Mankuthimmana kagga (ಮಂಕುತಿಮ್ಮನ ಕಗ್ಗ ) with meanings 121-130

 ರಸಧಾರೆ – 121

ತನುವೇನು? ಮನವೇನು? ಪರಮಾಣು ಸಂಧಾನ |

ಕುಣಿಸುತಿಹುದುಭಯವನು ಮೂರನೆಯದೊಂದು ||

ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು |

ದಣಿಯದದನರಸು ನೀಂ – ಮಂಕುತಿಮ್ಮ ||

ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು

ಪರಮಾಣು = ಸೂಕ್ಷ್ಮಾತಿ ಸೂಕ್ಷ್ಮ ಅಣುಗಳು // ಉಭಯವನು = ಎರಡನ್ನೂ // ಎಸಕದ = ಮಿನುಗುವಿಕೆಯ // ಅರಸು = ಹುಡುಕು.

ದೇಹವೇನು ಮನಸ್ಸೇನು, ಎರಡೂ ಸಹ ಪರಮಾಣುಗಳ ಅನುಸಂದಾನದಿಂದ ಕಾರ್ಯಪ್ರವೃತ್ತವಾಗಿವೆ. ಆದರೆ ಇವರೆಡನ್ನೂ ಸಂಧಿ ಮಾಡಿ ಆಡಿಸುತಿರುವುದು ಆ ಮೂರನೆಯ ಪರಮ ಶಕ್ತಿ. ಹುಲ್ಲಿನ ಹಸಿರಿಗೂ, ತಾರೆಯ ಮಿನುಗುವಿಕೆಗೂ ಕಾರಣವೇನೆಂಬುದನ್ನು ನೀ ಹುಡುಕು ಎಂದು ಒಂದು ಆದೇಶವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ ಕೊಟ್ಟಿದಾರೆ.

ವಾಚಕರೆ, ನಮ್ಮ, ನಮ್ಮದೇನು ಎಲ್ಲಾ ಚರಾಚರ ಪ್ರಾಣಿಗಳ ದೇಹದ ರಚನೆಯಾಗಿರುವುದೇ, ಸೂಕ್ಷ್ಮ ಜೀವಾಣುಗಳ ಸಮರ್ಪಕ ಜೋಡಣೆಯಿಂದ. ಜೋಡಣಾನಾಕ್ರಮದ ಅನುಸಾರ ಅದನ್ನು ಮನುಷ್ಯನೆಂದೋ ನಾಯಿಯೆಂದೋ, ಕೋತಿಯೆಂದೋ, ಸೊಳ್ಳೆಯೆಂದೋ, ಪರಿಗಣಿಸಲ್ಪಡುತ್ತದೆ. ಈ ಜೀವಕಣಗಳು ಎಷ್ಟು ಸೂಕ್ಷ್ಮವೆಂದರೆ, ದುರ್ಬೀನಿನ ಕಣ್ಣಿಗೂ ಕಾಣಲಸದಲ. ಆದರೆ ಅವುಗಳ ಕಾರ್ಯವೋ ಮೇರುಸಮಾನ. , ಉಸಿರಾಟ, ರಕ್ತ ಸಂಚಲನೆ, ಆಹಾರ ಸೇವನೆ, ಪಚನ, ಶಕ್ತಿ ಉತ್ಪನ್ನ, ಸಮಾನ ವಿತರಣ ಮತ್ತು ತ್ಯಜನ ಹೀಗೆ ಎಲ್ಲಕೆಲಸಗಳಲ್ಲೂ ನಿರಂತರ ನಿಮಗ್ನವಾಗಿರುತ್ತವೆ ಈ ಜೀವ ಕಣಗಳು . ಹತ್ತು ಹಲವಾರು ರಸಗಳ ಉತ್ಪತ್ತಿ.ಆ ರಸಗಳಿಂದ ದೇಹ ಕಾರ್ಯ ಪ್ರವೃತ್ತಿ. ಒಂದಕ್ಕೊಂದಕ್ಕೆ ನಿಕಟ ಸಂಪರ್ಕ. ಕಾಲಲ್ಲಿ ಸೊಳ್ಳೆ ಕಡಿದರೆ ತಲೆಯಲ್ಲಿ ಕಂಪನ, ಕೈಗಳು ರಕ್ಷಣೆಗೆ ಧಾವಿಸುತ್ತವೆ. ಎಂದೋ ಕಂಡ ವ್ಯಕ್ತಿಯ ಮತ್ತೆ ಕಂಡರೆ, ಕೂಡಲೇ ಬುದ್ಧಿಯಲ್ಲಿನ ನೆನಪು ಮನದ ಅಂಗಳಕ್ಕೆ. ರೂಪ, ಬಣ್ಣ, ನಡಿಗೆ, ಹಾವ, ಭಾವ ಹೆಸರು ಎಲ್ಲದರ ಜ್ಞಾಪಕ ಮರುಕಳಿಸುತ್ತದೆ.

ಹೀಗೆ ಈ ದೇಹ ಮತ್ತು ಮನಸ್ಸಿನ ನಿಕಟ ಮತ್ತು ಸೂಕ್ಷ್ಮ ಸಂಬಂಧವನ್ನು ಕಾರ್ಯೋನುಮುಖಗೊಳಿಸುವುದಕ್ಕೆ ಕಾರಣ ಆ ಪರಮಾತ್ಮ ಶಕ್ತಿ. ಆ ಶಕ್ತಿಯೂ ಸಹ ಈ ಅಣುಗಳಲ್ಲಿ ತಾನೇ ಹರಡಿಕೊಂಡು, ಎಲ್ಲಕ್ಕೂ ಇಂಬುಕೊಡುತ್ತಾ ಪ್ರತಿ ಪ್ರಾಣಿಯನ್ನೂ ಎಲ್ಲ ಕಾರ್ಯಗಳಿಗೂ ಪ್ರೇರೇಪಿಸುತ್ತದೆ. ಈ ತನು ಮನ ಮತ್ತು ಆ ಪರಮ ಚೇತನದ ಅವಿನಾಭಾವ ಸಂಭಂದವೇ ಈ ಜಗದ್ವ್ಯಾಪಾರ. ಈ ಜಗತ್ತಿನ ಎಲ್ಲ ಚರಾಚರ ಪ್ರಾಣಿಗಳು ಈ ಸಂಬಂಧದ ಚಕ್ರದಲ್ಲೇ ಸುತ್ತುತ್ತಿರುತ್ತವೆ. ಇದು, ಎಲ್ಲೋ ಅಡಗಿದ್ದು ಮಳೆಯಾದೊಡನೆ, ಚಂಗನೆ ಚಿಗುರಿ ಧರೆಗೆ ಹಸಿರ ಹೊದಿಸುವ ಹುಲ್ಲಿಗೂ, ಎಲ್ಲೋ ಭೂಮಿಯಿಂದ ಕೋಟಿ ಕೋಟಿ ಮೈಲಿ ದೂರದಲ್ಲಿ ಮಿನಿಗುತ್ತಿರುವ ಆ ನಕ್ಷತ್ರಕ್ಕೂ ಅನ್ವಯಿಸುತ್ತದೆ.

ಈ ತನುವೂ ನಾವಲ್ಲ. ಈ ಮನವೂ ನಾವಲ್ಲ. ಏಕೆಂದರೆ ನಾವು ಉಪಯೋಗಿಸುವ ಪದಗಳನ್ನು ಸ್ವಲ್ಪ ನೋಡಿ. ” ನನ್ನ” ಮೈಯಲ್ಲಾ ನೋಯುತ್ತಿದೆ. “ನನ್ನ” ಮನಸ್ಸೇಕೋ ಸರಿಯಿಲ್ಲ. ‘ನನ್ನ ” ಹೆಸರು ರಾಮ. ಹಾಗಾಗಿ ಎಲ್ಲವನ್ನೂ ನಾನು ಹೊಂದಿದ್ದೇನೆ ಮಾತ್ರ. ಆದರೆ ಅದು ನಾನಲ್ಲ. ಈ ಅಣುಗಳಿಂದಾದ ತನು ( ದೇಹ ) ರೂಪವಿಲ್ಲದ ಮನಸ್ಸು ಮತ್ತು ಇವೆರಡನ್ನೂ ಕಾರ್ಯಪ್ರವೃತ್ತಿಗೆ ತೊಡಗಿಸುವ ಆ ಪರಮ ಚೇತನಗಳ ಮಧ್ಯೆ ” ನಾನು ” ಯಾರು ಎಂಬುದನ್ನು ಅರಿಯಬೇಕು. ಆ ಪರಮ ಚೇತನವನ್ನು ಅರಿಯಬೇಕು. ಆಗಲೇ ನಮ್ಮ ಬದುಕಿನ ಸೂಕ್ಷ್ಮತೆಗಳು ನಮಗೆ ಅರಿವಾಗಿ ಸತ್ಯವಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಇದುವೇ ಅಧ್ಯಾತ್ಮ. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡಲು ಮುಂದೆ ಸಾಗೊಣವೇ?

ರಸಧಾರೆ – 122, ಸಚ್ಚಿದಾನಂದ ತತ್ವ

ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು. |

ಒಣಗಿದಂತಿರುವ ತೃಣಮೂಲ ಮೊಳೆಯುವುದು ||

ಮನುಜರಳಿವರು ಮರುಸಂತಾನ ನಿಂತಿಹುದು |

ಅಣಗದಾತ್ಮದ ಸತ್ವ – ಮಂಕುತಿಮ್ಮ

ಮೃತಿಯನೆಳಸದೆ = ಮೃತಿಯ + ಎಳಸದೆ// ಮನುಜರಳಿವರು = ಮನುಜರು + ಅಳಿವರು// ಅಣಗದಾತ್ಮದ = ಅಣಗದು + ಆತ್ಮದ

ಮೃತಿಯನೆಳಸದೆ = ಮೃತ್ಯುವನ್ನು ಬಯಸದೆ // ತೃಣಮೂಲ = ಹುಲ್ಲಿನ ಬೇರು//ಅಳಿವರು=ಸಾಯುವರು// ಮರುಸಂತಾನ = ಮುಂದಿನ ಪೀಳಿಗೆ// ಅಣಗದು = ಕಡಿಮೆಯಾಗದು

ಹುಟ್ಟಿದವರು ಯಾರೂ ಕೂಡಲೇ ಸಾಯಲು ಇಚ್ಚಿಸುವುದಿಲ್ಲ. ತಮ್ಮ ಕುಲವನ್ನು ಬೆಳೆಸಲು ಇಚ್ಚಿಸುತ್ತಾರೆ. ನೋಡಲು ಒಣಗಿದಂತೆ ಇದ್ದರೂ ಮಳೆಯಾದಾಗ, ಹೇಗೆ, ಮತ್ತೆ ತನ್ನ ಒಡಲಿಂದ ಜೀವಂತವಾಗಿ ಚಿಗುರು ಹಸಿರೊಡೆದು ನಲಿಯುವ ಹಸಿರು ಹುಲ್ಲಂತೆ, ಮನುಷ್ಯರು ಸತ್ತರೂ ಅವರ ಸಂತಾನ ಈ ಭೂಮಿಯಲ್ಲಿ ನಿಂತಿಹುದು. ಆತ್ಮದ ಸತ್ವ ಈ ಜಗತ್ತಿನಲ್ಲಿ ಎಂದಿಗೂ ಕಡಿಮೆಯಾಗದು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.

