Mankuthimmana kagga (ಮಂಕುತಿಮ್ಮನ ಕಗ್ಗ ) with meanings 21 – 30

  ರಸಧಾರೆ – 021

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ

ಮಣ್ಣೆನುವನ್, ಅವನವರ ಮಣ್ಣೆನುವೆ ನೀನು

ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ

ಪಣ್ಯಕ್ಕೆ ಗತಿಯನ್ತೋ? – ಮಂಕುತಿಮ್ಮ

 

ಹೊನ್ನು ಎಂದು ಜಗದಿ ನೀ೦ ಕೈಗೆ ಕೊಂಡದನು ವಿಧಿ ಮಣ್ಣೆನುವನು, ಅವನ ವರ ಮಣ್ಣೆನುವೆ ನೀನು

ಭಿನ್ನವು ಇಂತಿರೆ ವಸ್ತು ಮೌಲ್ಯಗಳ ಗಣನೆಯು ಈ ಪಣ್ಯಕ್ಕೆ ಗತಿಯೇನೋ ಮಂಕುತಿಮ್ಮ

ಹೊನ್ನು = ಚಿನ್ನ, ಜಗದಿ = ಜಗತ್ತಿನಲ್ಲಿ, ಭಿನ್ನ = ವ್ಯತ್ಯಾಸ, ಪಣ್ಯ = ವ್ಯಾಪಾರ.

ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆಪರಮಾತ್ಮನ ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆ “ವಿಧಿ”ಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು. ನಾವು ಒಂದು ವಸ್ತು,ವ್ಯಕ್ತಿ, ವಿಷಯವನ್ನು ಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆವಿರುದ್ಧವಾಗಿರಬಹುದು ಹಾಗಾಗಿ ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆ ವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ “ಹೊನ್ನೆಂದು” ನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಶ್ಪ್ರಯೋಜಕವಾಗುವುದು ಎಂಬುದು ಇಲ್ಲಿನ ಅಂತರ್ಯ.

ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು. ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟುಪಡೆದುಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. ” ಅವನದೇ ಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡು” ಇಂತಹ ಮಾತುಗಳನ್ನು ನಾವು ಎಷ್ಟೋಬಾರಿ ಕೇಳಿರುತ್ತೇವೆ. ಅದೇ ” ಅವನವರ” ಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ.

ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ , ಪ್ರತಿವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ, ಅಂತರ್ಯದಲ್ಲಿಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ ಎಂದು ವಿಚಾರಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ.

ಒಂದು ತಾಯಿ, ತನ್ನ ಮಗುವಿಗೆ ಏನು ಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆ ಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ ಹಾಗೆ ಇದೆ. ನಮಗೆಲ್ಲರಿಗೆ ತಾಯಿಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ನಮಗೆ ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ. ಅದ್ದನ್ನರಿಯದೆ ನಾವು ನಾವು ಬಯಸಿದ ವಸ್ತು ಸಿಗದೇ ಹೋದರೆ, ” ಅಯ್ಯೋ ದೇವರೇ ನನಗೇ ಯಾಕೆ ಹೀಗೆ” ಎಂದು ಆ ದೇವರನ್ನು ಬಯ್ಯುತ್ತ, ನಮ್ಮ ” ಹಣೆಬರಹಾನೆ ಇಷ್ಟು’ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೀವಿ.

ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿ” ನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.” ಎಂದು ಹೇಳಿರುವಾಗ ಮತ್ತೇನು. ಮತ್ತೆ” ನೀ ಏನೂ ಕೇಳಬೇಡ, ಹಾಗೆ ನೀ ಏನು ಕೇಳಿದರೂ ಕೊಡುವೆ. ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನು ಏನೂ ಕೇಳದಿದ್ದರೆ, ನಿನಗೇನೂ ಸೂಕ್ತವೋ ,ಹಿತವೋ, ಅದನ್ನು ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆನಿನ್ನದು” ಎಂದಾಗ. ಮತ್ತೇಕೆ ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ ” ನನ್ನ ಮನಸ್ಸಿಗೆ ನಿರಂತರವಾಗಿ ಬಾ” ಎಂದು ಕೇಳಬೇಕು, ಅಲ್ಲವೆ ವಾಚಕರೆ? .

ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ ಇನ್ನೇನು ಎನ್ನುವ ಅರ್ಥದಲ್ಲಿ ” ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯನ್ತೋ ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹಾಗಾಗಿ ವಾಚಕರೆ, ತಾಯಿ ಸ್ವರೂಪದ ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಅಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, ” ಅಹಂಕಾರ ” ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಕಗ್ಗದ ಅಂತರ್ಯ.

ರಸಧಾರೆ – 022

ಕೃತ್ರಿಮವೋ ಜಗವೆಲ್ಲ | ಸತ್ಯತೆಯದೆಲ್ಲಿಹುದೋ?

ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು

ಚತ್ರವೀ ಜಗವಿದರೋಳಾರ ಗುಣವೆಂತಹುದೋ

ಯಾತ್ರಿಕನೆ, ಜಾಗರಿರೋ – ಮಂಕುತಿಮ್ಮ

ಕೃತ್ರಿಮ = ಡಾ೦ಬಿಕತೆ, ನಾಟಕ, ಬೂಟಾಟಿಕೆ. ಕರ್ತೃವು = ಜಗತ್ತನ್ನು ಸೃಷ್ಟಿಮಾಡಿದ ಶಕ್ತಿ. ಗುಪ್ತ = ಅವ್ಯಕ್ತನಾಗಿ, ಅಮೂರ್ತನಾಗಿ, ಕಣ್ಣಿಗೆ ಕಾಣದೆ. ಯಾತ್ರಿಕ = ಪಯಣಿಗ. ಜಾಗರಿರು – ಜಾಗ್ರತೆಯಾಗಿರು.

ಕ್ರುತ್ರಿಮವು ಜಗವೆಲ್ಲ ಸತ್ಯತೆಯು ಎಲ್ಲಿಹುದೋ ? ಕರ್ತೃವೆನಿಸಿದವನು ತಾಂ ಗುಪ್ತನಾಗಿಹನು

ಚತ್ರವೀ ಜಗವಿದು ಇದರೊಳು ಯಾರ ಗುಣವೆಂತಹುದೋ ಯಾತ್ರಿಕನೆ ಜಾಗರಿರೊ ಮಂಕುತಿಮ್ಮ

ಹಿಂದಿನ ಐದು ಕಗ್ಗಗಳಲ್ಲಿ ವೇದಾಂತದ ಹಲವು ವಿಚಾರಗಳನ್ನು ನಮಗೆ ಅರುಹುತ್ತಾ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು, ಈ ಜಗತ್ತಿನ ಪ್ರಸ್ತಾಪ ಮಾಡುತ್ತಾರೆ. ಈ ಜಗತ್ತು ಕೃತ್ರಿಮವೆನ್ನುತ್ತಾರೆ. ಇದನ್ನು ಕೇವಲ ಮಾನವರಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. “ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ . ಮಾನವಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ. ಅವನೂ ಸಹ ಮಿಕ್ಕೆಲ್ಲ ಪ್ರಾಣಿಗಳಂತೆ, ತನ್ನ ಆಹಾರ ಹುಡುಕುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು, ಇಷ್ಟಕ್ಕೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದ್ದ.

ಮಾನವ ಕಾಲಕ್ರಮೇಣ ಸಂಗ ಜೀವಿಯಾದ. ಅಲೆಮಾರಿಯಾಗಿದ್ದ ಅವನು ಒಂದು ಕಡೆ ನೆಲೆನಿಲ್ಲಲು ಆರಂಭಿಸಿದ ದಿನದಿಂದ ಅಲ್ಪ ಅಲ್ಪವಾಗಿ ಇವನಲ್ಲಿ ಇದು ತನ್ನದು, ಇದು ತನಗೆ, ಇವರು ತನ್ನವರು ಎಂಬ ಮಮಕಾರದ ಭಾವಗಳು ಬಂದವು. ಮುಕ್ತನಾಗಿದ್ದ ಮನುಷ್ಯ ತನ್ನ ಸುತ್ತ ಒಂದು ವೃತ್ತವನ್ನು ಎಳೆದುಕೊಂಡ. ಆ ವೃತ್ತದಲ್ಲಿ ಇರುವುದೆಲ್ಲ ತನ್ನದು ಎನ್ನುವ ಮಮಕಾರವನ್ನು ಬೆಳೆಸಿಕೊಂಡ. ಕ್ರಮೇಣ ಅವನ ಪರಿವಾರ ಬೆಳೆದಂತೆ, ಆ ವೃತ್ತವನ್ನೂ ದೊಡ್ದದಾಗಿಸುವ ಪ್ರಯತ್ನ. ಹೀಗೇ ಅವನಿಗೆ ವಸ್ತು ಸಂಚಯನ ಅಭ್ಯಾಸವಾಗಿಹೋಯಿತು. ಇಷ್ಟಿದ್ದರೆ ಇನ್ನಷ್ಟರಾಸೆ. ” ಕಡಿಮೆ ಸಂಪನ್ಮೂಲಗಳಿಗೆ ಅಧಿಕ ಬೇಡಿಕೆಯಾದರೆ, ಪೈಪೋಟಿ ಬೆಳೆಯುತ್ತದೆ” ಎನ್ನುವುದು ಅರ್ಥಶಾಸ್ತ್ರದ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ, ಮನುಷ್ಯ ಮನುಷ್ಯನ ಮಧ್ಯೆ ತೀವ್ರ ಪೈಪೋಟಿ. ಎಲ್ಲ ವಿಷಯದಲ್ಲೂ. ಅಲ್ಲಿ ಎಲ್ಲರೂ, ಎಂದಿಗೂ ಮುಂಚೂಣಿಯಲ್ಲಿ ನಿಲ್ಲಲು ಸುಳ್ಳು, ಮೋಸ, ದಗಾ, ಎಲ್ಲವನ್ನೂ ತನ್ನ ಮನೋಭಾವದಲ್ಲಿ ಅಳವಡಿಸಿಕೊಂಡ. ಯಾರು ಹೆಚ್ಚು ಸುಳ್ಳನ್ನು, ಹೆಚ್ಚು ಸಮರ್ಪಕವಾಗಿ, ಸುಳ್ಳರೆಂದು ಬಯಲಾಗದೆ, ಹೆಚ್ಚು ಸಮಯಕ್ಕೆ ಹೇಳಬಲ್ಲವರೋ ಅವರೇ ಈ ಪೈಪೋಟಿಯಲ್ಲಿ ಗೆಲ್ಲುತ್ತಾ ಬಂದರು. ಗೆಲುವಿಗೆ

ಇದು ಒಂದು ಸೂಕ್ತ ಮಾರ್ಗವೆಂದು ಮನಗಂಡು ಅದನ್ನೇ ಅಭ್ಯಾಸಮಾಡಿ, ತಮ್ಮ ಸ್ವಾಭಾವವಾಗಿಸಿಕೊಂಡರು. ” ರುಚ” ವೆಂದರೆ ಮನದೊಳಗಿನ ಭಾವ. “ಸತ್ಯ” ವೆಂದರೆ ಆ ಮನದೊಳಗಿನ ಆ ಭಾವ ಹಾಗೇ, ಬದಲಾಗದೆ, ವ್ಯಕ್ತವಾದರೆ ಅದು ಸತ್ಯ. ಆದರೆ ಇಂದು ರುಚದಲ್ಲೂ ಕುಟಿಲತೆ, ಸತ್ಯದಲ್ಲೂ ಕುಟಿಲತೆ. ಇದನ್ನೇ ಮಾನ್ಯ ಗುಂಡಪ್ಪನವರು ” ಕೃತ್ರಿಮವು ಜಗವೆಲ್ಲ ಸತ್ಯತೆಯೆದಲ್ಲಿಹುದೋ ” ಎಂದರು

ಆದರೆ ಇವುಗಳನ್ನೆಲ್ಲ ಮತ್ತು ಎಲ್ಲ ಪ್ರಾಣಿಗಳನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ ಎನ್ನುತ್ತಾರೆ, ಶ್ರೀ ಡಿ ವಿ. ಜಿ. ಅಂದರೆ ಮನುಷ್ಯರ ಮನಸ್ಸುಗಳಲ್ಲಿ ಆ ದೈವ ಭಕ್ತಿ, ಪರಮಾತ್ಮ ಸೃಷ್ಟಿಯಾದ ಈ ಜಗತ್ತನ್ನು ಪೂಜಾಭಾವದಿಂದ ನೋಡುವ ಪರಿ, ಎಲ್ಲವೂ ಆ ಪರಮಾತ್ಮನ ಸೃಷ್ಟಿ, ಇದನ್ನು ನಾನು ದುರುಪಯೋಗಪಡಿಸಿಕೊಳ್ಳಬಾರದು, ಮತ್ತು ಅವನು ನಿರ್ಮಿಸದ ಲೋಕದಲ್ಲಿ ನಾನೂ ಎಲ್ಲರಂತೆ, ಹಾಗಾಗಿ ದುರಾಸೆ, ದುರ್ಭಾವ, ದುರಾಲೋಚನೆ, ಸುಳ್ಳು ಮೋಸ, ತಟವಟ ಇವೆಲ್ಲವೂ ಇರಬಾರದು,ಇದ್ದರೆ ನಾನು ಆ ದೈವದ ಅವಕೃಪೆಗೆ ಪಾತ್ರನಾಗುತ್ತೇನೆಂಬ ಭಯ ಯಾವುದೂ ಇಲ್ಲದೆ ಸ್ವೇಚ್ಚಾ ಮನೋಭಾವ ಬೆಳೆಸಿಕೊಂಡಿರುವುದರಿಂದ, ಅವನ ಮನಸ್ಸಿನಲ್ಲಿ ಆ ದೈವವಿಲ್ಲದಿರುವುದರಿಂದ, ಆ “ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಆ ದೇವರು ನಮ್ಮೆಲ್ಲರ ಕಲ್ಪನೆಯೆಂತೆ ಇರುವನೋ ಇಲ್ಲವೋ ಎಂಬ ಜಿಜ್ಞಾಸೆ ಬೇಡ. ಆದರೆ ಒಂದು ಮಾತು ಸತ್ಯ. ಆ ದೈವವಿದೆ, ನಾವದರ ಅಧೀನ ಎಂಬ ಭಾವಗಳು, ಮಾನವರು ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮತ್ತು ಅವರೇ ನಿರ್ಮಿಸಿಕೊಂಡ ಸಮಾಜದಲ್ಲಿ ಒಂದು ಸಂಯಮ ಮತ್ತು ಶಿಸ್ತು ಇರಲು ಕಾರಣವಾಗಿದೆ ಎಂದರೆ ಅದು ಒಳ್ಳೆಯದೇ ಅಲ್ಲವೇ. ಅಂತಹ ದೈವದಲ್ಲಿ ಇಂದು ಭಯ ಭಕ್ತಿಗಳು ಇಂದು ಕಾಣೆಯಾಗಿವೆ ಎನ್ನುವ ಅರ್ಥದಲ್ಲಿ ” ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ ಇದರ ವಿಚಾರವನ್ನು ಎಲ್ಲರೂ ಮಾಡಲೇ ಬೇಕು. ಏಕೆಂದರೆ ಯಾವುದೋ ಇದ್ದರೆ ಸಮಾಜ ಒಳ್ಳೆಯ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅರಿತರೆ, ನಮ್ಮ ಸಮಾಜ ಸುಧಾರಿಸಲು ಎಲ್ಲೋ ಒಂದು ಮಾರ್ಗವಿದೆ ಎಂದು ಅರಿತುಕೊಳ್ಳಬಹುದು. ಎಲ್ಲರೂ ಅದನ್ನು ಸಾಧಿಸಲು ಪ್ರಯತ್ನಿಸಬೇಕು.

