿಕ.
ಈಗ ನಮಗಿಂತ ಒಬ್ಬ ಮಹಾಬಲಶಾಲಿ ಇದ್ದಾನೆ ಎಂದು ಇಟ್ಟುಕೊಳ್ಳಿ. ಅದು ಬುದ್ಧಿ ಬಲವಾಗಿರಬಹುದು, ದೇಹ ಬಲವಾಗಿರಬಹುದು ಅಥವಾ ಕ್ಷಮತೆಯ ಬಲವಾಗಿರಬಹುದು. ಅವನನ್ನು ಜಯಿಸಲು ನಾವು ಅವನಿಗಿಂತ ಹೆಚ್ಚು ಬಲವಂತರಾದರೆ ಸಾಧ್ಯ. ಹಾಗಿಲ್ಲದೆ ನಾವು ಅವನಿಗಿಂತಾ ಶಕ್ತಿ ಹೀನರಾಗಿಯೂ ಅವನೊಡನೆ ಹೋರಾಡಿದರೆ, ನಮ್ಮ ನಾಶ ಕಂಡಿತ. ಹಾಗೆ ಮಾಡದೆ ವಾಸ್ತವತೆಯನ್ನು ಅರ್ಥಮಾಡಿಕೊಂಡು ಅವನಿಗೆ ಶರಣಾಗಿಬಿಟ್ಟರೆ, ನಾವು ಕ್ಷೇಮ ಮತ್ತು ನಮಗೆ ಸಂಪೂರ್ಣ ರಕ್ಷಣೆ. ಇಲ್ಲೂ ಸಹ ಅಷ್ಟೇ ಈ ಜಗತ್ತಿನ ಸೃಷ್ಟಿಯ ರಹಸ್ಯ ಮತ್ತು ರೂಪವನ್ನು ಅರ್ಥೈಸಿಕೊಳ್ಳಲು ಶಕ್ತಿಯಿಲ್ಲದೆ ಪ್ರಯತ್ನಪಟ್ಟು ಅನಾವಶ್ಯಕವಾಗಿ ಇರುವ ಬಾಳನ್ನು ಆನಂದವಾಗಿ ಬಾಳದೆ ಹಾಳುಮಾಡಿಕೊಳ್ಳುವುದಕ್ಕಿಂತ, ಆ ಪರಮ ಶಕ್ತಿಗೆ ಶರಣಾಗಿ ನೆಮ್ಮದಿಯಿಂದ ಇರಬಹುದಲ್ಲವೆ? ಮನುಷ್ಯರೆಲ್ಲರೂ ಯೋಚನಾ ಪರಿಯಲ್ಲಿ ಸರ್ವ ಸ್ವತಂತ್ರರು. ಹಾಗಾಗಿ ವಾಚಕರೆ, ಆಯ್ಕೆ ನಿಮಗೆ ಬಿಟ್ಟದ್ದು.
ಸತ್ಯಾನ್ವೇಷಣೆ ರಸಧಾರೆ – 036
ಎಲ್ಲೆಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||
ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ ? ಮಂಕುತಿಮ್ಮ ||
ಎಲ್ಲೆಲಿಯುಂ = ಎಲ್ಲೆಲ್ಲಿಯೂ, ಮೋಹ = ವ್ಯಾಮೋಹ, ಸಂಭ್ರಾಂತಿ = ಸಂಭ್ರಮ ಸಡಗರಕೂಡಿದ ಭಾವ, ಭ್ರಾಂತಿಯಿಂದ ಕೂಡಿದ. ಕವಿಸಿ = ಹರಡಿ, ವ್ಯಾಪಿಸಿ, ಸಲ್ಲದ = ಸರಿಯಲ್ಲದ, ಕುಮಾರ್ಗ= ಕೆಟ್ಟ ದಾರಿ, ಸೊಲ್ಲಿಪುದು = ಹೇಳುವುದು.
ಗೆಲ್ಲಲಿಲ್ಲಿವನಾ = ಗೆಲ್ಲಲಿಲ್ಲ + ಅವನಾ , ಪರೀಕ್ಷೆಯೊಳಗೆಂದು = ಪರೀಕ್ಷೆಯೊಳಗೆ + ಎಂದು
ಇಡೀ ಜಗತ್ತೇ ಒಂದು ಭ್ರಾಂತಿಯ ಉಂಡೆ. ಮಾನವರಿಗೆ ಯಾವುದೂ ಅರ್ಥವಾಗುವುದಿಲ್ಲ ಆದರೂ ಪ್ರಯತ್ನ ಮಾಡುತ್ತಾನೆ. ಅವನಿಗೆ ಅರಿವಿನ ಮಿತಿ ಉಂಟು. ಅಮಿತವಾದ ಜಗತ್ಸೃಷ್ಟಿಯ ರಹಸ್ಯವನ್ನು ಪರಿಮಿತ ಮತಿಯಿಂದ ಅರಿಯುವುದೆಂತು? . ಈ ಜಗತ್ತನ್ನು ತನ್ನ ಅಪರಿಮಿತ ಶಕ್ತಿಯಿಂದ ಅಗಾಧವಾಗಿ ಸೃಷ್ಟಿಸಿ, ಮಾನವರನ್ನು ಅಲ್ಪಮತಿಗಳನ್ನಾಗಿಸಿ, ಅವನು ಅರಿಯುವ ಪ್ರಯತ್ನದಲ್ಲಿ ಸೋತಾಗ, ಇವನು ಗೆಲ್ಲಲಿಲ್ಲ ಎಂದು ಹೇಳುವುದು ಆ ಪರಮಾತ್ಮನಿಗೆ ಸರಿಯೇ? ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾ ಹಿಂದೆಯೇ ಹೇಳಿದಂತೆ, ಮಾನವನಲ್ಲಿ ವಿಚಾರ ಶಕ್ತಿ ಮೂಡಿದಂದಿನಿಂದ, ಈ ವಿಶ್ವದ ಗುಟ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಲೇ ಇದ್ದಾನೆ. ಒಂದು ಚೂರೂ ಸಫಲನಲ್ಲ. ಬದಲಿಗೆ ಆ ಪರ ತತ್ವವನ್ನು ಅರ್ಥೈಸುವ ಇವನ ಪ್ರಯತ್ನದಲ್ಲಿ ಕೇವಲ ಭ್ರಾಂತಿ ಭ್ರಮೆ ಗಳನ್ನು ಬೆಳೆಸಿಕೊಂಡಿದ್ದಾನೆ. ತಮಗೆ ತೋಚಿದ ಹಾಗೆ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಒಬ್ಬರು ಹೇಳುವುದನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಪರತತ್ವವನ್ನು ಅರಿಯದಿದ್ದರೂ ತಾವು ಅರಿತಿದ್ದೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ತಮ್ಮ ವಾದವನ್ನು ದೃಡೀಕರಿಸಲು, ತಮ್ಮ ಮತವನ್ನು ಪ್ರತಿಷ್ಠಾಪಿಸಲು ಏನು ಬೇಕಾದರೂ ಮಾಡುತ್ತಾರೆ. ಅಹಂಕಾರವನ್ನು ಬೆಳೆಸಿಕೊಳ್ಳುತ್ತಾರೆ. ಮಠ ಕಟ್ಟುತ್ತಾರೆ. ಗುಂಪುಗಾರಿಕೆ ಮಾಡುತ್ತಾರೆ. ತಮ್ಮ ಅಹಂಕಾರವನ್ನು ಮತ್ತು ಆಧಿಪತ್ಯವನ್ನು ಸ್ಥಾಪಿಸಲು ಶತಪ್ರಯತ್ನ ಮಾಡುತ್ತಾರೆ. ಇದನ್ನೇ ಕುಮಾರ್ಗವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
ವ್ಯಕ್ತಿಗತವಾಗಿ ಎಲ್ಲ ಆತ್ಮಗಳೂ ಶುದ್ಧಾತ್ಮಗಳೇ. ಪರಮಾತ್ಮನಿಂದ ಹೊರಟು ಇಂದ್ರಿಯ ಸಹಿತವಾದ ದೇಹಧಾರಣೆ ಮಾಡಿದನಂತರ, ಪಂಚಭೂತಗಳ ಸಂಪರ್ಕಕ್ಕೆ ಬಂದೊಡನೆಯೇ ಎಲ್ಲ ರೀತಿಯ ಭ್ರಮೆ ಭ್ರಾಂತಿಗಳನ್ನು ಬೆಳೆಸಿಕೊಳ್ಳುತ್ತದೆ. ಇಲ್ಲಿದ್ದೂ ಅಲ್ಲಿಗೆ ಹೋಗುವ ಪ್ರಯತ್ನವನ್ನು ಮಾಡುತ್ತದೆ. ಆ ಪ್ರಯತ್ನದ ಫಲ ಸ್ವರೂಪವೇ ಅವನ ಅಧ್ಯಾತ್ಮಿಕ ಪ್ರಯಾಣ. ಎಷ್ಟೊಂದು ಮತಗಳು ಎಷ್ಟೊಂದು ಧರ್ಮಗಳು. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಇವನ ಹಾರಾಟ ನಿರಂತರ. ಯಾವುದರಲ್ಲೂ ಧೃಡವಾದ ನಂಬಿಕೆ ವಿಶ್ವಾಸವಿಲ್ಲ. ದೂರದಲ್ಲಿರುವುದು ಇವನಿಗೆ ಹಿತವಾಗಿ ಕಾಣುತ್ತದೆ. ಈ ಹುಡುಕಾಟ ಬೆದಕಾಟದಲ್ಲಿ ಇವನು ಎಲ್ಲಿಯೂ ಸಲ್ಲ. ಕಡೆಗೊಂದು ದಿನ ಇವನ ದೇಹದ ಅಂತ್ಯ. ಮತ್ತೆ ಮೊದಲಿನಿಂದ ಶುರು. ಅದೇ ಹುಡುಕಾಟ ಅದೇ ಬೆದಕಾಟ. ಇವನಿಗೆ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೇ ಇಲ್ಲವೇನೋ ಎಂದು ಅನಿಸುತ್ತದೆ.
ಆ ಪರಮ ಶಕ್ತಿಯ ಸ್ವರೂಪವೂ ಹಾಗೆ ಇದೆ. ಇಂದು ಕಂಡಂತೆ ನಾಳೆ ಇಲ್ಲ. ಒಂದೇ ವಿಷಯಕ್ಕೆ ಹತ್ತು ಹಲವಾರು ಆಯಾಮಗಳು. ಯಾವುದನ್ನು ನಂಬುವುದು ಯಾವುದು ಸತ್ಯ ಎಂದು ಈ ಮನುಷ್ಯನ ಅಲ್ಪಮತಿಗೆ ಅರ್ಥವೇ ಆಗುವುದಿಲ್ಲ. ಹಾಗಾಗಿ ಇವನು ಆ ಪರಮಾತ್ಮನ ಪರೀಕ್ಷೆಯಲ್ಲಿ ಎಂದಿಗೂ ಗೆಲ್ಲಲಾರ. ಇವನನ್ನು ಸೋಲಿಸಿ, ನೋಡಿದೆಯಾ ನೀನು ಗೆಲ್ಲಲೇ ಇಲ್ಲ ಎಂದು ಆ ಪರಮಾತ್ಮ ಕುಹಕವಾಡುವುದು ಸರಿಯೇ? ಎಂದು ಮಾನ್ಯ ಗುಂಡಪ್ಪನವರು ಕೇಳುತ್ತಾರೆ.