ಈ ಭೂಮಿಗೆ ಎಷ್ಟು ವಯಸ್ಸಾಗಿದೆಯೋ ನಮಗೆ ಗೊತ್ತಿಲ್ಲ. ಈ ಭೂಮಿಯಮೇಲೆ ಮೊದಲ ಮಾನವ ಎಂದು ಬಂದನೋ, ನಮಗೆ ಗೊತ್ತಿಲ್ಲ. ಆದರೂ ಅಂದಿನಿಂದ ಇಂದಿನತನಕ ಮಾನವ ಸಂತತಿ ಇದೆ. ಮಾನವ ಸಂತತಿ ಬರುವ ಮುನ್ನ ಇದ್ದ ಪ್ರಾಣಿಪಕ್ಷಿಗಳ ಹಲವಾರು ಪ್ರಬೇಧಗಳು ಇಂದು ಸಂಪೂರ್ಣವಾಗಿ ನಾಶವಾಗಿ ಇಲ್ಲವಾಗಿವೆ. ಆದರೆ ಬೇರೆ ಬೇರೆ ಪ್ರಾಣಿ ಪಕ್ಷಿಗಳು ಉದ್ಭವವಾಗಿವೆ!! ಈ ರೀತಿಯ ನಿರಂತರ ಚಕ್ರ ನಡೆದು ಬಂದಿದೆ ಈ ಭುವಿಯಲ್ಲಿ. ಇಲ್ಲಿ ಮಾನವ, ತಾನು ನಿರಂತರವಾಗಿ ಇರಲಾಗದಿದ್ದರೂ ತನ್ನ ಸಂತತಿಯಿಂದ ಕುಲವನ್ನು ಬೆಳೆಸುತ್ತಿದ್ದಾನೆ. ಭೂಮಿಯಲ್ಲಿ ಒಂದು ಒಣ ಹುಲ್ಲಿನ ಬೇರು ಹೇಗೆ ಒಂದು ಮಳೆಯಾದರೆ ಚಿಗುರೊಡೆದು ಧರೆಗೆಲ್ಲ ಹಸಿರ ಹೊದಿಕೆಯನ್ನು ಹೊದಿಸುವಂತೆ ಆ ಪರಮಾತ್ವ ತತ್ವ ಈ ಜಗತ್ತಿನಲ್ಲಿ ನಿರಂತರ, ನಿತ್ಯ ಮತ್ತು ಅನಂತವಾಗಿರುವ ಸತ್ಯ.

ಈ ಜಗತ್ತಿನ ಸಕಲ ಚರಾಚರ ಪ್ರಾಣಿಗಳ ಅಸ್ತಿತ್ವಕ್ಕೆ ಮತ್ತು ಕಾರ್ಯ ಪ್ರವೃತ್ತಿಗೆ ಕಾರಣವಾದ ಚೇತನ ಮಾತ್ರ ಹಾಗೆ ಇದೆ. ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಈ ಜಗತ್ತಿನ ಚಿತ್ರ ವಿಚಿತ್ರ ರೂಪಗಳಲ್ಲಿ ತನ್ನ ಪ್ರಭಾವವನ್ನು ತೋರುತ್ತಾ ಆನಂದಪಡುತ್ತಿದೆ, ಎಲ್ಲ ಚರಾಚರಗಳಲ್ಲೂ ತನ್ನ ಅಸ್ತಿತ್ವವನ್ನು ಪ್ರಕಾಶಿಸಿ ಎಲ್ಲ ರೂಪಗಳಲ್ಲೂ ” ಈಶಾವಾಸ್ಯಮಿದಂ ಸರ್ವಂ ಯತ್ಕಿನ್ಚಿಂತ್ ಜಗತ್ಯಾಂ ಜಗತ್” ಎಂದು ಹೇಳುವ ಈಶಾವಾಸ್ಯೋಪನಿಷತ್ತಿನ ಉಕ್ತಿಯಂತೆ.

ರೂಪಗಳು ಬೇರೆಯಾದರೂ, ಕಾಲಮಾನ ಬೇರೆಯಾದರೂ ಸದಾಕಾಲ ತನ್ನ ಪ್ರಭಾವವನ್ನು ಒಂದೇ ರೀತಿ ಅನಾದಿಕಾಲದಿಂದಲೂ ತೋರುತ್ತಾ ಹಾಗೆಯೇ ನಿರಂತರವಾಗಿ ನಡೆಯುತ್ತಾ ಅನಂತಕಾಲದವರೆಗೂ ಇರುವುದೇ ಆ ಪರಮಾತ್ಮ ತತ್ವ. ಅದಕ್ಕೆ ಅಂತವೇ ಇಲ್ಲ. ಅದು ಅನಂತ ಎನ್ನುವುದೇ ಈ ಕಗ್ಗದ ಹೂರಣ. ವಾಚಕರೆ ನಾವು ಇಲ್ಲಿ ಕಾಣಬೇಕಾದದ್ದು ಏನೆಂದರೆ, ಒಂದೇ ಪರಮ ಸತ್ವ, ತಾನೇ ಎಲ್ಲವೂ ಆಗಿ, ಎಲ್ಲವನ್ನೂ ಕಾರ್ಯೋನ್ಮುಖವಾಗಿಸುವ ಚೇತನವೂ ಆಗಿ, ಎಲ್ಲ ವಿಚಿತ್ರಗಳನ್ನೂ ತೋರುತ್ತಾ, ಎಲ್ಲವನ್ನು ತಾನೇ ಅನುಭವಿಸುತ್ತಾ ನಿರಂತರವಾಗಿ ಅನಂತಕಾಲ, ಸ್ವಲ್ಪವೂ ಅಣಗದೆ ಇರುವುದೇ ಆ ಪರಮ ಚೇತನ. ಅದಕ್ಕೆ ನಮ್ಮ ನಮನವನ್ನು ಸಲ್ಲಿಸಬೇಕಷ್ಟೇ.

ರಸಧಾರೆ – 123, ಸಚ್ಚಿದಾನಂದ ತತ್ವ

ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |

ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||

ಸನ್ನಿಹಿಸುವಂ ಸುಮ್ಮನಿರಲೊಲದೆ ಮಾನವನು |

ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ||

ಬನ್ನಬವಣೆಗಳ= ಬನ್ನ+ಬವಣೆಗಳ // ತಾನೆನಿತೆನಿತು = ತಾನು + ಎನಿತೆನಿತು // ಪಟ್ಟಿರೆಯುಮಿನ್ನೊಮ್ಮೆ= ಪಟ್ಟರೆಯು೦ + ಇನ್ನೊಮ್ಮೆ // ಸಾಹಸಗಳಿಂಸನ್ನಿಹಿಸುವಂ= ಸಾಹಸಗಳಿಂ + ಸನ್ನಿಹಿಸುವ//

ಚಿನ್ಮಯತೆಯಾತ್ಮಗುಣ = ಚಿನ್ಮಯತೆ+ ಆತ್ಮಗುಣ

ತಾನೆನಿತೆನಿತು= ತಾನು ಎಷ್ಟೆಷ್ಟು // ಬನ್ನಬವಣೆಗಳ= ಕಷ್ಟ ತೊಂದರೆ ಸೋಲುಗಳನ್ನ // ಪಟ್ಟರೆಯು೦ = ಪಟ್ಟರೂ/ ಸನ್ನಿಹಿಸುವ = ತೊಡಗುವ// ಸುಮ್ಮನಿರಲೊಲದೆ = ಸುಮ್ಮನಿರಲಾರದೆ //

ಚಿನ್ಮಯತೆಯಾತ್ಮಗುಣ = ಜ್ಞಾನಸ್ವಾರೂಪವು ಆತ್ಮದ ಗುಣ

ಮನುಷ್ಯ ಎಷ್ಟೊಂದು ಕಷ್ಟ ಅನುಭವಿಸಿದರೂ, ಸೋಲನ್ನು ಅನುಭವಿಸಿದರೂ, ತೊಂದರೆಗಳನ್ನು ಎದುರಿಸದರೂ, ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ, ಹೊಸ ಹೊಸ ಸಾಹಸಗಳನ್ನು ಮಾಡುತ್ತಲೇ ಇರುತ್ತಾನೆ. ಸುಮ್ಮನಿರಲಾಗದಿರುವುದು ಮನುಷ್ಯನಲ್ಲಿರುವ ಜ್ಞಾನಸ್ವಾರೂಪವಾದ ಆತ್ಮದ ಗುಣವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪ ಮಾಡುತ್ತಾರೆ.

ಮನುಷ್ಯನೇ ಆಗಲಿ ಬೇರೆ ಯಾವ ಪ್ರಾಣಿಯೇ ಆಗಲಿ ತನ್ನ ಮನೋ ವಾಂಚೆಯ ಪೂರೈಕೆಯ ಹಾದಿಯಲ್ಲಿ ಎಷ್ಟೇ ಎಡರು ತೊಡರುಗಳು ಬಂದರೂ ಮರಳಿ ಮರಳಿ ಯತ್ನವನ್ನು ಮಾಡುವುದೇ ಸಹಜ ಗುಣ. ಅವನ ಗುಣ ಎಂದರೆ ಈ ಎಲ್ಲ ಚರಾಚರಗಳಲ್ಲಿ ಪ್ರವಹಿಸುವ ಜ್ಞಾನಸ್ವಾರೂಪವಾದ, ಪರಮ ಚೇತನದ ಅಂಶವಾದ ಆತ್ಮನ ಗುಣ ಎಂದು ಅರ್ಥೈಸಿಕೊಳ್ಳ ಬಹುದು. ನಾನು ಕೆಲವೊಮ್ಮೆ, ಮನೆಯಲ್ಲಿ ನೆಲದಮೇಲೆ ಹರಿದಾಡುವ ಇರುವೆಗಳ ಹಾದಿಯಲ್ಲಿ ಒಂದು ಕಡ್ಡಿಯನ್ನೂ ಅಥವಾ ನನ್ನ ಬೆರಳನ್ನೇ ಅಡ್ಡವಾಗಿ ಇಟ್ಟಾಗ, ಅದು ಧೃತಿಗೆಡದೆ, ಪಕ್ಕದಿಂದ ಹರಿದು ಹೋಗುಲುಧ್ಯುಕ್ತವಾಗುತ್ತದೆ. ಅದರ ಹಾದಿಯಲ್ಲಿ ಪ್ರತೀ ಬಾರಿ ಅಡ್ಡ ಬಂದಾಗ ಪ್ರತಿ ಬಾರಿಯೂ ಅದು ಪ್ರಯತ್ನವನ್ನು ಬಿಡಿವುದೇ ಇಲ್ಲ. ಒಂದು ಗಿಡದ ರೆಂಬೆಯನ್ನು ಕಡಿದರೆ ಅಕ್ಕಪಕ್ಕಗಳಲ್ಲಿ ಹೊಸ ಚಿಗುರೊಡೆದು, ಒಂದರೆಡೆ ನಾಲ್ಕಾರು ಕೊಂಬೆಗಳುದ್ಭವವಾಗುತ್ತವೆ. ಆಲ್ಲಿ ಚೇತನವಿರುವ ತನಕ ಈ ಪ್ರಯತ್ನ ನಡೆದೇ ಇರುತ್ತದೆ.