ಇನ್ನು ಈ ಸಮಾಜದಲ್ಲಿ ಹೇಗಿರಬೇಕೆಂದು ಒಂದು ಎಚ್ಚರಿಕೆಯನ್ನು ನೀಡುತ್ತಾರೆ ಶ್ರೀ ಡಿ ವಿ. ಜಿ ಯವರು, ಇಂತಹ ವಿಚಿತ್ರವಾದ ಜಗತ್ತಿನಲ್ಲಿ ಯಾರ ಗುಣ ಹೇಗಿರುತ್ತೋ ತಿಳಿಯುವುದು ಕಷ್ಟ ಎನ್ನುತ್ತಾರೆ. ನಯ ವಂಚಕರಿರುವ ಈ ಜಗತ್ತಿನಲ್ಲಿ ಮೋಸಮಾಡುವವರು ಕಡಿಮೆಯಾದರೂ ಮೋಸಹೋಗುವವರ ಸಂಖ್ಯೆ ಅಧಿಕ. ಇಲ್ಲಿ ಒಂದು ವಿಷಯ ಹೇಳಬೇಕು. ಮೋಸಮಾಡಲು ಬುದ್ಧಿವಂತಿಕೆ ಬೇಕು. ” ಎಲ್ಲ ಬುದ್ಧಿವಂತರೂ ಮೋಸಗಾರರಲ್ಲ. ಆದರೆ ಎಲ್ಲ ಮೋಸಗಾರರೂ ಬುದ್ಧಿವಂತರು” ಎನ್ನುವುದು ಸತ್ಯವಾದ ಮಾತು. ಇಂತಹವರ ಸಂಖ್ಯೆ ಕಡಿಮೆಯಾದರೂ ಅವರ ಬಲೆಗೆ ಬೀಳುವ ಜನರ ಸಂಖ್ಯೆ ಹೆಚ್ಚಾದ್ದರಿಂದ ಎಲ್ಲರೂ ಒಂದಲ್ಲ ಒಂದು ಬಾರಿ ಆ ಮೋಸದ ವಂಚನೆಯ ಕೃತ್ರಿಮತೆಯ, ತಟವಟದ ಜನರ ಬಲೆಯಲ್ಲಿ ಸಿಕ್ಕು ಕಷ್ಟಪಟ್ಟಿರುವವರೇ ಆಗಿರುತ್ತಾರೆ. ಹಾಗಾಗಿ ನೀ ಜಾಗರೂಕನಾಗಿರು ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹಾಗೇ ನೀಡುವಾಗ” ಯಾತ್ರಿಕನೆ ” ಎನ್ನುವ ಪದ ಪ್ರಯೋಗ ಮಾಡುತ್ತಾರೆ. ಹೌದು ನಾವೆಲ್ಲರೂ ಈ ಜಗತ್ತಿನಲ್ಲಿ ಜೀವನವೆನ್ನುವ ಪ್ರಯಾಣವನ್ನು ಮಾನವರೂಪದ ಈ ಮಣ್ಣಿನ ಬಂಡಿಯಲ್ಲಿ ಮಾಡುವ “ಪ್ರಯಾಣಿಕ”ರೇ, ಅಲ್ಲವೇ?

ಹಾಗಾಗಿ ಈ ಜಗತ್ತು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸದಿಂದ ತುಂಬಿದೆ. ದೈವಭಕ್ತಿಯು ನಶಿಸಿದೆ. ಇಲ್ಲಿ ನೀನು ಜಾಗರೂಕನಾಗಿರು ಎಂದು ಎಚ್ಚರಿಸುವ ಭಾವವೇ ಈ ಕಗ್ಗ. ಆದರೆ ಈ ಸ್ತಿತಿ ಅ-ನಿವಾರ್ಯ (incurable) ಅಲ್ಲ. ಎಲ್ಲರೂ ಮನಸ್ಸು ಮಾಡಿದರೆ ಸಾಧ್ಯ. ಇಲ್ಲಿ ಸುಳ್ಳು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸಗಳ ಸ್ಥಾನದಲ್ಲಿ ಕರುಣೆ ಪ್ರೀತಿ ಪ್ರೇಮ ಸಹೃದಯತೆ ಮುಂತಾದ ಭಾವಗಳನ್ನು ಬೆಳೆಸಿಕೊಂಡು ನಾವಿರುವ ಜಗತ್ತನ್ನು ಸುಂದರವನ್ನಾಗಿಸಲು ನಾವೆಲ್ಲರೂ ಪ್ರಯತ್ನಪಡೋಣವೆಂದು ಹೇಳುತ್ತಾ,

ರಸಧಾರೆ – 023

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು

ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು

ಮರಳಿ ಕೊರಗಾಡುವುದು, ಕೆರಳುವುದು ನರಳುವುದು

ಇರವಿದೇನೊಣರಗಳೇ? – ಮಂಕುತಿಮ್ಮ

ತಿರು ತಿರುಗಿ ತೊಳಲುವುದು ತಿರಿದು ಅನ್ನವನ್ನು ಉಣ್ಣುವುದು ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು.

ಮರಳಿ ಕೊರಗಾಡುವುದು ಕೆರಳುವುದು ನರಳುವುದು ಇರವು ಇದೇನು ಒಣ ರಗಳೇ? ಮಂಕು ತಿಮ್ಮ

ತಿರುದು = ಬಿಕ್ಷೆಯತ್ತಿ , ಉಣ್ಣುವುದು = ತಿನ್ನುವುದು, ಕೆರಳುವುದು = ಕೋಪಗೊಳ್ಳುವುದು, ರಗಳೆ = ಪರದಾಟ.

ಮತ್ತೆ ಮತ್ತೆ ಮನುಷ್ಯ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು., ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಗದಿದ್ದ್ದರೆ ಕೋಪಗೊಳ್ಳುವುದು,ಹಾಗೂ ಸಿಗದಿದ್ದರೆ, ಕೈಲಾಗತನದಿಂದ ಸಂಕಟಪಡುವುದು ಅಥವಾ ನರಳುವುದು, ಇದನೆಲ್ಲಾ ಮಾನ್ಯ ಡಿ.ವಿ.ಜಿ.ಯವರು ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ ಎಂದು ಈ ಕಗ್ಗದಲ್ಲಿ ಸೂಚ್ಯವಾಗಿ ಹೇಳುತ್ತಾರೆ.

ಹೊಟ್ಟೆಪಾಡಿಗಾಗಿಯೇ ಮತ್ತೆ ಮತ್ತೆ ಪರದಾಡುವುದು, ನಮಗೆ ಸೂಕ್ತವೋ ಅಲ್ಲವೋ , ನಾವು ಇಷ್ಟಪಟ್ಟು ಮಾಡುವ ಕೆಲಸವೋ ಅಲ್ಲವೋ, ಆ ಕೆಲಸದಲ್ಲಿ ನಮಗೆ ತೃಪ್ತಿ ಸಿಗುತ್ತದೆಯೋ ಇಲ್ಲವೋ, ಇವೆಲ್ಲವನ್ನೂ ಪರಿಗಣಿಸದೆ ಮಾತ್ರ ಉದರ ಫೋಷಣೆಗಾಗಿಯೇ ಕೆಲಸ ಮಾಡುವುದು. ಇದು ಅವಶ್ಯಕವೇ ಹೌದು. ಆದರೆ ಹೀಗೆ ಮಾಡುವ ಕೆಲಸದಲ್ಲಿ ಒಂದು ಉತ್ಸಾಹವಿಲ್ಲದೆ, ತೃಪ್ತಿಯಿಲ್ಲದೆ, ಕೇವಲ ಯಾಂತ್ರಿಕವಾಗಿ ನಾವು ನಮ್ಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಗುಣಕ್ಕೆ, ನಮ್ಮ ಸ್ವಭಾವಕ್ಕೆ ಹೊಂದುವ ಕೆಲಸ ನಾವು ಮಾಡಬೇಕೆಂದರೂ, ಆಗದೆ ಕೇವಲ ಹೊಟ್ಟೆಪಾಡಿಗಾಗಿ ಕೆಲಸಮಾಡುತ್ತ ರಸಾನುಭವವಿಲ್ಲದೆ, ನೀರಸವಾದ ಜೀವನಮಾದುತ್ತೇವೆ. ಅದನ್ನೇ ಒಣ ರಗಳೆ ಎಂದು ಗುಂಡಪ್ಪನವರು ಹೇಳುತ್ತಾರೆ.

” ಉದರ ವೈರಾಗ್ಯವಿದು ” ಎಂದು ಹೇಳುವ ಪುರಂಧರ ದಾಸರ ಪದದಲ್ಲಿನ ಅಂತರ್ಯವೂ ಇದೆ ಆಗಿರುತ್ತೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸಮಾಡುವಾಗ , ನಮಗೆ ಬೇಸರ, ಕೋಪ, ದ್ವೇಷ ಅಸೂಯೆ ಮುಂತಾದವುಗಳೆಲ್ಲ ಮನಸ್ಸಿಗೆ ಬಂದು ಒಂದು ರಸಾನುಭಾವವಿಲ್ಲದೆ ಅತೃಪ್ತಿಯ ಭಾವನೆಯೇ ಇರುವುದು ಹಾಗಾಗಿ ಈ ಜೀವನವೆಲ್ಲ ಒಂದು ಒಣ ರಗಳೆ ಎಂದು ಹೇಳುತ್ತಾರೆ.

ಇದು ಹೀಗೆ ಎಲ್ಲರಿಗೂ ಇರುವುದಿಲ್ಲ. ತಮ್ಮ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುವವರೂ ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಆಸಕ್ತಿ ತನ್ಮಯತೆ ಮತ್ತು ತೃಪ್ತಿಯನ್ನು ಕಂಡುಕೊಳ್ಳುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹಳ ಸಂಖ್ಯೆಯ ಜನ, ಶ್ರೀ ಗುಂಡಪ್ಪನವರು ಹೇಳುವ ಹಾಗೆ ನೀರಸವಾದ ಜೀವನವನ್ನೇ ನಡೆಸುತ್ತಾರೆ. ನಾವೂ ಸಹ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದೇನೋ ಎಂದು ಆಲೋಚಿಸುತ್ತಾ………

ಬಾಳ-ಭೂಪಟ ರಸಧಾರೆ – 024

ನರರ ಬಯಕೆಗಳೆ ಸುರರ ತಾಯ್ತಂದೆಗಳೋ? |

ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||

ಪರಕಿಸುವರೇನವರ್ಗಳನ್ಯೋನ್ಯಶಕ್ತಿಗಳ |

ಧರುಮವೆಲ್ಲಿದರಲ್ಲಿ – ಮಂಕು ತಿಮ್ಮ ? ||

ನರರ ಬಯಕೆಗಳೆ ಸುರರ ತಾಯಿ ತಂದೆಗಳೋ ಸುರರ ಅಟ್ಟಹಾಸದಿ ಇನೆ ನರಭಕ್ತಿಯ ಒರಲೋಪರಕಿಸುವರೇನು ಅವರ್ಗಳ ಅನ್ಯೋನ್ಯ ಶಕ್ತಿಗಳ ಧರುಮವೆಲ್ಲಿ ಇದರಲ್ಲಿ ಮಂಕುತಿಮ್ಮ.

ನರರ = ಮನುಷ್ಯರ, ಬಯಕೆಗಳೆ = ಆಸೆಗಳೆ, ಸುರರ = ದೇವತೆಗಳ ಅಟ್ಟಹಾಸದಿ = ಆರ್ಭಟದಲ್ಲಿ , ಇನೆ=ಇರಲು, ಒರಲೋ = ಕೂಗೋ ಪರಕಿಸುವರೇನು = ಪರೀಕ್ಷಿಸುವರೇನು, ಅವರ್ಗಳ = ಅವರೀರ್ವರ, ಶಕ್ತಿಗಳ = ಪರಸ್ಪರ ಶಕ್ತಿಗಳ, ಧರುಮ = ಧರ್ಮ.

ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಹೌದಲ್ಲವೇ ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವ ಆ ಪರಮಾತ್ಮನಾಗಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತತ್ಯವಲ್ಲವೇ? ಇದನ್ನೇ ಶ್ರೀ ಗುಂಡಪ್ಪನವರು ಹೇಳುತ್ತಾರೆ. ವಿದ್ಯೆಗೆ ಒಂದು ದೇವತೆ, ಹಣಕ್ಕೆ ಒಂದು ದೇವತೆ, ಮಳೆಗೆ ಒಂದು ದೇವತೆ, ಗಾಳಿಗೊಂದು ದೇವತೆ. ನಮಗೆ ಗಿಡ ಮರ ಬಳ್ಳಿಗಳೂ ನದಿ ಬೆಟ್ಟ ಕಾಡುಗಳೂ, ಎಲ್ಲವೂ ದೇವತಾ ಸ್ವರೂಪವೇ. ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ, ಎಂದು ಗುಂಡಪ್ಪನವರು ಹೇಳುತ್ತಾರೆ.

ಆದರೆ ನಾವು ಯಾವುದನ್ನು ದೇವತೆ ಎಂದು ಕರೆಯುತ್ತೇವೆಯೋ,ಅವುಗಳು, ಆ ಪರಮ ಶಕ್ತಿಯು ಇಡೀ ಸೃಷ್ಟಿಯನ್ನು ನಿಯಂತ್ರಿಸಲು ಬೇರೆ ಬೇರೆ ರೂಪದಲ್ಲಿ ಇಂದ್ರ, ವರುಣ, ಅಗ್ನಿ, ವಾಯು, ದಿಕ್ಪಾಲಕರು ಎಂದು ಕರೆಸಿಕೊಳ್ಳುತ್ತ, ಈ ಜಗದ್ವ್ಯಾಪಾರವನ್ನು ನಡೆಸುತ್ತಿದೆ. ಹಾಗಾಗಿ ಇವರೆಲ್ಲ ಆ ಪರಮಶಕ್ತಿಯ ಅಧೀನದಲ್ಲಿರುವ ಮತ್ತು ಆದೇಶದಂತೆ ನಡೆಯುವವರು. ” ಭೀಷಾಸ್ಮಾದ್ ವಾತಃ ಪವತೆ, ಭೀಷೋದೇತಿ ಸೂರ್ಯಃ, ಭೀಷಾಸ್ಮಾದ್ ಅಗ್ನಿಸ್ಚೇ೦ದ್ರಶ್ಚ” ಎಂದು ವೇದ ಹೇಳುತ್ತದೆ. ಅಂದರೆ ಆ ಪರಮ ಶಕ್ತಿಯ ಅಧೀನದಲ್ಲಿರುವುದೇ ಇವುಗಳೆಲ್ಲ ಎಂದು ಅರ್ಥ. ಅಂತಹ ದೇವತೆಗಳು ತಮ್ಮ ಅಟ್ಟಹಾಸದಿಂದ, ತಮ್ಮ ಅಧಿಪತ್ಯದಿಂದ ಮತ್ತು ಆಧಿಕ್ಯದಿಂದ ಇರುವುದರಿಂದ, ಮನುಷ್ಯರು ಹೆದರಿ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಈ ದೇವತೆಗಳನ್ನು ಕುರಿತು ಭಕ್ತಿಯಿಂದ ಹುಯಿಲಿಡುತ್ತಿದ್ದಾರೋ ಏನೋ ಎಂಬ ಅರ್ಥದಲ್ಲಿ ” ನರಭಕ್ತಿಯೊರಲೋ” ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.

