Mankuthimmana kagga (ಮಂಕುತಿಮ್ಮನ ಕಗ್ಗ ) with meanings 131-143

 

ರಸಧಾರೆ – 131

ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು |

ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು ||

ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ |

ಕಲಬೆರಕೆ ಜಗದುಸಿರು – ಮಂಕುತಿಮ್ಮ

ಪುಲಿಸಿಂಘದುಚ್ವಾಸ = ಹುಲಿ + ಸಿಂಹದ + ಉಚ್ವಾಸ // ಹಯದುಸಿರು = ಹಯದ + ಉಸಿರು// ಹದ್ದುಯ್ಲು = ಹದ್ದ+ಹುಯ್ಲು // ಹಾವಿಲಿಯಸುಯ್ಲು,= ಹಾವು+ಇಲಿಯ+ಸುಯ್ಲು // ಕಲೆತಿರ್ಪುವೀಯಲ್ಲ = ಕಲೆತು + ಇರ್ಪುದು+ ಈ+ ಎಲ್ಲ // ನಾಮುಸಿರ್ವೆಲರಿನಲಿ = ನಾವು+ ಉಸಿರ್ವ+ ಎಲರಿನಲಿ//ಜಗದುಸಿರು = ಜಗದ + ಉಸಿರು.

ಹಯ = ಕುದುರೆ // ಹುಯ್ಲು = ಉಸಿರು// ಇರ್ಪುದು = ಇರುವುದು.//ಉಸಿರ್ವ = ಉಸಿರಾಡುವ // ಎಲರಿನಲಿ = ಗಾಳಿಯಲಿ// ಸುಯ್ಲು = ಉಸಿರು

ಹುಲಿ, ಸಿಂಹ, ಹಸು, ಜಿಂಕೆ, ಕುದುರೆ, ಹುಳು, ಹಾವು, ಇಲಿ , ಹಕ್ಕಿ, ಹದ್ದು ಈ ಎಲ್ಲ ಪ್ರಾಣಿ ಪಕ್ಷಿಗಳು ಉಸಿರಾಡುವ ಗಾಳಿಯೇ ನಾವು ಉಸಿರಾಡುವ ಗಾಳಿಯಲ್ಲಿ ಕಳೆತುಹೋಗಿದೆ. ಹಾಗಾಗಿ ಈ ಜಗತ್ತಿನ ಉಸಿರು ಕಲಬೆರಕೆ ಉಸಿರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಕೆಲ ಪ್ರಾಣಿಗಳು ಕಾಡಿನಲ್ಲಿ, ಕೆಲ ಪ್ರಾಣಿಗಳು ನಾಡಿನಲ್ಲಿ ವಾಸಿಸುತ್ತವೆ. ಕೆಲವು ನೆಲದ ಮೇಲೆ, ಕೆಲವು ಬಿಲದ ಒಳಗೆ, ಕೆಲವು ಮರದ ಮೇಲೆ. ಕೆಲವು ಗುಹೆಗಳಲ್ಲಿ. ಹೀಗೆ ಬೇರೆ ಬೇರೆ ಕಡೆ ವಾಸಿಸುವ ಪ್ರಾಣಿ ಗಳಲ್ಲವೂ ಉಸಿರಾಡುವ ಗಾಳಿ, ಎಲರು ಮಾತ್ರ ಒಂದೇ ಅಲ್ಲವೇ? ಅಷ್ಟೇ ಅಲ್ಲ, ಅವು ಕುಡಿಯುವ ನೀರೂ ಸಹ ಆ ಒಂದೇ ಆಕಾಶದಿಂದ ಬೀಳುವ ಮಳೆಯೇ ಅಲ್ಲವೇ? ಇನ್ನು ಎಲ್ಲ ಪ್ರಾಣಿಗಳಿಗೂ ಆಹಾರಕ್ಕೆ ಅಧಾರಪಡುವುದು, ಎಲ್ಲರಿಗೂ ಅನ್ನಪೂರ್ಣೆಯಾದ ಈ ಭೂ ತಾಯಿಯನ್ನು. ಕೆಲವು ನೇರವಾಗಿ, ಕೆಲವು ಸುತ್ತಿ ಬಳಸಿ ( indirect dependency). ಎಲ್ಲ ಪ್ರಾಣಿಗಳ ಮೇಲೆ ಬೀಳುವ ಬೆಳಕು ಮತ್ತು ಶಾಖಕ್ಕೂ ಮೂಲ ಸಹ ನಮಗೆ ಕಾಣುವ ಒಂದೇ ಸೂರ್ಯನದು, ಅಲ್ಲವೇ? ನಾವೂ ಸಹ, ಅಂದರೆ ನಾವು ಮನುಜರೂ ಸಹ ಅದೇ ಗಾಳಿ, ಅದೇ ನೀರು, ಅದೇ ಬೆಳಕು, ಮತ್ತು ಅದೇ ಶಾಖವನ್ನು ಅದೇ ಮೂಲಗಳಿಂದ ಪಡೆಯುತ್ತೇವೆ. ಇಲ್ಲಿ ಬೇರೆ ಬೇರೆ ಪ್ರಾಣಿಗಳು ಉಸಿರಾಡುವ ಗಾಳಿಯಾವುದು? ನಾವು ಉಸಿರಾಡುವ ಗಾಳಿಯಾವುದು, ಮೇಲಿಂದ ಹರಿದು ಬರುವ ನೀರಿಗೆ ಯಾರು ಮೊದಲು ಬಾಯಿಟ್ಟಿದ್ದರು ಎಂದು ಕಂಡು ಹಿಡಿದುಕೊಳ್ಳುವುದು ಸಾಧ್ಯವೇ ಇಲ್ಲ ಅಲ್ಲವೇ? ಅಂದರೆ ನಾವು ಈ ಇಳೆಯನ್ನು ಇದ್ದು ಹೋಗಲು ಬಂದಿದ್ದೇವೆ ಅಷ್ಟೇ ಮತ್ತು ಇಲ್ಲಿರುವ ಎಲ್ಲವನ್ನೂ ನಾವು ಇತರೊಂದಿಗೆ ಹಂಚಿಕೊಂಡೆ ಬಾಳಬೇಕು.

ಅದೇ ನೀರು ಬಾರಿ ಬಾರಿ ಆವಿಯಾಗುತ್ತದೆ., ಅದು ಮೋಡವಾಗಿ ಧರೆಗೆ ಮಳೆಯಾಗಿ ಇಳಿಯುವುದು. ಇದು ಒಂದು ಚಕ್ರ. ಈ ಚಕ್ರ ಎಷ್ಟು ದಿನಗಳಿಂದ ಸುತ್ತುತ್ತಿದೆ ಎಂದು ಹೇಗೆ ಹೇಳುವುದು? ಒಂದೊಂದು ಹನಿಯೂ ಬಹಳ ಪುರಾತನವಾದದ್ದು , ಈ ಭೂಮಿಯೂ ಸಹ ಬಹಳ ಪುರಾತನವಾದದ್ದು. ಇಲ್ಲಿ ಬಂದು ಹೋಗುವ ಚರಾಚರಗಳೂ ಸಹ ಬಹಳ ಪುರಾತನವಾದವು. ರೂಪ ಬದಲಾಯಿಸಿಕೊಂಡು ಮತ್ತೆ ಮತ್ತೆ ನೂತನವೆಂಬಂತೆ ಬಂದು ಹೋಗುತ್ತಿದೆ. ಕೆಲವು ಬಂದು ಬೇಗನೆ ರೂಪಾಂತರಗೊಳ್ಳುತ್ತವೆ ಮತ್ತೆ ಕೆಲವು ನಿಧಾನವಾಗಿ ಆಗುತ್ತವೆ. ಮನುಷ್ಯರಾದ ನಾವೂ ಅಷ್ಟೇ. ಹಿಂದಿನವರು ಮಾಡಿದ್ದನ್ನೇ ನಾವು ಮಾಡುವುದು. ಮಾಡುವ ರೀತಿ ಸ್ವಲ್ಪ ವಿನೂತನವಾಗಿ ಕಾಣುತ್ತದೆ. ಅದೂ ಸಹ ಪುರಾತನದ ಅಡಿಪಾಯದ ಮೇಲೆ ಇರುತ್ತದೆ. ಹೀಗೆ ಈ ಜಗತ್ತೇ ಪುರಾತನ ಮತ್ತು ನೂತನತೆಯ ಒಂದು ಕಲಬೆರಕೆ ಎನ್ನುವುದು ಈ ಕಗ್ಗದ ಹೂರಣ. ನಾವು ಈ ವಿಷಯವನ್ನು ಕಾಣಬೇಕು ಅರ್ಥಮಾಡಿಕೊಳ್ಳಬೇಕು, ಅಷ್ಟೇ.

ರಸಧಾರೆ – 132

ರಾಮನುಚ್ವಾಸವಲೆದಿರದೆ ರಾವಣನೆಡೆಗೆ |

ರಾಮನುಂ ದಶಕಂಠನೆಲರನುಸಿರಿರನೆ ||

ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? |

ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ.||

ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ//

ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ

ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ?

ರಾಮನು ಉಸಿರಾಡಿದ ಉಸಿರ ರಾವಣ ಉಸಿರಾಡಲಿಲ್ಲವೇ? ಹಾಗೆಯೇ ರಾಮನೂ ಸಹ ರಾವಣನ ಉಸಿರ ಉಸಿರಾಡಿರಬಹುದಲ್ಲವೇ. ಅಂದು ಬೀಸಿದ ಪವನನು ಇಂದೂ ಇರುವುದರಿಂದ ಅಂದು ರಾಮ ರಾವಣರು ಉಸಿರಾಡಿದ ಉಸಿರು ನಮ್ಮೊಳಗೂ ಇರುವಾಗ ಈ ಭೂಮಿಯಲಿ ಹೊಸತು ಯಾವುದು ಎಂದು ಒಂದು ಪ್ರಶ್ನೆ ಎತ್ತುತ್ತಾರೆ ಮಾನ್ಯ ಗುಂಡಪ್ಪನವರು.

ಈ ಭೂಮಿಯೂ ಬಹಳ ಹಳತು. ಆದರೆ ಪ್ರತಿಬಾರಿ ಉತ್ತಾಗಲೂ ಹೊಸತನದಿಂದ ಮೆರೆಯುವ ಈ ಭೂಮಿ ಹೊಸರೂಪ ಧರಿಸುತ್ತದೆ. ಹಾಗೆಯೇ ಈ ಭೂಮಿಯಮೇಲೆ ಬೆಳೆಯುವ ಹೊಸ ಬೆಳೆ, ಮರಗಳಲ್ಲಿನ ಹೊಸ ಚಿಗುರು, ಹೂ ಹಣ್ಣುಗಳೂ ಸಹ ಹೊಸದಾಗಿವೆ. ಆದರೆ ಅದರ ಆಧಾರ ಹಳೆಯ ಮರ ಮತ್ತು ಆ ಮರಕ್ಕೆ ಆಧಾರ ಈ ಹಳೆಯ ಇಳೆ. ಹೀಗೆ ಹಳೆಯ ಮತ್ತು ಹೊಸದರ ಸಮ್ಮಿಲನವೇ ಜೀವನ. ಹಳೆಯದು ಹಾಗೇ ಇದ್ದರೆ ಒಂದು ರೀತಿಯ ಏಕತಾನತೆ ಮೂಡಿ, ಸ್ವಾರಸ್ಯವಿಲ್ಲದ ಜೀವನವಾಗುತ್ತಿತ್ತು. ನಮಗೆ ಮತ್ತು ಈ ಇಳೆಗೆ ಮತ್ತೆ ಮತ್ತೆ ಬಂದು ಹೋಗುವ ಜೀವಿಗಳಿಗೆ ಒಂದು ಹುರುಪನ್ನು, ಒಂದು ಜೀವನೋತ್ಸಾಹವನ್ನು ತುಂಬುವ ಸಲುವಾಗಿ ಈ ರೀತಿ ಹೊಸತು ಹಳತರ ಸಮ್ಮಿಲಿತ ಜೀವನ ಚಕ್ರವನ್ನು ಆ ಪರಮ ಚೇತನ ವಿಧಿಸಿದೆ. ಹಳೆಯ ನೆನಪುಗಳು ಮತ್ತು ಅವುಗಳು ನೀಡುವ ಹೊಸ ಹುರುಪುಗಳೇ ಜೀವನ ಸಾರ.