ಹಾಗೆಯೇ ಸಕಲ ಚರಾಚರಗಳಲ್ಲಿ ಉತ್ಕೃಷ್ಟ ದೇಹವನ್ನು ಹೊಂದಿದ ಮನುಷ್ಯನೂ ಸಹ ಉಸಿರಾಡುವ ತನಕ ಹೆಣಗಾಡುತ್ತಲೇ ಇರುತ್ತಾನೆ, ಹೋರಾಡುತ್ತಲೇ ಇರುತ್ತಾನೆ. ತನ್ನ ಪ್ರಯತ್ನವನ್ನು ಮಾಡುತ್ತಾನೆ ಇರುತ್ತಾನೆ. ಎಷ್ಟು ಕಷ್ಟಬಂದರೂ, ಎಷ್ಟು ತೊಂದರೆಗಳು ಎದುರಾದರೂ, ಎಷ್ಟು ಸೋಲ್ಲನ್ನುಂಡರೂ ಸಹ ಅವನ ಪ್ರಯತ್ನ ನಡೆದೇ ಇರುತ್ತದೆ. ಜೀವವಿರುವ ತನಕ ಮನಸ್ಸು ನೆನೆದದ್ದನ್ನು ನಡೆಸುವ ಅಥವಾ ಪಡೆಯುವ ಪ್ರಯತ್ನ ನಡೆದೇ ಇರುತ್ತದೆ. ಆದರೆ ಆ ಪ್ರಯತ್ನಪಡುವರು ಯಾರು. ಸಚ್ಚಿದಾನಂದಸ್ವಾರೂಪವಾದ, ಜ್ಞಾನಸ್ವಾರೂಪವಾದ ಆ ಚೇತನ ಸಕ್ರಿಯವಾಗಿರುವ ತನಕ ಪ್ರಯತ್ನ ನಡೆಯುತ್ತದೆ. ಇಲ್ಲದಿದ್ದರೆ ಇಲ್ಲ. ಹಾಗಂದರೆ ಪ್ರಯತ್ನ ನಡೆಯುವುದು ನಮ್ಮಿಂದಲೋ ಅಥವಾ ನಮ್ಮನ್ನು ಧಾರಣೆಮಾಡಿ ಸಕ್ರಿಯವಾಗಿರುವ ಆ ಚೇತನದಿಂದಲೋ.? ಇದು ಪ್ರಶ್ನೆ. ಉತ್ತರ ಸುಲಭ ಆದರೆ ಕಠಿಣ.!!!

ಒಂದು ಸ್ವಿಚ್ ಒತ್ತಿದರೆ ಬಲ್ಬನಿಂದ ಬೆಳಕು ಹರಿಯುತ್ತದೆ. ಆ ಬೆಳಕು ಎಲ್ಲಕಡೆ ಹರಿಯುತ್ತದೆ. ಸ್ವಿಚ್ ಆಫ್ ಮಾಡಿದರೆ ಬೆಳಕು ಇಲ್ಲ. ಅಂದರೆ ಬೆಳಗುವುದು ಬಲ್ಬಿನ ಮೂಲಕ ಹರಿಯುವ ವಿದ್ಯುತ್ ಅಲ್ಲವೇ. ಹಾಗೆಯೇ ನಮ್ಮಲ್ಲೂ ಸಕ್ರಿಯವಾದದ್ದು ಕೇವಲ ನಮ್ಮಲ್ಲಿ ಪ್ರವಹಿಸುವ ಆ ವಿದ್ಯುತ್ರೂಪದ ಚೇತನವೇ ಹೊರತು ನಾವಲ್ಲ. ಹಾಗಾಗಿ ನಮ್ಮ ಎಲ್ಲ ಕಾರ್ಯಗಳೂ ಪ್ರಯತ್ನಗಳೂ ಸಹಾ ಆ ಪರಮ ಚೇತನದಿಂದಲೇ ನಡೆಯುತ್ತದೆ. ಹಾಗೆ ಕಾರ್ಯೋನ್ಮುಖವಾಗುವುದೇ, ಸಕ್ರಿಯವಾಗುವುದೇ ಆ ಚೇತನದ ಅಥವಾ ಆತ್ಮದ ಗುಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ನಾನು ಇದನ್ನು ಮಾಡುತ್ತೇನೆ, ನಾನು ಅದನ್ನು ಮಾಡುತ್ತೇನೆ. ನಾನು ಸಾಧಿಸಿಬಿಡುತ್ತೇನೆ ಅಥವಾ ಸಫಲನಾಗುತ್ತೇನೆ” ಎಂದು ನಾವು ಕೊಚ್ಚಿಕೊಳ್ಳುವುದು ಕೇವಲ ನಮ್ಮ “ಅಹಂ”ಕಾರದಿಂದಲ್ಲವೇ? ಇದನ್ನು ತೊರೆದರೆ, ನಮಗೆ ಇಡೀ ಪ್ರಪಂಚದಲ್ಲಿ ಆ ಪರಮ ಚೇತನದ ಸಕ್ರಿಯ ರೂಪ ಕಾಣುವುದು ಅಥವಾ ಅನುಭವಕ್ಕೆ ಬರುವುದು. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡಬಹುದು.

ರಸಧಾರೆ – 124, ಸಚ್ಚಿದಾನಂದ ತತ್ವ

ಮೌನದೊಳೋ ಮಾತಿನೊಳೋ ಹಾಸ್ಯದೊಳೋ ಹಾಡಿನೊಳೋ |

ಮಾನವಂ ಪ್ರಣಯದೊಳೋ ವೀರ ವಿಜಯದೊಳೋ ||

ಏನೋ ಎಂತೋ ಸಮಾಧಾನಗಳನರಸುತಿಹ |

ನಾನಂದವಾತ್ಮ ಗುಣ – ಮಂಕುತಿಮ್ಮ ||

ಸಮಾಧಾನಗಳನರಸುತಿಹನಾನಂದವಾತ್ಮ = ಸಮಾಧಾನಗಳನು+ ಅರಸುತಿಹನು + ಆನಂದವ + ಆತ್ಮ. ಮಾನವಂ = ಕೋಪವನ್ನು

ನಾವು ಸದಾ ಕಾಲ ಮೌನವಾಗಿಯೋ, ಮಾತನಾಡುತ್ತಲೋ, ಹಾಸ್ಯವಾಡುತ್ತಲೋ, ಹಾಡುತ್ತಲೋ, ಕೋಪಗೊಳ್ಳುತ್ತಲೋ, ಪ್ರಣಯದಲ್ಲೋ, ವೀರತ್ವದಲ್ಲೋ ಅಥವಾ ಗೆಲುವಿನ ಸಂಭ್ರಮದಲೋ ಯಾವುದಾದರೂ ವಿಧದಿಂದ ಸಮಾಧಾನ ಸಂತೋಷಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮನ್ನು ಸದಾ ಕಾಲ ಸಕ್ರಿಯವಾಗಿಸಿರುವ ಆ ಪರಮ ಚೇತನವು ನಮ್ಮ ಮೂಲಕ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಇರುವುದೇ ಆತ್ಮನ ನಿಜವಾದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಸದಾ ನಿರತರು. ಒಂದಲ್ಲ ಒಂದು ಕೆಲಸದಲ್ಲಿ. ನಮ್ಮ ಎಲ್ಲಾ ಕೆಲಸಗಳ ಮೂಲ ಉದ್ದೇಶ್ಯ ಕೇವಲ ಸಮಾಧಾನ ಮತ್ತು ಆನಂದವನ್ನು ಪಡೆಯುವುದಷ್ಟೇ. ಇದರಲ್ಲಿ ನಮಗೆ ತಿಳಿಯದ ವಿಷಯಯವೆನೆಂದರೆ, ಒಂದು ನಿಜವಾದ ಆನಂದ ಎಂದರೆ ಏನು? ಎರಡು, ಆ ಆನಂದವನ್ನು ಪಡೆಯುವುದು ಹೇಗೆ? ಮತ್ತು ಆ ಆನಂದವನ್ನು ಅನುಭವಿಸುತ್ತಿರುವವರಾರು? ನಾವು ” ನಾನು ಆನಂದವನ್ನು ಪಡೆಯುತ್ತಿದ್ದೇನೆ” ” ನಾನು ಸಂತೋಷವನ್ನು ಅನುಭವಿಸುತ್ತಿದ್ದೇನೆ” ” ಇಂತಿಂತ ವಸ್ತು ವಿಷಯ ವ್ಯಕ್ತಿಗಳು ಹೀಗೆ ಹೀಗೆ ಇದ್ದರೆ ನನಗೆ ಸಂತೋಷವಾಗುತ್ತದೆ” ಎಂದು ಯೋಚಿಸುತ್ತೇವೆ. ನೋಡಿ ಇಲ್ಲಿ ಎಲ್ಲ ಕಡೆಯೂ ” ನಾನು” ” ನನಗೆ ” ” ನಮ್ಮ” ಎಂಬ ಪದಗಳನ್ನು ಲೀಲಾಜಾಲವಾಗಿ ಉಪಯೋಗಿಸುತ್ತೇವೆ. ಇಲ್ಲಿ ಹಾಗೆ ಆಡಿಸುವುದು ಕೇವಲ ನಮ್ಮ ” ಅಹಂಕಾರವಷ್ಟೇ” ಇದು ಅಜ್ಞಾನ ಜನ್ಯ. ಒಂದು ಕ್ಷಣ ನಾವು ” ಇಡೀ ಜಗತ್ತನ್ನು ಸೃಜಿಸಿ, ಎಲ್ಲವೂ ತಾನೇ ಆಗಿ, ಎಲ್ಲ ರೂಪಗಳ ಅಸ್ತಿತ್ವಕ್ಕೆ ಕಾರಣವಾದ ಆ ಪರಮ ಚೇತನವೇ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಿದೆ, “ನಾವಲ್ಲ” ” ಎಂದು ಯೋಚಿಸಿದರೆ, ನಮ್ಮ ಅನುಭವದ ಲಹರಿಯೇ ಬದಲಾಗುತ್ತದೆ.

ದೇಹ ಮನಸ್ಸು ಬುದ್ಧಿ ಆತ್ಮಗಳ ಸಮ್ಮಿಲನದಿಂದಾದ ನಮ್ಮ ಈ ಜೀವನ ಕೇವಲ ಆ ಪರಮ ಚೇತನದ ಕ್ರಿಯೆಯಷ್ಟೇ. ಇವುಗಳ ಮಧ್ಯೆ ” ನಾನು ” ಎಂಬುದು ನಮ್ಮ ಇಂದ್ರಿಯ ಸಂಬಂಧವಾದ ಭಾವವಷ್ಟೇ. ಈ ಭಾವದಿಂದ ಮೇಲೆದ್ದು ” ನಾನು” ಎಂಬುದನ್ನು ಬಿಟ್ಟು, ಇಡೀ ಸೃಷ್ಟಿಯೇ ಆ ಪರಮಾತ್ಮ, ಎಲ್ಲ ಭಾವಗಳೂ ಆ ಚೇತನದ ಹಲವಾರು ವ್ಯಕ್ತ ರೂಪಗಳಷ್ಟೇ. ಸಚ್ಚಿದಾನಂದ ರೂಪನಾದ ಆ ಚೇತನನೆ ಎಲ್ಲವನ್ನೂ ಅನುಭವಿಸುತ್ತಿದ್ದಾನೆ ಎಂದು ನಾವು ಅರಿತುಕೊಂಡಾಗ ನಮಗೆ ನಿಜವಾದ ಆನಂದ ಉಂಟಾಗುತ್ತದೆ.