ಅಥವಾ ದೇವತೆಗಳು ತಮ್ಮ ದೈವೀ ಶಕ್ತಿಯನ್ನು ಮನುಷ್ಯರ ಮೇಲೆ, ಅವರನ್ನು ಪರೀಕ್ಷಿಸಲು ಮತ್ತು ಮನುಷ್ಯರು ತಮ್ಮ ಭಕ್ತಿಯ ಶಕ್ತಿಯಿಂದ ಈ ದೇವತೆಗಳನ್ನೊಲಿಸಿಕೊಳ್ಳಲು, ಒಬ್ಬರಿಗೊಬ್ಬರು ಪೈಪೋಟಿಮಾಡುತ್ತಾ ಇದ್ದರೋ ಎಂದು ಒಂದು ಶಂಕೆಯನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಎಲ್ಲರೂ ತಾವು ಆ ಪರಮಶಕ್ತಿಯಿಂದ ಸೃಷ್ಟಿಸಲ್ಪಟ್ಟು, ಸಲುಹಲ್ಪಟ್ಟು,ಅಸ್ತಿತ್ವದಲ್ಲಿದ್ದೇವೆಂಬ ಮೂಲ ಧರ್ಮವನ್ನೇ ಮರೆತಿಹರೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.

ಇಲ್ಲಿ ದೇವತೆಗಳನ್ನು ಪೂಜೆಮಾಡುವ ಪ್ರಕ್ರಿಯೆಯನ್ನು ವಿಮರ್ಶೆ ಮಾಡಿದ್ದಾರೆ, ಶ್ರೀ ಗುಂಡಪ್ಪನವರು. ನಾನಾ ದೇವತೆಗಳ ಪೂಜೆಯನ್ನು ವಿಮರ್ಶೆ ಮಾಡಿದ್ದಾರೆ. ಆದರೆ ವಿಮರ್ಶೆಯಷ್ಟೇ. ಅದು ಟೀಕೆಯಲ್ಲ. ಏಕೆಂದರೆ ಅನೇಕ ದೇವತಾ ಪೂಜೆಯಿಂದ ಏಕ ದೇವ ಪೂಜೆಗೆ ಹೋಗುವುದೇ ಆಧ್ಯಾತ್ಮ ಚಿಂತನೆಯ ಮತ್ತು ಪ್ರಯಾಣದ ಮೂಲ ಉದ್ದೇಶ್ಯ. ಹಲವಾರು ದೇವತೆಗಳನ್ನು ಪೂಜಿಸುವುದು ಪ್ರಾಥಮಿಕ ಹಂತ. ಏಕದೈವವನ್ನು ಪೂಜೆಮಾಡುವುದು,ಆಧ್ಯಾತ್ಮದ ಉನ್ನತ ಹಂತ. ಈ ಪೂಜೆಗಳು ಅದರೊಳಗೆ ವೈವಿಧ್ಯೆತೆ, ಮತ್ತು ಹಲ ದೇವತಾ ಪೂಜೆ ಮತ್ತು ಅಲ್ಲಿಂದ ಏಕ ದೈವದ ಆರಾಧನೆಯ ಕ್ರಮ ಇವೆಲ್ಲವನ್ನೂ ವಿಷದವಾಗಿ ತಿಳಿಯಬೇಕು. ನಾವು ಯಾವ ಸ್ಥರದಲ್ಲಿದ್ದೇವೆ ಎಂದು ನಮ್ಮನ್ನೇ ನಾವು ಪರೀಕ್ಷಿಸಿಕೊಳ್ಳಬೇಕು ಮತ್ತು ಆ ಪರರ್ದೈವದಿಂದ ನಿಯಮಿಸಲ್ಪಟ್ಟ ದೇವಾತಾ ಆರಾಧನೆಯ ಮೂಲಕ ಆ ಪರದೈವವನ್ನು ಅರಿಯುವುದರ ಪ್ರಯತ್ನ ಮಾಡಬೇಕು. ಅನೇಕದಿಂದ ಏಕಕ್ಕೆ ಹೋಗುವ ಮಾರ್ಗದಲ್ಲಿ ಪಯಣಿಸಿ ಪರಮಾರ್ಥವನ್ನು ಸಾಧಿಸಬೇಕು.

ರಸಧಾರೆ – 025

ಜೀವಗತಿಗೊಂದು ರೇಖಾಲೇಖವಿರಬೇಕು

ನಾವಿಕನಿಗಿರುವಂತೆ ದಿಕ್ಕುದಿನವೆಣಿಸೆ

ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?

ಆವುದೀ ಜಗಕಾದಿ ? – ಮಂಕುತಿಮ್ಮ

ಜೀವಗತಿಗೊಂದು ರೇಖಾ ಲೇಖವು ಇರಬೇಕು. ನಾವಿಕನಿಗೆ ಇರುವಂತೆ ದಿಕ್ಕು ದಿನವನು ಎಣಿಸೆ.

ಭಾವಿಸುವುದು ಎಂತೆ ಅದನು ಮೊದಲು ಕೊನೆ ತೋರದಿರೆ ಆವುದು ಈ ಜಗಕೆ ಆದಿ ಮಂಕುತಿಮ್ಮ.

ರೇಖಾ ಲೇಖ = ಒಂದು ಗೆರೆ ಅಥವಾ ನಿರ್ಧಿಷ್ಟ ಮಾರ್ಗ. ನಾವಿಕ = ಹಡಗ ನಡೆಸುವವ, ಎಂತೆ = ಹೇಗೆ

ಒಂದು ಹಡಗನ್ನು ನಡೆಸಲು ನಾವಿಕನಿಗೆ ಒಂದು ದಿಕ್ಸೂಚಿ ಇರುತ್ತದೆ. ಸುತ್ತಲೂ ಸಮುದ್ರ ಮಧ್ಯದಲ್ಲಿ ಹಡಗು. ತನ್ನ ಗಮ್ಯದ ಕಡೆಗೆ ಹೋಗಲು ಆ ನಾವಿಕನಿಗೆ ದಿಕ್ಕನ್ನು ತೋರಲು ಒಂದು ದಿಕ್ಸೂಚಿ ಬೇಕು. ಆ ದಿಕ್ಸೂಚಿಯ ಸೂಚನೆಯಂತೆ ನಾವಿಕನು ಮುಂದುವರೆಯುತ್ತಾನೆ. ಆಗ ಹಡಗು ಆ ದಿಕ್ಕಿನಲ್ಲಿ ನೇರ ಹೋಗುತ್ತದೆ. ಆದರೆ ಜೀವನದ ಗತಿಗೆ ದಿಕ್ಸೂಚಿ ಯಾವುದು, ಇಲ್ಲ . ಅಂಥಹ ಒಂದು ದಿಕ್ಸೂಚಿ ಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಜೀವನದ ಗತಿಗೆ ಒಂದು ನೇರ ನಡೆ ಇಲ್ಲ. ಆ ನೇರ ನಡೆ ಬೇಕಾದರೆ ಒಂದು ನೇರ ಗೆರೆ ಬೇಕು ಎನ್ನುತ್ತಾರೆ. ಹೌದು ಇಡೀ ಬದುಕಿಗೆ ಒಂದು ನಿರ್ಧಿಷ್ಟ ಗತಿ ಅಥವಾ ಒಂದು ನಿರ್ಧಿಷ್ಟ ಯಾನದ ದಾರಿ ಇಲ್ಲ.

ಒಟ್ಟಾರೆ ಎಲ್ಲರ ಜೀವನದ ಗತಿಯನ್ನೂ ಅವಲೋಕಿಸಿದರೆ, ಏರು ತಗ್ಗುಗಳು, ಏಳು ಬೀಳುಗಳು, ಸುಖ ದುಃಖಗಳು, ಒಂದೇ ರೀತಿ ಇರದ ಬಂಧ-ಸಂಬಂಧಗಳು. ಹೀಗೆ ಯಾವ ಆಯಾಮದಲ್ಲಿ ನೋಡಿದರೂ ಒಂದು ನಿರ್ಧಿಷ್ಟ ಗತಿ ಇಲ್ಲ. ಏಕೆ ಹೀಗೆ ಎಂದು ಮಂಥನ ಮಾಡಿದರೆ ನಮಗೆ ಕಾಣುವುದು ಯಾವುದೋ ಒಂದು ಅವ್ಯಕ್ತ ಶಕ್ತಿಯೇ ನಮ್ಮೆಲ್ಲರ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದೆ. ಏಕೆ ಹೀಗೆ, ಆವುದಾ ಶಕ್ತಿ ಎಂದು ಅನಾದಿಕಾಲದಿಂದಲೂ ಒಂದು ಜಿಜ್ಞಾಸೆ ನಡೆದೇ ಇದೆ. ಆದರೆ ಇನ್ನೂ ನಿರ್ಧಿಷ್ಟ ಉತ್ತರ ಸಿಕ್ಕಿಲ್ಲ. ಒಬ್ಬ ಬಡವ, ಒಬ್ಬ ಧನಿಕ, ಒಬ್ಬ ರೋಗಿ ಇನ್ನೊಬ್ಬ ನಿರೋಗಿ, ಒಬ್ಬ ಅಲ್ಪಾಯುಷಿ ಮತ್ತೊಬ್ಬ ಧೀರ್ಗಯುಷಿ, ಒಬಾ ಹೆಡ್ಡ ಮತ್ತೊಬ್ಬ ಅತಿ ಬುದ್ಧಿವಂತ, ಒಬ್ಬ ಸುಂದರ ಮತ್ತೊಬ್ಬ ಕುರೂಪಿ, ಹೀಗೆ ಹಲವಾರು ವೈವಿಧ್ಯಗಳಿಂದ ಕೂಡಿರುವುದೇ ಜೀವನ.

ಹೇಗಿರುವವರು ಹಾಗೆ ಇದ್ದು ಅವರ ಜೀವನ ಅದೇ ಗತಿಯಲ್ಲಿ ಅಂದರೆ ನೇರ ರೇಖೆಯಲ್ಲಿ ಮುಂದುವರೆಯುತ್ತದೆಯೇ? ಎಂದರೆ ಅದೂ ಇಲ್ಲ. ಎಲ್ಲವೂ ಬದಲಾಗುತ್ತದೆ, ಇಂದು ಇದ್ದಂತೆ ನಾಳೆ ಇರುವುದಿಲ್ಲ. ಎಲ್ಲವೂ ಕೆಲವೊಂದು ಬಾರಿ ಏರು ಪೇರು. ಏಕೆ ಹೀಗೆ? ಗೊತ್ತಿಲ್ಲ. ಆದರೂ ಮುಂದೆ ಹೋಗುತ್ತದೆ, ಒಂದು ಅಂತ್ಯವನ್ನು ಕಂಡು ಕೊಳ್ಳುತ್ತದೆ. ಯಾವುದೋ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಎಲ್ಲವೂ ನಿಘೂಡ. ಆ ನಿಘೂಡತೆಯನ್ನೇ ಎಲ್ಲರೂ ವಿಧಿ, ದೇವರು, ಭಾಗ್ಯ, ಅದೃಷ್ಟ ಹೀಗೆ ನಾನಾ ಹೆಸರುಗಳಿಂದ ಕರೆದರೂ. ಯಾರಿಗೂ ಅದು ಅರ್ಥವಾಗದಿದ್ದರೂ ಅದರ ಹಿಡಿತದಿಂದ ಬಿಡಿಸಿಕೊಳ್ಳಲಾಗದು.

ಪ್ರತಿಯೊಬ್ಬ ಜೀವಿಯೂ ತನ್ನ ಪೂರ್ವ ಕರ್ಮದ ಅನುಸಾರ ಅವನ ಜೀವನವನ್ನು ಅನುಭವಿಸುತ್ತಾನೆ, ಎಂದರು. ಆ ಪೂರ್ವಕರ್ಮವೂ ಅವನಿಗೆ ಅರ್ಥವಾಗುವುದಿಲ್ಲ. ಯಾವ ಪೂರ್ವ ಕರ್ಮದಿಂದ, ಇಂದಿನ ವಿಧ್ಯಮಾನ ಹೀಗೆ ನಡೆಯುತ್ತಿದೆ ಎಂದು ಅರ್ಥವಾಗುವುದಿಲ್ಲ. ಶುದ್ಧವಾಗಿ, ಪರಮಾತ್ಮನಿಂದ ಬಂದ ಆತ್ಮಕ್ಕೆ , ಈ ಪೂರ್ವಕರ್ಮದ ಸಂಚಯನ ಹೀಗೆ ಆಯ್ತು, ಎಂಬುದೇ ಒಂದು ನಿಘೂಢ. ಆ ಪರಮಾತ್ಮನ ಇಚ್ಛೆಯಂತೆ ಎಲ್ಲ ನಡೆಯುತ್ತದೆ ಎನ್ನುತ್ತಾರೆ. ಅವನ ಇಚ್ಚೆಯೆಂದರೆ ಏನು? ಅದು ಏಕೆ ಹೀಗಿರುತ್ತದೆ ಅದು ಬದಲಾಗುತ್ತಿದ್ದರೂ, ಆ ಬದಲಾವಣೆಗೆ ಕಾರಣವೇನು ಎಂದು ಅರ್ಥವಾಗುವುದಿಲ್ಲ. ಇದರ ಗುಟ್ಟನ್ನು ಚೇಧಿಸಲು, ಅನಾದಿಕಾಲದಿಂದಲೂ ಪ್ರಯತ್ನ ನಡೆಯುತ್ತಿದ್ದರೂ ಅದು ಏನು ಎನ್ನುವುದೂ ಸಹ ನಿಘೂಢ. ಇದರ ಮೊದಲು ಕೊನೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ಮಾನ್ಯ ಗುಂಡಪ್ಪನವರು ನಮ್ಮ ಮುಂದೆ ಒಂದು ಪ್ರಶ್ನೆ ಇಡುತ್ತಾರೆ.

ಮಾನ್ಯ ವಾಚಕರೆ, ಇದು ನಿಘೂಡ, ಆದರೆ ನಮ್ಮ ಭಾರತೀಯ ಚಿಂತಕರು ಅದಕ್ಕೆ ತಮ್ಮ ತಮ್ಮದೇ ಆದ ಪರಿಭಾಷೆ, ವಿವರಣೆ ಮತ್ತು ವ್ಯಾಖ್ಯಾನಗಳನ್ನು ನೀಡಿದ್ದರೂ ಯಾವುದೋ ನಿರ್ಧಿಷ್ಟವಿಲ್ಲ. ಆದರೆ ನಮಗೆ ಒಂದು ಗೊತ್ತು. ಯಾವುದು ನಿರ್ಧಿಷ್ಟವಲ್ಲವೋ ಅದನ್ನು ಆ ಪರಮಾತ್ಮನ ಇಚ್ಛೆ ಎಂದುಕೊಂಡು ಅವನಿಗೆ ಶರಣಾಗಿ, ಇದೆಲ್ಲದರ ಬಗ್ಗೆ ಚಿಂತಿಸದೆ, ಬಂದ ಜೀವನವನ್ನು ಸಂತೋಷದಿಂದ ತೃಪ್ತಿಯಿಂದ ಕಳೆದರೆ ಆ ಸಂತೋಷ, ಪ್ರೀತಿ, ಪ್ರೇಮ, ನಿಸ್ವಾರ್ಥತೆ, ತೃಪ್ತಿ, ಶ್ರದ್ಧೆ, ಭಕ್ತಿಗಳೇ ನಮ್ಮ ಜೀವನಕ್ಕೆ ಒಂದು ದಿಕ್ಸೂಚಿಯಾಗಿ ಒಂದು ನೆಮ್ಮದಿಯ ದಡಕ್ಕೆ ನಮ್ಮನ್ನು ಮುಟ್ಟಿಸಬಹುದು ಎಂದು ಆಶಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣ.