ಹಾಗೆಯೇ ಬೀಸುವ ಗಾಳಿ, ಬೀಳುವ ಮಳೆ, ಹೊಸ ಬೆಳೆ, ಹೊಸ ಚಿಗುರು, ಹೂ ಹಣ್ಣುಗಳು,ಎಲ್ಲವೂ ಸಹ. ನಾವು ಚಿಕ್ಕಂದಿನಲ್ಲಿ ಘನವಾದ ಮಳೆಗಳನ್ನು ನೋಡಿದ್ದೆವು. ಆದರೆ ಈಗಲೂ ಆ ಮಳೆ ಆ ಮಿಂಚು ಆ ಗುಡುಗುಗಳ ಸದ್ದು ಕೇಳಿದಾಗ ಏನೋ ಒಂದು ಉತ್ಸಾಹ ಮೂಡುತ್ತದೆ. ಇಲ್ಲಿ ಬೀಸುವ ಗಾಳಿ ಇಡೀ ಭೂಮಿಯನ್ನು ಸುತ್ತಿ ಸುತ್ತಿ ಎಷ್ಟು ಕೋಟಿ ಕೋಟಿ ಬಾರಿ ಸುತ್ತಿದೆಯೋ ಯಾರಿಗೆ ಲೆಕ್ಕ. ಆ ಗಾಳಿ ಕಂಡ ಜನರೆಷ್ಟು, ಆ ಗಾಳಿ ಕಂಡ ಜನರ ನೋವೆಷ್ಟು ನಲಿವೆಷ್ಟು ಚರಿತೆಯೆಷ್ಟು, ಲೆಕ್ಕವಿದೆಯೇ? ಆದರೂ ನಾವು ಪ್ರತಿಬಾರಿ ಉಸಿರನೆಳದುಕೊಂಡಾಗಲೂ, ಅದು ನಮಗೆ ಹೊಸ ಉಸಿರು. ಆದರೆ ಅದೇ ಉಸಿರು ಸಾವಿರ ಸಾವಿರ ಕೋಟಿಬಾರಿ ಒಳಹೊಕ್ಕು ಹೊರಗೆ ಬಂದಂತ ಹಳೆಯ ಗಾಳಿಯೇ ಅಲ್ಲವೇ. ಪ್ರತಿಬಾರಿ ನಾವು ಉಸಿರಾಡಿದಾಗಲೂ, ಒಂದು ಚೈತನ್ಯ ತುಂಬುತ್ತದೆ, ಉತ್ಸಾಹ ಮೂಡುತ್ತದೆ. ಆ ಉತ್ಸಾಹವನ್ನು ಕಾಪಾಡಲೋಸುಗವೇ, ಅದರಲ್ಲಿ ಒಂದು ಹೊಸತನವನ್ನು ಕಾಣುವ ಮನೋಭಾವ ನಮಗೆ ಆ ದೇವರು ದಯಪಾಲಿಸಿದ್ದಾನೆ. ಅಲ್ಲವೇ? ಈ ಹಳತು ಹೊಸತುಗಳ ಭಾವ ಕೇವಲ ನಮ್ಮ ಮನೋಭಾವವಷ್ಟೇ! ಎಲ್ಲವೂ ಪುರಾತನವೆಂದು ಒಂದು ನೀರವತೆಯ ಭಾವಕ್ಕಿಂತ ಎಲ್ಲದರಲ್ಲೂ ಒಂದು ನೂತನತೆಯನ್ನು ಕಾಣುವ ಉಲ್ಲಸಿತ ಮನೋಭಾವ ಒಳ್ಳೆಯದಲ್ಲವೇ. ಅದು ನಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ಜೀವನದಲ್ಲಿ ಒಂದು ಆಶಾಭಾವನ್ನು ತುಂಬುತ್ತದೆ.

ಸೌಂದರ್ಯ ನೋಡುವವನ ಕಣ್ಣಲ್ಲಿ ಎನ್ನುತಾರೆ ಜ್ಞಾನಿಗಳು. ನಾವೂ ಸಹ ಪುರಾತನದ ಅಥವಾ ಹಳತಿನ ತಳಹದಿಯಲ್ಲಿ ಪಲ್ಲವಿಸುವ ಹೊಸತನ್ನು ನೋಡುತ್ತಾ ನಮ್ಮ ನಮ್ಮ ಜೀವನಗಳಲ್ಲಿ ಹೊಸತು ಹಳತುಗಳ ಸಮ್ಮಿಶ್ರ ಅನುಭವವನ್ನು ಪಡೆಯೋಣವೇ ?

ರಸಧಾರೆ – 133

ಬಹಿರಂತರಗಳೊಂದು ಭೂತಭವ್ಯಗಳೊಂದು |

ಇಹಪರಂಗಳುಮೊಂದು ಚೈತನ್ಯವೊಂದು ||

ಬಹುಪಾತ್ರನಾಟಕದಿ ಮಾಯೆ ಶತವೇಷಗಳ |

ವಹಿಸಲೀವಳು ಪತಿಗೆ – ಮಂಕುತಿಮ್ಮ.

ಬಹಿರಂತರಗಳೊಂದು = ಬಹಿರ+ಅಂತರಂಗಗಳು + ಒಂದು // ಇಹಪರಂಗಳುಮೊಂದು = ಇಹ+ ಪರಗಳುಂ+ಒಂದು // ಚೈತನ್ವೊಂದು = ಚೈತನ್ಯವು+ಒಂದು // ವಹಿಸಲೀವಳು=ವಹಿಸಲು + ಈವಳು

ಬಹಿರ = ಹೊರಗೆ// ಅಂತರ= ಒಳಗೆ, ಇಹ + ಬದುಕ್ಕಿದ್ದಾಗಿನ ಜೀವನ// ಪರ= ಬದುಕಿನ ನಂತರದ ಜೀವನ

ಒಳಗೂ ಹೊರಗುಗಳು ಒಂದೇ. ಭೂತ ಭವಿತವ್ಯಗಳು ಒಂದೇ. ಇಹ ಪರಗಳು ಒಂದೇ ಏಕೆಂದರೆ ಇವೆಲ್ಲವೂ ಆಗಿರುವುದು , ಆಗುತ್ತಿರುವುದು ಎಲ್ಲವೂ ಒಂದೇ ಚೈತನ್ಯದಿಂದ. ಆದರೆ ಈ ಜಗತ್ತನ್ನು ಆವರಿಸಿರುವ ಮಾಯೆಯೆಂಬ ಮಾಯಾಂಗನೆ ಆ ಚೈತನ್ಯಕ್ಕ್ಕೆ ಹಲವಾರು ರೂಪಗಳನ್ನು ವಹಿಸಲು ಕೊಡುತ್ತಾಳೆ, ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಇಡೀ ಬ್ರಹ್ಮಾಂಡವೆ ಆ ಪರಮಾತ್ಮ ಚೈತನ್ಯದಿಂದಾಗಿದೆ, ಎಲ್ಲದರಲ್ಲೂ ಆ ಚೈತನ್ಯವೇ ತುಂಬಿದೆ, ಆ ಚೈತನ್ಯವೇ ನಿವಸಿಸಿದೆ ಎಂದ ಮೇಲೆ ಒಳಗೇನು ಹೊರಗೇನು ” ನೀ ಮಾಯೆಯೋ ನಿನ್ನೊಳು ಮಾಯೆಯೋ ” ಎಂದು ಪುರಂದರ ದಾಸರಿಗೆ ಈ ಸಂದೇಹ ಬಂದಿತ್ತು ಎಂದಮೇಲೆ ನಾವೆಷ್ಟರವರು? ಹಿಂದೆ ನಡೆದದ್ದೂ ಮುಂದೆ ನಡೆಯುವುದೂ ಸಹ, ಆ ಪರಮ ಚೈತನ್ಯದ ಇಂಬಿನಿಂದಲೇ ನಡೆದಿದೆ, ನಡೆಯುತ್ತಿದೆ ಮತ್ತು ನಡೆಯುತ್ತದೆ. ಆ ಪರಮಚೈತನ್ಯವೇ ಇಹದಲ್ಲೂ ಪರದಲ್ಲೂ ಇದೆ. ಆದರೆ ಈ ಜಗತ್ತು ಒಂದು ಮಾಯೆಯಿಂದ ಆವರಿಸಿದೆ. ಮಾಯೆಯೆಂದರೆ ‘ ಒಂದು ವಸ್ತುವಿನ ನಿಜಸ್ವರೂಪ ಬಯಲಾಗದೆ ಬೇರೆ ಏನೋ ಎಂಬಂತೆ ತೋರುವುದು. ಮಾಯೆ ಆವರಿಸಿರುವ ಕಾರಣದಿಂದಲೇ ಪ್ರತಿಯೊಬ್ಬರಿಗೂ ಇಡೀ ಜಗತ್ತೇ ಬೇರೆ ಬೇರೆ ರೀತಿ ಕಂಡದ್ದರಿಂದಲೇ, ಇಷ್ಟೊಂದು ಮತಗಳು, ಬೇರೆ ಬೇರೆ ವ್ಯಾಖ್ಯಾನಗಳು ಬೇರೆ ಬೇರೆ ಅಭಿಪ್ರಾಯಗಳು. ಒಂದೇ ವಸ್ತುವಿಗೆ ಸಾವಿರಾರು ಪರಿಭಾಷೆಗಳು.

ಒಂದೇ ರೂಪ ( ರೂಪವಿಲ್ಲದೆಯೂ) ದಲ್ಲಿ ಇರುವ ಆ ಪರಮ ಚೈತನೆಯವೇ ಎಲ್ಲ ರೂಪಗಳನ್ನೂ ಧರಿಸಿರುವುದರಿಂದ “ಬಹುಪಾತ್ರನಾಟಕದಿ ಮಾಯೆ ಶತವೇಷ” ಎಂದರು ಗುಂಡಪ್ಪನವರು. ” ಯತಃ ಸರ್ವಾಣಿ ರೂಪಾನಿ ಭವಂತ್ಯಾದಿ ಯುಗಾಗಮೆ ” ಎಂದು ಪರಮಾತ್ಮ ಸ್ವರೂಪವನ್ನು ವಿವರಿಸುವಾಗ ಭೀಷ್ಮಪಿತಾಮಹರು ಧರ್ಮರಾಯನ ಪ್ರಶ್ನೆಗೆ ಉತ್ತರವೀಯುತ್ತಾ ಹೇಳುತ್ತಾರೆ. ಅಂದರೆ ಎಲ್ಲವೂ ಯಾರಿಂದ ಹೊರಬರುತ್ತದೋ,ಎನ್ನುತ್ತಾರೆ. ಅಂದರೆ ಎಲ್ಲವೂ, ಎಲ್ಲರೂಪಗಳೂ ಅವನಿಂದಲೇ ಹೊರಟು ಅವನಿಂದಲೇ ಆಗಿ ಅವನ ಶಕ್ತಿಯಿಂದಲೇ ಜೀವಿಸುತ್ತಿವೆ. ಎಲ್ಲವೂ ಒಂದೇ ಆದರೂ ಮಾಯೆಯಿಂದ ನಮಗೆ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತಿದೆ. ಆ ಪರಮ ಚೇತನ ಬೇರೆ ಬೇರೆಯಾಗಿ ಕಾಣುವುದಕ್ಕೆ ಮಾಯೆಯೇ ಕಾರಣ ಎನ್ನುವ ಅರ್ಥದಲ್ಲಿ ” ವಹಿಸಲೀವಳು ಪತಿಗೆ ” ಎಂದು ಮಾಯೆ ತನ್ನ ಪತಿಯಾದ ಆ ಪರಮಾತ್ಮನಿಗೆ ಭಿನ್ನ ಭಿನ್ನ ವಾದ ವೇಷಗಳನ್ನು ಧರಿಸುವಂತೆ ಮಾಡಿದ್ದಾಳೆ ಎನ್ನುತ್ತಾರೆ ನಮ್ಮ ಡಿ.ವಿ.ಜಿ. ವಾಚಕೆ ನಾವು ಮಾಯೇಯಿಂದಾವ್ರುತವಾದ ಈ ಭಿನ್ನ ಭಿನ್ನ ಜಗತ್ತನ್ನು ನೋಡುತ್ತಾ, ಇದು ಮರೆ ಎಂದು ಅರಿತಾಗ, ನಮಗೆ ಅಂತರ್ದರ್ಶನವಾದಾಗ ಆ ಪರಮಾತ್ಮನ ನಿಜರೂಪ ಅರಿವಾಗುತ್ತದೆ. ಅಂತಹ ಅರಿವನ್ನು ಪಡೆಯುವ ದಾರಿಯಲ್ಲಿ ನಾವೂ ಸಹ ಮುನ್ನಡೆಯೋಣವೇ?

ರಸಧಾರೆ – 134

ಏಕದಿಂದಲನೇಕ ಮತ್ತನೇಕದಿಂದಲೇಕ |

ವೀ ಕ್ರಮವೇ ವಿಶ್ವದಂಗಾಂಗಸಂಬಂಧ ||

ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |

ಸಾಕಲ್ಯದರಿವಿರಲಿ – ಮಂಕುತಿಮ್ಮ.

ಏಕದಿಂದಲನೇಕ = ಏಕದಿಂದಲಿ+ ಅನೇಕ // ಮತ್ತನೇಕದಿಂದಲೇಕವೀ = ಮತ್ತೆ+ಅನೇಕದಿಂದಲಿ+ ಏಕವು + ಈ // ವಿಶ್ವದಂಗಾಂಗಸಂಬಂಧ = ವಿಶ್ವದ+ಅಂಗಾಂಗ+ಸಂಬಂಧ//ಸಾಕಲ್ಯದರಿವಿರಲಿ = ಸಾಕಲ್ಯದ +ಅರಿವಿರಲಿ.

ಸಾಕಲ್ಯದ = ಏಕತೆಯ, ಸಮಾನತೆಯ

ಏಕದಿಂದ ಅನೇಕ ಮತ್ತು ಅನೇಕದಿಂದ ಏಕ. ಇದೆ ಕ್ರಮವೇ ವಿಶ್ವದ ಎಲ್ಲಾ ಅಂಗಗಳ ಸಂಬಂಧ. ಹಾಗಿರುವಾಗ ಲೋಕದಲ್ಲಿ ಜಾತಿಯಲಿ ವ್ಯಕ್ತಿಯಲಿ ಮತ್ತು ಈ ಜಗತ್ತಿನ ಎಲ್ಲ ಸಂಸ್ಥೆಗಳಲ್ಲಿ ಸಕಲದಲ್ಲೂ, ಈ ಒಂದು ವಿಧಿ, ಕ್ರಮ ಅಥವಾ ವ್ಯವಸ್ಥೆ ಇರಬೇಕು ಎಂದು ಮಾನ್ಯ ಗುಂಡಪ್ಪನವರು ಆದೇಶಿಸುತ್ತಿದ್ದಾರೆ, ಈ ಕಗ್ಗದಲ್ಲಿ.