ವಾಚಕರೆ, ದೇಹ ಮನಸ್ಸು ಬುದ್ಧಿಗಳನ್ನು ಒಂದೆಡೆ ಸೇರಿಸಿ, ಅದರೊಳಕ್ಕೆ ಆತ್ಮ ರೂಪದಲ್ಲಿ ಸೇರಿ, ಆ ಪರಮ ಚೇತನವು ಆನಂದಿಸುತ್ತಿದೆ. ಏಕೆಂದರೆ ಸಚ್ಚಿದಾನಂದ ಸ್ವರೂಪವಾದ ಅದರ ಮೂಲ ಗುಣವೇ ಆನಂದ. ನಾವು ಅದನ್ನು ಅರಿತರೆ ನಾವೂ ಸಹ ಆನಂದವಾಗಿರಬಹುದು. ಅದನ್ನು ಬಿಟ್ಟು ನಾವೇ ಎಲ್ಲ ಅನುಭವಿಸುತ್ತೇವೆ ಎಂದರೆ ನಮಗೆ ಸತ್ಯವಾದ ಆನಂದದ ಅರಿವೇ ಆಗುವುದಿಲ್ಲ. ನಮ್ಮ ಹುಡುಕಾಟಕ್ಕೆ ಅಂತ್ಯವೇ ಇರುವುದಿಲ್ಲ. ನಾವು ನಮಗೆ “ನಿತ್ಯವಾದ ಮತ್ತು ಸತ್ಯವಾದ ಆನಂದ” ಬೇಕಾದರೆ ಈ ಭಾವ ಬೆಳೆಸಿಕೊಳ್ಳಬೇಕು ಅಲ್ಲವೇ? ಇದನ್ನು ಎಲ್ಲ ವಾಚಕರೂ ತಮ್ಮ ತಮ್ಮಲ್ಲೇ ವಿಚಾರ ಮಾಡಿಕೊಳ್ಳಬೇಕೆಂದು ನನ್ನ ವಿಚಾರ, ಏಕೆಂದರೆ ಇದು ಸ್ವಯಂ ವೇದ್ಯ.

ರಸಧಾರೆ – 125, ಸಚ್ಚಿದಾನಂದ ತತ್ವ

ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |

ಬಚ್ಚಿಡುವುದದನು ಜೀವಿತೆಯ ಮಾಯಕತೆ ||

ಇಕ್ಶುವೊಲ್ ಜೀವ, ಗಾಣದವೊಲ್ ಜಗನ್ಮಾಯೆ |

ನಿಚ್ಚವಿಳೆಯಾಲೆಮನೆ – ಮಂಕುತಿಮ್ಮ

ಸಚ್ಚಿದಾನಂದಂಗಳಾತ್ಮ = ಸತ್+ಚಿತ್+ಆನಂದಗಳು+ ಆತ್ಮ // ಬಚ್ಚಿಡುವುದದನು = ಬಚ್ಚಿಡುವುದು+ಅದನು// ನಿಚ್ಚವಿಳೆಯಾಲೆಮನೆ = ನಿಚ್ಚವು+ಇಳೆ+ಆಲೆ+ಮನೆ

ಸ್ವಭಾವ = ಗುಣ // ಜೀವಿತೆಯ = ಬದುಕಿನ // ಮಾಯಕತೆ = ಮಾಯೆ// ಇಕ್ಶುವೊಲ್= ಕಬ್ಬಿನಂತೆ// ಗಾಣದವೊಲ್ = ಜಗನ್ಮಾಯೆ// ನಿಚ್ಚವು+ಇಳೆ+ಆಲೆ+ಮನೆ = ಈ ಜಗತ್ತು ನಿತ್ಯದ ಆಲೆಮನೆ.

ಆತ್ಮದ ಗುಣ ಸಚ್ಚಿದಾನಂದ. ಆದರೆ ಈ ಇಂದ್ರಿಯ ಸಂಪರ್ಕದಿಂದ ಉಂಟಾದ ನಮ್ಮ ಬದುಕಿನ ಮಾಯೆ ಅದನ್ನು ಮುಚ್ಚಿಡುವುದು. ಜೀವ, ರಸ ತುಂಬಿದ ಕಬ್ಬಿಣ ಜಲ್ಲೆ ಇದ್ದಂತೆ. ಈ ಜಗತ್ತಿನ ಮಾಯೆ ಗಾಣದ ರೀತಿ. ಹೀಗೆ ಶುದ್ಧರಸ ತುಂಬಿದ ಆತ್ಮವನ್ನು ಮಾಯೆಯಂಬ ಗಾಣದಲ್ಲಿ ಇರುಕಿಸಿ ಹಿಂಡಿ ಹಿಂಡಿ ನಿತ್ಯ ನಡೆಯುವ ಈ ಜಗತ್ತಿನ ಆಲೆಯಮನೆಯಲ್ಲಿ ಪಾಕ ತೆಗೆಯುವುದೇ ಜೀವನ ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆ ಪರಮ ಚೇತನದ ಒಂದು ಅಂಶವಾದ ಈ ಚರಾಚರ ಜೀವಿಗಳ ರೂಪಧರಿಸಿದ ಆತ್ಮವು ಶುಧ್ಧ, ಆನಂದ ಸ್ವರೂಪ. ಅದರ ಗುಣವೇ ಅನಂದದಿಂದಿರುವುದು. ಆದರೆ ಪೃಥ್ವಿ ಮತ್ತು ಪಂಚಭೂತ ತತ್ವದಿಂದಾದ ಮನಸ್ಸು ಬುದ್ಧಿ ದೇಹಗಳ ಸಂಪರ್ಕದಿಂದ ಅದರ ನಿಜಸ್ವರೂಪ ಮಾಯೆಯಿಂದ ಕವಿಯಲ್ಪಟ್ಟಿದೆ. ಕಬ್ಬಿನ ಜಲ್ಲೆಯಲ್ಲಿ ಆಪಾದಮಸ್ತಕ ಸಿಹಿ ರಸ ತುಂಬಿರುತ್ತದೆ. ಅದನ್ನು ಹೊರತೆಗೆಯಬೇಕಾದರೆ, ಅದನ್ನು ಗಾಣಕ್ಕೆ ಸಿಕ್ಕಸಿ ಅರೆದಾಗ ರಸ ಹೊರಬರುತ್ತದೆ.

ನಮ್ಮ ಜೀವನಗಳೂ ಅಷ್ಟೇ ಎಲ್ಲರಲ್ಲೂ ಶುದ್ಧ ಆತ್ಮವೇ ಇದೆ. ಆದರೆ ಮಾಯೆಯಿಂದ ಕವಿದು ಈ ಪ್ರಪಂಚದಲ್ಲಿ ಮುಳುಗಿದೆ. ಈ ಮನಸ್ಸು ಬುದ್ಧಿ ದೇಹಗಳು ಆತ್ಮದ ತತ್ವವನ್ನು ಅರಿಯಲು ಗಾಣದಂತಿರುವ ನಮ್ಮ ನಿತ್ಯ ಜೀವನದ ಗಾಣದಲ್ಲಿ ಸಿಕ್ಕು ಅರೆಯಬೇಕು. ಆಸೆಗಳು, ಪಾಶಗಳು, ಪ್ರೀತಿ, ದ್ವೇಷಗಳು ಎಲ್ಲ ಭಾವಗಳೊಳಕ್ಕೆ ಹೊಕ್ಕು ಕಷ್ಟ ಸುಖಗಳನ್ನು ಅನುಭವಿಸಿ, ಅನುಭವವನ್ನು ಪಡೆದು ಸತ್ಯವನ್ನು ಅರಿತು ಸತ್ವದ ದರ್ಶನವಾದಾಗ ನಮಗೆ ಸಕ್ಕರೆಯಂಥಾ ಸವಿಯಾದ ಅನುಭವ ಸಿಗುತ್ತದೆ. ಅದನ್ನೇ ಗುಂಡಪ್ಪನವರು “ನಿಚ್ಚವಿಳೆಯಾಲೆಮನೆ ” ಎಂದರು. ಈ ಜಗತ್ತು ನಿತ್ಯದ ಆಲೆಮನೆ ಎಂಬ ಅರ್ಥದಲ್ಲಿ. ಆದರೆ ಇಂದಿನ ಜಗತ್ತಿನಲ್ಲಿ ಎಷ್ಟುಜನ ಗಾಣದಲ್ಲಿ ಸಿಕ್ಕರೂ, ಸಕ್ಕರೆ ಹೊರಬರುವುದೇ ಇಲ್ಲ. ಏಕೆಂದರೆ ಜನ ಹೊಕ್ಕಿರುವ ಈ ಮಾಯೆಯ ಗೋಡೆ ದಿನೇ ದಿನೇ ದಪ್ಪವಾಗುತ್ತಿದೆ. ತಾನು ತನ್ನದೆಂಬ ಮಾಯಾ ಪ್ರೇರಿತವಾದ ಮೋಹದ ಗೋಡೆಯನ್ನು ಒಡೆದು ಹಾಕಿದರೆ ನಮಗೆ ಸವಿಯಾದ ನಿತ್ಯವಾದ ಸತ್ಯವಾದ ಆನಂದ ಸಿಗುತ್ತದೆ. ಅಂದರೆ ಸಚ್ಚಿದಾನಂದ ಸ್ವರೂಪನಾದ ಪರಮ ಚೇತನದ ದರ್ಶನವಾಗುತ್ತದೆ. ಅದನ್ನು ಪಡೆಯಲು ನಿರಂತರ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಗುರುಕೃಪೆ ಮತ್ತು ದೈವ ಕೃಪೆಯಿಂದ, ಸಾಧನೆಯ ಮಾರ್ಗದಲ್ಲಿ ನಡೆದಾಗ ಅದನ್ನು ಪಡೆಯಬಹುದು. ಸಕ್ಕರೆಯ ಸವಿ ಬೇಕೆಂದರೆ ನಮ್ಮ ಬದುಕುಗಳೂ ಸಹ ನಿತ್ಯ ಆಲೆಮನೆಗಳಾಗಬೇಕು.