ವಾಚಕರೆ. ಹೌದು ಆ ಪರಮಾತ್ಮನ ಸೃಷ್ಟಿ ವಿಚಿತ್ರ, ಅಗಾಧ, ಅನಂತ. ಒಂದು ಜನ್ಮದಲ್ಲಲ್ಲ ಜನ್ಮ ಜನ್ಮಾಂತರದಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಪ್ರತಿಯೊಬ್ಬರ ಆತ್ಮವೂ ಮೂಲ ಸ್ವರೂಪದಲ್ಲಿ ಶುದ್ಧ. ಇಂದ್ರಿಯಾಕರ್ಷಣೆಯ, ಅರಿಷಡ್ವರ್ಗಗಳ, ಸಂಪರ್ಕದಿಂದ ಧೂಳು ಆವರಿಸಿದೆ. ನಿರಂತರ ಪ್ರಯತ್ನದಿಂದ ಆ ಧೂಳನ್ನು ಒರೆಸಿದರೆ, ಸತ್ವ ಮತ್ತು ತತ್ವ ಎರಡೂ ನಿಚ್ಚಳವಾಗಿ ಪ್ರಕಟವಾಗಿ ಪ್ರತಿ ಜೀವಿಯೂ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವಾಗಬಹುದು.
ಸತ್ಯಾನ್ವೇಷಣೆ ರಸಧಾರೆ – 037
ಆವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ
ಅವನ ವೇಷಗಳೇಕೆ ಮಾರ್ಪಡುತಲಿಹವು ?
ತವಕಪಡನೇತಕೋ ಕುರುಹ ತೋರಲು ನಮಗೆ
ಅವಿತುಕೊಂಡಿಹುದೇಕೋ?- ಮಂಕುತಿಮ್ಮ
ಅವತರಿಸಿಹನು = ಅವತ್ತರ ಎತ್ತಿಹನು. ಬೊಮ್ಮ = ಪರಬ್ರಹ್ಮ, ವಿಶ್ವದೇಹ = ವಿಶ್ವದಲ್ಲೆಲ್ಲ, ಎನ್ನೆ = ಎನಲುತವಕ = ಆತುರ, ಕುರುಹ = ಗುರುತ.
ಈ ಜಗತ್ತನ್ನು ಆ ಪರಮಾತ್ಮನೇ ಸೃಷ್ಟಿಮಾಡಿದ. ಈ ಜಗತಿನಲ್ಲಿರುವ ಎಲ್ಲವನ್ನೂ ಆ ಪರಮಾತ್ಮನೇ ಸೃಷ್ಟಿಮಾಡಿದ ಮತ್ತು ಎಲ್ಲದರಲ್ಲೂ ಅವನೇ ಇರುವನೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಎಲ್ಲವೂ ಅವನ ರೂಪವೇ ಎಂದು ಹೇಳುತ್ತಾರೆ. ಹಾಗಾದರೆ ಎಲ್ಲದರಲ್ಲೂ ಅವನೇ ಅವತರಿಸಿದ್ದಾನೆ ಎಂದಾದರೆ, ಮತ್ತು ಪರಮಾತ್ಮ ನಿತ್ಯನೂ ಸತ್ಯನೂ ಅದಾಗ, ಈ ರೂಪಗಳ ಬದಲಾವಣೆ ಏಕೆ. ಎಲ್ಲ ರೂಪವೂ ಅವನೇ ಆದರೆ, ಅವನು ತನ್ನ ನಿಜ ರೂಪವನ್ನೇಕೆ ತೋರಿಸುವುದಿಲ್ಲ. ಏಕೆ ಅವಿತುಕೊಂಡಿದ್ದಾನೆ? ಎಂದು ಒಂದು ವಿಷಯವನ್ನು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು.
ತೆಲುಗಿನ ಕವಿ, ಭಕ್ತ, ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು, ತಮ್ಮ ಒಂದು ಹಾಡಿನಲ್ಲಿ ” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ” ಅಂದರೆ “ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವೂ ತಾನೇ ಆಗಿ” ಎಂದು ಆ ಪರಮಾತ್ಮನ ಸರ್ವ ವ್ಯಾಪಕತ್ವವನ್ನು ಕೊಂಡಾಡುತ್ತಾರೆ. ಅಣುವಿನಲ್ಲೂ ಬೃಹತ್ತಲ್ಲೂ , ಕೃಶದಲ್ಲೂ ಸ್ಥೂಲದಲ್ಲೂ, ಗುಣದಲ್ಲೂ ನಿರ್ಗುಣದಲ್ಲೂ ಹೀಗೆ ಎಲ್ಲದರಲ್ಲೂ ಚೇತನಾ ಸ್ವರೂಪನಾಗಿ ತಾನೇ ಇದ್ದರೂ ತನ್ನದೇ ಆದಂತ ಒಂದು ರೂಪವಿಲ್ಲದೆ ಎಲ್ಲ ರೂಪಗಳೂ ತಾನೇ ಆಗಿರುವ ಆ ಪರಮಾತ್ಮ ತನ್ನ ನಿಜ ರೂಪವನ್ನು ತೋರಲಾರನೇಕೆ ಎನ್ನುವುದೇ ಜಿಜ್ಞಾಸೆ.
ಇಡೀ ಜಗತ್ತೇ ಚೇತನ ಮತ್ತು ಜಡದಿಂದಾಗಿದೆ. ಇವೆರಡರ ಸಮ್ಮಿಲಿತ ರೂಪವೇ ಈ ಜಗತ್ತು ಮತ್ತು ಈ ಜಗತ್ತಿನಲ್ಲಿರುವ ಎಲ್ಲವೂ ಎಲ್ಲವೂ ಆ ಭೃಹತ್ ಚೇತನದಿಂದಲೇ ಬಂದಿದೆ ಎನ್ನುವ ಒಂದು ಸಿದ್ಧಾಂತವೂ ಇದೆ.