ಇಡೀ ಜಗತ್ತೇ ಏಕದಿಂದ ಆದದ್ದು. ಅದು ಅನೇಕವಾಗಿ ಹರಡಿದೆ. ಅದರೂ ಎಲ್ಲವೂ ತಮ್ಮ ತಮ್ಮ ಅಸ್ತಿತ್ವವನ್ನು ಮತ್ತು ತಮ್ಮ ರೂಪವನ್ನು ಹಲವಂತೆ ತೋರಿದೆ. ಈ ಭೂಮಿ, ಈ ಸೂರ್ಯ. ಈ ಸೂರ್ಯಮಂಡಲಗಳು , ಈ ಕ್ಷೀರಪಥಗಳು, ಈ ಆಕಾಶಗಂಗೆಗಳು ಎಲ್ಲವೂ ಸಹ ಪ್ರತ್ಯೇಕ ಪ್ರತ್ಯೇಕವಾಗಿದ್ದರೂ, ಏಕ ಮೂಲದಿಂದಲೇ ಉದ್ಭವವಾಗಿದೆ. ಬೇರೆಬೇರೆಯಾಗಿ ನೋಡಿದಾಗ ಬೇರೆಬೇರೆಯಾಗಿಯೂ ಸಮಗ್ರವಾಗಿ ನೋಡಿದರೆ ವಿಶ್ವದ ಸಮಗ್ರ ರೂಪ ಕಾಣುತ್ತ ದೆ.

ಈ ಏಕದಿಂದ ಅನೇಕಕ್ಕೆ, ಒಂದು ದೃಷ್ಟಾಂತವನ್ನು ನೋಡೋಣ. ಒಂದು ಬೃಹತ್ ಮರ. “ಒಂದೇ” ಒಂದು ಬೀಜದಿಂದ ಉದ್ಭವವಾದ ಮರ. ಪ್ರತೀ ವರ್ಷ ಹೊಸಚಿಗುರನ್ನು ತಳೆದು, ಹೂ ಬಿಟ್ಟು, ಕಾಯಿ ಬಿಟ್ಟು ಹಣ್ಣಾಗಿ ಉದುರುತ್ತದೆ. ಒಂದೇ ಮರದಿಂದ ಲಕ್ಷಾಂತರ ಬೀಜಗಳು ಉತ್ಪತ್ತಿಯಾಗುತ್ತವೆ. . ಪ್ರತಿಯೊಂದು ಬೀಜದಿಂದಲೂ ಮತ್ತೊಂದು ಬೃಹತ್ ಮರವಾಗುವ ಸಂಭವ. ಇದು ಪ್ರತಿಯೊಂದು ಜೀವಿಯಲ್ಲೂ ಸಹಜ, ಮನುಷ್ಯನನ್ನೂ ಸೇರಿ. ಇದನ್ನೇ ಮಾನ್ಯ ಗುಂಡಪ್ಪನವರು ” ವಿಶ್ವದಂಗಾಂಗಸಂಬಂಧ” ಎಂದು ಕರೆದರೂ. ಈ ಏಕದಿಂದನೇಕದ ಮತ್ತು ಅನೇಕದಿಂದೇಕದ ಪ್ರಕ್ರಿಯೆ ಈ ಜಗತ್ತಿನ ಎಲ್ಲ ಅಂಗಗಳಿಗೂ ಅನ್ವಯಿಸುತ್ತದೆ ಎನ್ನುತ್ತಾರೆ. ಒಂದು ಅಂದರೆ ಏಕವಾದ ಆ ಪರಮಾತ್ಮನಿಂದಲೇ ಎಲ್ಲವೂ ( ಹಲವು) ಆಗಿದೆ ಎನ್ನುವುದು ವೇದಾಂತದ ವಿಚಾರ.

ನಾವು ವಾಸಿಸುವ ಈ ಸಮಾಜ ಮತ್ತು ಈ ಸಮಾಜದ ವ್ಯವಸ್ಥಯನ್ನು ನೋಡೋಣ . ಎಲ್ಲರೂ ಸಮಾನರು, ಎಲ್ಲರಿಗೂ ಈ ಸಮಾಜದಲ್ಲಿ ಶಾಂತಿಯಿಂದ ಸಮಾನವಾಗಿ ಬಾಳಲು ಹಕ್ಕಿದೆ. ಯಾವುದೇ “ಒಂದು”ಅಥವಾ “ಒಬ್ಬ” ವ್ಯಕ್ತಿಯ ಹಿತಕ್ಕೆ ಈ ಸಮಾಜವಲ್ಲ ಎಂಬ ಅನೇಕದ ಹಿತವನ್ನು ಬಯಸುವ ಸಿದ್ಧಾಂತದ ಮೇಲೆ ನಮ್ಮ ಸಮಾಜ ನಿರ್ಮಾಣವಾಗಿದೆ. ಒಂದು ಮನೆಯಲ್ಲಿ ” ಒಬ್ಬ” ಹಿರಿಯ. ಅವನು ಯೋಚಿಸುವುದು ಯೋಚಿಸಬೇಕಾದದದ್ದು ಆ ಮನೆಯ ಹಲವರ ಹಿತ. ಮತ್ತೆ ಆ ಹಲವರು ಆ “ಒಬ್ಬ” ನಿಗೆ ಪೂರಕವಾಗಿದ್ದರೆ, ಆ ಮನೆಯಲ್ಲಿ ನೆಮ್ಮದಿ ಶಾಂತಿ ಮತ್ತು ಸುಖ. ಇದನ್ನು ನಾವು ಒಂದು ಸಂಸ್ಥೆಗೆ ಅನ್ವಯಿಸಿದರೆ ಸಂಸ್ಥೆಯ ಮುಖ್ಯಸ್ಥ ಒಬ್ಬನ ಆದೇಶದ ಮೇರೆಗೆ ನಡೆಯುವ ಆ ಸಂಸ್ಥೆಯ ಎಲ್ಲಾ ಕೆಲಸಕಾರ್ಯಗಳು . ಆದೇಶ ಸರಿಯಿದ್ದರೆ, ಕೆಲಸ ಸಮರ್ಪಕ.ಹಾಗೆಯೇ ಈ ಎಲ್ಲರೂ ( ಹಲವರು)ಸಮರ್ಪಕವಾಗಿ ಕೆಲಸ ಮಾಡಿದರೆ ಅವನಿಗೆ ಒಳ್ಳೆಯ ಹೆಸರು. ಹೀಗೆ ಏಕದ ಮತ್ತು ಅನೇಕದ ಪರಸ್ಪರ ಪೂರಕತೆಗಳು ನಮಗೆ ಜಗತ್ತಿನ ಎಲ್ಲದರಲ್ಲೂ ಕಾಣುತ್ತದೆ.

ಒಬ್ಬರು( ಏಕವು) ಹಲವರ ( ಅನೇಕದ) ಮೇಲೆ ಮತ್ತು ಹಲವರು ಒಬ್ಬರ ಮೇಲೆ ಆಧಾರ ಪಟ್ಟಿರುವುದು ಸಹಜ ಕ್ರಮ.ಈ ಸಹಜತೆ ಎಲ್ಲದರಲ್ಲೂ ಇದೆ. ಅದನ್ನು ಅರಿತಿರಬೇಕು ಎನ್ನುವುದೇ ಈ ಕಗ್ಗದ ಹೂರಣ.

ರಸಧಾರೆ – 135

ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ |

ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ ||

ಶಂಪಾತರಂಗವದರೊಳು ತುಂಬಿ ಪರಿಯುತಿದೆ |

ದಂಬೋಳಿ ನೀನಾಗು – ಮಂಕುತಿಮ್ಮ ||

ನೆನೆದೆಡೆಯೆ = ನೆನೆದ +ಎಡೆಯೆ // ಶಂಪಾತರಂಗವದರೊಳು = ಶಂಪಾತರಂಗವು + ಅದರೊಳು

ಶಂಪಾತರಂಗ= ಮಿಂಚಿನ ಅಲೆಗಳು // ದಂಬೋಳಿ = ವಜ್ರಾಯುಧ.

ಈ ಭೂಮಿಯಲ್ಲಿ ಪ್ರತಿಯೊಂದು ಕಣ ಕಣವೂ ಮಿಂಚಿನ ತರಂಗಗಳ ಕೇಂದ್ರ ಬಿಂದುವಿನನತೆ. ಬ್ರಹ್ಮ ಸೃಷ್ಟಿಮಾಡಿದ ಈ ಭೂಮಂಡಲದಲ್ಲಿ ನೀನೂ ಸಹ ಒಂದು ಕೇಂದ್ರ ಬಿಂದು. ನಿನ್ನಲ್ಲೂ ಮಿಂಚಿನ ತರಂಗಗಳು ಹರಿಯುತ್ತಿವೆ. ಹೀಗೆ ಹರಿಯುವ ಎಲ್ಲ ತರಂಗಗಳನ್ನೂ ಒಟ್ಟುಮಾಡಿ ನಿನ್ನ ಬುಧ್ದಿಯನ್ನು ವಜ್ರಾಯುಧವನ್ನಾಗಿಸಿಕೊಂಡು ಸಾಧನೆಯನ್ನು ಮಾಡು ಎಂದು ವಾಚಕರೆಗೆ ಒಂದು ಸೂಚನೆಯನ್ನು ನೀಡಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಈ ಇಡೀ ಪ್ರಪಂಚವೇ ಅಣುಗಳಿಂದಾದುದು. ಪ್ರತಿ ಅಣುವೂ ಒಂದು ಶಕ್ತಿ ಕೇಂದ್ರ. ಎಲ್ಲಾ ಶಕ್ತಿ ಕೇಂದ್ರಗಳು ಒಟ್ಟಾರೆಯಾಗಿ ಒಂದು ಶಕ್ತಿ ಸಮೂಹ. ನಾವೆಲ್ಲಾ ಅಂತಹ ಶಕ್ತಿ ಸಮೂಹಗಳು. ಎಲ್ಲಕಡೆಯೂ ಹರಿದಂತೆ ನಮ್ಮಲ್ಲೂ ಆ ಅಣು ಸಮೂಹದ ಶಕ್ತಿ ಹರಿಯುತಿದೆ. ಆ ಶಕ್ತಿಯೇ ನಮಗೆ ಕಾರ್ಯ ಪ್ರವ್ರುತ್ತತೆಯನ್ನು ನೀಡುತ್ತದೆ. ನಮ್ಮ ದೇಹವೆಲ್ಲವೂ ಕೇವಲ ಜೀವಾಣುಗಳಿಂದ ಆಗಿವೆ. ಪ್ರತಿಯೊಂದು ಜೀವಾಣುವೂ ಒಂದು ಶಕ್ತಿ ಕೇಂದ್ರ. ಈ ಜೀವಾಣುಗಳ ಒಟ್ಟು ಸಮೂಹವೇ ನಾವು.

ಇದು ಮಾನವರಾದ ನಮಗಷ್ಟೇ ಸೀಮಿತವಲ್ಲ. ಸಕಲ ಚರಾಚರವೂ ಸಹ ಹೀಗೆ ಆಗ ಮಾಡಲ್ಪಟ್ಟಿದೆ. ಒಂದು ಬೀಜವು ತನ್ನದೇ ಶಕ್ತಿಯಿಂದ ಮೊಳೆತು, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ ನೂರಾರು ವರ್ಷಗಳ ಕಾಲ ಜೀವಿಸುತ್ತದೆ. ಇದು ಒಂದು ದೃಷ್ಟಾಂತ ಅಷ್ಟೇ. ಈ ಜಗತ್ತಿನ ಎಲ್ಲವೂ ಹಾಗೇಯೇ! ಒಂದು ಸಣ್ಣ ಇರುವೆಯಿಂದ ಹಿಡಿದು ಒಂದು ಬೃಹತ್ತಾದ ಆನೆಯವರೆಗೆ, ಎಲ್ಲವೂ ಒಂದೊಂದು ಶಕ್ತಿ ಬಿಂದುಗಳೇ ಅಲ್ಲವೇ. ವಾಚಕರೆ, ಆ ಶಕ್ತಿಯು ಕೇವಲ ದೈಹಿಕ ಶಕ್ತಿಯೆಂದು ಅರ್ಥೈಸಬಾರದು. ಏಕೆಂದರೆ ಈ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿಗಳು ಒಂದಕ್ಕೊಂದು ಪೂರಕವಲ್ಲವೇ? ಮನಸ್ಸು ಧೃಢವಾಗಿದ್ದರೆ ದೇಹವೂ ದೃಢ ಹಾಗೆಯೇ ಮನಸ್ಸು ಧೃಢವಾಗಿದ್ದರೆ ದೇಹಾರೋಗ್ಯವೂ ಉತ್ತಮ. ಹಾಗಾಗಿ ನಮ್ಮಲ್ಲಿ ” ಶಂಪಾತರಂಗವದರೊಳು ತುಂಬಿ ಪರಿಯುತಿದೆ ” ಎನ್ನುವಂತೆ ಒಂದು ಮಿಂಚಿನಂತ ಶಕ್ತಿ ಹರಿಯುತ್ತದೆ.

ಆ ನಮ್ಮ ಶಕ್ತಿಯನ್ನು ಗುರುತಿಸಿ, ಕೇಂದ್ರೀಕರಿಸಿ, ಎಲ್ಲ ಶಕ್ತಿಯನ್ನೂ ನಮ್ಮ ಗುರಿಯನ್ನು ತಲುಪಲು ಉಪಯೋಗಿಸಿದ್ದಲ್ಲಿ ವಜ್ರವು ಕಲ್ಲನ್ನು ಕತ್ತರಿಸುವಂತೆ, ನಮ್ಮ ಧ್ಯೇಯಸಾಧನೆಯಲ್ಲಿ ಬರುವ ಅಡ್ಡಿಗಳನ್ನೆಲ್ಲ ತೊಲಗಿಸಿ ನಮ್ಮ ದಾರಿಯನ್ನು ಸುಗಮವಾಗಿಸಿಕೊಳ್ಳಬೇಕು, ಹಾಗೆ ಆ ಕ್ಲಿಷ್ಟವಾದ ಪರಿಸ್ಥಿತಿಯಿಂದ ಹೊರಬರಲು, ಕ್ಲಿಷ್ಟವಾದ ಸಮಸ್ಯೆಗಳನ್ನು ಪರಿಹರಿಸುವಂತ ವಜ್ರಾಯುಧವಾಗಬೇಕು ನಾವು ಎನ್ನುವುದೇ ಈ ಕಗ್ಗದ ಹೂರಣ. ಅಂತಹ ಪ್ರಯತ್ನವನ್ನು ನಾವು ಮಾಡಬೇಕು.