ರಸಧಾರೆ – 126

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |

ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ||

ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |

ಪರಬೊಮ್ಮನೆನ್ನುವರು – ಮಂಕುತಿಮ್ಮ ||

ಒಳಿತೆಂದು = ಒಳಿತು + ಎಂದು // ಸೊಗಸೆಂದು = ಸೊಗಸು + ಎಂದು// ಮೂಲಾಕೃತಿಯೆ = ಮೂಲ + ಆಕೃತಿಯೆ // ಪರಬೊಮ್ಮನೆನ್ನುವರು = ಪರಬೊಮ್ಮ + ಎನ್ನುವರು

ಕಲೆ ಕಣಂಗಳು = ಬಾಗಶಃ// ಪೂರ್ಣಂಗಳಲ್ಲ = ಅಪರಿಪೂರ್ಣಗಳು

ಈ ಜಗತ್ತಿನಲ್ಲಿ ನಾವು ” ಇದು ಒಳ್ಳೆಯದು” ” ಇದು ಸೊಗಸು” ಎಂದು ಮೆಚ್ಚುವುದೆಲ್ಲ ಆ ಪರಮಾತ್ಮನ ಸಂಪೂರ್ಣ ರೂಪವಲ್ಲ, ಕೇವಲ ಪಾರ್ಶ್ವರೂಪ. ನಲಿವು ಚೆಲುವುಗಳ ಪರಿಪೂರ್ಣ ರೂಪವೇ ಆ ಪರಮಾತ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಜಗದಲ್ಲಿ ಜನರು ಯಾವುದೇ ವಸ್ತುವನ್ನು, ವಿಷಯವನ್ನು ಅಥವಾ ವ್ಯಕ್ತಿಯನ್ನು ಪೂರ್ಣವಾಗಿ ಅರಿತು ನೋಡುವುದೇ ಇಲ್ಲ. ನಮಗೆ ಯಾವುದನ್ನೂ ಸಂಪೂರ್ಣವಾಗಿ ಅರಿಯುವ ಇಚ್ಛೆಯೂ ಇಲ್ಲ, ಯೋಗ್ಯತೆಯೂ ಇಲ್ಲ. ನಾವು ಮೆಚ್ಚುವುದು, ಇಷ್ಟಪಡುವುದು, ಇಷ್ಟಪಡದೆ ಇರುವುದು, ನಾವು ಅಸಹ್ಯಪಟ್ಟುಕೊಳ್ಳುವುದು, ನಾವು ಅತಿಯಾಗಿ ಇಷ್ಟಪಡುವುದು ಎಲ್ಲವೂ ನಮ್ಮ ಭಾವಕ್ಕೆ ಸಂಬಂಧಿಸಿದ್ದು. ನಮ್ಮ ಭಾವ ನಮ್ಮ ಸ್ವಭಾವ ಜನ್ಯ. ನಮ್ಮ ಸ್ವಭಾವ ಹೇಗಿದೆ ಎಂದರೆ, ಒಂದು ವಸ್ತು ವಿಷಯ ಅಥವಾ ವ್ಯಕ್ತಿಯನ್ನು ನಾವು ಇಷ್ಟಪಡುವುದೋ ಅಥವಾ ಪಡದೆ ಇರುವುದಕ್ಕೋ ನಮ್ಮದೇ ಕಾರಣಗಳಿರುತ್ತೆ. ಒಬ್ಬ ವ್ಯಕ್ತಿ ” ನನಗೆ ಸಹಾಯಮಾಡುತ್ತಾನೆ, ನನ್ನನ್ನು ಹೊಗಳುತ್ತಾನೆ, ನಾ ಹೇಳಿದ ಹಾಗೆ ಕೇಳುತ್ತಾನೆ” ” ನಮ್ಮ ಭಾಷೆಯವನು ” ನಮ್ಮ ಜಾತಿಯವನು” ಎಂಬ ಹಲವಾರು ಕಾರಣಗಳಿಗೆ ನಾವು ಅವನನ್ನು ಇಷ್ಟಪಡುತ್ತೇವೆ, ಅಲ್ಲವೇ? ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿ ಹೇಗಿದ್ದಾನೋ ಹಾಗೆಯೇ ಇಷ್ಟಪಡುವುದು ಸಾಧ್ಯವೇ ಇಲ್ಲವೆ? ಅಂದರೆ ನಾವು ಒಂದು ವ್ಯಕ್ತಿಯ ಅಥವಾ ವಿಷಯದ ಅಥವಾ ವಸ್ತುವಿನ ಸತ್ಯರೂಪವನ್ನು ನೋಡುವುದಿಲ್ಲ. ಹಾಗಾಗಿ ನಾವು ನೋಡುವ ವಸ್ತು ಅಪೂರ್ಣ!!! ನಮ್ಮ ದೃಷ್ಟಿಗೆ. ಆದರೆ ಅದು ವಸ್ತುಶಃ ಅಪೂರ್ಣವೇ?

ಖಂಡಿತ ಅಲ್ಲ !! ಏಕೆಂದರೆ ವೇದವು ” ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣವೇವಾವಶಿಷ್ಯತೆ ” ಎನ್ನುತ್ತದೆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ಪ್ರತಿಯೊಂದು ವಸ್ತುವೂ ಪೂರ್ಣವಾಗೆ ಇದೆ. ಹಲವು ಪೂರ್ಣಗಳು ಸೇರಿ ಒಂದು ಪೂರ್ಣವಾಗಿದೆ ಈ ಜಗತ್ತಿನಲ್ಲಿ. ಒಂದು ಪೂರ್ಣವನ್ನು ಎರಡಾಗಿಸಿದರೂ, ಎರಡು ಪರಿಪೂರ್ನವಸ್ತುಗಳೇ ಉಳಿಯುತ್ತವೆ ಎನ್ನುತದೆ ವೇದ. ನಾವು ನೋಡುವ ಪರಿಯಲ್ಲಿ ದೋಷವಿಟ್ಟುಕೊಂಡು ವಸ್ತು ವಿಷಯ ಮತ್ತು ವ್ಯಕ್ತಿಗಳಲ್ಲಿ ದೋಷ ಕಾಣುವುದು ನಮ್ಮ ಕೊರತೆಯಷ್ಟೇ. ಆದರೆ ಇದನೆಲ್ಲ ಸೃಷ್ಟಿಮಾಡಿದ ಆ ಪರಮಾತ್ಮನು ಪರಿಪೂರ್ಣ. ಅವನಲ್ಲಾಗಲೀ ಅವನ ಸೃಷ್ಟಿಯಲ್ಲಾಗಲೀ ಒಂದು ಚೂರೂ ದೋಷವಾಗಲೀ ಕೊರತೆಯಾಗಲೀ ಇಲ್ಲ. ಎಲ್ಲವೂ ಸುಂದರ, ಎಲ್ಲವೂ ಪರಿಪೂರ್ಣ. ಈ ಜಗತ್ತಿನ ಎಲ್ಲರೂ ಅಂದರೆ ಸಕಲ ಚರಾಚರಗಳೂ ಆನಂದವಾಗಿ ಸುಖವಾಗಿ ಇರಲು, ಆ ಪರಮಾತ್ಮ ಎಲ್ಲವನ್ನೂ ಸೃಷ್ಟಿಸಿದ್ದಾನೆ. ನೀರು ಗಾಳಿ,ಆಕಾಶ, ಸೂರ್ಯ ಚಂದ್ರರು, ಗಿಡ ಮರಗಳು, ಎಲ್ಲರಿಗೂ ಆಹಾರ ಎಲ್ಲವನ್ನೂ ಕೊಟ್ಟಿದ್ದಾನೆ. ಮನುಷ್ಯನಿಗೆ ಒಂದು ಸೃಜನಾತ್ಮಕವಾದ ಜ್ಞಾನವನ್ನೂ ಕೊಟ್ಟು ಈ ಭುವಿಗೆ ಇನ್ನಷ್ಟು ಸೌಂದರ್ಯವನ್ನು ತುಂಬಲು ಅನುವು ಮಾಡಿಕೊಟ್ಟಿದ್ದಾನೆ.

ಆದರೆ ಮನುಷ್ಯನ ಸ್ವಾರ್ಥದಿಂದ, ಎಲ್ಲವೂ ತನಗಾಗಿ ಮಾಡಲ್ಪಟ್ಟಿದೆ, ಸೃಷ್ಟಿಸಲ್ಪಟ್ಟಿದೆ ಎಂದು ಆ ಪರಮಾತ್ಮನ ಮೂಲ ಉದ್ದೇಷ್ಯವನ್ನೇ ಅಲ್ಲಗೆಳೆದು ಎಲ್ಲವನ್ನೂ ಹಾಳುಮಾಡುತ್ತಿದ್ದಾನೆ. ನಶ್ವರ ಬಾಳನ್ನು ಪಡೆದು, ತನ್ನ”ಕಡೆ” ನಿಶ್ಚಯ ಮತ್ತು ಸತ್ಯವೆಂದು ಅರಿತರೂ, ಅದನ್ನು ಮರೆಸಿ ಕೇವಲ ಹಣ ಸಂಪಾದನೆಯಲ್ಲಿ ಮತ್ತೆಲ್ಲವನ್ನೂ ಹಾಳುಗೆಡವುತ್ತಿದ್ದಾನೆ. ಮತ್ತೆಲ್ಲವೂ ನಾಶವಾಗಿ, ಕೇವಲ ಹಣವಿದ್ದರೆ ಏನು ಪ್ರಯೋಜನವೆಂಬ ಜ್ಞಾನ ಅವನಿಗೆ ಇಲ್ಲವೇ ಇಲ್ಲ, ಈ ದುಷ್ಟನಿಗೆ. ವಾಚಕರೆ ನಾವಿಂದು ಒಂದು ಭಯಂಕರ ಪರ್ವದಲ್ಲಿ ಇದ್ದೇವೆ. ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು. ಇಡೀ ಸಮಾಜವನ್ನು ಎಚ್ಚರಿಸಬೇಕು.

ಅಂಥಹ ಪ್ರಯತ್ನವನ್ನು ನಾವು ಮಾಡುವ ಪಣವನ್ನು ಇಂದೇ ತೊಡಬೇಕು.

ರಸಧಾರೆ – 127

ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |

ಭುವನಜೀವನಜಲಧಿಯೂರ್ಮಿಕೋಟಿಯಲಿ ||

ಛವಿಕೋಟಿಯರಚಲ್ ಪ್ರತಿಚ್ಚಾಯೆ ವಿಲಸಿಪುದು |

ಸವಿ ನಮ್ಮದದರ ಕಣ – ಮಂಕುತಿಮ್ಮ ||

ಶಿವ = ಶುಭವಾದ ಛವಿಕೋಟಿಯರಚಲ್ = ಕಾಂತಿಯನ್ನು ಕೋಟಿಕಣಗಳಲ್ಲಿ ಎರಚಲು. ವಿಲಸಿಪುದು = ವಾಸಿಸುವುದು.