” ಯತಃ ಸರ್ವಾಣಿ ಭೂತಾನಿ ಭವನ್ತ್ಯಾದಿ ಯುಗಾಗಮೆ I ಯಸ್ಮಿನ್ಸ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೆ ” ಎನ್ನುವಂತೆ ಎಲ್ಲವೂ ಆ ಮಹಾನ್ ಚೇತನದಿಂದ ಬಂದು ಮತ್ತೆ ಆ ಮಹಾನ್ ಚೇತನಕ್ಕೆ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ರೂಪ ಬದಲಾವಣೆಯಾಗುತ್ತಾ ಇರುತ್ತದೆ. ಹೇಗೆ ಎಲ್ಲ ವಿದ್ಯುತ್ ಉಪಕರಣಗಳನ್ನೂ ಬೆಳಗುವ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಮತ್ತು ಅದಕ್ಕೊಂದು ರೂಪವಿಲ್ಲದಿದ್ದರೂ ತಾನು ಬೆಳಗುವ ಉಪಕರಣದ ಮೂಲಕ ತನ್ನ ಅಸ್ತಿತ್ವವನ್ನು ತೋರುವಂತೆ, ಆ ಪರಮಾತ್ಮನೂ ಸಹ ತನಗೊಂದು ರೂಪವಿಲ್ಲದಿದ್ದರೂ ಈ ಜಗತ್ತಿನ ಎಲ್ಲ ವಸ್ತುಗಳಲ್ಲೂ, ಆ ವಸ್ತುವೇ ಆಗಿ ಪ್ರಕಟಗೊಂಡಿದ್ದಾನೆ ಎನ್ನುವುದು ಸಿದ್ಧಾಂತ.
ರೂಪ ಕಣ್ಣಿಗೆ ಕಾಣದಿದ್ದರೂ ಆ ಚೇತನ ಅನುಭವಕ್ಕೆ ಬರುತ್ತದೆ.
ಸತ್ಯಾನ್ವೇಷಣೆ ರಸಧಾರೆ – 038
ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯ೦ಶಾವ|
ತಾರದಿಂದಾರ್ಗೇನು? ಮಂಕುತಿಮ್ಮ. ||
ಬೇರೆಯಿಸಿ ನಿಮಿಷ ನಿಮಿಷಕೆ ಒಡಲ ಬಣ್ಣಗಳ ತೋರಿಪ ಊಸರವಳ್ಳಿಯಂತೆ ಏನು ಬೊಮ್ಮಂ ಪೂರ ಮೈ ತೋರೆನು ಎಂಬ ಕಪಟಿಯ ಅಂಶಾವತಾರದಿಂದ ಯಾರಿಗೆ ಏನು?
ಬೇರೆಯಿಸಿ = ಬೇರೆಬೇರೆಯಾಗಿಸಿ, ಒಡಲ = ರೂಪದ, ತೋರಿಪ = ತೋರಿಸುವ, ಊಸುರವಳ್ಳಿ = ಗೋಸುಂಬೆ, ಬೊಮ್ಮ = ಬ್ರಹ್ಮ, ಪೂರ = ಸಂಪೂರ್ಣ, ಮೈದೋರೆ= ರೂಪತೋರೆ,
ನಾವು ಈ ವರೆಗೆ ಹೇಳಿರುವುದೇನು ಎಂದು ಒಂದು ಬಾರಿ ನೋಡೋಣ. ಎಲ್ಲವೂ ಆ ಪರಮಾತ್ಮನಿಂದ ಆಗಿ ಅವನೇ ಎಲ್ಲ ರೂಪಗಳಲ್ಲಿಯೂ ಪ್ರಕಟವಾಗಿರುವ ಎಂದು ನಮ್ಮ ನಂಬಿಕೆ. ಈ ಪ್ರಪಂಚದಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ, ತನ್ನ ಅಂಶದಿಂದ ಪ್ರಕಟವಾಗಿ(ಸಿ)ದ್ದಾನೆ ಎಂದು. ಹಾಗಾಗಿ ಯಾರ್ಯಾರು ಏನೇನು ಎಂದು ಭಾವಿಸಿದರೆ ಹಾಗೆ ಅವರಿಗೆ ತೋರುವ ಆ ಪರಮಾತ್ಮ ವಸ್ತು ಏಕ ರೂಪದಲ್ಲಿ ಏಕೆ ಇಲ್ಲ ಎಂದು ಈ ಕಗ್ಗದ ಪ್ರತಾಪ. ಘಳಿಗೆ ಘಳಿಗೆಗೆ ಬದಲಾಗುವ ಮನುಷ್ಯರ ಮನದ ಭಾವಕ್ಕೆ ತಕ್ಕಂತೆ ಬದಲಾಗುವ ಆ ಪರಮಾತ್ಮ ಸ್ವರೂಪವನ್ನು ಗುಂಡಪ್ಪನವರು, ಊಸರವಲ್ಲಿಯಂತೆ ಕ್ಷಣಕ್ಕೊಂದು ರೂಪವನ್ನು ಏಕೆ ತೋರುತ್ತಾನೆ ಈ ಪರಮಾತ್ಮ. ಆಗಾಗ ಅವನೆತ್ತುವ ಅಂಶಾವತಾರಗಳಿಂದ ಯಾರಿಗೆ ಏನು ಪ್ರಯೋಜನ. ತನ್ನ ನಿಜ ರೂಪವನ್ನೇ ತೋರಬಹುದಲ್ಲ ಎಂದು, ಪ್ರತಾಪಿಸಿ, ಓದುಗರನ್ನು ಆ ಪರಮಾತ್ಮನ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.