ಬಾಳಿನ ನಕಾಸೆ ರಸಧಾರೆ – 026

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |

ಇಷ್ಟ ಮೋಹಕ ದಿವ್ಯ ಗುಣಗಲೊಂದು ಕಡೆ ||

ಕಷ್ಟ ಭೀಭತ್ಸ ಘೋರಗಳಿನ್ನೊಂದುಕಡೆ |

ಕ್ಲಿಷ್ಟವೀ ಬ್ರಹ್ಮ ಕೃತಿ – ಮಂಕುತಿಮ್ಮ ||

ಸೃಷ್ಟಿಯ ಆಶಯವು ಅದು ಏನು ಅಸ್ಪಷ್ಟ ಸಂಶ್ಲಿಷ್ಟ ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ

ಕಷ್ಟ ಭೀಭತ್ಸ ಘೋರಗಳು ಇನ್ನೊಂದು ಕಡೆ ಕ್ಲಿಷ್ಟವೀ ಬ್ರಹ್ಮ ಕೃತಿ ಮಂಕುತಿಮ್ಮ

ಆಶಯ = ಉದ್ದೇಶ್ಯ, ಸಂಶ್ಲಿಷ್ಟ = ತೊಡಕಾದದ್ದು, ದಿವ್ಯ = ಸುಂದರ ಭೀಭತ್ಸ = ಭಯಂಕರ, ಘೋರ = ಕಷ್ಟಕರ, ಕ್ಲಿಷ್ಟ = ಬಿಡಿಸಲಾಗದ ಗಂಟು. ಬ್ರಹ್ಮ ಕೃತಿ = ಈ ಜಗತ್ತಿನ ಸೃಷ್ಟಿ.

ಆಹಾ ಎಂತಹ ವಿಷಯ! ಜಗತ್ತಿನ ಸೃಷ್ಟಿಯನ್ನು ವಿಶ್ಲೇಷಣೆ ಮಾಡುವಂಥಾ ವಿಚಾರ. ಈ ಸೃಷ್ಟಿಯಾಗುವುದಕ್ಕೆ ಉದ್ದೇಶ್ಯವು ಏನಿತ್ತು ಎಂದು ಯೋಚಿಸುತ್ತಾರೆ ಮಾನ್ಯ ಗುಂಡಪ್ಪನವರು. ಅದೊಂದು ಬ್ರಹ್ಮಗಂಟು. ಬಿಡಿಸಲಾಗದ್ದು. ಏಕೆಂದರೆ ಎಂತೆಂತಾ ಮಹಾ ಮಹಿಮರು ಈ ವಿಷಯದಲ್ಲಿ ಯೋಚನೆ ಜಿಜ್ಞಾಸೆ ತಪಸ್ಸು ಧ್ಯಾನ ಎಲ್ಲ ಮಾಡಿ ತಮಗೆ ತೋಚಿದ್ದನ್ನು ನಮಗೆ ಉಲ್ಲೇಖಿಸಿ ಕೊಟ್ಟಿದ್ದಾರೆ. ವೈಜ್ಞಾನಿಕ ಪರಿಭಾಷೆಗಳು ಬೇರೆ, ವೇದಾನ್ವಯ ಪರಿಭಾಷೆಗಳು ಬೇರೆ. ಸಿದ್ಧಾಂತಗಳು ಬೇರೆ , ನಂಬಿಕೆಗಳು ಬೇರೆ. ಆದರೆ ಎಲ್ಲೂ ಸಹಮತವಿಲ್ಲ. ನಾನು ಇಲ್ಲಿ ೯ನೆ ಕಗ್ಗಕ್ಕೆ ವಿವರಣೆ ನೀಡುವಾಗ ಕೆಲವು ಸೃಷ್ಟಿಯ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಿದ್ದೆ. ಅಂದು ಇಡೀ ವಿಶ್ವದ ಸೂಕ್ಷ್ಮ ವಿಚಾರ ಮಂಡಿಸಿದ್ದೆ. ಎಷ್ಟು ಅಗಾಧ, ಎಷ್ಟು ವಿಸ್ತಾರ ನಮ್ಮ ಯೋಚನೆಗೆ ನಿಲುಕದಷ್ಟು, ಎಂದು.

ಆದರೆ ಯಾವ ಶಕ್ತಿ ಈ ಪ್ರಪಂಚವನ್ನು ಆಗ ಮಾಡಿಸಿತೋ ಅದಕ್ಕೆ ಹೀಗೆ ಮಾಡುವುದಕ್ಕೆ ಯಾವ ಉದ್ದೇಶ್ಯವಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲವೂ ಆ ಪರಮಾತ್ಮನ ಸಂಕಲ್ಪದಿಂದಲೇ ಆದದ್ದು ಎನ್ನುತ್ತಾರೆ. ಆಪರಮಾತ್ಮನ ಲೀಲಾವಿನೋದವೆನ್ನುತ್ತಾರೆ ಆದರೆ ಹಾಗೆ ಸಂಕಲ್ಪ ಬರಲು ಕಾರಣವೇನು, ಈ ಲೀಲೆಗೆ ಕಾರಣವೇನು ಎಂದು ಗೊತ್ತಿಲ್ಲ!!!. ಇದು ಅರ್ಥವಾಗದ ವಿಷಯವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಇಡೀ ಸೃಷ್ಟಿಯು ಬಹಳ ವೈವಿಧ್ಯಮಯ. ಒಂದುಕಡೆ ಸುಂದರ ಮತ್ತೊಂದು ಕಡೆ ಬೀಭತ್ಸ.ನಮಗೆ ನಮ್ಮ ಭೂಮಿಯ ವಿಷಯ ಮತ್ತು ನಾವಿರುವ ಸೌರಮಂಡಲದ ಸ್ವಲ್ಪ ವಿಷಯ ಮಾತ್ರ ಗೊತ್ತು ಅದರಾಚಿನ ವಿಷಯ ಕೆಲವು ವಿಜ್ಞಾನಿಗಳಿಗೆ ಅಲ್ಪ ಮಾತ್ರ ಗೊತ್ತಿರಬಹುದು. ಆದರೆ ಇಡೀ ಬ್ರಹ್ಮಾಂಡದ ವಿಚಾರ ನಮ್ಮ ಊಹೆಗೂ ನಿಲುಕದ್ದು. ಅದರ ವಿಚಾರ ಬಿಡಿ, ನಾವು ನಮ್ಮ ಭುವಿಯನ್ನು ತೆಗೆದುಕೊಳ್ಳೋಣ.

ನಮ್ಮ ಈ ಭುವಿಯ ಸುಂದರತೆಯ ಭಾಗವನ್ನು ನೋಡಿದರೆ ಅಲ್ಲಿ ನಮಗೆ ಸಿಗುವುದು, ಅಪ್ರತಿಮ ಬುದ್ಧಿಶಕ್ತಿಯ ಮನುಷ್ಯ, ಎಷ್ಟೊಂದು ಆವಿಷ್ಕಾರಗಳು, ಸಂಗೀತ, ಭಾಷೆ, ಕಲೆ, ವಿಜ್ಞಾನ, ಸಂಸ್ಕೃತಿ ಸಾಹಿತ್ಯದಂತಹ ಎಲ್ಲ ರೀತಿಯ ವೈವಿಧ್ಯತೆಯಿಂದ ಕೂಡಿ, ಇಡೀ ಸೃಷ್ಟಿಯನ್ನು ತನ್ನ ಉಪಯೋಗಕ್ಕೆ ಸೂಕ್ತವಾಗಿಸಿಕೊಳ್ಳಲು ನಿರಂತರ ಪ್ರಯತ್ನ. ಸಾಕಷ್ಟು ಯಶಸ್ಸೂ ಸಹ. ಹಾಗೆ ಮಾಡುವ ಪ್ರಯತ್ನದಲ್ಲಿ ನಿಸರ್ಗದ ದುರುಪಯೋಗವಾಗಿರುವುದೊಂದನ್ನು ಬಿಟ್ಟರೆ. ಇನ್ನು ಅನ್ಯ ಪ್ರಾಣಿಗಳು, ಒಂದೊಂದೂ ಒಂದೊಂದು ರೀತಿ. ಹಲವಾರು ಬಣ್ಣಗಳು ಅದರೊಳಗೂ ಜಿರಾಫೆ, ಮೊಸಳೆ, ಹಾವು, ಹೇಸರಕತ್ತೆ, ಜಿಂಕೆ, ಹುಲಿ ಸಿಂಹ, ಚಿರತೆ ಮುಂತಾದ ಪ್ರಾಣಿಗಳನ್ನು ನೋಡಿದಾಗ, ಏನು ವಿನ್ಯಾಸ, ಏನು ರಂಗಿನಾಟ, ಆಹಾ, ಆ ಪರಮಾತ್ಮ ಎಷ್ಟು “ಒಳ್ಳೆಯ ಚಿತ್ರಕಾರ”ನೆನ್ನದ ಮನಸ್ಸಿರದು. ಇನ್ನು ಜಲಗರ್ಭದಲ್ಲಿರುವ ಆ ಚಿತ್ರ ವಿಚಿತ್ರ ಮೀನು ಮತ್ತು ಇತರ ಜಲಚರಗಳನ್ನು ಕಂಡಾಗ, ಅಬ್ಬಾ ಎಂತಹ ಸೃಷ್ಟಿ, ಎಂದು ಉದ್ಘಾರ ತೆಗೆಯದವನು ಅರಸಿಕನೆ ಸರಿ. ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳಿಗೆ ಒಂದೇ ಬಣ್ಣ. ಇನ್ನು ಪಕ್ಷಿ, ಕೀಟ, ಚಿಟ್ಟೆಗಳ ಪ್ರಪಂಚದಲ್ಲಿ ನುಸುಳಿದರೆ ಈ ಚಿಟ್ಟೆಗಳು ಮತ್ತು ಕೆಲವು ಚಿಟ್ಟೆಗಳನ್ನು ನೋಡಿದರೆ ಆ ಬಣ್ಣಗಳು ಆ ರಂಗೋಲೆಯಂತಹ ಚಿತ್ತಾರಗಳು ಆಹಾ! ಏನು ಸುಂದರ. ಆದರೆ ಅಯ್ಯೋ ನಾವು ಎಲ್ಲ ನ್ಯೂನತೆ ಗಳನ್ನೂ ಹೊಂದಿರುವ ಮನುಷ್ಯರಾಗಿ ಹುಟ್ಟಿಬಿಟ್ಟೆವಲ್ಲ, ಎಂದು ಒಂದು ಕ್ಷಣ ಅನಿಸಿಯೇ ಅನಿಸುತ್ತದೆ. ಗಿಡ ಮರಮರಗಳು, ಹೂ ಹಣ್ಣುಗಳ ಪ್ರಪಂಚವೇ ಬೇರೆ. ವರ್ಣಿಸಲು ಪದಗಳೇ ಸಾಲದು. ಇದು ಈ ಸೃಷ್ಟಿಯ ಸುಂದರತೆಯ ಒಂದು ಮುಖ .

ಇನ್ನು ಭೀಭತ್ಸದ, ಭೀಕರತೆಯ ಆಯಾಮವನ್ನು ನೋಡಿದರೆ, ರುದ್ರ ಭೀಕರತೆಯನ್ನು ಕಾಣಬಹುದು. ಸೃಷ್ಟಿಯ ಅಂದಗೆಡಿಸುವ ಮತ್ತು ಪ್ರಾಣ ಹಾನಿಮಾಡುವ ಧಾರಾಕಾರವಾಗಿ ಸುರಿದು ಪ್ರವಾಹವನ್ನು ಸೃಷ್ಟಿಸುವ ಮಳೆ, ಧೂಳಿನಿಂದ ಕೂಡಿದ ಬಿರುಗಾಳಿ, ಕಾಳ್ಗಿಚ್ಚು, ಭೂಕಂಪಗಳು, ಸುನಾಮಿಗಳು, ಅಗ್ನಿ ಪರ್ವತಗಳು, ಅನ್ಯ ಪ್ರಾಣಿಗಳಿಗೆ ಪ್ರಾಣ ಭಯವನ್ನುಂಟುಮಾಡುವ ಭಯಂಕರ ಪ್ರಾಣಿಗಳು, ಹೀಗೆ ಹತ್ತು ಹಲಾವರು ಭೀಕರಗಳೂ ಈ ಜಗತ್ತಿನಲ್ಲಿ ಇವೆ.

ಇದಲ್ಲೆದೆ ಪ್ರೀತಿ ಪ್ರೇಮಗಳು, ಸ್ನೇಹ ಸೌಹಾರ್ದಗಳು, ಒಲುಮೆ ಔದಾರ್ಯಗಳು, ಧರ್ಮ ದಯಾ-ದಾಕ್ಷಿಣ್ಯಗಳಂತಹ ಸುಂದರಭಾವಗಳು ಮನುಷ್ಯರಲ್ಲೇ ಅಲ್ಲ ಹಲವಾರು ಪ್ರಾಣಿ ಪಕ್ಷಿಗಳಲ್ಲೂ ನಮಗೆ ಕಾಣಸಿಗುವುದು. ಇದು ಭಾವನೆಗಳ ಸುಂದರತೆಯಾದರೆ,ಇನ್ನು ಕೋಪ ದ್ವೇಷ ರೋಷ ಅಸೂಯೆ, ಅಹಂಕಾರ, ದುರಾಸೆ, ಮೋಹ, ಲಂಪಟತನ, ಅವ್ಯವಹಾರ, ವ್ಯಭಿಚಾರ ಇಂತಹ ದುರ್ಗುಣಗಳನ್ನು ಹೊಂದಿರುವ ಮನುಷ್ಯರೇ ಅಧಿಕ. ಪ್ರಾಣಿಗಳಲ್ಲೂ ಈ ರೀತಿಯ ಭಾವಗಳು ಇದ್ದರೂ ಅವು ಮಾತ್ರ ಅಸ್ತಿತ್ವದ ಹೋರಾಟಕ್ಕೆ ಮಾತ್ರ ಸೀಮಿತ. ಆದರೆ ಮನುಷ್ಯ ಮಾತ್ರ ಅನಿಯಮಿತ ದುಷ್ಟ. ಒಂದು ಕಾಡಿನಲ್ಲಿ ನೀವು ಒಬ್ಬರೇ ಹೋಗುವಾಗ, ಒಂದು ಹುಲಿಯೋ ಸಿಂಹವೋ ಎದುರು ಬಂದರೆ ನೀವು ಹೆದರಬೇಕಾಗಿಲ್ಲ. ಏಕೆಂದರೆ ಅದು ಹಸಿದಿದ್ದರೆ ಮಾತ್ರ ನಿಮ್ಮ ಮೇಲೆರೆಗುವುದು. ಆದರೆ ಒಬ್ಬ ಮನುಷ್ಯ ಎದುರಿಗೆ ಬಂದರೆ, ನೀವು ಖಂಡಿತ ಹೆದರಿ ನೀರಾಗುತ್ತೀರಿ . ಏಕೆಂದರೆ, ಮಾನವನಿಗೆ ಅನ್ಯರ ಮೇಲೆರಗುವುದಕ್ಕೆ ಕಾರಣವೇ ಬೇಕಿಲ್ಲ.