ಶುಭ ಸಂತೋಷ ಸೌಂದರ್ಯಗಳ ಪೂರ್ಣರೂಪವೇ ಆ ಪರಮಾತ್ಮ. ಈ ಜಗತ್ತಿನ ಜೀವನವೆಂಬ ಸಮುದ್ರದಲ್ಲಿರುವ ಕೋಟ್ಯಾನುಕೋಟಿ ಜೀವಬಿಂದುಗಳಲ್ಲಿ, ಆ ಪರಮ ಕಾಂತಿಯ ಛಾಯೆ ಕಾಣುವುದು ಅಥವಾ ವಿಲಾಸಿಸುವುದು. ನಾವೂ ಸಹ ಆ ಛಾಯೆಯ ಒಂದು ಕಣ ಮಾತ್ರವೆಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಹೌದಲ್ಲವೇ? ಈ ಜಗತ್ತಿನಲ್ಲಿ ಎಣಿಸಲು ಆಗದಷ್ಟು ವಸ್ತು ಪ್ರಭೇಧಗಳು , ವಿಷಯ ಪ್ರಭೇಧಗಳಿವೆ . ಕೋಟ್ಯಾನು ಕೋಟಿ. ಮತ್ತೆ ಒಂದೊಂದು ಪ್ರಭೇಧದಲ್ಲೂ ಕೋಟಿ ಕೋಟಿ ಪ್ರತಿರೂಪಗಳು. ಪ್ರತಿ ಜೀವಿಯೂ ಇರುವುದು ಇರುವುದು, ಪ್ರಕೃತಿ ಮತ್ತು ಪುರುಷನ ಸಂಯೋಗದಿಂದ. ( ಇಲ್ಲಿ ಪುರುಷ ಎಂದರೆ ಗಂಡಸು ಎಂಬ ಅರ್ಥವಲ್ಲ). ಅಂದರೆ ಪರಮಾತ್ಮನಿಂದಾದ ವಸ್ತುಗಳೊಳಕ್ಕೆ ಪರಮಾತ್ಮನೇ ಚೇತನಾ ರೂಪದಿಂದ ಸೇರಿ ಅದನ್ನೊಂದು ಜೀವಿಯನ್ನಾಗಿಸಿರುವಾಗ, ಈ ಜಗತ್ತಿನಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ ಅಲ್ಲವೇ. ಆದರೆ ಬೇರೆ ಬೇರೆ ರೂಪಗಳನ್ನು ಕೊಟ್ಟು ಅವುಗಳನ್ನು ಬೇರೆ ಬೇರೆ ಎಂದು ಗುರುತಿಸುವಂತೆ ಮಾಡಿದ್ದಾನೆ.

ಈ ಜಗತ್ತು ಒಂದು ಮಹಾಸಾಗರ. ಇದನ್ನು ಜಗತ್ಸಾಗರವೆನ್ನಬಹುದು. ಈ ಜಗತ್ಸಾಗರದ ಒಂದೊಂದು ಬಿಂದುವೂ ಒಂದೊಂದು ಜೀವಿ. ಆ ಜೀವಿ ಪ್ರತಿಬಿಂಬಿಸುವುದೂ ಸಹ ಆ ಪಾರಮಾತ್ಮ ತತ್ವವನ್ನೇ. ಆಕಾಶದಲ್ಲಿ ಒಬ್ಬ ಸೂರ್ಯ. ಭೂಮಿಯಮೇಲೆ ಇರುವ ಸಕಲ ಪಾತ್ರೆಗಳ ನೀರಲ್ಲೂ ಒಂದೇ ಸೂರ್ಯ ಬೇರೆಬೇರೆಯಾಗಿ ಪೂರ್ಣವಾಗಿ ಪ್ರತಿ ಬಿಂಬಿಸುವುದಿಲ್ಲವೇ ಹಾಗೆಯೇ ಎಲ್ಲ ಚರಾಚರಗಳಲ್ಲೂ ಆ ಪರಮಾತ್ಮನೇ ಪ್ರತಿಬಿಂಬಿಸುತ್ತಾನೆ ಮತ್ತು ಎಲ್ಲ ಪ್ರಾಣಿಗಳಲ್ಲೂ ಆ ಪರಮಾತ್ಮನೇ ಬೇರೆ ಬೇರೆ ರೂಪಗಳನ್ನು ಧರಿಸಿ ವಾಸಿಸುತ್ತಿದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.

ಹಾಗಾಗಿ ವಾಚಕರೆ, ಎಂದು ನಮಗೆ ಈ ವಿಚಾರ ಮನದಲ್ಲಿ ಗಟ್ಟಿಯಾಗಿ ನಿಲ್ಲುತ್ತದೋ ಮತ್ತು ಹೊರರೂಪದ ಬೇಧವನ್ನು ಗುರುತಿಸದೆ ಅಂತರ್ಯದಲ್ಲಿ ನಿವಸಿಸುವ ಅಥವಾ ವಿಲಸಿಸುವ ಆ ಪರಮಾತ್ಮನನ್ನು ಕಾಣುವ ಪ್ರವೃತ್ತಿ ನಮಗೆ ಬೆಳೆಯುತ್ತದೋ ಅಂದು ನಾವು ಜಾತಿ ಮತ, ಭಾಷೆ, ವರ್ಣ, ಭಾಗ್ಯ ಮುಂತಾದ ವಿಷಯಗಳಾಧಾರಿತ ಬೇಧ ಮಾಡದೆ ಇಡೀ ವಿಶ್ವವನ್ನೇ ಬದುಕಲು ಒಂದು ಸುಂದರ ತಾಣವನ್ನಾಗಿಸಬಹುದು. ಆದರೆ ತಮಗೆಲ್ಲರಿಗೂ ಗೊತ್ತಿರುವಂತೆ ಇಂದಿನ ವಸ್ತು ಸ್ಥಿತಿಯೇ ಬೇರೆಯಾಗಿದೆ. ಇಂದು ಮನುಷ್ಯ ಮನುಷ್ಯನ ಮಧ್ಯದಲ್ಲಿ ಬೇಧ ಉಂಟಾಗಲು ಸಾವಿರಾರು ಕಾರಣಗಳು. ಇದರ ಬಗ್ಗೆ ಬರೆದರೆ ಕೊನೆಯೇ ಇಲ್ಲದಂತಾಗುತ್ತದೆ. ಹಾಗಾಗಿ ವಾಚಕರೆ ನಾವು ನಮ್ಮ ನಮ್ಮ ನಡುವಿನಲ್ಲಿರುವ ಬೇಧಗಳನ್ನು ಅಳಿಸಿ ಒಂದು ಸೌಹಾರ್ಧಯುತವಾದ ಬಾಳನ್ನು, ಅದರಿಂದ ಒಂದು ಸುಂದರ ಸಮಾಜವನ್ನು ಕಟ್ಟಲು ಪ್ರಯತ್ನಪಡಬಹುದಲ್ಲ!

ರಸಧಾರೆ – 128, ಸಚ್ಚಿದಾನಂದ ತತ್ವ

ಹೊರಗಾವುದೊಳಗಾವುದೀ ಸೃಷ್ಟಿ ಚಕ್ರದಲಿ |

ಎರಡನೊಂದಾಗಿಪುದು ಹರಿವ ನಮ್ಮುಸಿರು ||

ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ

ಬರಿ ಸುಷಿರಪಿಂಡ ಜಗ – ಮಂಕುತಿಮ್ಮ

ಹೊರಗಾವುದೊಳಗಾವುದೀ = ಹೊರಗೆ ಆವುದು+ ಒಳಗೆ ಆವುದು //ಎರಡನೊಂದಾಗಿಪುದು = ಎರಡನು ಒಂದಾಗಿಪುದು // ಇರುವುದುಳಿದಿನಿತು = ಇರುವುದು + ಉಳಿದ + ಇನಿತು//ಯೋಗಿಗಳೊಳಂ = ಯೋಗಿಗಳ+ಒಳಂ

ಸುಷಿರಪಿಂಡ = ಕೊಳಲುಗಳ ಸಮೂಹ

ಈ ಸೃಷ್ಟಿಯಲಿ ಹೊರಗೆ ಯಾವುದು, ಒಳಗೆ ಯಾವುದು ? ಹೊರ ಒಳಗನ್ನು ಒಂದೇ ಆಗಿಪುದು ಹರಿವ ನಮ್ಮುಸಿರು. ಯೋಗಿಗಳು ಮಾತ್ರ ತಮ್ಮ ಸಾಧನೆಯಿಂದ ಉಸಿರುಬಿಗಿ ಹಿಡಿದು ಬಿಟ್ಟ ಉಸಿರನ್ನು ತಡೆಯಬಹುದು. ಆದರೆ ಈ ಜಗವೆಲ್ಲ ಒಂದು ಕೊಳಲುಗಳ ಸಮೂಹ ಎಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮ ಸುತ್ತಲೂ ಗಾಳಿ ಇದ್ದರೆ ನಾವು ಇರಬಹುದು. ಅಂದರೆ ನಮ್ಮ ಸುತ್ತ ಗಾಳಿ. ಆ ಗಾಳಿ ನಮ್ಮ ಒಳಗೆ ಹೋಗಿ ಹೊರಬರುತ್ತಾ ಇದ್ದರೆ ನಾವೂ ಜೀವಂತ. ಅಂದರೆ ನಮ್ಮ ಒಳಗೂ ಹೊರಗೂ ಅದೇ ಗಾಳಿ. ಇದರಲ್ಲಿ ಒಳಗು ಯಾವುದು ಹೊರಗು ಯಾವುದು. ನಾವಿರುವುದೇ ಅದರಲ್ಲಿ. ಇನ್ನು ನಮ್ಮೊಳಗಿರುವುದು ನಮ್ಮ ಒಳಗೆ ಹೇಗೆ? ಹಾಗಾಗಿ ಹೊರಗೂ ಒಳಗುಗಳ ಅಂತರವೇ ಇಲ್ಲ ಇದ್ದರೂ ಆ ಅಂತರವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

ಕೆಲವು ಯೋಗಿಗಳು ತಮ್ಮ ಸಾಧನೆಯಿಂದ ಪ್ರಾಣಾಯಾಮ ಮುಂತಾದವುಗಳಿಂದ ಕೆಲಕಾಲ ತಮ್ಮೊಳಗಿನ ಉಸಿರನ್ನು ಒಳಗೇ ಇರಿಸಿಕೊಳ್ಳುವುದೋ ಅಥವಾ ಹೊರಗೆ ಉಸಿರು ಬಿಟ್ಟು, ಕೆಲಕಾಲ ಉಸಿರಾಡದೆಯೇ ಇರಬಹುದು. ಆದರೆ ಇಡೀ ಜಗತ್ತೇ ಉಸಿರಾಡುತ್ತಿದೆ. ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮೀನು, ಗಿಡ, ಮರ, ಬಳ್ಳಿ, ಹೀಗೆ ಎಲ್ಲವೂ ಉಸುರಿನ ಬಲದಿಂದಲೇ ಜೀವಿಸಿವೆ. ಉಸುರಿನ ನಾಳ ಆಡುತ್ತಿದರೆ ಜೀವನ ಇಲ್ಲದಿದ್ದರೆ ಮರಣ.