ಒಂದು ಬಾರಿ ದೇವರನ್ನು ಕಾಣುವ ತವಕದಿಂದ ಸ್ವಾಮಿ ರಾಮ ತೀರ್ಥರ ಬಳಿ ಒಬ್ಬ ಬಂದ. ಆಗ ನಡೆದ ಸಂವಾದ ಹೀಗಿತ್ತು
ವ್ಯಕ್ತಿ. ” ಸ್ವಾಮಿ ನೀ ದೇವರನ್ನು ನೋಡಿದ್ದೀರಂತೆ. ನನಗೂ ಆ ದೇವರನ್ನು ತೋರಿಸುತ್ತೀರಾ”
ಸ್ವಾಮಿ ” ಓಹೋ ಅದಕ್ಕೇನಂತೆ, ತೋರಿಸುತ್ತೇನೆ, ಹಾ ಅವರ ಬಳಿ ಹೋದಾಗ, ನಿನ್ನ ಪರಿಚಯ ಮಾಡಿಕೊಡಬೇಕು. ಹಾಗಾಗಿ ನೀ ಯಾರೆಂದು ಹೇಳು?” ವ್ಯಕ್ತಿ. ” ರಾಜ ಗಜಪತಿ ರಾಜು “
ಸ್ವಾಮಿ” ಅದು ನಿನ್ನ ಹೆಸರು, ನೀ ಯಾರು?”
ವ್ಯಕ್ತಿ. ” ವಿಜಯನಗರ ಸಾಮ್ರ್ಯಾಜ್ಯದ ನಿರ್ವಾಹಕ”
ಸ್ವಾಮೀ” ಅದು ನೀನಿರುವ ಹುದ್ದೆ, ಈ ಹಿಂದೆಯೂ ಆ ಹುದ್ದೆಯಲ್ಲಿ ಯಾರೋ ಇದ್ದರು. ಮುಂದೆಯೂ ಯಾರೋ ಇರುತ್ತಾರೆ, ನೀ ಯಾರು ?”
ಹೀಗೇ ನಾಲ್ಕಾರುಬಾರಿ ಸ್ವಾಮಿ “ನೀ ಯಾರು, ನೀ ಯಾರು” ಎಂದು ಕೇಳಿದಾಗ, ಆ ವ್ಯಕ್ತಿ ರೋಸಿ, ” ನಾ ಏನೇ ಹೇಳಿದರೂ, ಅದು ನೀ ಅಲ್ಲ, ನೀ ಯಾರು?ಎನ್ನುತ್ತೀರಿ, ಹಾಗಾದರೆ ನಾ ಯಾರು” ಎಂದು ಕುಪಿತಗೊಂಡು ಕೇಳಿದ. ಅದಕ್ಕವರು” ಅಲ್ಲಿ ಕುಳಿತುಕೋ. ನೀ ಯಾರೆಂದು ಯೋಚಿಸು, ನಿನಗೆ ನೀ ಯಾರೆಂದು ಅರಿವಾದಾಗ, ಆ ದೇವರು ನಿನಗೇ ಕಾಣುತ್ತಾನೆ, ನಾ ತೋರಿಸುವ ಅವಶ್ಯಕತೆಯೇ ಬರುವುದಿಲ್ಲ” ಎಂದರಂತೆ.
ಆ ಪರಮಾತ್ಮನಿಗೆ ಒಂದು ರೂಪವಿದ್ದಿದ್ದರೆ, ಪಾಪ ಅವನೂ ತೋರಿಸಿಯಾನು. ಎಲ್ಲ ರೂಪಗಳೂ ಅವನೇ ಆಗಿರುವಾಗ, ಒಂದು ರೂಪವನ್ನು ಹೇಗೆ ತೋರುವುದು. ಹಾಗಾಗಿ ವಾಚಕರೆ, ಶುದ್ಧ ಮನಸ್ಸಿನಿಂದ, ಅಹಂಕಾರವನ್ನು ತೊರೆದು, ಧ್ಯಾನದಿಂದ ಆ ಪರಮ ಶಕ್ತಿಯ ಸ್ವರೂಪವನ್ನು ಎಲ್ಲೆಲ್ಲೂ ಕಾಣಬಹುದು. ಈ ರೀತಿಯ ಪ್ರೇರಣೆಯನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ನಮಗೆ ನೀಡುತ್ತಾರೆ.
ರಸಧಾರೆ – 039
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸದೇತಕವನೀಯನೆಮಗೊಂದು ನಿಜ ಕುರುಹ |
ನಿಷೆಯೊಳುಡಕರಡವೊಲು ? ಮಂಕು ತಿಮ್ಮ ||
ಕಾಣ್ಬವೊಲೆಸಗೆ = ಕಾಣ್ಬ + ಒಲ್ + ಎಸಗೆ , ಪರಬೊಮ್ಮನೆನ್ನುವೊಡೆ= ಪರಬೊಮ್ಮನು + ಎನ್ನುವೊಡೆ, ಒಸದೇತಕವನೀಯನೆಮಗೊಂದು = ಒಸೆದು + ಏತಕೆ + ಆವನು + ಈಯನು + ಎಮಗೆ + ಒಂದು, ನಿಷೆಯೊಳುಡಕರಡವೊಲು = ನಿಶೆಯ + ಒಳು + ಉಡುಕರದ + ಒಲು, ಪುಸಿಯ = ಸುಳ್ಳನ್ನು, ದಿಟವ = ನಿಜವನ್ನು, ಒಸಗೆ = ಸಹಾಯಮಾಡಲು, ಒಸದು = ದಯತೋರಿ, ಉಡುಕರದ = ನಕ್ಷತ್ರದ.