ಇಂತಹ ವೈವಿಧ್ಯಮಯ ಜಗತ್ತನ್ನು ಸೃಜಿಸಲು ಆ ಪರಮಾತ್ಮನಿಗೆ ಏನು ಕಾರಣವಿತ್ತು. ಏನೋ ಇದ್ದಿರಬಹುದು ನಮಗೆ ಗೊತ್ತಿಲ್ಲ, ಆದರೆ ಮೇಲೆ ಹೇಳಿದ ಎಲ್ಲವನ್ನೂ ಒಳಗೊಂಡ ಸೃಷ್ಟಿಯನ್ನು ಏಕೆ ಸೃಷ್ಟಿಸಿದ ಎನ್ನುವುದು ಒಂದು ಚಿದಂಬರ ರಹಸ್ಯ. ಯಾರಿಗೂ ಅರ್ಥವಾಗದು ಎನ್ನುವ ಅರ್ಥದಲ್ಲಿ ಶ್ರೀ ಗುಂಡಪ್ಪನವರು ಈ ಕಗ್ಗವನ್ನು ರಚಿಸಿದ್ದಾರೆ. ಅರ್ಥವಾಗುವುದಿಲ್ಲಪ್ಪ, ಹೌದು ಅದಕ್ಕೆ ನಾವು ಎನು ಮಾಡಬೇಕು? ಎಂದರೆ ಒಳ್ಳೆಯದನ್ನು ಅರಾದಿಸೋಣ, ಅಭಿನಂದಿಸೋಣ, ಸೃಷ್ಟಿಕರ್ತನಿಗೆ ವಂದಿಸಿ ಕೃತಜ್ಞತೆ ಸಲ್ಲಿಸೋಣ, ಒಳ್ಳೆಯದನ್ನು ಮತ್ತು ಸುಂದರವಾದದ್ದನ್ನು ಕಾಪಾಡೋಣ, ಕೆಟ್ಟದ್ದು ಅನಿವಾರ್ಯವಾದರೆ, ವಿಧಿಯೆಂದು ಅನುಭವಿಸೋಣ, ಸಾಧ್ಯವಾದರೆ ನಿವಾರ್ಯವನ್ನು ನಿವಾರಿಸೋಣ, ಮನುಷ್ಯ ಪ್ರಯತ್ನವನ್ನು ಸುಮುಖವಾಗಿ ತೆಗೆದುಕೊಂಡು ಹೋಗೋಣ ಎನ್ನವ ಆಶಯವನ್ನು ಹೊತ್ತು ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ ಮಿತ್ರರೇ?

ಬಾಳ-ಭೂಪಟ ರಸಧಾರೆ – 027

ಧರೆಯ ಬದುಕೇನದರ ಗುರಿಯೇನು ಫಲವೇನು? |

ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||

ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |

ನರನು ಸಾದಿಪುದೇನು ? – ಮಂಕು ತಿಮ್ಮ ||

ಧರೆ = ಭೂಮಿ, ಬಳಸು = ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ = ಪ್ರಾಣಿ, ಖಗ = ಪಕ್ಷಿ

ಧರೆಯ ಬದುಕು ಏನಾದರ ಗುರಿಯೇನು, ಫಲವೇನು ಬರಿ ಬಳಸು ಬರಿ ಪರಿಭ್ರಮಣೆ

ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗ ಖಗಕಿಂತ ನರನು ಸಾದಿಪುದೇನು ಮಂಕು ತಿಮ್ಮ.

ಈ ಭೂಮಿಯಲ್ಲಿ ಜನಿಸಿದ ನಾವು ಮತ್ತು ನಮ್ಮ ಬದುಕು ಇದರ ಗುರಿಯೇನು? ಇದಕ್ಕಿರುವ ಪ್ರಯೋಜನವೇನು? ಸುಮ್ಮನೆ ಸುತ್ತಾಟ ಕೇವಲ ಪ್ರದಕ್ಷಿಣೆ ಬಂದ ಹಾಗೆ. ಕೇವಲ ಹೊಟ್ಟೆ ಪಾಡಿನ ಜೀವನ. ಪ್ರಾಣಿ ಪಕ್ಷಿಗಳಲ್ಲೂ ಸಹ ಈ ರೀತಿಯ ಹೊಟ್ಟೆ ಪಾಡಿನ ಜೀವನ ಮಾಡುತ್ತವೆ. ನಾವು ಅದಕ್ಕಿ೦ತ ಉತ್ತಮರೇನು ಅಲ್ಲ. ಇದೆಲ್ಲದರಿಂದ ಮನುಷ್ಯರು ಸಾಧಿಸುವುದದೇನು ? ಎಂದು ಈ ಕಗ್ಗದಲ್ಲಿ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.

ಇದೊಂದು ಸುಂದರವಾದ ಕಗ್ಗ. ಅಂತರ್ಯದಲ್ಲಿ ಅಡಗಿರುವ ಭಾವ ಬೇಸರದ, ನಿರಾಸೆಯ ಭಾವ. “ಮಾನವ ಜನ್ಮ ದೊಡ್ಡದು” ಎಂದು ದಾಸರೂ ಸಹ ಹೇಳಿದರು. ಬೇರೆ ಎಲ್ಲ ಪ್ರಾಣಿಗಳಿಗಿಂತಲೂ ನಾವೇನು ಭಿನ್ನ. ಆ ಪ್ರಾಣಿಗಳೂ ಹೊಟ್ಟೆ ಹೊರೆಯುತ್ತವೆ, ಮಕ್ಕಳನ್ನು ಹುಟ್ಟಿಸುತ್ತವೆ, ತಮ್ಮ ಇರುವಿಕೆಗೆ ಹೋರಾಡುತ್ತವೆ ಮತ್ತೆ ಸಾಯುತ್ತವೆ. ನಾವು ಅಂದರೆ ಮನುಷ್ಯರೂ ಸಹ, ಇವುಗಳನ್ನು ಮಾಡುತ್ತೇವೆ. ಆದರೆ ಮಾನವರಾದ, ನಾವು ಉತ್ತಮ ಜೀವಿಗಳು ಎಂದು ಕರೆದು ಕೊಳ್ಳಲು ನಮ್ಮ ಸಾಧನೆಯೇನು? ಎಂದು ಪ್ರಶ್ನಿಸುತ್ತಾ, ಒಂದು ಅವಲೋಕನಕ್ಕೆ ಆಸ್ಪದ ಮಾಡಿಕೊಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅನಾದಿ ಕಾಲದ ಮಾನವನ ಮತ್ತು ಪ್ರಾಣಿಗಳ ಬದುಕುವ ಶೈಲಿಯನ್ನು ಅವಲೋಕಿಸಿದರೆ ನಮಗೆ ವೇದ್ಯವಾಗುವುದು ಒಂದು ವಿಷಯ. ಪ್ರಾಣಿಗಳ ಜೀವನದಲ್ಲಿ ಏರು ಪೇರು ಇಲ್ಲ. ಮನುಷ್ಯನ ದುರಾಸೆಯಿಂದ ಉಂಟಾದ ಅಭಾವ ಅನಾನುಕೂಲಗಳನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಇಲ್ಲ. ಆದರೆ ಮನುಷ್ಯನೋ! ಬಹಳ ಬದಲಾಗಿದ್ದಾನೆ. ಪ್ರಗತಿಯ ಪಥದಲ್ಲಿರುವವನು, ಪುರೋಗಾಮಿ, ಎಂದೆಲ್ಲ ಹೊಗಳಿಕೆಗೆ ಪಾತ್ರನಾದ ಈ ಮನುಷ್ಯನ ಬದಲಾದ ಸ್ಥಿತಿಯನ್ನು ಗಮನಿಸಿದರೆ ನಮಗೆ ಕಾಣುವುದು ಒಂದು ಬೇರೆಯೇ ಚಿತ್ರ, ಬಹಳ ವಿಚಿತ್ರ.

ಉತ್ತರೋತ್ತರ ಬದಲಾವಣೆಗೆ ಪ್ರಗತಿ ಎಂದು ಹೆಸರು. ” ತಮಸೋಮಾ ಜ್ಯೋತಿರ್ಗಮಯ” ಕತ್ತಲೆಯಿಂದ ಬೆಳಕಿಗೆ. ” ಅಸತೋಮಾ ಸದ್ಗಮಯ” ಅಸತ್ತಿನಿಂದ ಸತ್ತಿನೆಡೆಗೆ,ನಮ್ಮ ನಡಿಗೆಯಾದರೆ ಅಂದು ಸಕಾರಾತ್ಮಕವಾದ ಬೆಳವಣಿಗೆ ಮತ್ತು ಪ್ರಗತಿಪರ ಬದಲಾವಣೆ? ಆದರೆ ಅಂತಹ ಬದಲಾವಣೆಯಾಗಿದೆಯೇ? ಖಂಡಿತ ಇಲ್ಲ.

ವಿಜ್ಞಾನದದಲ್ಲಿ ಪ್ರಗತಿ ? ಅಣು ಬಾಂಬು, ಮುಂತಾದ ಮಾರಕಾಸ್ತ್ರಗಳ ತಯಾರಿಕೆ, ನಾಶಕ್ಕೆ ನಾಂದಿ. ವೇಷ ಭೂಷಣದಲ್ಲಿ ಪ್ರಗತಿ ? ಮೈ ಮುಚ್ಚದೆ ಬಿಚ್ಚುವುದೇ ಹೆಚ್ಚು. ಭಾಷೆಯಲ್ಲಿ ಪ್ರಗತಿ ? ನಮಗೆ ಯಾವುದೇ ಭಾಷೆಯೂ ಸರಿಯಾಗಿ ಆಡಲು, ಓದಲು ಬರೆಯಲು ಬರುವುದಿಲ್ಲ. ಸಮಾಜದಲ್ಲಿ ಪ್ರಗತಿ ? ಸೌಹಾರ್ಧ ಭಾವ, ಸ್ನೇಹ ಪ್ರೀತಿ ಪ್ರೇಮ, ಅನ್ಯೋನ್ಯ ಜೀವನ, ಒಟ್ಟು ಕುಟುಂಬಗಳ ಸಹಜೀವನ ಶೈಲಿ, ಹಿರಿಯರಲ್ಲಿ ಗೌರವ, ಮಕ್ಕಳಲ್ಲಿ ಮಮತೆ, ಕೆಲಸದಲ್ಲಿ ಶ್ರದ್ಧೆ, ದೈವದಲ್ಲಿ ಭಕ್ತಿ, ಮುಂತಾದ್ಯಾವುದಕ್ಕೂ ಮೂರು ಕಾಸಿನ ಬೆಲೆ ಇಲ್ಲದೆ, ಮಾತ್ರ ಸ್ವಾರ್ಥ, ದ್ವೇಷ, ಲಾಲಸೆ, ಲಂಪಟತನ, ಮೋಸ, ದಾರಿದ್ಯ, ಭೌಧ್ಧಿಕ ದಿವಾಳಿತನ, ಮೌಲ್ಯಗಳ ದಿವಾಳಿತನ. ಇದು ಪ್ರಗತಿಯೇ? ಇನ್ನು ವಿದ್ಯಾಭ್ಯಾಸದಲ್ಲಿ ಪ್ರಗತಿ ? ಸತ್ವ ಹೀನ, ಸತ್ಯ ರಹಿತ, ಆಳವಾದ ಅಭ್ಯಾಸವಿಲ್ಲದ ,, ವ್ಯಕ್ತಿತ್ವವನ್ನು ರೂಪಿಸಿವಂಥಾ ಅಭ್ಯಾಸಕ್ರಮವಿಲ್ಲದ , ಕೇವಲ ಹೊಟ್ಟೆಪಾಡಿಗಾಗಿ, ವಿದ್ಯೆ ಇಲ್ಲದಿದ್ದರೂ ವಿದ್ಯಾವಂತರೆನ್ನಿಸಿಕೊಳ್ಳುವ, ವ್ಯಕ್ತಿತ್ವವಿಲ್ಲದಿದ್ದರೂ ವ್ಯಕ್ತಿಗಳೆನಿಸಿಕೊಳ್ಳುವವರನ್ನು ತಯಾರುಮಾಡುವುದಕ್ಕೆ, ಪ್ರಗತಿ ಎಂದು ಹೆಸರೇ ?

ಇನ್ನು ಆರ್ಥಿಕವಾಗಿ ನಾವು ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದೇವೆಂದು ಕೊಚ್ಚಿಕೊಳ್ಳುವ ನಮ್ಮ ಆರ್ಥಿಕ ತಜ್ಞರ ಅವಿವೇಕಕ್ಕೆ ಏನು ಹೇಳುವ? ಸಸ್ಯಶ್ಯಾಮಲವಾಗಿರುತ್ತಿದ್ದ ನಮ್ಮ ಹಳ್ಳಿಗಲೆಲ್ಲವೂ ಇಂದು ಬರಡು ಬೆಂಗಾಡಾಗಿದೆ. ಹಳ್ಳಿಯ ಜನರೆಲ್ಲರೂ ಪಟ್ಟಣಕ್ಕೆ ವಲಸೆ. ಬಡವ ಬಲ್ಲಿದರ ನಡುವಿನ ಅಂತರ ಇನ್ನಷ್ಟು ವಿಸ್ತಾರ. ಇಡೀ ಸಮುದಾಯದ ಸಂಪತ್ತನ್ನು ಅಧಿಕಾರ ಬಲದಿಂದ, ವಶೀಲಿಯ ಬಲದಿಂದ ಕೇವಲ ಕೆಲವೇ ವ್ಯಕ್ತಿಗಳು ತಮ್ಮದಾಗಿಸಿಕೊಳ್ಳುವ ಹುನ್ನಾರ. ಯಾರಿಗೂ ಒಟ್ಟು ಸಮಾಜದ ಆರ್ಥಿಕ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಪ್ರಜೆಗಳಿಂದ ಆಯ್ಕೆಯಾಗಿ, ಪ್ರಜಾಪಾಲನೆ ಮಾಡಲು ಅಧಿಕಾರವನ್ನು ಸ್ವೀಕರಿಸಿದ ದಿನದಿಂದಲೇ ಪ್ರಜೆಗಳ ಪೀಡನೆ ಶುರುವಾಗುವುದು ಪ್ರಗತಿಯೇ?

ಭಾಷೆ, ಜಾತಿ, ಭೂಮಿ, ನೀರು, ದೇವರು, ಪಂಗಡ, ಮುಂತಾದವುಗಳಿಗಾಗಿ ನಿರಂತರ ಹೊಡೆದಾಟ, ಯುದ್ಧ.ಇಂದು ಪ್ರಗತಿಯೇ? ಯಾವುದೇ ವಿಷಯವನ್ನು ನೋಡಿದರೂ ಸತ್ವಹೀನತೆ ಸತ್ಯಹೀನತೆ ಇದು ಪ್ರಗತಿಯೇ. ? ಹಾಗಾಗಿ ನರರ ಅಂದರೆ ನಾವು ಮನುಷ್ಯರ ಸಾಧನೆ ಏನೂ ಇಲ್ಲ. ನಾವು ಯಾವುದನ್ನು ಇಂದು ಸಾಧನೆ ಎಂದು ಕರೆಯುತ್ತಿದ್ದೆವೋ ಅದು ಸಾಧನೆಯಲ್ಲ. ಅಧೋಗತಿ. ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ, ಇಲ್ಲ ಬೀದಿಯಲ್ಲಿ ಬಿಕ್ಷೆ ಬೇಡಲು ಅಟ್ಟುವ ಸಮಾಜ ನಮ್ಮದಾಗಿರಲಿಲ್ಲ . ಇಂದು ಹಾಗಾಗಿದೆ ಎಂದರೆ ಇದು ಪ್ರಗತಿಯೇ ವಾಚಕರೆ ?

ಇದನ್ನೆಲ್ಲ ಕಂಡು ಹೊಟ್ಟೆಯುರಿಯಬೇಕು, ಕೋಪಬರಬೇಕು, ಇದು ಸರಿಯಿಲ್ಲ, ಇದು ಬದಲಾಗಬೇಕು, ಸತ್ಯದ, ಸತ್ವದ, ತತ್ವದ, ಶ್ರದ್ದೆಯ, ಪ್ರೀತಿ ಪ್ರೇಮಗಳ, ಸ್ನೇಹ ಸೌಹಾರ್ಧತೆಗಳ ಪುನರುತ್ಥಾನವಾಗಬೇಕು. ಮುಂದಿನ ಪೀಳಿಗೆಗೆ ಒಂದು ಸುಂದರವಾದ ಸಮಾಜದ ನಿರ್ಮಾಣವಾಗಬೇಕು. ಹಾಗಾಗದಿದ್ದಲ್ಲಿ ನಮ್ಮೆಲ್ಲರ ಸರ್ವಾಂಗೀಣ ಅಂದರೆ ಸಮಗ್ರ ನಾಶ ಖಂಡಿತ. ನಮ್ಮೆಲ್ಲರ ಪತನ ಖಂಡಿತ. ರಿಪೇರಿಯ ಕೆಲಸ ತ್ವರಿತವಾಗಿ ಶುರುವಾಗಬೇಕು. ಹಾಗೆ ಮಾಡದಿದ್ದಲ್ಲಿ, ವೃಣ ಗುಣವಾಗದಿದ್ದಲ್ಲಿ, ಕಾಲನ್ನೇ ತೆಗೆಯಬೇಕಾದ ಪರಿಸ್ಥಿತಿ ಬರಬಹುದು.

ಹಾಗಾಗಿ ವಾಚಕರೆ, ನಮ್ಮ ನಮ್ಮ ವೃತ್ತಗಳನ್ನು ಬದಲಾಯಿಸಲು ನಾವು ಪ್ರಯತ್ನಿಸಿ ಆ ವೃತ್ತವನ್ನು ದೊಡ್ಡದಾಗಿಸಿ, ನಮ್ಮ ಕಾರ್ಯಕ್ಷೇತ್ರವನ್ನು ಇಡೀ ಸಮಾಜಕ್ಕೆ ವಿಸ್ತರಿಸಿ, ಈ ರೋಗಿಷ್ಟ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ ದಿಕ್ಕಿನಲ್ಲಿ ಸಾಗುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?

ರಸಧಾರೆ – 028

ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ

ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ

ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ

ತೋರುವುದಾವುದು ದಿಟವೋ? – ಮಂಕುತಿಮ್ಮ

ಕಾರಣಮೆನಿಪ್ಪವೊಲು = ಕಾರಣ + ವೆನಿಪ್ಪ + ವೊಲು, ತೋರ್ಪುದೊಂದು = ತೋರ್ಪುದು + ಒಂದು, ಕಟುಕತೆಗಳೆನಿಪುದಿನ್ನೊಂದು = ಕಟುಕತೆಗಳೇ + ಎನಿಪುದು + ಇನ್ನೊಂದು, ತೋರುವುದಾವುದೋ = ತೋರುವುದು + ಅದು + ಆವುದೋ

ಕಾರುಣ್ಯ = ಅನುಕಂಪ, ಸರಸ = ವಿನೋದ, ವೆನಿಪ್ಪ = ಎನ್ನಿಸುವ, ವೊಲು = ತರಹೆ / ರೀತಿ, ಕಾರ್ಪಣ್ಯ = ಬಡತನ, ಕಟುಕತೆಗಳು = ಕಷ್ಟ ಮತ್ತು ಕ್ಲಿಷ್ಟತೆಗಳು, ಎನಿಪುದು = ತೋರುವುದು. ದಿಟ = ಸತ್ಯ, ಚಣ = ಕ್ಷಣ.

ಸಮಗ್ರ ಜೀವನದ ಚಿತ್ರದಲ್ಲಿ,ಈ ಜಗದ್ವ್ಯಾಪಾರಕ್ಕೆ, ಒಂದು ಬಾರಿ ಎನಗೆ, ಮಾನವರ ನಡುವಿನ ಕರುಣೆ, ವಿನೋದ ಸೌಂದರ್ಯ ಮುಂತಾದ ಸುಭಾವಗಳೇ ಕಾರಣವೆನಿಸುತ್ತದೆ. ಮತ್ತೆ ಕೆಲವು ಬಾರಿ ಜೀವನದ ಕಷ್ಟ ದುಃಖಗಳು, ಬಡತನ ಮತ್ತು ಬಡತನದಿಂದ ಕೂಡಿದ ಬದುಕಿನ ಕ್ಲಿಷ್ಟತೆಯಿಂದ ಕೂಡಿದ ಕಷ್ಟಗಳೇ ಕಾರಣವೆಂದು ಅನಿಸುತ್ತದೆ, ಇದು ಸತ್ಯವೋ ಅಥವಾ ಅದು ಸತ್ಯವೋ ಎಂದು ಅರಿಯದಾಗಿದೆ ಎಂದು ಒಂದು ಡೋಲಾಯಮಾನವಾದ ಭಾವನೆ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆದರೆ, ಅವರು ಅಂದು ಕಂಡಂತೆ ಮತ್ತು ಮಾನವನ ಅಸ್ಥಿತ್ವದ ಇತಿಹಾಸದ ಎಲ್ಲ ಪುಟಗಳಲ್ಲೂ ನಮಗೆ ಈ ಎರಡೂ ಮುಖಗಳು ಕಾಣುತ್ತವೆ. ಪುರಾಣಗಳಲ್ಲಿಯೂ ಅಂದಿನ ಕೆಲವು ಪಾತ್ರಗಳು ಆನಂದವನ್ನು ಅನುಭವಿಸುವುದೂ ಮತ್ತೆ ಕೆಲವು ಪಾತ್ರಗಳು ಅತೀವ ಸಂಕಷ್ಟಗಳಿಗೆ ಸಿಕ್ಕು ತೊಳಲಾಡುವುದನ್ನು ನಾವು ಕಾಣಬಹುದು. ಇಂದಿಗೂ ಅದೇ ಪರಿಸ್ಥಿತಿ. ಒಂದಿಷ್ಟೂ ಬದಲಾವಣೆಯೇ ಇಲ್ಲ. ಏಕೆ ಹೀಗೆ? ಎಂದು ಆಲೋಚಿಸಿದರೆ, ನಮಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಗುವುದಿಲ್ಲ. ಹಾಗಾಗಿ ಸತ್ಯ ಇದೋ – ಅದೋ ಎನ್ನುವ ದ್ವಂದ್ವದ ಭಾವ ನಮ್ಮಲ್ಲೂ ಬರಬಹುದು. ಅದೇ ಭಾವ ಮಾನ್ಯ ಡಿ.ವಿ.ಜಿ.ಯವರಿಗೂ ಬಂದಿತ್ತು, ಈ ಕಗ್ಗದ ರೂಪದಲ್ಲಿ.

ಇರಲಿ ಕಷ್ಟ ಸುಖಗಳು ಮನುಷ್ಯರಿಗಷ್ಟೇ ಅಲ್ಲ, ಸೃಷ್ಟಿಯ ಸಕಲ ಚರಾಚರಗಳಿಗೂ, ಪ್ರಮಾಣ ಭೇಧವಿದ್ದರೂ ಇದ್ದೇ ಇರುವಂಥಹದು ಸರ್ವವೇದ್ಯ ಮತ್ತು ಅನಿವಾರ್ಯ. ಆದರೆ ಇಲ್ಲಿ ನೋಡಬೇಕಾದ ವಿಷಯವೇನೆಂದರೆ, ನಮ್ಮ ನಮ್ಮ ಜೀವನಗಳಲ್ಲಿ ಕಷ್ಟ ಸುಖಗಳು ಏಕೆ ಮತ್ತು ಹೇಗೆ ಬರುತ್ತವೆ? ಎಂದು. ಅದಕ್ಕೂ ಮೊದಲು ಕಷ್ಟವೆಂದರೇನು? ಸುಖವೆಂದರೇನು? ಎಂದು ವಿಶ್ಲೇಸಿದರೆ ನಮ್ಮ ಅರಿವಿಗೆ ಬರುವುದು ಹೀಗೆ. “ನಮಗೆ “ಮಮ”ಕಾರವಿದೆ. ಈ “ಮಮ”ಕಾರಕ್ಕೆ ಹಿತವಾದದ್ದು ಸುಖ ಮತ್ತು ಅಹಿತವಾದದ್ದು ದುಃಖ. ಅಂದರೆ ಕಷ್ಟ ಸುಖ ಎನ್ನುವುದು ಬಹಳಷ್ಟು ಬಾರಿ ಕೇವಲ ಒಂದು ಭಾವನೆ ಮಾತ್ರ. ಹಾಗಾಗಿ ಮಮಕಾರವನ್ನು ತೊರೆದರೆ, ಜೀವಿ ಮಾನಸಿಕವಾಗಿ ತಟಸ್ಥನಾಗಿ ಸುಖದುಃಖಗಳನ್ನು ಸಮಭಾವದಿಂದ ತೆಗೆದುಕೊಳ್ಳಬಹುದು” ಎನ್ನುವ ಒಂದು ಸಿದ್ಧಾಂತವಿದೆ. ಭಗವದ್ಗೀತೆಯಲ್ಲಿ” ಸ್ಥಿತಪ್ರಜ್ಞನೆಂದರೆ ಯಾರು” ಎಂದು ಅರ್ಜುನ ಕೇಳುವ ಪ್ರಶ್ನೆಗೆ ಶ್ರೀ ಕೃಷ್ಣ ಉತ್ತರಿಸಿದ್ದೂ ಇದನ್ನೇ. ಇದು ತತ್ವ ಶಾಸ್ತ್ರ( ಫಿಲಾಸಫಿ ). ಹೇಳುವುದು(ಪರರಿಗೆ) ಸುಲಭ, ಆದರೆ ಪಾಲಿಸುವುದು ಸುಲಭವಲ್ಲ.

ನಮಗೆ ಈ ಪ್ರಪಂಚದಲ್ಲಿ ನಮ್ಮ ಅಸ್ತಿತ್ವಕ್ಕೆ ಅವಶ್ಯವಾದ ಕೆಲವು ಮೂಲಭೂತ ಅವಶ್ಯಕತೆಗಳಿವೆ. ಅವುಗಳ ಅಭಾವವೇ ನಮ್ಮ ಅನಿವಾರ್ಯ ಕಷ್ಟಕ್ಕೆ ಕಾರಣ. ಅದರ ಪೂರೈಕೆ ಸಮರ್ಪಕವಾಗಿ ಆದಾಗ, ನಮಗೆ ನೆಮ್ಮದಿ ಎಂದು ಅಂದುಕೊಳ್ಳುತ್ತೇವೆ ಮತ್ತು ಅವುಗಳನ್ನು ಪೂರೈಸಿಕೊಳ್ಳಲು ಹೋರಾಡುತ್ತೇವೆ. ಆದರೆ ಅಷ್ಟಕ್ಕೇ ನಮಗೆ ನೆಮ್ಮದಿ ಸಿಗುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ” ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ, ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ” ಎನ್ನುವುದು ಶಿವ ಶರಣರ ಉಕ್ತಿ. ಎಷ್ಟು ಸತ್ಯ. ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ನಮ್ಮ ಪರಿಮಿತ ಸಾಮರ್ಥ್ಯದಲ್ಲಿ ಮತ್ತು ಯೋಗ್ಯತೆಯಲ್ಲಿ ನಾವು ಏನನ್ನು ಪಡೆಯಬಹುದೋ ಅದನ್ನು ಪಡೆದು ಸಂತುಷ್ಟರಾದರೆ ಸುಖ ಮತ್ತು ನೆಮ್ಮದಿ. ಆದರೆ ನಮಗೆ ನಮ್ಮ “ಯೋಗ್ಯತೆಯ ಮತ್ತು ಸಾಮರ್ಥ್ಯದ” ಮಿತಿಯ ಅರಿವೇ ಇಲ್ಲ. ಹಾಗಾಗಿ ನಮ್ಮ ಆಸೆಗಳಿಗೂ ಕೊನೆಯಿಲ್ಲ. ನಮ್ಮ ಕಷ್ಟಗಳು ಮತ್ತು ದುಃಖಗಳು ಎಂದಿಗೂ ಮುಗಿಯುವುದೇ ಇಲ್ಲ. ನಮಗೆ ನಮ್ಮ “ಯೋಗ್ಯತೆಯ ಮತ್ತು ಸಾಮರ್ಥ್ಯದ” ಮಿತಿಯ ಅರಿವು ಏಕಿರುವುದಿಲ್ಲವೆಂದರೆ, ” ಅಹಂಕಾರ” ನಾನು, ನನಗೆ, ನನ್ನ, ಎನ್ನುವ ಭಾವ ನಮ್ಮಲ್ಲಿ ತುಂಬಿತುಳುಕುತ್ತಿದೆ. ಇನ್ನು ಮಿತಿಯನ್ನು ಅರಿಯುವ ಪ್ರಯತ್ನವೂ ಇಲ್ಲ. ಹಾಗಿದ್ದಮೇಲೆ ಇನ್ನೇನು, ಈ ಜೀವನದ ಜಂಜಾಟದಲ್ಲಿ ತೊಳಲಾಡದೆ ಬೇರೆ ದಾರಿಯೇ ಇಲ್ಲ. ಈ ” ಅಹಂಕಾರ”ದಿಂದ ಮತ್ತೆಲ್ಲ ದುರ್ಭಾವಗಳೂ ನಮ್ಮೊಳಗೇ ನುಗ್ಗಿ ನಮ್ಮನ್ನು ಈ ಜೀವನದ “ಆಸೆ – ಅಭಾವಗಳ” ವಿಷ ವೃತ್ತದಲ್ಲಿ ನೂಕಿ ಅದರಿಂದ ಹೊರಗೆ ಬರುವ ಮಾರ್ಗವನ್ನು ಕಾಣದೆ ತೊಳಲಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. ” ಅಯ್ಯೋ ಎಂತಹ ದೌರ್ಭಾಗ್ಯ” ವೆಂದು ನಮ್ಮ ಸ್ಥಿತಿಗೆ ನಾವೇ ಕೊರಗುವಂತೆ ಮರುಗುವಂತೆ ಮಾಡುತ್ತದೆ.