ಇದನ್ನೇ ಮಾನ್ಯ ಗುಂಡಪ್ಪನವರು “ಸುಷಿರಪಿಂಡ” ಎನ್ನುತ್ತ್ತಾರೆ. ಸುಷಿರ ಎಂದರೆ ಕೊಳಲು ಅಥವಾ ಪಿಳ್ಳಂಗೋವಿ ಎಂದು ಅರ್ಥ. ಆ ಪಿಳ್ಳಂಗೋವಿಯಲ್ಲಿ ನಾವು ಉಸಿರನ್ನು ಊದಿದರೆ ಹೇಗೆ ನಾದಬರುತ್ತದೋ, ಹೇಗೆ ಆ ನಾದವೇ ಆ ಪಿಳ್ಳಂಗೋವಿಯ ಜೀವಾಳವೋ, ಹಾಗೆಯೇ ಈ ಜಗತ್ತಿನ ವ್ಯಾಪಾರವೆಲ್ಲ ನಡೆಯುವುದು ಆ ಪರಮಾತ್ಮ ನಮ್ಮೆಲ್ಲರೊಳಗೆ ಉಸಿರೆಂಬ ಜೀವ ಹೇತುವನ್ನಿಟ್ಟು ನಮ್ಮನ್ನೆಲ್ಲ ಜೀವಂತವಾಗಿಟ್ಟು ಈ ಜಗದ ನಾದ ಹೊರಡಿಸುತ್ತಿದ್ದಾನೆ. ಜಗನ್ನಾಟಕವನ್ನಾಡಿಸುತ್ತಿದ್ದಾನೆ. ನಮ್ಮಿಂದ ಹೊರಡುವ ಶಬ್ದ ಸಹಿತವಾದ ಭಾವ ಮತ್ತು ಶಬ್ದ ರಹಿತವಾದ ಭಾವ ಎಲ್ಲವೂ ಆ ಪರಮಾತ್ಮ ಜೀವಿಗಳೆಂಬ ಪಿಳ್ಳಂ ಗೋವಿಗಳಲ್ಲಿ, ಅಂದರೆ ನಮ್ಮಲ್ಲಿ ಹೊರಡಿಸುವ ನಾದವಲ್ಲವೇ?

ವಾಚಕರೆ, ಇಲ್ಲಿ ನಮ್ಮ, ಅಂದರೆ “ಆತ್ಮ” ದ್ದು , ನಮ್ಮ ಸ್ವಂತ ಯಾವುದೂ ಇಲ್ಲ. ಎಲ್ಲವೂ ಎರವಲು, ಈ ದೇಹ, ಭೂಮಿಯಿಂದ , ಮನಸ್ಸು ಬುದ್ಧಿಗಳನ್ನು ಪಂಚ ಭೂತಗಳಿಂದ , ಆತ್ಮನನ್ನು ಪರಮಾತ್ಮನಿಂದ ಎರವಲು ಪಡೆದು ನಾದ ಹೊರಡಿಸುವ ನರರು ನಾವು. ಈ ದೇಹದೊಳಗಿನ ಸಕಲವೂ. ಮನಸ್ಸಿನ ವ್ಯಾಪಾರ, ಬುದ್ಧಿಯ , ಗ್ರಹಣ, ಶೇಕರಣ ಮತ್ತು ಉಪಯೋಗ ಎಲ್ಲವೂ ಎರವಲು. ಎಲ್ಲವನ್ನೂ ಪಡೆದು ಉಪಯೋಗಿಸುವಷ್ಟು ದಿನ ಉಪಯೋಗಿಸಿ ನಂತರ ಸಾಲ ತೀರಿಸಿದ ಹಾಗೆ ಹಿಂತಿರುಗಿಸಿ ಮತ್ತೆ ಎರವಲು ಪಡೆಯಲು ಉಧ್ಯುಕ್ತರಾಗಬೇಕು. ಆದರೆ ಪಡೆದ ಸಾಲವನ್ನು ಹೇಗೆ ಉಪಯೋಗಿಸಿ, ಜಗತ್ತಿನಲ್ಲಿ ನಮ್ಮ ವ್ಯಾಪಾರವನ್ನು ಹೇಗೆ ವೃದ್ಧಿಗೊಳಿಸುವುದು ಎನ್ನುವುದು ನಮಗೆ ಬಿಟ್ಟದ್ದು. ದುರ್ವ್ಯವಹಾರ ಮಾಡಿ ಎಲ್ಲವನ್ನೂ ಕಳೆದುಕೊಂಡು ಗತಿಹೀನರಾಗಬಹುದು, ಸದುಪಯೋಗಪಡಿಸಿಕೊಂಡು ಸದ್ಗತಿಯನ್ನೂ ಪಡೆಯಬಹುದು. ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅದಕ್ಕೆ ನಮ್ಮ ಕನ್ನಡದ ಪುರಂದರ ದಾಸರು ” ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿ ಕೊಳ್ಳಬೇಡಿರೋ ಹುಚ್ಚಪ್ಪಗಳಿರಾ” ಎಂದು ಒಂದು ಎಚ್ಚರಿಕೆಯ ಮಾತು ಹೇಳಿದ್ದಾರೆ. ನಮ್ಮ ನಮ್ಮ ಜೀವನವನ್ನು ” ಸದ್” ಆಗಿಸುವ ಹಾದಿಯಲ್ಲಿ ನಮಗೆ ಜಯವಾಗಲಿ.

ರಸಧಾರೆ – 129, ನಿತ್ಯ ಪುರಾತನ – ನಿತ್ಯ ನೂತನ

ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ |

ನರನ ಪ್ರಾಕ್ತನಕೆ ನೂತನಸತ್ವ ಬೆರೆತು ||

ಪರಿವುದೀ ವಿಶ್ವಜೀವನಲಹರಿಯನವರತ |

ಚಿರಪ್ರತ್ನನೂತ್ನ ಜಗ – ಮಂಕುತಿಮ್ಮ ||

ನೀರ್ಗಾಗಸದ = ನೀರಿಗೆ+ಆಗಸದ // ವಿಶ್ವಜೀವನಲಹರಿಯನವರತ = ವಿಶ್ವ+ಜೀವನ+ಲಹರಿ + ಅನವರತ //ಪರಿವುದೀ = ಪರಿವುದು+ ಈ

ಪ್ರಾಕ್ತನ= ಹಳತು // ಪರಿವುದು = ಹರಿಯುವುದು // ಅನವರತ = ನಿರಂತರ// ಪ್ರತ್ನನೂತ್ನ = ಹಳತು ಮತ್ತು ಹೊಸತು

ಭೂಮಿಯ ನೀರಿಗೆ ಆಗಸದ ಮಳೆಯ ನೀರು ಇಳಿದು ಬೆರಯುವಂತೆ, ಮನುಷ್ಯನ ಪುರಾತನತೆಗೆ ನೂತನತ್ವ ಬೆರೆತು ನಿರಂತರವಾಗಿ ಹರಿಯುವುದು ಈ ಜೀವನ ಲಹರಿ, ಹಾಗಾಗಿ ಹಳತು ಮತ್ತು ಹೊಸತದರ ನಿರಂತರ ಸಮ್ಮಿಲನವೇ ಈ ಜಗತ್ತು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ.

ಆಕಾಶದ ನೀರು ಆಕಾಶದಲ್ಲಿ ಇತ್ತೇ. ಇಲ್ಲ. ಅದು ಈ ಭೂಮಿಯ ಮೇಲಿನ ನೀರೆ ಆವಿಯಾಗಿ ಮೋಡವಾಗಿ ಮತ್ತೆ ಧರೆಗೆ ಇಳಿಯುತ್ತದೆ. ಆಗ ನಾವು ಅದನ್ನು ಹೊಸ ಮಳೆ ಎಂದು ಕರೆಯುತ್ತವೆ. ಆ ರೂಪ ಹೊಸತಾದರೂ ಅದರ ಮೂಲ ಹಳತಲ್ಲವೇ ಆದರೂ ಅದಕ್ಕೊಂದು ಹೊಸ ಬಣ್ಣ. ಅದರ ಆಗಮನ ಹೊಸ ಭಾವವನ್ನು ತರುತ್ತದೆ. ಹೊಸ ಸಂಭ್ರಮದ ಸ್ವಾಗತವಿರುತ್ತದೆ. ಆದರೆ ಆ ಭಾವವೂ ನಮ್ಮಲ್ಲಿ ಹಿಂದೆಯೂ ಬಂದಿತ್ತು, ಹಾಗಾಗಿ ಅದು ಪುರಾತನ, ಆದರೂ ಇಂದು ಬಂದಿದೆ ಹಾಗಾಗಿ ನೂತನ.

ಈ ಜಗತ್ತಿನ ಎಲ್ಲವೂ ಹೇಗೇ. ಹಳತಿನ ಆಧಾರದ ಮೇಲೆ ಹೊಸ ಹೊಸ ವಿಚಾರಗಳು, ಆವಿಷ್ಕಾರಗಳು ಭಾವಗಳು ಸಾಹಿತ್ಯ ಸಂಗೀತ ಸಂಸ್ಕೃತಿ ಎಲ್ಲವೂ ಸಹ. ಅದರಿಂದ ಇದು ಹೊಸರೂಪ ತಾಳುತ್ತೆ. ಅದನ್ನು ನಾವು ನೂತನವೆನ್ನುತ್ತೇವೆ. ಏನೋ ಹೊಸದನ್ನು ಕಂಡುಹಿಡಿದ ಹಾಗೆ ಅಥವಾ ಕಂಡಹಾಗೆ ಸಂಭ್ರಮಿಸುತ್ತೇವೆ. ಆದರೆ ಹಳತು ಹೊಸದರ ಮೂಲ. ಹಳತಿಗೆ ಅದಕ್ಕಿಂದ ಹಳತಿನದು ಮೂಲ. ಹೀಗೆ ಹಳತು ಹೊಸತುಗಳ ಪ್ರವಾಹದ ಚಲನೆ ಈ ಜಗತ್ತಿನಲ್ಲಿ ನಿರಂತರವಾಗಿ ನಡೆದೇ ಇರುತ್ತದೆ. ನಮ್ಮ ಕನ್ನಡ ಭಾಷೆಯನ್ನೇ ತೆಗೆದುಕೊಳ್ಳೋಣ. ಭಾಷೆ ಒಂದೇ ದಿನದಲ್ಲಿ ಉಗಮವಾಗಲಿಲ್ಲ. ಒಂದು ವಿಕಸನ ಪ್ರಕ್ರಿಯೆಯಲ್ಲಿ ಹರಿದು ಹಲವಾರು ರೂಪಗಳನ್ನು ತಳೆದು ಪಡೆದು ಮತ್ತೆ ಆ ವಿಕಸನ ಪ್ರಕ್ರಿಯೆಯಲ್ಲೇ ರೂಪಾಂತರಗೊಳ್ಳುತ್ತಾ, ಇಂದಿನ ರೂಪ ಪಡೆದಿದೆ. ಓದುವ ಬರೆಯುವ ಮತ್ತು ಆಡುವ ಎಲ್ಲ ರೂಪಗಳಲ್ಲೂ ಅದು ಬದಲಾಗುತ್ತಾ ಇದೆ. ಹಳತಿನ ಆಧಾರದ ಮೇಲೆ ಹೊಸ ಹೊಸ ರೂಪ ಪಡೆಯುತ್ತದೆ. ಇಂದು ನಾವು ಹಳೆಗನ್ನಡವನ್ನು ಓದಲು ಸಮರ್ಥರಲ್ಲ. ಈಗಿನ ಹೊಸ ಕನ್ನಡ ಓದುತ್ತೇವೆ. ಆದರೆ ಇಂದಿನ ಭಾಷೆಯು ಅಂದಿನ ಭಾಷೆಯ ರೂಪಾಂತರಿತ ರೂಪವೆಂದು ಅರಿಯಬೇಕು .