ರಸಧಾರೆ – 136

ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |

ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ||

ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ |

ಪುಷ್ಪವಾಗಿರು ನೀನು – ಮಂಕುತಿಮ್ಮ. |

ವಿಶ್ವಪರಿಧಿಯದೆಲ್ಲೊ = ವಿಶ್ವದ + ಪರಿಧಿ+ ಅದು + ಎಲ್ಲೊ // ಸೂರ್ಯಚಂದ್ರರಿನಾಚೆ = ಸೂರ್ಯ+ಚಂದ್ರರಿನ+ ಆಚೆ // ನೀನೆಣಿಸಿದೆಡೆಯೆ = ನೀನು + ಎಣಿಸಿದ + ಎಡೆಯೆ, ನಿಶ್ವಸಿತ = ಉಸಿರಾಡುವ // ದಿಗಂತ = ಆಕಾಶದ ವ್ಯಾಪ್ತಿ,

ನೀನು ಒಂದು ಕೇಂದ್ರ ಬಿಂದು. ಇಡೀ ವಿಶ್ವದ ಪರಿಧಿಯಲ್ಲಿ, ಸೂರ್ಯ ಚಂದ್ರರಿಗೂ ಆಚೆ ನೀನು ಎಲ್ಲಿ ನಿಂತರೆ ಅಲ್ಲಿ ನೀನು ಒಂದು ಬಿಂದುವಾಗಿರುವೆ. ನಿನಗೂ ದಿಗಂತಕ್ಕೂ ನಿನ್ನ ಉಸಿರಾಟದ ಸಂಬಂಧವಿದೆ. ಹಾಗಾಗಿ ನೀನು ನಿನ್ನ ಶಕ್ತಿಯ ಸುಗಂಧವನ್ನು ಎಲ್ಲೆಡೆ ಹರಡು ಎಂದು ಒಂದು ಆದೇಶವನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾನು ಒಂದೆಡೆ ನಿಂತರೆ, ಎನ್ನ ಸುತ್ತಲೂ ಜಗತ್ತು. ಅಂದರೆ ನಾನು ಒಂದು ಬಿಂದು. ಇದೇ ರೀತಿ ಎಲ್ಲರೂ ಒಂದೊಂದು ಬಿಂದುಗಳು. ಸೂರ್ಯಚಂದ್ರರು, ಎಲ್ಲ ಆಕಾಶಕಾಯಗಳು, ಈ ಜಗತ್ತಿನ ಎಲ್ಲ ಜೀವಿಗಳೂ ಸಹ ಜಗತ್ತಿನಲ್ಲಿ ಒಂದೊಂದು ಬಿಂದುಗಳೇ ಅಲ್ಲವೇ? ನಾವು ಎಲ್ಲಿ ನಿಂತರೆ ಅಲ್ಲಿ ಒಂದು ಬಿಂದು. ಸುತ್ತಲೂ ಜಗತ್ತು. ನಾನು ನಿಂತಲ್ಲಿಂದಲೇ ನನಗೆ ಈ ಜಗತ್ತಿನೊಂದಿಗೆ ಸಂಬಂಧವುಂಟಾಗುತ್ತದೆ. ಆದರೆ ಆ ಸಂಬಂಧ ” ನಿಶ್ವಸಿತ ಸಂಬಂಧ” ಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ. ಎಂದರೆ ನಮ್ಮ ನಿಶ್ವಾಸ ಉಚ್ವಾಸಗಳು ನಡೆಯುತ್ತಿರುವತನಕ ನಮಗೆ ನಮ್ಮ ಸುತ್ತಲಿರುವ ಈ ಜಗತ್ತಿನೊಡನೆ ಭೌತಿಕ ಸಂಬಂಧ ಮತ್ತು ದಿಗಂತದವರೆಗೆ ನಮ್ಮ ಮಾನಸಿಕ ಮತ್ತು ಭೌದ್ಧಿಕ ಸಂಬಂಧಗಳು ಇರುತ್ತವೆ. ಎಂದು ಆ ಶ್ವಾಸ ನಿಲ್ಲುತ್ತದೋ ಅಂದು ಈ ಸಂಬಂಧಗಳಿಗೆಲ್ಲಾ ಒಂದು ರೀತಿಯ ಅಂತ್ಯ.

ನಾವು ನಮ್ಮ ಸುತ್ತಲಿನ ಜಗತ್ತಿನೊಡನೆ ಇರುವ ಸಂಬಂಧಗಳನ್ನು ಒಂದು ಬಾರಿ ಪರೀಕ್ಷಿಸಿ ನೋಡಿದರೆ ಅದು ಎಂತಹ ಸಂಬಂಧ ಎಂದು ನಮಗೆ ಅರ್ಥವಾಗಬೇಕು. ಅದು ಪ್ರೀತಿಯದೋ? ಸ್ವಾರ್ಥದ್ದೋ ? ದ್ವೇಷದ್ದೋ?ಶುದ್ಧತೆಯದ್ದೋ ? ಅನುರಾಗದ್ದೋ? ಎಂದು. ನಿಂತ ಕಡೆಯಿಂದಲೇ ನಾವು ನಮ್ಮ ಪರಿಸರ ಸಮಾಜ ಮತ್ತು ಜಗತ್ತಿನೊಡನೆ ಹಲವಾರು ವಿಧವಾದ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತೇವೆ. ಕೆಲವರೊಂದಿಗೆ ಸ್ವಾರ್ಥಸಹಿತ ಪ್ರೀತಿ ಮತ್ತೆ ಕೆಲವರೊಂದಿಗೆ ಸ್ವಾರ್ಥಪೂರಿತ ಪ್ರೀತಿಯ ಸಂಬಂಧ, ಕೆಲವರೊಂದಿಗೆ ಸಕಾರಣ ದ್ವೇಷ(ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದು ಒತ್ತಟ್ಟಿಗೆ ಇರಲಿ) ಕೆಲವರೊಂದಿಗೆ ವಿನಾಕಾರಣ ದ್ವೇಷ. ಹೀಗೆ ಹಲವಾರು ರೀತಿಯ ಸಂಬಂಧಗಳು ಇರುತ್ತವೆ. ಆದರೆ ಜೀವನದಲ್ಲಿ ಪ್ರತೀ ಪ್ರಾಣಿಯು ಹೋರಾಡುವ ಆನಂದ ಮತ್ತು ಸುಖ ಇವುಗಳ ಪ್ರಮಾಣ ಮತ್ತು ಗುಣ ನಾವು ನಮ್ಮ ಸುತ್ತಲಿನ ಜಗತ್ತಿನೊಂದಿಗೆ ಇಟ್ಟಿರುವ ಸಂಬಂಧ ಸಂಪರ್ಕಗಳ ಮೇಲೆ ಅಧಾರಪಟ್ಟಿರುತ್ತದೆ.

ನಮ್ಮ ಗುಣ ಒಳ್ಳೆಯದಾದರೆ ಈ ಜಗತ್ತೇ ನಮಗೆ ಒಳ್ಳೆಯದಾಗಿ ಕಾಣುತ್ತದೆ. ಮೊದಲಲ್ಲಿ ಸ್ವಲ್ಪ ಕಠಿಣ ಎನಿಸಬಹುದು. ಕ್ರಮೇಣ ಸರಿಹೊಗುವುದು. ಏಕೆಂದರೆ “ನಾವು ಏನನ್ನು ಪಡೆದುಕೊಂಡಿರುತ್ತೇವೆಯೋ ಅದನ್ನೇ ಕೊಡಲು ಸಾಧ್ಯ ಮತ್ತು ಏನನ್ನು

ನೀಡುತ್ತೇವೆಯೋ ಅದನ್ನೇ ಪಡೆಯಲು ಸಾಧ್ಯ” ಹಾಗಾಗಿ ನಮಗೆ ಈ ಜಗತ್ತಿನಿಂದ “ಒಳ್ಳೆಯೆದೆ” ಬೇಕಾದರೆ ನಾವೂ ಸಹ ನಮ್ಮ ಸುತ್ತ ಜಗತ್ತಿಗೆ ಒಳ್ಳೆಯದನ್ನೇ ನೀಡಿದರೆ ನಮಗದು ಸಿಗುತ್ತದೆ” ಇದನ್ನೇ ಮಾನ್ಯ ಗುಂಡಪ್ಪನವರು “ಪುಷ್ಪವಾಗಿರು ನೀನು ”

ಎಂದು ಒಂದು ಸೂಕ್ತ ಸಲಹೆಯನ್ನು ನೀಡಿ ನೀನು ಸಭ್ಯತೆಯ, ಪ್ರೀತಿಯ, ಜ್ಞಾನದ, ಸೌಹಾರ್ಧತೆಯ ಸುಗಂಧವನ್ನು ಈ ಜಗಕ್ಕೆ ನೀಡುವಂಥವನಾಗು ಎಂದು ಒಂದು ಆದೇಶವನ್ನು ಈ ಕಗ್ಗದಲ್ಲಿ ನೀಡಿದ್ದಾರೆ.

ವಾಚಕರೆ ನಮಗೇನು ಬೇಕು ಎನ್ನವುದು ನಮಗೆ ತಿಳಿದಿರಬೇಕು. ನಾವೂ ಸಹ ಅದನ್ನು ನೀಡಲು ಸಿದ್ಧರಿರಬೇಕು. ಆಗ ನಾವು ನಿಂತ ಬಿಂದುವಿನಿಂದಲೇ ನಮಗೆ ಜಗತ್ತು ಸುಂದರವಾಗಿ ಕಾಣುವುದು.

ರಸಧಾರೆ – 137

ನಾನೆನುವವನೆ ವಿಶ್ವಚಕ್ರನಾಭಿಯವಂಗೆ |

ಕಾಣಬಹ ದಿಗ್ವಿವರ ಚಕ್ರನೇಮಿಪಥ ||

ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ |

ತಾನೊಂದೆ ಸತ್ವವದು – ಮಂಕುತಿಮ್ಮ

ನಾನೆನುವವನೆ = ನಾನು+ ಎನುವವನೆ // ವಿಶ್ವಚಕ್ರನಾಭಿಯವಂಗೆ = ವಿಶ್ವ + ಚಕ್ರ+ ನಾಭಿ+ ಅವಂಗೆ // ದಿಗ್ವಿವರ = ದಿಕ್ + ವಿವರ // ಅನಂತ್ಯವೀ = ಅನಂತ್ಯವು + ಈ // ಜಗಚ್ಚಕ್ರನಾಭಿಕ್ರಮತೆ = ಜಗತ್+ಚಕ್ರ+ನಾಭಿ+ಕ್ರಮತೆ// ತಾನೊಂದೆ = ತಾನು + ಒಂದೆ. ಚಕ್ರನೇಮಿಪಥ = ಬಂಡಿ ಚಕ್ರದ ಸುತ್ತೂ ಬಳಸಲ್ಪಟ್ಟಿರುವ ಕಬ್ಬಿಣದ ಬಳೆ.// ನಾಭಿ=ಕೇಂದ್ರ ಬಿಂದು

ನಾನು ಎಂದು ಯಾರಾದರೂ ಅಂದರೆ ಅವನು ಅವನ ಮಟ್ಟಿಗೆ ಅವನ ಒಂದು ಜಗಚ್ಚಕ್ರಕ್ಕೆ ನಾಭಿಯಂತಾಗುತ್ತಾನೆ. ಅವನು ನೋಡುತ್ತಿರುವುದು ಜಗತ್ತಿನ ಚಕ್ರದ ಅನಂತ ಉರುಳಾಟ. ಅದೊಂದೇ ಜೀವನದ ತಿರುಳು ಸತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾನು ಇದ್ದೇನೆ. ನನ್ನ ಸುತ್ತಿ ಈ ಜಗತ್ತು. ಅಂದರೆ ಅದು ಒಂದು ಚಕ್ರ. ಈ ” ನನ್ನ” ಜಗಚ್ಚಕ್ರಕ್ಕೆ ” ಕಾಣಬಹ ದಿಗ್ವಿವರ” ಅಂದರೆ ನಾನೆಷ್ಟು ದೂರ ಕಾಣುತ್ತೇನೋ, ನನ್ನ ಸಂಬಂಧ ಸಂಪರ್ಕಗಳು ಎಷ್ಟು ದೂರ ಹರಡಿಕೊಂಡಿದೆಯೋ ಅದೇ ನನ್ನ ಚಕ್ರದ ” ನೇಮಿಪಥ” . ಅಂದರೆ ಚಕ್ರದ ಹೊರ ಸುತ್ತಳತೆ. ಅಂದರೆ ನಾನು ನನ್ನ ಸಂಬಂಧಗಳ ಸ್ವರೂಪವೆಷ್ಟು ದೊಡ್ಡದೋ ಅಷ್ಟು ದೊಡ್ಡದು ನನ್ನ ಚಕ್ರ. ನನ್ನ ಒಂದೊಂದು ಸಂಬಂಧಗಳೂ ಸಹ ಈ ಚಕ್ರದ ಒಂದೊಂದು ಅಡ್ಡ ಪಟ್ಟಿಗಳು. ಹೇಗೆ ಚಕ್ರದ ಪಟ್ಟಿಗಳು ಹಾಳಾದರೆ ಹೊಸಪಟ್ಟಿಗಳನ್ನು ಹಾಕುತ್ತೇವೆಯೋ ಹಾಗೇ ನಮ್ಮ ಬದುಕಿನಲ್ಲೂ ಸಂದರ್ಭಕ್ಕನುಸಾರವಾಗಿ ನಮ್ಮ ಸಂಬಂಧಗಳೂ ಸಹ ಬದಲಾಗುತ್ತಲೇ ಇರುತ್ತವೆ. ಆದರೆ ಆ ಬದಲಾದ ಸಂದರ್ಭದಲ್ಲೂ ನಾವು ಆ ಚಕ್ರದ ಬಿಂದುವಾಗೆ ಉಳಿಯುತ್ತೇವೆ. ನಾವೇ ಆ ಚಕ್ರದ ಕೇಂದ್ರ ಬಿಂದು, ಅದನ್ನೇ ಮಾನ್ಯ ಗುಂಡಪ್ಪನವರು “ತಾನೊಂದೆ ಸತ್ವವದು” ಎಂದಿದ್ದಾರೆ.