ಸುಳ್ಳನ್ನು ನೀನು ಸುಳ್ಳು ಎಂದು ಅರಿತುಕೊಂಡು ಸತ್ಯವನ್ನು ಕಾಣಲು ನಿನಗೆ ಸಹಾಯಮಾಡುವವನಂತಾದರೆ, ಆ ಪರಮಾತ್ಮನು ಮರೆಯಾಗಿ ಮುಸುಕು ಹಾಕಿಕೊಂಡಂತೆ ಇರುವುದಾದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ, ರಾತ್ರಿ ಹೊತ್ತು ನಕ್ಷತ್ರದ ಕಿರಣಗಳು ನಮಗೆ ದಾರಿ ತೋರುವಂತೆ, ಒಂದು ಗುರುತನ್ನು ತನ್ನ ಇರುವಿಕೆಯ ಕುರುಹಾಗಿ ತೋರಿಸಬಾರದೇನು? ಇನ್ನುತ್ತಾರೆ ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ ಮಿತ್ಯವೆನ್ನುವ ಮಿತ್ಯಾವಾದವನ್ನು ಒಪ್ಪುವುದಾದರೆ, ಜಗತ್ತು ಮಾಯೆ, ಮಿಥ್ಯೆಯಾದರೆ, ಸತ್ಯವಾವುದು ಎಂದು ನಾವು ಅರಿತುಕೊಳ್ಳಲು, ಪ್ರಯತ್ನ ಪಡುತ್ತೇವೆ. ಎಲ್ಲ ವೇದಾಂತಿಗಳೂ, ಸಿದ್ಧಾಂತಿಗಳೂ, ಸಾಧು ಸಂತರೂ ಎಲ್ಲರೂ ಅನಾದಿಕಾಲದಿಂದಲೂ ಆ ಪರಮ ಸತ್ಯವನ್ನು ಅರಿತುಕೊಳ್ಳಲು ಪ್ರಯತ್ನಪಟ್ಟು ತಮ್ಮ ಅರಿವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವೇ, ಎಲ್ಲ ಮತಗಳು ಮತ್ತು ವೇದಾಂತದ ಹಲವಾರು ಕವಲುಗಳು.
ಇಲ್ಲಿ ಸತ್ಯವೆಂದರೇನು? ಸುಳ್ಳೆಂದರೇನು? ಯಾವುದು ನಿತ್ಯವಲ್ಲವೋ, ಯಾವುದು ಕಾಲಕ್ರಮೇಣ ಬದಲಾಗುತ್ತದೋ, ಯಾವುದು ನಾಶವಾಗುತ್ತದೋ ಅದನ್ನು ಮಿತ್ಯ, ಸುಳ್ಳು, ಎಂದರು. ಅದನ್ನೇ ಸತ್ಯವೆಂದು ನಂಬಿದರೆ,ಅದನ್ನು ಮಾಯೆ ಎಂದರು. ಆದರೆ, ಯಾವುದು ಸದಾಕಾಲ ಒಂದೇ ರೀತಿ ಇರುತ್ತದೋ ಅದನ್ನು ನಿತ್ಯವೆಂದರು, ಸತ್ಯವೆಂದರು. ಹಾಗಾದರೆ ನಾವು ಕಾಣುವುದೆಲ್ಲವೂ, ಬದಲಾಗುವುದೆಲ್ಲವೂ ಅಸತ್ಯವಾದರೆ ಮಿತ್ಯವಾದರೆ ಸತ್ಯವಾವುದು? . ಹೀಗೆ ನಾವು ಮಿಥ್ಯೆ ಯನ್ನು ಗುರುತಿಸಿ, ಸತ್ಯವನ್ನು ಅರಿತುಕೊಳ್ಳಲು, ಆ ಪರಮಾತ್ಮನೇ ಸಹಾಯಮಾಡುವುದಾದರೆ, ಸತ್ಯವಾದ ತನ್ನ ನಿಜ ರೂಪವನ್ನು ನಮಗೆ ತೋರಿಸಲು ಯಾವುದಾದರೂ ಒಂದು ಕುರುಹನ್ನು ನೀಡಬಹುದಲ್ಲ? ಎಂದು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು
ಮನಸ್ಸು ಬುದ್ಧಿ ದೇಹ ಆತ್ಮಗಳು ಒಂದಾದಾಗ ಒಂದು ಜೀವಿಯ ಆವಿರ್ಭಾವ. ಜೀವವನ್ನು ಪ್ರಾಣವೆಂದೂ ಕರೆಯುತ್ತಾರೆ. ಒಂದು ಜೀವಿಯ ಪ್ರಾಣ ಮನಸ್ಸು ಬುದ್ಧಿ ದೇಹವನ್ನು ಬಿಟ್ಟಾಗ, ಜೀವಿಯನ್ನು ಸತ್ತ(ಸತ್ತಿತೆ೦ದು)ನೆಂದು ಹೇಳುತ್ತಾರೆ. ಅಂದರೆ ಪ್ರಾಣ ಸಾಯುವುದಿಲ್ಲ, ಹೋಗುತ್ತದೆ. ಮನಸ್ಸು ಬುದ್ಧಿಗಳು, ದೇಹದಂತೆ ಇಲ್ಲವಾಗುತ್ತದೆಯಾದರೆ, ನಮ್ಮ ಅಸ್ತಿತ್ವದಲ್ಲಿ ಹಾಗಾದರೆ ಸತ್ಯವಾದದ್ದು ಈ ಪ್ರಾಣ ಅಥವಾ ಆತ್ಮವೊಂದೇ. ಈ ಆತ್ಮದ ಅರಿವನ್ನು ಪಡೆಯುವುದೇ ಸತ್ಯವನ್ನು ಅರಿಯುವ ದಾರಿ. ಇದು ನಮ್ಮ ಆಧ್ಯಾತ್ಮದ ಮಾತು.