ಅಹಂಕಾರವನ್ನು ಬಿಟ್ಟರೆ ನೆಮ್ಮದಿ ಸುಖ. ಆದರೆ ಈ ಸುಖವೆಂದರೇನು? ನಮ್ಮ “ಮಮ”ಕಾರಕ್ಕೆ ಹಿತವಾದದ್ದು ಸುಖ. ಏನುಬೇಕೋ ಅದು ಸಿಕ್ಕರೆ ಸುಖವೆಂದು ನಾವು ಅಂದುಕೊಂಡಿದ್ದೇವೆ. ಆದರೆ ಅದು ಸುಳ್ಳು. ಒಂದು ವಸ್ತುವನ್ನು ಆಸೆಪಟ್ಟು ಪಡೆದುಕೊಂಡು ಆನಂದಪಡುವುದು ಸುಖವಲ್ಲ. ಏಕೆಂದರೆ ಆ ವಸ್ತು ನಮ್ಮನ್ನು ಯಾವ ಯಾವ ರೀತಿಯ ಕಷ್ಟದ ಸಂಕೋಲೆಗಳಿಗೆ ತಳ್ಳುತ್ತದೋ ಎಂಬುದರ ಅರಿವಿಲ್ಲದೆಯೇ, ಅದನ್ನು ಪಡೆದುಕೊಂಡು ತಾತ್ಕಾಲಿಕವಾಗಿ ನಾವು ಆನಂದ ಪಡೆದೆವು ಎಂದು ಅಂದುಕೊಳ್ಳುತ್ತೇವೆ. ಅದು ಬಾರೀ ಭ್ರಮೆ. ಹಾಗಾದರೆ ಸುಖ – ದುಃಖಗಳೆಂಬುದು ಕೇವಲ ಭ್ರಮೆಯಂದಾದರೆ ಅದರ ಹಿಂದೆ ಮನುಷ್ಯ ಏಕೆ ಇಷ್ಟೊಂದು ಪರದಾಡುತ್ತಾನೆ?ಎಂದರೆ, ಕೇವಲ ಅಜ್ಞಾನದಿಂದ. ವಸ್ತುವಿಷಯಗಳ ಪರಿಚಯ, ಪೂರ್ವಾಪರಗಳ ವಿವೇಚನೆ ಸರಿಯಾಗಿ ಆದಲ್ಲಿ, ತೃಪ್ತಿಯ ಒಂದು ಭಾವ ಬಂದಾಗ, ಸುಖ ದುಃಖಗಳನ್ನು ಸಮವಾಗಿ ತೆಗೆದುಕೊಳ್ಳಲು ಮನಸ್ಸಿಗೆ ಸಾಮರ್ಥ್ಯ ಮತ್ತು ಶಕ್ತಿ ಎರಡೂ ಬಂದು ನೆಮ್ಮದಿ ಸಿಗುತ್ತದೆ.

ವಾಚಕರೆ, ಎಲ್ಲಿಯವರೆಗೆ, ನಮಗೆ ಈ ಪ್ರಪಂಚದ ಅಂಟು ಇದೆಯೋ ಅಲ್ಲಿಯತನಕ ಈ ಸುಖ ದುಃಖದ ಸಂಕೋಲೆಯಿಂದ ಮುಕ್ತಿ ಇಲ್ಲ. ಆದರೆ ಸಹನೆ, ಸಹಿಷ್ಣುತೆ, ತೃಪ್ತಿಯಂತಹ ಬಾವಗಳನ್ನು ನಮ್ಮ ಸ್ವಾಭಾವವಾಗಿಸಿಕೊಂಡರೆ, ಸುಖ ದುಃಖಗಳನ್ನು ಸಮನಾಗಿ, ಅಂದರೆ ಸುಖದಲ್ಲಿ ಉಬ್ಬದೆ ಮತ್ತು ದುಃಖದಲ್ಲಿ ಕುಗ್ಗದೆ, ತೆಗೆದುಕೊಳ್ಳುವ ಶಕ್ತಿ ನಮಗೆ ಬಂದು ನಾವು ನೆಮ್ಮದಿಯಾಗಿರಬಹುದು.

ರಸಧಾರೆ – 029

ಎರಡುಮಿರಬಹುದು ದಿಟ, ಶಿವರುದ್ರನೆಲೆ ಬೊಮ್ಮ |

ಕರವೊಂದರಲಿ ವೇಣು, ಶಂಖವೊಂದರಲಿ ||

ಬೆರಳ್ಗೆಳೆರಡಾನುಮಿರೆ ಕೈ ಚಿಟಿಕೆಯಾಡುವುದು |

ಒರುವನಾಡುವುದೆಂತು ? ಮಂಕುತಿಮ್ಮ ||

ಎರಡು೦ ಇರಬಹುದು ದಿಟ ಶಿವರುದ್ರ ನೆಲೆ ಬೊಮ್ಮ ಕರವೊಂದರಲಿ ವೇಣು ಶಂಖವೊಂದರಲಿ ಬೆರಳ್ಗಳು ಎರಡು ಆನುಂ ಇರೆ ಕೈ ಚಿಟಿಕೆ ಆಡುವುದು ಒರುವನು ಆಡುವುದೆಂತು ಮಂಕುತಿಮ್ಮ

ದಿಟ = ಸತ್ಯ, ಬೊಮ್ಮ = ಪರಬ್ರಹ್ಮ, ಪರಮಾತ್ಮ, ಕರ = ಕೈ, ವೇಣು = ಕೊಳಲು, ಆನುಮಿರೆ = ಒಂದಕ್ಕೊಂದು ಸೇರಿದರೆ . ಒರುವ = ಒಬ್ಬ ಅಥವಾ ಒಂದು.

ಪರಮಾತ್ಮನಿಗೆ, ಶಿವನೆಂಬ ಶಾಂತ ಸುಂದರ ಮತ್ತು ಶುಭಕರವಾದ ರೂಪವೂ ಇರಬಹುದು ಅಥವಾ ರುದ್ರನೆಂದು ಕರೆಯಲ್ಪಡುವ ಭಯಂಕರ ರೂಪವೂ ಇರಬಹುದು ಅಥವಾ ಸರ್ವರನೂ ತನ್ನೆಡೆಗೆ ಆಕರ್ಷಿಸುವ, ನಯನ ಮನೋಹರ, ವೇಣುಗಾನಲೋಲನ ರೂಪವೂ ಇರಬಹುದು ಅಥವಾ ರಣ ಕಹಳೆಗೆ ದನಿಗೂಡಿಸಿ ಯುದ್ಧಕ್ಕೆ ಆಹ್ವಾನವೀಯುವ ಪಾಂಚಜನ್ಯವನ್ನೂದುವ ಕ್ಷಾತ್ರ ರೂಪವೂ ಇರಬಹುದು. ಎರಡು ರೂಪಗಳೂ ಸತ್ಯವಿರಬಹುದು. ಏಕೆಂದರೆ ಕೈ ಚಿಟಿಕೆಯಾಡಿಸಲು, ಎರಡು ಬೆರಳುಗಳೂ ಬೇಕು. ಒಂದೇ ಬೆರಳಲ್ಲಿ ಚಿಟಿಕೆಯಾಗುವುದೇ ಎನ್ನುತ್ತಾರೆ ಶ್ರೀ ಡಿ.ವಿ.ಜಿ ಯವರು ಈ ಕಗ್ಗದಲ್ಲಿ

ಇಡೀ ಸೃಷ್ಟಿಯೇ ಪರಮಾತ್ಮನ ಹಲವು ರೂಪಗಳ ಬಿಂಬವೇ. ಒಂದು ಅದ್ಭುತ ಪರಮ ಶಕ್ತಿಯೇ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು. ಸಂಸ್ಕಾರ, ಶ್ರದ್ಧೆ, ವಿದ್ಯೆ, ಕಲೆ, ಸಂಗೀತ, ಸಾಹಿತ್ಯ, ಪ್ರೇಮ, ಪ್ರೀತಿ , ಸ್ನೇಹ, ಕರುಣೆ, ಸೌಹಾರ್ದದಂತಹ ಸುಂದರ ಮಾನವೀಯ ಭಾವಗಳು, ಪ್ರಕೃತಿ ಮತ್ತದರ ಉಪಯುಕ್ತ ರೂಪಗಳಾದ, ಮಳೆ, ಬೆಳೆ, ಹೊಸ ಚಿಗುರು, ಹೂವು ಹಣ್ಣು,ಮನಸ್ಸಿಗೆ ಆಹ್ಲಾದವೀಯುವ, ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡ, ನದಿ, ಝರಿ, ವೈವಿಧ್ಯಮಯ ಸಸ್ಯ ಜಗತ್ತು ಮತ್ತು ಪ್ರಾಣಿಜಗತ್ತು ಎಲ್ಲವೂ ಆ ಪರಮ ಶಕ್ತಿಯ ಒಂದು ರೂಪವಾದರೆ, ಕುಯುಕ್ತಿ, ದ್ವೇಷ, ಮೋಸ, ಕೊಲೆ, ದರೋಡೆ, ಯುದ್ಧ, ರಕ್ತಪಾತ, ಹಸಿವು, ದಾರಿದ್ರ್ಯ, ನೋವು ಭಯೋತ್ಪಾದನೆಯಂತಹ ಅ ಮಾನವೀಯ ಭಾವಗಳು, ಅತಿವೃಷ್ಟಿ, ಅನಾವೃಷ್ಟಿ,ಅಗ್ನಿಪರ್ವತಗಳು, ಸುನಾಮಿ, ಭೂಕಂಪಗಳಂತಹ ಪ್ರಕೃತಿಯ ಕ್ರೂರತೆಯ ಇನ್ನೊಂದು ರೂಪ. ಇವೆಲ್ಲವೂ ಪರಮಾತ್ಮನ ಪ್ರೇರಣೆಯಿಂದಲೇ ನಡೆಯುತ್ತೆ ಎಂದರೆ, ಈ ಎರಡೂ ಮುಖಗಳು ಆ ಪರಮಾತ್ಮನ ಮುಖವೇ ಅಲ್ಲವೇ? ಎರಡು ರೂಪಗಳಿಗೂ ಆ ಪರಮ ಶಕ್ತಿಯೇ ಪ್ರೇರಕವಲ್ಲವೇ?

ಈ ಎರಡೂ ಮುಖಗಳ ಪರಿಚಯವನ್ನು ಮಾಡಿಸಿದ ಘಟನೆಗಳ ಉಲ್ಲೇಖ ನಮ್ಮಲ್ಲಿ ಹೇರಳವಾಗಿ ಸಿಗುತ್ತದೆ. ಭಕ್ತಿಗೆ ಮೆಚ್ಚಿ ಕಾರಣ ಜನ್ಮವೆತ್ತಿದ ಮಹಾನ್ ಭಕ್ತರಾವಣನಿಗೆ ವರಕೊಟ್ಟ ಶಿವನ ಶಾಂತ ರೂಪ. ಅದೇ ರಾವಣನನ್ನು ಯುದ್ಧದಲ್ಲಿ ಕೊಂದು ಮೋಕ್ಷವನ್ನು ಕರುಣಿಸಿದ ರಾಮನ ರುದ್ರ ರೂಪ. ಪರಶಿವನ ಸ್ತ್ರೀ ರೂಪವಾದ ಶಕ್ತಿದೇವತೆಯು, ತನ್ನ ಇಚ್ಚಾಮಾತ್ರದಿಂದಲೇ ಸೃಷ್ಟಿ ಸ್ಥತಿ ಲಯಗಳನ್ನು ಮಾಡತಕ್ಕ ಶಕ್ತಿ ಸಂಪನ್ನಳಾದರೂ, ಅಧರ್ಮಿಯಾದ ಮಹಿಷಾಸುರನನ್ನು ಕೊಲ್ಲಲು ರುದ್ರರೂಪ ತಾಳಿ ತನ್ನ ಆಯುಧಗಳನ್ನು ಉಪಯೋಗಿಸಿ ಅವನನ್ನು ಹತ ಮಾಡಿದ ರುದ್ರ ರೂಪ. ಆ ರುದ್ರತೆಯಲ್ಲೂ, ತನ್ನ ಆಯುಧಗಳ ಸ್ಪರ್ಶದಿಂದ ಅವನ ಪಾಪಗಳನ್ನೆಲ್ಲ ನಾಶಮಾಡಿ ಅವನಿಗೆ ಮುಕ್ತಿಯನ್ನು ನೀಡಿದ ಕರುಣಾಮಯ ತಾಯ ರೂಪ. ಶಬರಿ, ಭೀಷ್ಮ ಜಟಾಯು, ಪ್ರಹ್ಲಾದ, ದ್ರುವ ಇಂತಹವರಿಗೆ ಪ್ರೇಮದಿಂದ ಮುಕ್ತಿ. ಹಿರಣ್ಯಾಕ್ಷ, ಹಿರಣ್ಯಕಶಿಪು, ಪೂತನೆ, ಕಂಸ, ಚಾಣೂರ, ಮುಷ್ಟಿಕ, ಪೂತನ, ಶಿಶುಪಾಲ, ಪೌಂಡ್ರಕ ವಾಸುದೇವ, ಜರಾಸಂದ, ದಂತವಕ್ತ್ರ, ಮುಂತಾದವರಿಗೆ ಉಗ್ರ ರೂಪದಿ ಮುಕ್ತಿ, ಹೀಗೆ ಹತ್ತು ಹಲವಾರು ಪ್ರಸಂಗಗಳು ನಮಗೆ ಆ ಪರಮ ಶಕ್ತಿಯ ಎರಡೂ ರೂಪಗಳನ್ನು ಪರಿಚಯ ಮಾಡುತ್ತದೆ.

ಪ್ರಸಕ್ತ ಜಗತ್ತಿನಲ್ಲೂ ಸಹ ಇಂಥಹ ಭಿನ್ನ ರೂಪಗಳನ್ನು ನಾವು ಕಾಣುತ್ತೇವೆ. ಪರಸ್ಪರ ಸ್ನೇಹಭಾವ, ಉಪಕಾರ ಬುದ್ಧಿ, ಪ್ರೀತಿ, ಪ್ರೇಮ, ಕರುಣೆಯಂತಹ ಸಕಾರಾತ್ಮಕ ಭಾವಗಳೂ, ದುರ್ಬುದ್ಧಿ, ದುರ್ಭಾವ, ದ್ವೇಷ, ಅಸೂಯೆ, ಕ್ರೌರ್ಯದಂತಹ ನಕಾರಾತ್ಮಕ ಭಾವಗಳು ಒಂದರ ಪಕ್ಕದಲ್ಲಿ ಇನ್ನೊಂದೆಂಬಂತೆ ನಮ್ಮ ಸಮಾಜದಲ್ಲಿ ನಾವು ಕಾಣಬಹುದು. ಅಷ್ಟೇ ಏಕೆ ವಾಚಕರೆ ಒಂದೇ ವ್ಯಕ್ತಿಯಲ್ಲೇ ಇಂತಹ ಎರಡು ಮುಖಗಳನ್ನೂ ನಾವು ಕಾಣುವುದಿಲ್ಲವೇ. ಒಬ್ಬನೇ ವ್ಯಕ್ತಿ ಕೆಲವರಿಗೆ ಒಳ್ಳೆಯವನಾಗಿಯೂ, ಕೆಲವರಿಗೆ ದುಷ್ಟನಾಗಿಯೂ ತೋರುವುದಿಲ್ಲವೇ. ನಮ್ಮ ಮನಸ್ಸುಗಳಲ್ಲೇ ಈ ರೀತಿಯ ದ್ವಿ ಭಾವಗಳ ಗುಚ್ಚವೆ ಇಲ್ಲವೇ? ಇಂತಹ ದ್ವಿಭಾವಯುಕ್ತವೆ ಜೀವನ. ಎರಡೂ ಇರಬೇಕು ಜಗದ್ವ್ಯಾಪಾರಕ್ಕೆ. ಎಂದಿಗೂ ಎಲ್ಲರೂ ಎಲ್ಲಕಾಲಕ್ಕೂ ಒಳ್ಳೆಯವರಾಗಿಯೂ ಅಥವಾ ಎಲ್ಲ ಕಾಲಕ್ಕೂ ಕೆಟ್ಟವರಾಗಿಯೂ ಇರುವುದಿಲ್ಲ. ಇವೆರಡರ ಸಮ್ಮಿಶ್ರ ರೂಪವೇ ಈ ಜಗದ್ವ್ಯಾಪಾರ. ಹೇಗೆ ಒಂದು ಬೆರಳಲ್ಲಿ ಚಿಟಿಕೆ ಹಾಕಲಾಗುವುದಿಲ್ಲವೋ, ಹೇಗೆ ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗುವುದಿಲ್ಲವೋ, ಹಾಗೆ ಯಾವುದೋ ಒಂದರಿಂದಲೇ, ಈ ಜಗತ್ತಿಲ್ಲ.ಇದೇ ಈ ಕಗ್ಗದ ಆಂತರ್ಯ ಭಾವ.