ಪ್ರತಿಯೊಬ್ಬರದೂ ಒಂದೊಂದು ಚಕ್ರ. ಪ್ರತಿ ಚಕ್ರಕ್ಕೂ ಒಂದೊಂದು ” ನೇಮಿಪಥ ” ಕೆಲವರ ಚಕ್ರ ದೊಡ್ಡದು ಕೆಲವರ ಚಕ್ರ ಚಿಕ್ಕದು. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಬಂಧವನ್ನು ಹೇಗೆ ಇಟ್ಟುಕೊಂಡಿರುತ್ತಾರೋ ಅವರವರ ಚಕ್ರದ ಸ್ವರೂಪವೂ ಹಾಗೇ ಇರುತ್ತದೆ ಮತ್ತು ಅವರವರ ಚಕ್ರದ ಸ್ವರೂಪವೂ ಅವರವರ ಸಂಬಂಧದ ಸ್ವರೂಪದ ಮೇಲೆ ಅಧಾರ ಪಟ್ಟಿರುತ್ತದೆ. ಈ ಮನುಷ್ಯ ಮನುಷ್ಯರ ನಡುವೆ ಇರುವ ಸಂಬಂಧಗಳು ಮತ್ತು ಇಡೀ ಸೃಷ್ಟಿಯೊಡನೆ ಎಲ್ಲ ಮನುಷ್ಯರ ಸಂಪರ್ಕವು ಒಂದು ಸಂಕೀರ್ಣ ಮತ್ತು ಅನಂತ ಸಂಬಂಧಗಳ ಸರಮಾಲೆಯೇ ಅಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು “ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ” ಎಂದು ಉಲ್ಲೇಖಿಸಿದ್ದಾರೆ.

ವಾಚಕರೆ ನಾವು ನೋಡ ಬೇಕಾದದ್ದು ಅವಲೋಕಿಸಬೇಕಾದದ್ದು ಏನೆಂದರೆ , ನಮ್ಮ ಚಕ್ರದ ಸ್ವರೂಪವನ್ನು ಮತ್ತು ಸಂಬಂಧ ಸ್ವರೂಪವಾದ ಈ ಚಕ್ರದ ಅಡ್ಡಪಟ್ಟಿಗಳ ಸತ್ವವನ್ನು ಮತ್ತು ಸ್ವಾಸ್ಥ್ಯವನ್ನು. ಅಂಥಹ ಅವಲೋಕನವು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಅವಶ್ಯವಲ್ಲವೇ? ಸಾಧ್ಯವಾದರೆ ಸ್ವಾರ್ಥ, ಅಸೂಯೆ ದ್ವೇಷ ಮುಂತಾದವುಗಳಿಂದಾದ ನಮ್ಮ ಚಕ್ರದ ಪಟ್ಟಿಗಳನ್ನು ತೆಗೆದು ಪ್ರೀತಿ, ಪ್ರೇಮ, ವಿಶ್ವಾಸ ಸುಮನಸ್ಸಿನಂಥ ಪಟ್ಟಿಗಳಿಂದ ಮತ್ತೆ ನಮ್ಮ ಜೀವನದ ಚಕ್ರವನ್ನು ನಿರ್ಮಿಸಿದರೆ ಅದರ ಕೇಂದ್ರ ಬಿಂದುವಾದ ನಾವು ಸಂತೋಷದಿಂದಿರಬಹುದು ಅಲ್ಲವೇ?

ರಸಧಾರೆ – 138

ಬಾನಾಚೆಯಿಂ ವಿಶ್ವಸತ್ವ ತಾನಿಳಿದಿಳೆಗೆ |

ನಾನೆನುವ ಚೇತನದಿ ರೂಪಗೊಂಡಿಹುದೋ ||

ನಾನೆನುವ ಕೇಂದ್ರದಿನೆ ಹೊರಟ ಸತ್ವದ ಪರಿಧಿ |

ಬಾನಾಚೆ ಹಬ್ಬಿಹುದೋ ? – ಮಂಕುತಿಮ್ಮ

ಬಾನಾಚೆಯಿಂ = ಬಾನ+ ಆಚೆಯಿಂದ // ತಾನಿಳಿದಿಳೆಗೆ = ತಾನು+ಇಳಿದು+ಇಳೆಗೆ

ಆಕಾಶದಾಚೆ ಅಂದರೆ ನಮಗಿಂತ ಬಹಳದೂರದಿ ಇರುವ ವಿಶ್ವ ಸತ್ವವು ತಾನು ಈ ಭೂಮಿಗೆ ಇಳಿದು ” ನಾನು” ಎನ್ನುವ ಚೇತನದ ರೂಪ ತಳೆದಿದೆಯೋ ಅಥವಾ ” ನಾನು” ಎನ್ನುವ ಒಂದು ಬಿಂದುವಿನಿಂದ ಹೊರಟ ಸತ್ವವು ಆಕಾಶದಾಚೆ ಹಬ್ಬಿಹುದೋ ಎಂದು ಒಂದು ಜಿಜ್ಞಾಸಾ ಭರಿತ ಉದ್ಗಾರವನ್ನು ಎತ್ತುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಜೀವಿ ಈ ಭೂಮಿಗೆ ಬರಬೇಕಾದರೆ ಪರಮ ಚೇತನದ ಒಂದಂಶವನ್ನು ಪಡೆದು, ಒಂದು ಜೀವಿಯಾಗಿ ಈ ಜಗತ್ತಿನಲ್ಲಿ ಜೀವಿಸುತ್ತದೆ. ಇದನ್ನೇ ಗುಂಡಪ್ಪನವರು ” ತಾನಿಳಿದಿಳೆಗೆ” ಎನ್ನುತ್ತಾರೆ. ಒಂದೊಂದು ಜೀವಿಗೆ ಒಂದೊಂದು ಆಯುವಿನ ಕಾಲ. ಆಯಸ್ಸು ಮುಗಿದಂತೆ ದೇಹ ಮನಸ್ಸು ಬುದ್ಧಿಗಳ ಸಂಗವನ್ನು ಆ ಚೇತನ ತೊರೆದು ಹೋಗುತ್ತದೆ. ಹೋದದ್ದು ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು “ಕಠ” ಉಪನಿಷತ್ತಿನಲ್ಲಿ ಯಮ, ನಚಿಕೇತನಿಗೆ ಆತ್ಮ ತತ್ವವನ್ನು ಹೇಳುವಾಗ ಹೇಳುತ್ತಾನೆ. ಆತ್ಮ ದೇಹವನ್ನು ತೊರೆದು ತನ್ನೊಡನೆ ಈ ಜನ್ಮದಲ್ಲಿ ಸಂಚಿತವಾದ ಎಲ್ಲ ವಾಸನೆಗಳನ್ನು ಪೂರ್ವಕರ್ಮರೂಪದಲ್ಲಿ ತನ್ನ ಸುತ್ತ ಒಂದು ಸೂಕ್ಷ್ಮ ಶರೀರದಲ್ಲಿ ಕೊಂಡು ಹೋಗುತ್ತದೆ. ಮತ್ತೆ ಅದು ಇನ್ನೊಂದು ಸ್ಥೂಲ ದೇಹವನ್ನು ಧರಿಸಿದಾಗ ಆ ಎಲ್ಲ ಪೂರ್ವ ಕರ್ಮಗಳನ್ನೂ, ವಾಸನೆಗಳನ್ನೂ ಪ್ರಕಟಗೊಳಿಸಿ ಮತ್ತೆ ಪೂರೈಸಿಕೊಳ್ಳುತ್ತದೆ. ಅಲ್ಲಿಯತನಕ ಆಕಾಶದಲ್ಲಿ ಅಣುರೂಪದಲ್ಲಿ ಗಾಳಿಯಲ್ಲಿ ಸೇರಿಕೊಂಡಿರುತ್ತದೆ. ” ಪುನರಪಿ ಜನನಂ, ಪುನರಪಿ ಮರಣಂ” ಎಂದು ಆಚಾರ್ಯ ಶಂಕರರು ಹೇಳುವಂತೆ ಅಥವಾ ” ಜಾತಸ್ಯ ಮರಣಂ ದೃವಂ, ದೃವಂ ಜನ್ಮಂ ಮೃತಸ್ಯಚ” ಎಂದು ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಆತ್ಮವು ಮತ್ತೆ ಮತ್ತೆ ಜನ್ಮ ತಳೆಯುತ್ತದೆ.

ಹೀಗೆ ಆಕಾಶ ತತ್ವದಲ್ಲಿರುವ ಆ ಬೃಹತ್ ಚೇತನದಿಂದ ಒಂದು ಅಂಶ ಧರೆಗೆ ದೇಹಧಾರಣೆಗೆ ಬರುತ್ತದೆ. ಬಂದು ಜೀವಿಸುತ್ತದೆ, ಮತ್ತೆ ಆಕಾಶಕ್ಕೇರುತ್ತದೆ ಮತ್ತೆ ಬರುತ್ತದೆ ಮತ್ತೆ ಹೋಗುತ್ತದೆ. ಪ್ರತಿಬಾರಿ ಬಂದಾಗಲೂ ಒಂದು ಬಿಂದುವಿನ೦ತೆ ಇಲ್ಲಿರುತ್ತದೆ. ಇಲ್ಲಿನ ಹಲವಾರು ಬಿಂದುಗಳೊಡನೆ ಸಂಬಂಧದ ಚಕ್ರಗಮನ. ಈ ಭೂಮಿಯ ಮೇಲೆ ಎಷ್ಟು ಜೀವರಾಶಿಗಳಿವೆಯೋ ಅಷ್ಟೇಯೋ, ಹೆಚ್ಚೋ ಅಥವಾ ಕಡಿಮೆಯೋ ಜೀವರಾಶಿಗಳು ಆಕಾಶದಲ್ಲಿಯೂ ಅಣು ರೂಪದಲ್ಲಿ ಇದೆ ಎಂದು ನಮ್ಮ ನಂಬಿಕೆ. ಅಲ್ಲಿಯದು ಇಲ್ಲಿಗೆ ಬರುತ್ತವೆ, ಇಲ್ಲಿಯವು ಅಲ್ಲಿಗೆ ಹೊಗುತ್ತವೆ. ಇದೆ ಈ ಕಗ್ಗದ ಹೂರಣ.

ಆದರೆ ಈ ಪ್ರಕ್ರಿಯೆಯನ್ನು ನಾಲ್ಕು ಸಾಲುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕೇವಲ ಮಹಾ ಮಹಾ ವಿದ್ವಾಂಸರು ಮಾತ್ರ ಇದನ್ನು ಸೂಕ್ತವಾಗಿ ವಿವರಿಸ ಬಲ್ಲರು. ಆದರೆ ಎಂದು ಆ ಜೀವ ಪೂರ್ವ ಕರ್ಮ ರಹಿತವಾಗುತ್ತದೋ ಅಥವಾ ಎಂದು ಆ ಜೀವ ವಾಸನಾ ರಹಿತವಾಗುತ್ತದೋ ಅಂದು ಅದು ಪ್ರಕೃತಿ ಸಂಬಂಧವನ್ನು ತೊರೆದು ಶುದ್ಧವಾಗಿ ತನ್ನ ಸ್ವಸ್ಥಾನವಾದ ಪರಮಾತ್ಮನನ್ನು ಸೇರುತ್ತದೆ, ಎನ್ನುತ್ತದೆ ಭಾರತೀಯ ವೇದಾಂತ.

ವಾಚಕರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಒಂದು ಸಂದೇಹದ ರೂಪದಲ್ಲಿ ಈ ವಿಚಾರವನ್ನು ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದರೂ, ನಮ್ಮನ್ನು ವಿಚಾರಕ್ಕೆ ಹಚ್ಚುವುದಕ್ಕೊಸ್ಕರವೇ ಈ ರೀತಿಯ ಪ್ರಸ್ತಾಪಮಾಡಿದ್ದಾರೆ ಎಂದು ನನ್ನ ನಂಬಿಕೆ. ಈ ವಿಚಾರವನ್ನು ನಂಬ ಬೇಕು. ಏಕೆಂದರೆ ನಂಬಿಕೆಯೆ ನಮ್ಮ ಅಸ್ತಿತ್ವದ ಆಧಾರವಲ್ಲವೇ?

ರಸಧಾರೆ – 139

ಸೃಷ್ಟಿಕತೆ ಕಟ್ಟು ಕಥೆ ; ವಿಲಯ ಕಥೆ ಬರಿಯ ಕಥೆ |

ಹುಟ್ಟು ಸಾವುಗಳೊಂದೆ ಪುರುಳಿನೆರಡು ದಶೆ ||

ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |

ಸತ್ಯ ಜಗದಲಿ ಕಾಣೋ- ಮಂಕುತಿಮ್ಮ.

ಪುರುಳಿನೆರಡು = ಹುರುಲಿನ, ಸಾರದ ಎರಡು ಮುಖ

ಸೃಷ್ಟಿ ಎನ್ನುವುದು, ಲಯ ಎನ್ನುವುದು, ಹುಟ್ಟು ಸಾವು ಎನ್ನುವುದು ಕೇವಲ ಕಲ್ಪನಾ ಕಥೆಗಳಷ್ಟೇ, ಪ್ರತಿನಿತ್ಯ ಪರಿವರ್ತನೆಯಾಗುವುದೇ ಸತ್ಯ ಈ ಜಗದಲ್ಲಿ. ಅದ್ದನ್ನು ಕಾಣು ಎಂದು ಮಾನ್ಯ ಗುಂಡಪ್ಪನವರು ಒಂದು ಆದೇಶವನ್ನು ನಮಗೆ ಕೊಡುತ್ತಾರೆ ಈ ಕಗ್ಗದಲ್ಲಿ.