ಮನಸ್ಸು ಬುದ್ಧಿ ದೇಹ ಆತ್ಮಗಳಿಗೆ ಒಂದೊಂದು ಮೂಲ ಉಂಟು. ಮನಸ್ಸು ಬುದ್ಧಿಗಳಿಗೆ ಮೂಲ ಪಂಚ ಭೂತಗಳು, ದೇಹಕ್ಕೆ ಈ ಭೂಮಿ ಮತ್ತು ಆತ್ಮಕ್ಕೆ ಆ ಪರಮಾತ್ಮ. ಆತ್ಮವು ಸತ್ಯವಾದರೆ, ಆ ಪರಮಾತ್ಮನೂ ಸತ್ಯವಲ್ಲವೇ. ಆತ್ಮ ಆ ಪರಮಾತ್ಮನ೦ತೆಯೇ ಸಾಕ್ಷೀ ಭೂತವಾಗಿ ಇದೆ. ಇದನ್ನರಿಯುವುದೇ ಆಧ್ಯಾತ್ಮದ ಮೂಲ ಗುರಿ. ಇದನ್ನರಿತವರಿಗೆ ಪರಮಾತ್ಮ ಸಾಕ್ಷಾತ್ಕಾರ. ಇದನ್ನು ಯಾರು ಬೇಕಾದರೂ ಸಾಧಿಸಬಹುದು. ಅದಕ್ಕೆ ಸಾಧನೆಯ ಅವಶ್ಯಕತೆಯುಂಟು ಅಷ್ಟೇ.
ಅಂತ ಸಾಧನೆಯ ದಾರಿಯನ್ನು, ಸತ್ಯವನ್ನರಿಯುವ ಮಾರ್ಗವನ್ನು ನಮಗೆ ಆ ಪರಮಾತ್ಮ ಕರುಣಿಸಲಿ ಎಂದು ಬೇಡುವುದೇ ಈ ಕಗ್ಗದ ಮೂಲ ಅಂತರ್ಯ.
ಪರಮಾತ್ಮ ದರ್ಶನ ರಸಧಾರೆ – 040
ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ
ಶಶಿರವಿಗಳವನ ಮನೆಕಿಟಕಿಯಾಗಿರರೇ೦?
ಮಸುಕುಬೆಳಕೊಂದಾದ ಸಂಜೆಮಂಜೇನವನು
ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ
ನಿಶೆಯೊಳೇ೦ = ನಿಶೆಯೊಳು + ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು + ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು + ಅವನು, ನಿಶೆಯೊಳು = ರಾತ್ರಿಯಲಿ, ಶಶಿರವಿಗಳು = ಸೂರ್ಯ ಚಂದ್ರರು, ಮಸುಕು = ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು = ಕಂಡೂ ಕಾಣದ, ಮಿಸುಕಿ = ಅಲೆದಾಡುವ
ಹಗಲಲ್ಲಿ ಕಾಣಬಾರದೆಂತಾದರೆ, ರಾತ್ರಿಯಲ್ಲಿ ಏಕೆ ಕಾಣುವುದಿಲ್ಲ ಆ ಪರಮಾತ್ಮ. ರವಿ ಚಂದ್ರರು ಅವನ ಮನೆಯ ಕಿಟಕಿಗಳೇನು? ಇತ್ತ ಹಗಲೂ ಅಲ್ಲದೆ ನಿಶೆಯೂ ಅಲ್ಲದೆ ಇರುವ ಮುಸ್ಸಂಜೆಯ ಸಮಯವೇನು ಅವನು ಅಲೆದಾಡುವ ಸಮಯ ಎಂದು ಒಂದು ನೇರ ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಗುಂಡಪ್ಪನವರು.
ಆ ದೇವರು ಯಾರು? ಅವನ ಸ್ವರೂಪವೇನು? ಅವನನ್ನು ಹೇಗೆ ಸಾಕ್ಷಾತ್ಕರಿಸಿಕೊಳ್ಳಬಹುದು? ಹೀಗೆ ಹತ್ತು ಹಲವಾರು ಸಂಶಯಗಳು ಅನಾದಿಕಾಲದಿಂದಲೂ ಮಾನವನನ್ನು ಕಾಡುತ್ತಿದೆ. ಕಣ್ಣು ತೆರೆದರೆ ಬೆಳಕು. ಅದನ್ನೇ ಹಗಲು ಎನ್ನುತ್ತಿರಬಹುದು ಮಾನ್ಯ ಗುಂಡಪ್ಪನವರು. ಕಣ್ಣು ತೆರೆದರೆ , ನಮಗೆ ಪ್ರಪಂಚವೆಲ್ಲ ಕಾಣುವುದು. ಕಂಡವಸ್ತುವಿನ ಮೇಲೆ ನಮ್ಮ ಗಮನ ಮತ್ತು ಆಲೋಚನೆ. ಇಂದ್ರಿಯಗಳ ಸೆಳೆತದಿಂದ ನಾವು ಕಣ್ಣು ತೆರೆದಿರುವಾಗ ಮನಸ್ಸು ಚಂಚಲವಾಗಿರುವುದರಿಂದ, ಆ ಪರಮಾತ್ಮನನ್ನು ಭಾವಿಸುವುದು ಬಹಳ ಕಷ್ಟ. ಆದರೆ ಕಣ್ಣು ಮುಚ್ಚಿದರೆ, ಕತ್ತಲು. ಇದನ್ನೇ ನಿಶೆಯಂದಿರಬಹುದು. ಹಾಗಾಗಿ ಕಣ್ಣು ಮುಚ್ಚಿರುವಾಗ, ಬಾಹ್ಯ ವಸ್ತುಗಳು ಕಾಣದಾದಾಗ, ಅಂತರ್ಮುಖಿಯಾಗಲು ಸಾಧ್ಯ. ಹಾಗೆ ಅಂತರ್ಮುಖಿಯಾದಾಗಲಾದರೂ ಆ ಪರಮಾತ್ಮ ನಮ್ಮ ಅರಿವಿಗೆ ಬರಬಹುದಲ್ಲ, ಎಂದರೆ ಕಷ್ಟ ಆದರೆ ಅಸಾಧ್ಯವಲ್ಲ. ” ಹರಿದಾಡುವಂತ, ಮನವ ನಿಲಿಸುವುದು ಬಲು ಕಷ್ಟ. ಕಾಶೀಗ್ ಹೋಗಲು ಬಹುದು, ದೇಶ ಸುತ್ತಲು ಬಹುದು, ಆಸೆ ಸುಟ್ಟ೦ತಿರಬಹುದು, ಹರಿದಾಡುವಂತ,ಮನವ ನಿಲಿಸುವುದು ಬಲು ಕಷ್ಟ” ಎಂದು ದಾಸರು ಹೇಳಿದ್ದಾರೆ. ಹಾಗೆ ಕಣ್ಣು ಮುಚ್ಚಿ ಕುಳಿತರೂ ಈ ಮನಸ್ಸೆಂಬುದು ಒಂದು ಇದೆಯಲ್ಲ, ಎಲ್ಲೆಲ್ಲೋ ಸುತ್ತುತದೆ, ಏನೇನೋ ಯೋಚಿಸುತ್ತದೆ. ಈ ಯೋಚನೆ ಆಲೋಚನೆಗಳ ಸುಳಿಯಲ್ಲಿ ಆ ಪರಮಾತ್ಮನಮೇಲೆ ಧ್ಯಾನಮಾಡುವುದೂ ಸಹ ಕಷ್ಟ.
ಆದರೆ, ಎಚ್ಚರ ಮತ್ತು ಸುಶುಪ್ತಿಗಳ ನಡುವಿನ ಒಂದು ಸ್ತರ ಉಂಟು. ಅದು ಜಗೃತಾವಸ್ತೆ. ಮನದ ಎಲ್ಲ ಕೋಣೆಗಳ ಗೋಡೆಗಳ ಕಾಲ್ಪನಿಕ ಗೆರೆಗಳನ್ನು ಅಳಿಸಿ, ಮನದ ಪಟಲವನ್ನು ಒಂದೇ ಆಗಿಸಿ ಅಲ್ಲಿ ಧ್ಯಾನಮಾಡಿದರೆ, ಈ ಪ್ರಪಂಚದ ಸೆಳೆತಗಳನ್ನು ಮೀರಿ ಇಡೀ ಸೃಷ್ಟಿಗೆ ಕಾರಣವಾದ ಆ ಚೇತನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡಬಹುದು. ಈ ಪ್ರಯತ್ನ ನಿರಂತರವಾಗಿ ಸಾಗಿದಾಗ, ಧ್ಯಾನ ಗಟ್ಟಿಯಾಗಿ ಆ ಪರಮ ಶಕ್ತಿಯ ದರ್ಶನ ಅಂತಃ ಚಕ್ಷುಗಳಿಗೆ ಆಗಬಹುದು. ಆದರೆ ಅದೂ ಸಹ ಒಂದು ಕ್ಷಣ ಬಂದು ಹೋಗಿಬಿಡುತ್ತೆ. ಇದು ಅನುಭವ ವೇಧ್ಯ. ಇದನ್ನೇ ಮಾನ್ಯ ಗುಂಡಪ್ಪನವರು “ಮಂಜೇನು” ಎನ್ನುತ್ತಾರೆ. ಹಾಗೆ ಒಂದು ಕ್ಷಣ ಬಂದು ಹೋಗುವ ಭಾವಕ್ಕೆ ” ಮಿಸುಕು” ಎಂದಿದ್ದಾರೆ. ಆ ಸ್ಥಿತಿಯಲ್ಲಿ ಹೆಚ್ಚು ಸಮಯ ಇರಲು ಪ್ರಯತ್ನಪಟ್ಟರೆ ಅದು ಧ್ಯಾನವಾಗುತ್ತದೆ . ಎಲ್ಲ ಭಾವಗಳೂ ಕರಗಿ ಹೋಗಿ, ಕೇವಲ ಆ ಪರಮ ಶಕ್ತಿಯನ್ನೇ ಅನುಭವಕ್ಕೆ ತಂದುಕೊಳ್ಳುವ ಪ್ರಕ್ರಿಯೆ ಇದು. ಒಂದು ವ್ಯಕ್ತಿ, ಕೇವಲ, ತೊಂಬತ್ತು ಕ್ಷಣಗಳು, ಅಂದರೆ ಒಂದೂವರೆ ನಿಮಿಷ ಯಾವ ಅಡಚಣೆಯೂ ಇಲ್ಲದೆ ಈ ಸ್ಥಿತಿಯಲ್ಲಿ ಇರಲು ಆದರೆ ಅವನನ್ನು ಯೋಗಿ ಎನ್ನಬಹುದು.
ಅಧ್ಯಾತ್ಮ ಸಾಧನೆಯ ಉತ್ತುಂಗ ಸ್ಥರವದು. ಆದರೆ ಇಂದಿನ ಹಲವಾರು ಸೆಳೆತಗಳ ಈ ಸಮಾಜದಲ್ಲಿ ಇದು ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ಇದಕ್ಕೊಂದು ಮಾರ್ಗ ಬೇಕು, ಒಬ್ಬ ಮಾರ್ಗದರ್ಶಕಬೇಕು, ನಿರಂತರ ಪ್ರಯತ್ನ ಬೇಕು. ಸಾಧಿಸಬಹುದು.
You may Also Like :