ಒಂದು ಮನುಷ್ಯನಿಗೆ ಹೇಗೆ ಅಸತ್ತಿನಿದ ಸತ್ತಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ದುಃಖದಿಂದ ನೆಮ್ಮದಿಯೆಡೆಗೆ ಹೋಗಲು ಸಾಧ್ಯ ಉಂಟೋ ಹಾಗೆಯೇ ಇದರ ವಿರುದ್ಧ ದಿಕ್ಕಿನಲ್ಲಿ ಹೋಗಲೂಸಹ ಸಾಧ್ಯ ಉಂಟು. ಒಟ್ಟು ಸಮುದಾಯದ ಸಾಮೂಹಿಕ ಇಚ್ಚಾ ಶಕ್ತಿಯ ಮೇಲೆ ಆ ಸಮಾಜದ ಆಗುಹೋಗುಗಳು ನಿರ್ಭರವಾಗಿವೆ. ನಾವೂ ಸಹ ನಮ್ಮ ಸಮಾಜದ ಸಮಗ್ರ ವಿಶ್ಲೇಷಣೆ ಮಾಡಿ ನಾವು ಎಲ್ಲಿದ್ದೇವೆ ಎಲ್ಲಿಗೆ ಹೋಗಬೇಕು ಎಂದು ಧೃಢ ನಿಶ್ಚಯ ಮಾಡಿದರೆ, ಎಂದೋ ಒಂದು ದಿನ ಸಮಾಜದ ಸಮೃದ್ಧ ಸಂಪನ್ನ ಶಾಂತ ರೂಪವನ್ನು ಕಾಣಬಹುದು.

ಸತ್ಯಾನ್ವೇಷಣೆ ರಸಧಾರೆ – 030

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯೆಯೆನ್ನುವೊಡೆ

ಸಂಬಂಧವಿಲ್ಲವೇನು ವಿಷಯಯುಗಕೆ?

ನಮ್ಮ ಕಣ್ಮನಸುಗಳೇ ನಮಗೆ ಸಟೆ ಪೇಳುವೊಡೆ

ನೆಮ್ಮುವುದದಾರನೋ ? ಮಂಕು ತಿಮ್ಮ

ಮಿಥ್ಯೆಯೆನ್ನುವೊಡೆ = ಮಿಥ್ಯೆ + ಎನ್ನುವೊಡೆ, ಕಣ್ಮನಸುಗಳೇ = ಕಣ್ಣು + ಮನಸ್ಸುಗಳೇ, ನೆಮ್ಮುವುದದಾರನೋ = ನೆಮ್ಮುವುದು + ಅದು + ಯಾರನೋ

ಬ್ರಹ್ಮ = ಸೃಷ್ಟಿಕರ್ತ, ಪರಮಾತ್ಮ, ಸೃಷ್ಟಿ = ಈ ಜಗತ್ತು, ಮಿಥ್ಯೆ = ಅಸ್ತ್ಯವಾದದ್ದು, ಎನ್ನುವೊಡೆ = ಎಂದರೆ, ವಿಷಯಯುಗ = ಎರಡು ವಿಷಯಗಳು, ಸಟೆ = ಸುಳ್ಳು, ನೆಮ್ಮುದು = ನಂಬುವುದು.

ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವುದಾದರೆ ಈ ಜಗತ್ತು ಮತ್ತು ಅದನ್ನು ಸೃಷ್ಟಿಮಾಡಿದ ಆ ಪರ ಬ್ರಹ್ಮನಿಗೂ ಯಾವುದೇ ಸಂಬಂಧವಿಲ್ಲವೇನು? ನಮ್ಮ ಕಣ್ಣು ಮನಸ್ಸುಗಳೇ ನಮಗೆ ಅಸತ್ಯವನ್ನು ಹೇಳುವುದಾದರೆ ನಂಬುವುದು ಯಾರನ್ನು ಎಂದು, ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕುರಿತಾದಂತ ಒಂದು ಅದ್ಭುತ ವಿಷಯವನ್ನು ನಮ್ಮ ಮುಂದಿಡುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಕಗ್ಗದ ರೂಪದಲ್ಲಿ.

ಆ ಪರಮ ಶಕ್ತಿಯೇ ಈ ಸೃಷ್ಟಿಗೆ ಮೂಲ. ತನ್ನ ಇಚ್ಚಾ ಶಕ್ತಿಯಿಂದಲೇ ಇಡೀ ಬ್ರಹ್ಮಾಂಡವನ್ನು ಸೃಜಿಸಿದ ಆ ಪರಮಾತ್ಮ ಎಂದು ಪುರಾಣಗಳು ಹೇಳುತ್ತವೆ. ಆ ಪರಬ್ರಹ್ಮ ಸತ್ಯವೆಂದಮೇಲೆ, ಈ ಜಗದ್ವ್ಯಾಪರವನ್ನು, ಎಂದರೆ ಹಗಲು ರಾತ್ರಿಗಳು, ಋತುಮಾನಗಳು, ಮಳೆಗಳು ಬೆಳೆಗಳು, ಜೀವಿಗಳ ಹುಟ್ಟುಸಾವಿನ ಪ್ರಕ್ರಿಯೆಗಳು, ಹೀಗೆ ಎಲ್ಲವೂ ಅ ಪರಮಾತ್ಮನ ಅಧೀನದಲ್ಲಿದೆಯೆಂದರೆ,ಆ ಪರಮ ವಸ್ತುವಿಗೂ ಮತ್ತು ಅದು ಸೃಜಿಸಿದ ಈ ಸೃಷ್ಟಿಗೂ ಒಂದು ಅವಿನಾಭಾವ ಸಂಬಂಧವಿರಬೇಕಲ್ಲವೇ? ಅವನ ಸೃಷ್ಟಿಯೂ ಸತ್ಯವಾಗಿರಬೇಕಲ್ಲವೇ. ಆದರೆ “ಜಗತ್ ಮಿಥ್ಯ” ಎನ್ನುವ ಒಂದು ತತ್ವ ಪ್ರತಿಪಾದನೆಯೂ ಇದೆ. ಆದರೆ ನಮ್ಮ ಕಣ್ಣಿಗೆ ಕಾಣುತ್ತದಲ್ಲ!!!! ಹಾಗೆ ಕಣ್ಣಿಗೆ ಕಾಣುವುದನ್ನು ನಾವು ಅಸತ್ಯ ಎಂದು ಹೇಗೆ ನಂಬುವುದು. ಇದರಲ್ಲಿ ಯಾವುದನ್ನು ನಂಬುವುದು ಎಂದು ಒಂದು ಗಹನವಾದ ವಿಚಾರವನ್ನು ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸಿದ್ದಾರೆ.

ಸತ್ಯವೆಂದರೇನು? ಸಿದ್ಧಾಂತ ಪ್ರತಿಪಾದಕರ ಪ್ರಕಾರ, ಯಾವುದು ನಿತ್ಯವೂ ಅದು ಸತ್ಯ. ನಿತ್ಯವೆಂದರೆ ನಿರಂತರವಾಗಿರುವುದು. ಅಂದರೆ ಸದಾಕಾಲ ಬದಲಾಗದೆ ಹಾಗೆ ಇರುವುದು. ಹೌದು ಆ ಅರ್ಥದಲ್ಲಿ ಈ ಜಗತ್ತು ಕೇವಲ ಮಿಥ್ಯೆ ಅಥವಾ ಭ್ರಮೆ. ಈಗ ಕಂಡದ್ದು ಇನ್ನೊಂದು ಕ್ಷಣಕ್ಕೆ ಇಲ್ಲ. ಹಾಗೆ ನೋಡಿದರೆ ಪರಮಾತ್ಮಶಕ್ತಿಯನ್ನು ಬಿಟ್ಟರೆ, ಮಿಕ್ಕ ಎಲ್ಲಕ್ಕೂ ಒಂದು ಕಾಲ ಉಂಟು, ಆಮೆಗೆ ೩೫೦ವರ್ಷ,ಆನೆಗೆ ೧೮೫, ಮನುಷ್ಯನಿಗೆ ೧೦೦ ಆದರೆ ಇರುವೆಗೆ ೫ ದಿನ, ಸೊಳ್ಳೆಗೆ ೩ ದಿನ. ಯಾವುದೂ ಶಾಶ್ವತವಲ್ಲ. ಪುರಾಣಗಳ ಪ್ರಕಾರ, ಬ್ರಹ್ಮ ಇಂದ್ರ ಮತ್ತು ಅವನ ಸಹಚರರಾದ ದಿಕ್ಪಾಲಕರು ಅಷ್ಟವಸುಗಳು, ಇವರೆಲ್ಲರೂ ಕೇವಲ ನಿಯಮಿತ ಅಧಿಕಾರಿಗಳು. ( appointed officers ) ಪರಮಾತ್ಮನ ಆದೇಶದ ಮೇರೆಗೆ ಜಗತ್ತನ್ನು ನಿಯಂತ್ರಿಸುವ ಇವರುಗಳಿಗೂ ಒಂದು ಕಾಲವೆಂದು ಉಂಟು ಹಾಗಾಗಿ ಅವರೂ ಸಹ ನಿತ್ಯರಲ್ಲದ ಕಾರಣ ಅವರನ್ನು ಸತ್ಯವಲ್ಲವೆಂದು ಪರಿಗಣಿಸಬೇಕಾಗುತ್ತದೆ, ಅಲ್ಲವೇ?

ಇಂದು ನಮಗೆ ಕಾಣುವುದು, ನಮ್ಮ ಅನುಭವಕ್ಕೆ ಬರುವುದು, ನಮ್ಮ ಸಂಪರ್ಕಕ್ಕೆ ಬರುವುದು ಎಲ್ಲವೂ ನಮಗೆ ಇಂದಿಗೆ ಸತ್ಯ. ಅಲ್ಲದಿದ್ದರೆ, ಅದು ಬರೀ ಭ್ರಮೆಯಾದರೆ ನಮ್ಮ ಅನುಭವಗಳು ಸುಳ್ಳೇ?. ಸಾಧ್ಯವಿಲ್ಲ. ವೇದಾಂತದ ಪ್ರಕಾರ ಹಾಗಿರಬಹುದು ಆದರೆ ವಾಸ್ತವಿಕ ಬದುಕಿನಲ್ಲಿ ಆ ರೀತಿಯ ಭಾವನೆಗಳು ಜೀವನದಲ್ಲಿ ಉತ್ಸಾಹವನ್ನು ಕುಗ್ಗಿಸಿ, ಬದುಕನ್ನು ಬರಡಾಗಿಸುತ್ತದೆ. ನಾವು ಇದ್ದೇವೆ ಎಂದರೆ ನಮ್ಮ ಸುತ್ತಿ ಇರುವುದೆಲ್ಲ ಇದೆ ಎಂದು ಅರ್ಥ. ಇದೆ ಎಂದರೆ ಅದು ಸತ್ಯ. ಇಲ್ಲವೆಂಬುದನ್ನು ಇದೆ ಎಂದುಕೊಂಡರೆ, ಅದು ಭ್ರಮೆ. ಇರುವುದನ್ನು ಇಲ್ಲವೆಂದರೂ ಭ್ರಮೆಯೇ ತಾನೇ?.

ವಾಚಕರೆ ಒಂದು ಪರಮ ಶಕ್ತಿ. ಆ ಒಂದು ಶಕ್ತಿಯ ಸೃಷ್ಟಿಯೇ ಈ ಜಗತ್ತು. ಈ ಜಗತ್ತಿನ ಒಂದು ಅಂಶ ನಾವು. ಹೇಗೆ ಒಂದೇ ಬಸ್ಸಿನಲ್ಲಿ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ಪ್ರಯಾಣಿಕರು ಪ್ರಯಾಣ ಮಾಡುತ್ತಾರೋ ಮತ್ತು ಒಂದೊಂದು ಬಾರಿಯ ಪ್ರಯಾಣಕ್ಕೂ(ಟ್ರಿಪ್) ಬೇರೆ ಬೇರೆ ಪ್ರಯಾಣಿಕರು ಆ ಟ್ರಿಪ್ಪಿಗೆ ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಜನ್ಮವೆಂಬ ಪ್ರಯಾಣದಲ್ಲಿ ನಮ್ಮ ಜೀವನವೂ ಸಹ. ವಾಸ್ತವಿಕ ಬದುಕು ಬೇರೆ ವೇದಾಂತದ ಬದುಕು ಬೇರೆ. ವೇದಾಂತದಲ್ಲಿ ವಾಸ್ತವವನ್ನೂ ಮತ್ತು ವಾಸ್ತವದಲ್ಲಿ ವೇದಾಂತವನ್ನೂ ಸಮನ್ವಯವಾಗಿ ಬೆರೆಸಿಕೊಂಡು ನಮ್ಮನ್ನು ನಾವು ಸಾರ್ಥಕ್ಕ್ಯದೆಡೆಗೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ಅಧ್ಯಯನ ನಿಧಿಧ್ಯಾಸನಗಳ ಅವಶ್ಯಕತೆ ಇದೆ. ಅದರ ಪ್ರಯತ್ನವೇ ನಮ್ಮ ಬದುಕಾಗಬೇಕು. ಸತ್ಯ ಅಸತ್ಯಗಳ ದ್ವಂದ್ವವಿಲ್ಲದೆ ಉತ್ಸಾಹದಿಂದ ಜೀವವನ್ನು ಆಸಕ್ತಿಯಿಂದ ಜೀವಿಸಬೇಕು. ಹಾಗೆ ಆಸಕ್ತಿಯ ಜೀವನವನ್ನು ನಡೆಸುವಾಗ ಅಂತರಂಗದಲ್ಲಿ ವಿರಕ್ತಿಯ ಭಾವವಿರಬೇಕು. ಹಾಗಿದ್ದರೆ ಸುಖ ಸಂತೋಷ ನೆಮ್ಮದಿ. ಅಂತಹ ಸ್ಥಿತಿಯನ್ನು ಸಾಧಿಸುವ ಪ್ರಯತ್ನವನ್ನು ನಾವೂ ಮಾಡೋಣವೆ?

You may Also Like :

 

Leave a Comment