ಈ ಜಗತ್ತಿನಲ್ಲಿ ಎಲ್ಲವೂ ಮೊದಲಿನಿಂದ ಇದೆ. ಮುಂದೆಯೂ ಇರುತ್ತದೆ. ಯಾವುದಕ್ಕೂ ನಾಶವಿಲ್ಲ. ಯಾವುದಕ್ಕೂ ಅಂತ್ಯವಿಲ್ಲ ಹಾಗಾಗಿ ಈ ಜಗತ್ತನ್ನು ಅನಂತ ಎಂದಿದ್ದಾರೆ. ನಮ್ಮ ಪೂರ್ವಜರು. ನಮ್ಮ ಋಷಿ ಮುನಿಗಳು ಸಾಮಾನ್ಯ ಜನರಿಗೆ, ಇಲ್ಲಿ ಆಗುವ ರೂಪಾಂತರದ ಪ್ರಕ್ರಿಯೆಯನ್ನು ವಿವರಿಸಿದರೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೇ ಇರಬೇಕು, ಇದಕ್ಕೆ ಹುಟ್ಟು ಸಾವು ಎಂದು ಹೆಸರಿಟ್ಟು ಕರೆದಿರುವುದು. ಇಲ್ಲಿ ಹುಟ್ಟುಸಾವುಗಳೆಂಬುದು ಕೇವಲ ಬಾಹ್ಯ ಪರಿಕಲ್ಪನೆ. ಎಲ್ಲವೂ ಒಂದು ರೂಪಾಂತರ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಇರುತ್ತದೆ. ಇದನ್ನು ಜನ್ಮ, ಬಾಲ್ಯ, ಕೌಮಾರ್ಯ, ಯೌವನ, ಪ್ರೌಢ, ವಾರ್ಧಕ್ಯ ಮರಣ ಎಂದು ಈ ರೂಪಾಂತರದ ಬೇರೆ ಬೇರೆ ಹಂತಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆದು ನಮ್ಮಂಥಹ ಸಾಮಾನ್ಯರಿಗೆ ಅರ್ಥವಾಗುವಂತೆ ಅನುವುಮಾಡಿಕೊಟ್ಟಿದ್ದಾರೆ.

ನಾ ಮತ್ತೆ ಮತ್ತೆ ಅದೇ ಉದಾಹರಣೆಯನ್ನು ಕೊಡುತ್ತೇನೆ. ನೋಡಿ ಒಂದು ಮರದ ಬೀಜ ಭೂಮಿಯಲ್ಲಿ ಹುದುಗಿ, ನೀರು ಮತ್ತು ಮಣ್ಣಿನೊಳಗೆ ಮಣ್ಣಿನ ಸಾರಗಳ ಸಂಪರ್ಕದಿಂದ, ರೂಪಾಂತರಗೊಂಡು ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ , ಮರವಾಗಿ ಹೆಮ್ಮರವಾಗಿ ರೂಪುಗೊಳ್ಳುತ್ತದೆ. ಆ ಬೀಜವೇ ಈ ಮರವಾಯಿತೆಂದಾದ ಮೇಲೆ ಇದು ಕೇವಲ ರೂಪಾಂತರವಷ್ಟೇ ಅಲ್ಲವೇ? ಇದನ್ನೇ ನಾವು ಎಲ್ಲ ಚರಾಚರ ಸೃಷ್ಟಿಗೂ ಅನ್ವಯಿಸಿಕೊಳ್ಳಬಹುದು. ಒಂದು ಮಾನವ ಶಿಶು ತಾಯ ಗರ್ಭದಲ್ಲಿ ರೂಪುಗೊಂಡು ಭೂಪತನವಾದಂದಿನಿಂದ ಬೆಳೆದು ಮೇಲೆ ಹೇಳಿದ ಎಲ್ಲ ಹಂತಗಳನ್ನೂ ದಾಟಿ ಕೊನೆಗೆ ಒಂದು ದಿನ ಇಲ್ಲವಾಗುವುದೂ ಸಹ ಈ ರೂಪಾಂತರದ ಪ್ರಕ್ರಿಯೆ ಅಲ್ಲದೆ ಮತ್ತೇನು. ಅಣುಗಳ ಸಮೂಹವೇ ಈ ರೂಪಗಳು ಎಲ್ಲ ಅನುಗಳೂ ಆ ಪರಮ ಅಣುವಿನ ಒಂದು ಬಾಗವೇ ಅಲ್ಲವೇ?

ಆದರೆ ಮಾಯೆಯಿಂದ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುವಂತಾಗಿದೆ. ಇದು ಆ ಪರಮಾತ್ಮನ ಲೀಲೆ. ನಾವೆಲ್ಲಾ ಅವನ ಲೀಲಾವಿನೋದದಲ್ಲಿ ಒಂದೊಂದು ರೂಪಗಳಷ್ಟೇ. ಇದನ್ನು ಗಟ್ಟಿಯಾಗಿ ನಂಬಿದರೆ ನಮಗೆ ಈ ಜಗತ್ತಿನೊಂದಿಗೆ ಅತೀವವಾದ ಅಂಟು ಮತ್ತು ಅಂಟಿನಿಂದಾದ ನಂಟು ಇರದು. ಅಂತಹ ಸ್ಥಿತಿಯಲ್ಲಿ ಸುಖ ದುಃಖಗಳ ಸಂಕೋಲೆಯಿಂದ ಬಿಡುಗಡೆಯಾಗಿ ಒಂದು ನಿರ್ಲಿಪ್ತ ಆನಂದದ ಭಾವ ಇರುವುದು.

ರಸಧಾರೆ – 140

ಹಳೆ ಸೂರ್ಯ- ಹಳೆ ಚಂದ್ರ ಹಳೆ ಭೂಮಿ ಹಳೆ ನೀರು

ಹಳೆ ಹಿಮಾಚಲ ಗಂಗೆ ಹಳೆ ವಂಶ ಚರಿತೆ

ಹಳೆಯವಿವು ನೀನಿದರೊಳಾವುದನು ಕಳೆದೀಯೋ?

ಹಳತು ಹೊಸತರೊಳಿರದೆ? – ಮಂಕುತಿಮ್ಮ

ನಾವು ನೋಡುವ ಸೂರ್ಯ, ಚಂದ್ರ ಈ ಭೂಮಿ ನಮ್ಮ ದೇಶದ ಹೆಮ್ಮೆಯ ಹಿಮಾಲಯ ಹಿಂದೆ ಆಗಿಹೋದ ವಂಶಗಳ ಚರಿತ್ರೆ ಎಲ್ಲವೂ ಹಳೆಯದೇ ಅಲ್ಲವೇ? ಅವರಲ್ಲಿ ನೀನು ಯಾವುದನ್ನು ತೆಗೆದು ಹಾಕಬೇಕು ಅಥವಾ ಅಳಿಸಿಹಾಕಬೇಕು ಎಂದುಕೊಂಡಿದ್ದೀಯೇ? ಹಳತು ಹೊಸತರಲ್ಲಿ ಇರಲು ಸಾಧ್ಯವಿಲ್ಲವೇ? ಎಂದು ಒಂದು ವಿಷಯವನ್ನು ಪ್ರಶ್ನಾರೂಪದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಾವು ನೋಡುವ ಆಕಾಶ ಮತ್ತು ಆ ಆಕಾಶದ ಎಲ್ಲ ಕಾಯಗಳು, ನಮ್ಮ ಸೌರಮಂಡಲದ ಸೂರ್ಯ ಚಂದ್ರರು ನಾವಿರುವ ಈ ಭೂಮಿ ಮತ್ತು ಭೂಮಿಯ ಮೇಲಿರುವ ಬೆಟ್ಟ ಗುಡ್ಡ ನದಿ ಮತ್ತು ಮಾನವರಾದ ನಮ್ಮ ಪೂರ್ವಜರ ಚರಿತ್ರೆ ಮುಂತಾದವುಗಳೆಲ್ಲವೂ ಹಳತು. ಆದರೆ ಹಳತೆಂದು ಇದಾವುದನ್ನೂ ಮರೆಯಲು ನಮ್ಮ ಬದುಕಿನಿಂದ ದೂರಾಗಿಸುವುದು ಸಾದ್ಯವಿಲ್ಲ. ಹಳತೆ ನಮ್ಮ ಇಂದಿನದಕ್ಕೆ ಅಡಿಪಾಯ. ಆ ಹಿಮಾಚಲ ನಮ್ಮ ದೇಶವನ್ನು ಇಂದಿಗೂ ಹಲವಾರು ವಿಧದಲ್ಲಿ ರಕ್ಷಿಸುತ್ತಿದೆ. ಆ ಗಂಗೆ ಇಂದಿಗೂ ಹರಿಯುತ್ತಾ ನಮ್ಮ ದೇಶದ ಜನ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇದ್ದಾಳೆ. ಆ ಸೂರ್ಯ ಚಂದ್ರರೂ ಸಹಃ ಅಂದಿಂದ ಇಂದಿನವರೆಗೆ ನಮ್ಮ ಅಸ್ವ್ತಿತ್ವಕ್ಕೆ ಸಹಾಯಕರಾಗೆ ಇದ್ದಾರೆ. ಇವಾವುದನ್ನೂ ನಾವು ಬಿಡಲಾಗದು. ನಮ್ಮ ಅಸ್ತಿತ್ವಕ್ಕೆ ಆಧಾರವಾಗಿರುವ ಈ ಎಲ್ಲವನ್ನೂ ನಾವು ಬಿಟ್ಟರೆ ಅಥವಾ ಮರೆತರೆ ನಮ್ಮ ಬೇರುಗಳು ಅಲುಗಾಡಿ ನಾವು ನಿಂತ ನೆಲ ಅಲುಗಾಡುವುದು, ನಮ್ಮ ಅಧಾರ ಬಲಹೀನವಾಗುವುದು ಮತ್ತು ನಮ್ಮ ಪಥನದ ಆರಂಭ ಅಲ್ಲಿಂದಲೇ ಸಾಗುತ್ತದೆ.

ಈ ವಿಚಾರಗಳನ್ನೇ ಇಂದಿನ ವಿಧ್ಯಮಾನಗಳಿಗೆ ಅನ್ವಯಿಸಿಕೊಂಡರೆ, ನಾವು ಈಗಾಗಲೇ ಪಥನದ ಹಾದಿಯಲ್ಲಿ ಸಾಗಿದ್ದೇವೆ. ನಮಗೆ ಹಳೆಯದರ ಮೇಲೆ ಸ್ವಲ್ಪವೂ ಗೌರವವಿಲ್ಲ. ನಮ್ಮ ಪೂರ್ವಜರ ಬಗ್ಗೆ, ಅವರ ಜೀವನ ಶೈಲಿಯಲ್ಲಿನ ಗಟ್ಟಿತನದ ಬಗ್ಗೆ , ನಮಗೆ ಕಿಂಚಿತ್ತೂ ಆಸಕ್ತಿಯಿಲ್ಲ. ನಮಗೆ ನಮದೇ ಲೋಕ. ವೃದ್ಧ ತಂದೆ ತಾಯಿಗಳು ನಮಗೆ ನಮ್ಮ ಆನಂದ,ಸಂತೋಷದ, ಅಧಾರವಾಗದೆ ಇಂದು ಬೇಸರಕ್ಕೆ, ಕಷ್ಟಕ್ಕೆ ಕಾರಣರಾಗಿದ್ದಾರೆ. ನಮಗೆ ಕೇವಲ ನಾವೇ ಮುಖ್ಯ. ಅವರಿಂದ ನಾವಿದ್ದೇವೆ, ಅವರಿಗೆ ನಾವು ಇಂದು ನೀಡದ ಪ್ರೀತಿ ಗೌರವಗಳನ್ನು ನಾವೂ ಸಹ ನಮ್ಮ ಮಕ್ಕಳಿಂದ ನಾವು ವೃದ್ಧರಾದಮೇಲೆ ಅಪೇಕ್ಷೆ ಪಡುತ್ತೇವೆ. ನಾವು ಪ್ರೀತಿ ವಿಶ್ವಾಸ ಗೌರವಗಳನ್ನು ಅಪೇಕ್ಷಿಸಬೇಕಾದರೆ ಇಂದು ನಾವು ನೀಡಬೇಕು. ಏಕೆಂದರೆ ನಾವು ನೀಡದ್ದನ್ನು ಅಪೇಕ್ಷೆಪಡಲಾಗುವುದಿಲ್ಲ ಎಂಬ ಕಿಂಚಿತ್ ಸಾಮಾನ್ಯ ಜ್ಞಾನವಾದರೂ ಇಲ್ಲ ನಮಗೆ. ಇದು ಪಥನವಲ್ಲದೆ ಮತ್ತೇನು?

ನಮ್ಮ ಭಾರತೀಯ ಸಂಸ್ಕೃತಿ, ಸಾಹಿತ್ಯ, ಸಂಗೀತ, ಕಲೆ ಇವೆಲ್ಲವೂ ಒಂದು ಪರಂಪರೆಯಿಂದ ಬಂದದ್ದು. ಹಳತಿನ ಆಧಾರದ ಮೇಲೆಯೇ ಹೊಸ ಹೊಸ ಆಯಾಮಗಳನ್ನು ಬೆಳೆಸಿಕೊಂಡು ಹಳತಿನ ಬೇರುಗಳನ್ನು ಮತ್ತಷ್ಟು ದೃಢವಾಗಿಸಿ, ಹೊಸ ರೂಪ ತಳೆದು ಜ್ವಾಜ್ಯಲ್ಯಮಾನವಾಗಿ ಬೆಳೆದಿದ್ದು. ಆದರೆ ಇಂದು ಒಟ್ಟು ಸಮುದಾಯದ ಗತಿ ಬೇರೆಲ್ಲೋ ಹೋಗುತ್ತಿದೆ. ಹಳತನ್ನು ಮರೆತು ಬೇರೆ ಏನನ್ನೋ ಕಾಣಲು, ಶೂನ್ಯದಲ್ಲಿ ಸಂತೋಷವನ್ನು ಹುಡುಕುವ ಪ್ರಯತ್ನ ಇಂದು ನಡೆದಿದೆ. ಇದು ಸಲ್ಲ ಮತ್ತೆ ನಾವು ನಮ್ಮ ಪುರಾತನ ಬೇರುಗಳಿಗೆ ನೀರೆರೆದು ಹಸಿರಾಗಿಸಿ ಹಳತಿನ ವಿಶಾಲ ರಂಗಸ್ಥಳದಲ್ಲಿ ನಮ್ಮ ಜೀವನದ ಪಾತ್ರಗಳನ್ನು ಧರಿಸಿದಾಗ, ಸಂತೋಷದ ಬದುಕು, ಚೈತನ್ಯದ ಬದುಕು ನಮ್ಮದಾಗಬಹುದು. ಇಲ್ಲದಿದ್ದರೆ ಪಥನ ಶತಃಸಿದ್ಧ. ನಮ್ಮ ಇಂದಿನದಲ್ಲಿ ಹಳತಿನ ಎಲ್ಲ ಬಣ್ಣ ರುಚಿ ಗಂಧಗಳೂ ಸಹ ಇವೆ. ಇದನ್ನೇ ಮಾನ್ಯ ಗುಂಡಪ್ಪನವರು” ಹಳತು ಹೊಸತರೊಳಿರದೆ ” ಎಂದು ಸೂಚ್ಯವಾಗಿ ಕೇಳಿದ್ದಾರೆ, ಈ ಕಗ್ಗದಲ್ಲಿ.

ವಾಚಕರೆ ನಾವು ನಮ್ಮ ಪರಂಪರೆಯನ್ನು, ಆಧಾರ ಆಧಾರದ ಮೇಲೆ ಬೆಳೆದ ನಮ್ಮ ಸಂಸ್ಕಾರ,ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಬಿಡದೆ ನಿರಂತರ ಪ್ರಯತ್ನ ಮಾಡಿದಾಗ ನಮ್ಮ ಜೀವನವು ಒಂದು ಧನ್ಯ ಮತ್ತು ಸಫಲ ಜೀವನವಾಗಬಹುದು ಅಲ್ಲವೇ?

ರಸಧಾರೆ – 141

ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು

ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ

ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ.

ಕೃಷಿಯೋ = ಪ್ರಯತ್ನ // ಮತ್ತುದಿಸುವುದು = ಮತ್ತೆ ಉದಯಿಸುವುದು.// ಕ್ಷಿತಿ = ಇಳೆ

ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ . ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ..ಈ ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾಳೆ, ಮತ್ತೆ ಮತ್ತೆ ಹೊಸ ಜೀವ ಉದಯಿಸುವುದು. ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ ಎಂದು ಒಂದು ಸುಂದರ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ಸೃಷ್ಟಿಯ ಆದಿಯಲ್ಲಿ ಏನಿತ್ತೋ ಏನೋ ನಾನರಿಯೆ. ಆದರೆ ಅಂದಿನಿಂದ ಇಂದಿಗೂ ಪ್ರತಿ ಕ್ಷಣ ಸಾವಿರಾರು ಜೀವಿಗಳು ಈ ಜಗತ್ತಿನಲ್ಲಿ ಜನಿಸುತ್ತಿದ್ದಾರೆ ಮತ್ತು ಅಳಿಯುತ್ತಿದ್ದಾರೆ. ಕೋಟ್ಯಾಂತರ ಜೀವಿಗಳ ಸೃಷ್ಟಿ ಮತ್ತು ಅಳಿವು ಪ್ರತಿಕ್ಷಣವೂ ನಡೆಯುತ್ತಿದೆ. ಪ್ರಾಣಿಗಳು ಪಕ್ಷಿಗಳು ಕೀಟಗಳು ಮಾನವರು ಮತ್ತು ಜಲಚರಗಳಲ್ಲಿ ನಿರಂತರ ಈ ಪ್ರಕ್ರಿಯೆ ನಡೆಯುತ್ತಿದೆ. ಅವ್ಯಾಹತ ಹರಿಯುವ ಕಾಲದ ರಂಗಮಂಟಪದಲ್ಲಿ ನಡೆದಾಡುವ ಪಾತ್ರಗಳ ಕುಸಿಯುವಿಕೆ ಮತ್ತು ಹೊಸ ಹೊಸ ಪಾತ್ರಗಳ ಸೃಷ್ಟಿ ಮತ್ತು ನಲಿದಾಟ,ಕಾಲನೆಷ್ಟು ಅವ್ಯಾಹತನೋ ಅಷ್ಟೇ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಒಂದು ದೇಹ ಮತ್ತು ಚೇತನದ ನಿರಂತರ ಸಮಾಗಮ, ಜೀವನ ಮತ್ತು ನಿರ್ಗಮನದ ಆಟವೇ ಈ ಇಳೆಯಲ್ಲಿ. ಆ ಪರಮಾತ್ಮನ ಸೃಷ್ಟಿ ಸ್ಥಿತಿ ಲಯಗಳಾಟ. ಇದೆ ಪ್ರಕೃತಿ ಮತ್ತು ಅದರ ಸಹಜ ಸ್ಥಿತಿ.

ಬಂಧುಗಳೇ, ನಾವು ಬೇಕೆಂದರೂ, ಬೇಡವೆಂದರೂ, ಇಷ್ಟಪಟ್ಟರೂ, ಪಡದೆ ಇದ್ದರೂ ನಮ್ಮ ನಿಮಿತ್ತವಿಲ್ಲದೆಯೇ ನಡೆಯುವ ಈ ಗೊಂಬೆಯಾಟದಲ್ಲಿ ನಾವೆಲ್ಲಾ ಕೇವಲ ಪಾತ್ರಧಾರಿಗಳು. ಆ ಜಗನ್ನಾಟಕ ಸೂತ್ರಧಾರಿ ಆಡಿಸುವ ಬೊಂಬೆಗಳು. ನಮ್ಮ ಪಾತ್ರ ಬಂದಾಗ ನಮ್ಮ ಪ್ರವೇಶ, ಪಾತ್ರ ಮುಗಿದೊಡನೆ ನಿರ್ಗಮನ, ಇವೆರಡರ ನಡುವೆ ನಾವಾಡುವ ಆಟ ಹೇಳತೀರದು. ಅಜ್ಞಾನದಿಂದ ನಮ್ಮನ್ನು ” ನಾನು ” ಎಂದುಕೊಂಡು ನಾವು ಪಡುವ ಪಾಡನ್ನು ನೋಡಿ ಆ ಪರಮಾತ್ಮನೂ ಸಹ ನೋಡಿ ನಗುತ್ತಿರಬೇಕು, ಅಲ್ಲವೇ? ಈ ಜಗತ್ತಿನ ಎಲ್ಲ ಮಾನವರಿಗೂ ” ನಾವು ಒಂದು ದಿನ ಈ ಪಾತ್ರದಿಂದ ನಿರ್ಗಮಿಸಲೇ ಬೇಕು” ಎಂದು ಗೊತ್ತು. ಆ ಸತ್ಯವನ್ನು ಮರೆಸಿ ನಮ್ಮಿಂದ ಹಲವಾರು ಕೆಲಸಗಳನ್ನು ಮಾಡಿಸುವುದು ಮಾಯೆ. ನಮಗರ್ಥವಾಗದ ಮಾಯೆ. ನಾವು ನಿರ್ದೇಶಕನು ಸೂಚಿಸಿದ ಮಾರ್ಗದಲ್ಲಿ ನಮ್ಮ ಪಾತ್ರ ವಹಿಸಿದರೆ ಸುಖ, ನಮ್ಮ “ಅಹಂ”ಕಾರದ ಮಾತು ಕೇಳಿದರೆ ದುಃಖ. ಆಯ್ಕೆ ನಮ್ಮದು. ಸುಖ ಅಥವಾ ದುಃಖ ನಮ್ಮದು.

ರಸಧಾರೆ – 142

ಮೂಲವಸ್ತುವದೊಂದು ಲೀಲೆಗೋಸುಗನೂರು |

ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||

ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ |

ಆಳುತಿರು ಜೀವನವ – ಮಂಕುತಿಮ್ಮ ||

ಮೂಲವಸ್ತುವದೊಂದು = ಮೂಲ + ವಸ್ತುವು+ ಅದು+ ಒಂದು// ಲೀಲೆಗೊಸುಗನೂರು = ಲೀಲೆಗೋಸುಗ + ನೂರು// ಕೇವಲದೊಳೇಕ = ಕೇವಲದ+ಒಳು + ಏಕ//

ಇಡೀ ಜಗತ್ತಿನ ಮೂಲ ವಸ್ತುವು ಒಂದೇ. ಆ ಪರಮಾತ್ಮ ತನ್ನ ಲೀಲಾ ವಿನೋದಕಾಗಿ ತನ್ನನ್ನೇ ತಾನು ಹಲವಾಗಿಸಿಕೊಂಡಿದ್ದಾನೆ. ಕಾಲದ ನೋಟಕ್ಕೆ ಬಹಳವಾಗಿ ಕಂಡರೂ ಅದು ಕೇವಲ ಒಂದೇ. ಸ್ಥೂಲವಾಗಿ ನೋಡಿದಾಗ ಹಲವಾಗಿ ಬಾಳಿದರೂ ಸೂಕ್ಷ್ಮ ರೂಪದಿ ನೋಡಿದಾಗ ಜಗತ್ತಿನ ಎಲ್ಲ ವಸ್ತುಗಳಲ್ಲೂ ಸಾಮ್ಯತೆಯನ್ನು ತೋರುತ್ತಾ ಆ ಆತ್ಮನೇ ಆಳುತ್ತಿದ್ದಾನೆ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಜಗತ್ತಿನ ಎಲ್ಲವೂ ಒಂದೇ ಮೂಲದಿಂದ ಬಂದು ಹಲವಾಗಿ ಪ್ರಕಟಗೊಂಡಿದೆ ಎನ್ನುವುದು ಪ್ರಮಾಣಸಿದ್ಧ . ಆದರೂ ನಮಗೆ ಅದು ಬೇರೆ ಬೇರೆಯಾಗಿ ಕಾಣುತ್ತವೆ. ಹಾಗೆ ಬೇರೆ ಬೇರೆ ಕಾಣುವುದು ಕೇವಲ ಸ್ಥೂಲ ರೂಪ. ಆದರೆ ಸೂಕ್ಷ್ಮ ರೂಪದಲ್ಲಿ ನೋಡಿದರೆ ಎಲ್ಲವೂ ಒಂದೇ ಎಂದು ತೋರುತ್ತದೆ ಮತ್ತು ಅರ್ಥವಾಗುತ್ತದೆ. ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಪ್ರತಿಯೊಂದೂ ಸ್ಥೂಲರೂಪದಲ್ಲಿ ಇದ್ದು ಈ ಸ್ಥೂಲರೂಪಕ್ಕೆ ಚಲನೆಯನ್ನು ನೀಡುವ ಚೇತನವೇ ಸೂಕ್ಷ್ಮರೂಪದಲ್ಲಿ ಇದೆ. ಆ ಚೇತನವು ಪರಮ ಚೈತನ್ಯದ ಒಂದು ಅಂಶವಷ್ಟೇ. ಆ ಪರಮ ಚೈತನ್ಯವೇ ಇಡೀ ವಿಶ್ವಕ್ಕೆ ಮೂಲ. ಆ ಪರಮಾತ್ಮ ಕೇವಲ ತನ್ನ ಲೀಲಾ ವಿನೋದಕ್ಕಾಗಿ ಎಲ್ಲವನ್ನೂ ಸೃಜಿಸಿ ಅದಕ್ಕೆ ಚೈತನ್ಯ ರೂಪದಲ್ಲಿ ತಾನೆ ಒಳಹೊಕ್ಕು ತನ್ನ ಲೀಲೆಯನ್ನು ನಡೆಸಿದ್ದಾನೆ. ಅದನ್ನೇ ಮಾನ್ಯ ಗುಂಡಪ್ಪನವರು ” ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ” ಎಂದಿದ್ದಾರೆ.

ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾದುದೇನೆಂದರೆ ಸ್ಥೂಲ ರೂಪದಲ್ಲಿರುವ ನಾವೆಲ್ಲಾ ನಮ್ಮ ನಮ್ಮನ್ನು ಬೇರೆಬೇರೆಯಾಗಿ ಗುರುತಿಸಿ ಕೊಂಡರೂ ಮತ್ತು ಬೇರೆ ಬೇರೆ ರೂಪಗಳಿಗೆ ಬೇರೆ ಬೇರೆ ಹೆಸರುಗಳನ್ನೂ ಇಟ್ಟರೂ ನಮ್ಮಲ್ಲಿ ಇರುವ ಸಾಮ್ಯತೆ ಏನೆಂದರೆ ಏಕರೂಪದಲ್ಲಿರುವ ಆ ಸೂಕ್ಷ ಚೇತನವೇ. ಅಂದರೆ ನಾವೆಲ್ಲ ಬೇರೆ ಬೇರೆ ರೂಪದಲ್ಲಿ ಇದ್ದರೂ ನಮ್ಮಲ್ಲಿ ಇರುವ ಆ ಸಾಮ್ಯ ರೂಪದ ಚೇತನವೇ ಪರಮಾತ್ಮ.

ಹೇಗೆ ಸಾಮ್ಯರೂಪದ, ಒಂದೇ ತೆರನಾಗಿರುವ, ವಿದ್ಯುತ್ ಹಲವಾರು ವಿಧದ ವಿವಿಧ ರೂಪದ ವಿದ್ಯುತ್ ಬಲ್ಬುಗಳನ್ನು ಬೆಳಗುತ್ತದೆಯೋ ಹಾಗೆ ಕೋಟ್ಯಾಂತರ ರೂಪಗಳನ್ನು ಧರಿಸಿರುವುದು, ಆ ರೂಪಗಳನ್ನು ಬೆಳಗುವುದೂ ಸಹ ಸಾಮ್ಯರೂಪದ ಚೇತನ ಅಥವಾ ಆತ್ಮ. ನಾವು ನಮ್ಮ ನಮ್ಮ ರೂಪಗಳ “ಮರೆಸಿ” ಕಂಡರೆ ನಮಗೆ ಕಾಣುವುದು ಆ ಏಕರೂಪದ ಪರಮಾತ್ಮ ಮಾತ್ರ ಎನ್ನುವುದೇ ಈ ಕಗ್ಗದ ಹೂರಣ. ಆದರೆ ಮಾಯೆ ನಮ್ಮನ್ನು ಹಿಡಿದು ಬಂಧಿಸಿ ಬಿಟ್ಟಿದೆ. ನಾವು, ಆ ಸೂಕ್ಷ್ಮವಾಗಿ ಸಾಮ್ಯತೆಯಿಂದ ಎಲ್ಲ ಜೀವಿಗಳಲ್ಲೂ ಇರುವ, ಆ ಪರಮಾತ್ಮನನ್ನು ಕಾಣಲು ಆಶಕ್ಯರಾಗಿದ್ದೇವೆ. ಮಾಯೆಯಿಂದ ಆವರಿಸಲ್ಪಟ್ಟ ನಮ್ಮ ಮನಸ್ಸು ಬುದ್ಧಿಗಳು ಈ ಬೇಧದ ಭಾವದಿಂದ ಹೊರಬರಬೇಕಾದರೆ, ಮುಕ್ತನಾಗಬೇಕಾದರೆ ಆರು ವೈರಿಗಳ ಸೆರೆಯಿಂದ ಹೊರಬರಬೇಕು.

ವಾಚಕ ಮಹಾಶಯರೇ, ಅದು ಸಾಧ್ಯವೋ, ಇಲ್ಲವೋ ನಾನರಿಯೆ! ಸಾಧ್ಯವಿರಬಹುದು. ಎಂದು ಮತ್ತು ಹೇಗೆ ಸಾಧ್ಯವೆಂದು ನಾನರಿಯೆ !! ಆದರೆ ಸಾಧ್ಯವಾದಲ್ಲಿ ಇಡೀ ಭುವನವೇ ನಾವು ಶಾಂತಿಯಿಂದ, ಸೌಹಾರ್ಧತೆಯಿಂದ. ಪ್ರೀತಿಯಿಂದ, ಪ್ರೇಮದಿಂದ ಮತ್ತು ಆನಂದದಿಂದ ಬಾಳಲು ಎಲ್ಲ ಜೀವಿಗಳೂ ಇಷ್ಟಪಡುವ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.

ರಸಧಾರೆ – 143

ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |

ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||

ಕೃತ್ರಿಮವನೆಡೆಬಿಡದೆ ನಡೆಸಿ ನಗುವ ವಿಲಾಸಿ |

ಚಿತ್ರಕಾರಿಯೋ ಮಾಯೆ – ಮಂಕುತಿಮ್ಮ

ಮದುವೆಮಂಟಪದೊಲು = ಮಾಡುವೆ+ಮಂಟಪದ+ಒಲು// ಕ್ಷಾತ್ರದಗ್ನಿಗಳ = ಕ್ಷಾತ್ರದ + ಅಗ್ನಿಗಳ // ನರಹೃದಯಗಳೊಳಿರಿಸಿ = ನರ + ಹೃದಯದೊಳು + ಇರಿಸಿ// ಕೃತ್ರಿಮವನೆಡೆಬಿಡದೆ = ಕೃತ್ರಿಮವನು+ ಎಡೆಬಿಡದೆ .

ಧಾತ್ರಿ=ಭೂಮಿ // ಮಂಟಪದೊಲು ಮಂಟಪದ ಹಾಗೆ// ಕ್ಷಾತ್ರದಗ್ನಿಗಳ = ಕ್ರಿಯಾತ್ಮಕವಾದ ಚೈತನ್ಯವನ್ನು // ಕೃತ್ರಿಮ = ಅಸಹಜತೆ// ವಿಲಾಸಿ ಚಿತ್ರಕಾರಿಯೋ = ವಿಲಸಿಸಿರುವ ಮಾಯಾಂಗನೆ.

ಈ ಧರಣಿಯನ್ನು ಮನುಷ್ಯನ ಕಣ್ಣಿಗೆ ಸುಂದರವಾಗಿ ಕಾಣುವಂತೆ, ಮದುವೆ ಮಂಟಪದಂತೆ ಸಿಂಗರಿಸಿ, ಇದರೊಳಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಆಸ್ಥೆ ಮತ್ತು ಆಸೆಯನ್ನು ಅವನ ಹೃದಯದಲ್ಲಿ ತುಂಬಿ ಸತ್ಯವನ್ನು ಮರೆಸಿ ಕೇವಲ ಅಸಹಜತೆಯನ್ನು ಮೆರೆಯುವಂತೆ ಮಾಡಿರುವ ಮತ್ತು ನೋಡಿ ನಗುತ್ತಿರುವ “ಮಾಯೆ” ಒಂದು ಸುಂದರ ಚಿತ್ರಕಾರಿಯೋ ಎಂದು ಒಂದು ಗಹನವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹೌದಲ್ಲವೇ ಸಹೃದಯರೇ, ಇಡೀ ಜಗತ್ತು ಹಲವಾರು ಭೂ ವಿನ್ಯಾಸಗಳಿಂದ, ಬೆಟ್ಟ ಗುಡ್ಡಗಳಿಂದ, ನದಿ ತೊರೆ ಮತ್ತು ದುಮ್ಮಿಕುವ ಜರಿಗಳಿಂದ, ಕೋಟಿ ಕೋಟಿ ವಿನ್ಯಾಸ, ಬಣ್ಣ, ಮತ್ತು ಆಕಾರಗಳಿಂದ ಕೂಡಿದ ಕ್ರಿಮಿ, ಕೀಟ, ಹುಳ, ಹುಪ್ಪಟೆ,ಪ್ರಾಣಿ , ಪಕ್ಷಿ, ಮನುಷ್ಯ, ಗಿಡ, ಮರಗಳು, ಹೂ, ಹಣ್ಣುಗಳು, ಸುಗಂಧಗಳು, ಹೀಗೆ ಹೇಳಲಾಗದಷ್ಟು, ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಹುಟ್ಟಿದ ಪ್ರತಿ ಮನುಷ್ಯನು ಅವನ ಜೀವನದಲ್ಲಿ ಒಂದು ಬಾರಿಯಾದರೂ ಇದರ ಈ ಅಂದವನ್ನು ನೋಡಿ ” ಆಹಾ ಎಷ್ಟು ಚೆನ್ನಾಗಿದೆ” ಎಂದು ಒಂದು ಉದ್ಹ್ಘಾರವನ್ನು ತೆಗೆಯದೆ ಇರಲು ಸಾಧ್ಯವೇ ಇಲ್ಲ. ಒಂದೊಂದು ಕಡೆಯಲ್ಲಿ ಒಂದೊಂದು ವಿನ್ಯಾಸ. ಮಣ್ಣಿನ ಗುಣ ಬೇರೆ, ನೀರಿನ ಗುಣ ಬೇರೆ, ಗಾಳಿಯ ಮತ್ತದರ ಗಂಧದ ಗುಣ ಬೇರೆ. ಇವುಗಳ ಗುಣಗಳಿಗೆ ಅನುಸಾರವಾಗಿ ಎಲ್ಲ ಜೀವಿಗಳ ಗುಣಗಳೂ ಬೇರೆ ಬೇರೆ. ಆದರೂ ಪ್ರತಿ ವೈವಿಧ್ಯತೆಯಲ್ಲೂ ಒಂದು ಮನ ಮೋಹಕ ಸುಂದರತೆ. ಇದನ್ನು ನೋಡಿ ಆನಂದಿಸದೇ, ಆಕರ್ಷಿತನಾ(ಳಾ)ಗದೆ ಇರುವ ಮನುಷ್ಯ ಇರಲು ಸಾಧ್ಯವೇ ಇಲ್ಲ ಅಲ್ಲವೇ?

ಆದರೆ ಇದು ಇಹ. ಇದು ಇಹವಾದರೆ ಪರವೂ ಒಂದು ಉಂಟು. ನಾವು ಇರುವುದೇ ಇಹದಲ್ಲಿ. ಪರಕ್ಕೆ ಹೋಗುವ ಪರದಾಟ. ಆದರೆ ಇಲ್ಲಿರುವ ಅಂದರೆ ಇಹದಲ್ಲಿರುವ ಎಲ್ಲ ಅಂದಗಳೂ ಅಶಾಶ್ವತವಾದರೂ, ಮನುಷ್ಯನನ್ನು ಆಕರ್ಷಿಸಿ ಮೋಹಗೊಳಿಸಿ ತನ್ನೆಡೆಗೆ ಸೆಳೆಯುತ್ತಿದೆ. ಈ ಸೆಳೆತದಿಂದ ಹೊರಬರಲು ಮಾನವನ ನಿರಂತರ ಪ್ರಯತ್ನ ನಡೆದೇ ಇದೆ. ಜನ್ಮ ಜನ್ಮಾಂತರದಿಂದ ನಡೆಯುತ್ತಲೇ ಇದೆ. ಪ್ರತಿ ಜನ್ಮದಲ್ಲೂ ಕೆಲವರು ಕೆಲವು ಹೆಜ್ಜೆ ಮುನ್ನಡೆಯುತ್ತಾರೆ, ಕೆಲವರು ಹಿನ್ನಡೆಯನ್ನೂ ಹಾಕುತ್ತಾರೆ. ಮತ್ತೆ ಮುನ್ನಡೆಯುವ ಪ್ರಯತ್ನ. “ಎಣ್ಣೆ ಸುರಿದ ನೆಲದಮೇಲೆ ನಡೆಯಲು ಪ್ರಯತ್ನ ಪಡುವವನ ರೀತಿ”. ಈ ಜಗತ್ತಿನ ಮಾಯೆಯಂಬ ಎಣ್ಣೆ ನಮ್ಮನ್ನು ಮುನ್ನಡೆಯಲು ಬಿಡುವುದೇ ಇಲ್ಲ. ಬಹಳಷ್ಟು ಸಾರಿ ಜಾರಿ ಬೀಳುವುದೇ ನಮ್ಮ ಪಾಡು.

“ಈ ಜಗತ್ತನ್ನು, ಆಕರ್ಷಣೀಯವಾದ ಈ ಜಗತ್ತಿನ ಸೊಬಗನ್ನೂ, ನಮ್ಮನ್ನು ಈ ಆಕರ್ಷಣೆಯ ವೃತ್ತದೊಳಕ್ಕೆ ಸೆಳೆದುಕೊಳ್ಳುವ ಮಾಯೆಯನ್ನು”, ಸೃಷ್ಟಿಸಿದ ಆ ದೈವವೂ ಸಹ ಈ ನಮ್ಮ ಪಾಡನ್ನು ಕಂಡು ಒಳಗೊಳಗೇ ಹಲವಾರುಬಾರಿ ನಕ್ಕಿರಬಹುದು, ಗಹಗಹಿಸಿ ಅಟ್ಟಹಾಸದ ಕೇಕೆ ಹಾಕಿರಬಹುದು , ಅಣಕವಾಡಿರಬಹುದು. ” ಜಗವನ್ನು ಸೃಜಿಸಿ, ನಿನ್ನನ್ನು ಸೃಷ್ಟಿಮಾಡಿ, ಜಗಕ್ಕೆ ಅಂದವನ್ನು ಕೊಟ್ಟು, ಮಾಯೆಯ ಪ್ರಾಭಲ್ಯದಿಂದ ಈ ಜಗತ್ತಿನಲ್ಲಿ ನಿನಗೆ ಆಸೆಯನ್ನೂ ಹುಟ್ಟಿಸಿ, ನನ್ನ ಸೇರುವಾಸೆಯನ್ನೂ ಕೊಟ್ಟು ಅದರ ಸೆಳೆತದಲ್ಲಿ ಸಿಕ್ಕಿಹಾಕಿಕೊಂಡು ಪರದಾಡುವಂತೆ ಮಾಡಿದ್ದೇನೆ, ಇದರಿಂದ ಬಿಡಿಸಿಕೊಳ್ಳುವ ಮಾರ್ಗವನ್ನೂ ತೋರಿದ್ದೇನೆ. ನಿನ್ನ ಶಕ್ತಿಯಿಂದ ಬಿಡಿಸಿಕೊಂಡು ಬರುವೆಯೋ ಅಥವಾ ಅದರ ಸೆಳೆತದಲ್ಲೇ ಅಲ್ಲೇ ಒದ್ದಾಡುವೆಯೋ ” ಎಂದು ತಮಾಷೆಯಾಟವನ್ನು ಆಡುತ್ತಿದ್ದಾನೆ. ಇದು ಮಾಯೆ ಎಂದು ಬಹಳಷ್ಟು ಜನರಿಗೆ ಅರಿವಾಗುವುದೇ ಇಲ್ಲ. ಹಾಗೆ ಅರಿವಾದವರಲ್ಲಿ ಬಹಳಷ್ಟುಜನ ಇದರಿಂದ ಮುಕ್ತರಾಗುವ ಪ್ರಯತ್ನವನ್ನೇ ಮಾಡುವುದಿಲ್ಲ. ಹಾಗೆ ಪ್ರಯತ್ನ ಪಟ್ಟವರಲ್ಲಿ ತದೇಕಚಿತ್ತದಿಂದ ಮುಂದುವರೆದವರು ವಿರಳ. ಹಾಗೆ ಮುಂದುವರೆದವರಲ್ಲಿ ಮುಕ್ತಿ ಪಡೆದವರು ಅತೀ ವಿರಳ.

ವಾಚಕರೆ ನಾವೂ ಸಹ ಬಿಡುಗಡೆಯ ಪ್ರಯತ್ನ ಪಡುವ, ದಿಟ್ಟ ಹೆಜ್ಜೆಯನ್ನು ಇಡುವ ಸಂಕಲ್ಪವನ್ನು ಇಂದೇ ಮಾಡೋಣವೆ?

You may Also Like :

 

Leave a Comment