ಒಂದು ಮರ ನೂರಾರು ವರ್ಷಗಳ ಕಾಲ ಜೀವಂತವಾಗಿರುತ್ತೆ. ಅದರ ಬೇರುಗಳು ಭೂತಲದಲ್ಲಿ ಸುತ್ತಲೂ ಬಹಳ ಕಾಲದಿಂದ ಹರಡಿಕೊಂಡಿರುತ್ತವೆ, ಅದರ ಕಾಂಡ ಭದ್ರವಾಗಿ ಭೂಮಿಯಲ್ಲಿ ನಾಟಿಕೊಂಡು ಇರುತ್ತದೆ. ಪ್ರತೀ ವರ್ಷವೂ ಆ ಮರ ತನ್ನ ದೇಹವನ್ನು ಕೊಡವಿಕೊಂಡಂತೆ ತನ್ನ ಎಲೆಗಳನ್ನೆಲ್ಲ ಉದುರಲು ಬಿಟ್ಟು ಮತ್ತೆ ಹೊಸ ಚಿಗುರನ್ನು ಮತ್ತು ಅದರ ಮೂಲಕ ಹೊಸ ಹೂ ಕಾಯಿ ಹಣ್ಣುಗಳನ್ನು ತಳೆಯುವುದಿಲ್ಲವೇ. ಈ ಪ್ರಕ್ರಿಯೆಯನ್ನು ನಾವು ಜಗತ್ತಿನ ಪ್ರತೀ ವಸ್ತುವಿಗೂ ಅನ್ವಯಿಸಿಕೊಳ್ಳಬಹುದು. ನಮ್ಮ ಯೋಚನೆ ಎಷ್ಟು ದೂರ ಹೋಗಬಲ್ಲದೋ ಅಷ್ಟೂ ದೂರ ಹರಿಸಿ ನೋಡಿದಾಗ, ನಮಗೆ ಈ ಹಳತು ಹೊಸತುಗಳ ಸಮ್ಮಿಲಿತ ರೂಪದ ಪರಿಚಯ ಖಂಡಿತ ಆಗುತ್ತದೆ. ನಮ್ಮ ಎಲ್ಲ ಹೊಸತೂ ಸಹ ಹಳತಿನ ಅಡಿಪಾಯದಮೇಲೆ ನಿಂತ ಹೊಸ ರೂಪ ಎಂದು ನಾವು ಅರ್ಥಮಾಡಿಕೊಂಡಾಗ ಈ ಜಗಜ್ಜೀವನದ ನಿರಂತರತೆಯ ರೂಪ ನಮಗೆ ಗೋಚರವಾಗುತ್ತದೆ.

ರಸಧಾರೆ – 130

ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ |

ವ್ಯೋಮದೆ ಭಗೀರಥಂ ತಂದ ಸುರತಟನಿ ||

ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |

ನಾವೆಂತು ಹೊಸಬರೆಲೊ- ಮಂಕುತಿಮ್ಮ ||

ರಾಮನಡಿಯಿಟ್ಟ = ರಾಮನು + ಅಡಿ + ಇಟ್ಟ //ಭೀಮನುಸಿರಿದ = ಭೀಮನು + ಉಸುರಿದ,// ಪುರಾತನಗಳಿರೆ = ಪುರಾತನಗಳು + ಇರೆ // ಹೊಸಬರೆಲೊ = ಹೊಸಬರು + ಎಲೊ

ವ್ಯೋಮದೆ = ಆಕಾಶದಿಂದ // ಸುರತಟನಿ = ಗಂಗಾನದಿ //ಸೋಮನಂ = ಚಂದ್ರನನ್ನು // ಪೆತ್ತ = ಹೆತ್ತ,// ಕಡಲೀ= ಸಮುದ್ರವು// ಪುರಾತನಗಳಿರೆ= ಪುರಾತನವಾಗಿರಲು

ರಾಮನು ನಡೆದಾಡಿದ ನೆಲ, ಭೀಮನು ಉಸಿರಾಡಿದ ಈ ಭೂಮಿ, ದಿವಿಯಿಂದ ಭಗೀರಥ ಈ ಭೂಮಿಗೆ ತಂದ ಆಕಾಶ ಗಂಗೆ, ಸಮುದ್ರ ಮಂಥನದಲ್ಲಿ ಕ್ಷೀರಸಾಗರದಲ್ಲಿ ಹುಟ್ಟಿದ ಆ ಚಂದ್ರ ಇವೆಲ್ಲವೂ ಪುರಾತನವೇ ಆಗಿರಲು, ನಾವು ಹೇಗೆ ಈ ಭೂಮಿಯಲ್ಲಿ ಹೊಸಬರಾಗುತ್ತೇವೆ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

ತ್ರೇತಾಯುಗದಲ್ಲಿ, ಪೂರ್ವದಲ್ಲಿ ರಾಮನು ನಡೆದಾಡಿದ, ಸರಯೂ ನದೀ ತೀರ, ಆ ಪಂಚವಟಿ, ಆ ದಂಡಕಾರಣ್ಯ, ಆ ರಾಮೇಶ್ವರ ಎಲ್ಲವೂ ಇಂದೂ ಇವೆ. ದ್ವಾಪರದಲ್ಲಿ ಭೀಮನೂ ಸಹ ಇಂದು ಇರುವ ಗಾಳಿಯನ್ನೇ ಉಸಿರಾಡುತ್ತಿದ್ದನು. ಭಾಗೀರಥನು ದಿವಿಯಿಂದ ಭುವಿಗೆ ತಂದ ಆ ಪರಮ ಪಾವನೆ ಗಂಗಾ ಮಾತೆ ಇನ್ನೂ ಹಾಗೆಯೇ ಹರಿದು ಈ ಭಾರತ ಖಂಡವನ್ನು ಪವಿತ್ರಗೊಳಿಸುತ್ತಿದ್ದಾಳೆ. ಪುರಾಣಗಳ ಪ್ರಕಾರ ಸಮುದ್ರಮಂಥನದಲ್ಲಿ ಉದ್ಭವವಾದ ಚಂದ್ರನು ಇನ್ನೂ ನಮಗೆ ಕಾಣುತ್ತಿದ್ದಾನೆ.ಹಾಗೆ ಎಲ್ಲ ಪುರಾತನವಸ್ತುಗಳೂ ನಮ್ಮೊಂದಿಗೆ ಇರುವಾಗ, ನಾವು ನೂತನರು, ಹೊಸಬರು ಹೇಗಾಗುತ್ತೇವೆ, ಎನ್ನುವುದೇ ಈ ಕಗ್ಗದ ಹೂರಣ.

ಮಹಾಭಾರತ ಯುದ್ಧದಲ್ಲಿ ಅರ್ಜುನ “ನನ್ನ ಬಾಂಧವರನ್ನು ಕೊಂದು ಸಿಗುವ ರಾಜ್ಯ ನನಗೇಕೆ” ಎಂದು ಗೋಳಾಡುತ್ತಾ, ” ನಾ ಯುದ್ಧ ಮಾಡುವುದಿಲ್ಲ ” ಎಂದಾಗ ಕೃಷ್ಣ ಹೇಳುತ್ತಾನೆ” ನಿನ್ನ ಮುಂದೆ ನಿಂತಿರುವವರು ಹಿಂದೆಯೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಹಾಗಾಗಿ ಅವರಿಗಾಗಿ ನೀನು ಚಿಂತಿಸಬೇಡ” ಎಂದು. ಈ ಪ್ರಪಂಚ ಒಂದು ನಿರಂತರ ಪಯಣಿಸುವ ಆಕಾಶಕಾಯವಿದ್ದಹಾಗೆ. ಇಲ್ಲಿ ಅದೇ ವಸ್ತುಗಳು ಮತ್ತೆ ಮತ್ತೆ ಬಂದು ಹೋಗುತ್ತಿರುತ್ತವೆ. ಅಂದಿನ ನೂತನವು ಇಂದಿಗೆ ಪುರಾತನವಾಗುತ್ತದೆ ಅಂದಿನ ಪುರಾತನವು ಇಂದಿಗೆ ನೂತನವಾಗುತ್ತದೆ.

ನಮ್ಮ ತಾತ ಚಿಕ್ಕಹುಡುಗನಾಗಿದ್ದಾಗ, ಅವರು ಅವರ ತಾತನಿಗೆ ನೂತನ. ಕಾಲಾನುಕಾಲಕ್ಕೆ ಅವರಿಗೆ ಮಕ್ಕಳಾದಾಗ,ಅವರ ಮಕ್ಕಳು ನೂತನರು. ಮಕ್ಕಳಿಗೆ ಅವರು ದೊಡ್ಡವರು. ಮಕ್ಕಳ ಮಕ್ಕಳಿಗೆ ವೃದ್ಧರು. ನಮಗೆ ಅವರು ಪುರಾತನರು. ಅವರು ಈಗ ಬರೇ ನೆನೆಪು ಮಾತ್ರ. ನೋಡಿದಿರಾ ನೂತನವು ಹೇಗೆ ಪುರಾತನವಾಯ್ತು ಮತ್ತು ಪುರಾತನವು ಹೇಗೆ ನೂತನವಾಯ್ತು . ಇದು ಈ ಜಗತ್ತಿನ ಎಲ್ಲ ಜೀವಿಗಳಲ್ಲಿಯೂ ಸಹಜ. ಆದರೆ ಒಂದು ವಿಷಯ ಗಮನಿಸಬೇಕು. ಇಲ್ಲಿ ನೂತನವಾಗುವುದು ಏನು ಪುರಾತನವಾಗಿ ಉಳಿಯುವುದು ಏನು ? ಸದಾ ನೂತನವಾಗಿ ಉಳಿಯುವುದು ಚೇತನ ಪುರಾತನವಾಗುವುದು ರೂಪ. ಪುರಾತನವಾದ ರೂಪ ಮತ್ತೆ ನೂತನ ವಾಗುತ್ತದೆ. ಆದರೆ ನಿತ್ಯ ನೂತನವಾದ ನಿತ್ಯವಾದ , ಮತ್ತು ಸತ್ಯವಾದ ಚೇತನ ಪುರಾತನ ರೂಪವನ್ನು ತೊರೆದು ನೂತನ ರೂಪವನ್ನು ಧಾರಣೆ ಮಾಡುತ್ತದೆ. ಹಾಗಾಗಿ ಪುರಾತನವಾಗುವುದು ಕೇವಲ ರೂಪ ಮಾತ್ರ. ನಿತ್ಯ ನೂತನ ಚೇತನ.

ಹೀಗೆ ಪುರಾತನ ಮತ್ತು ನೂತನಗಳ ಪರಸ್ಪರ ಹೊಂದಾಣಿಕೆಯೇ ಜೀವನ . ನಾವು ನಮ್ಮನ್ನು ಚೇತನ ಎಂದು ಅರಿತರೆ ನಾವೂ ಸಹ ನಿತ್ಯ ನೂತನ.

You may Also Like :

 

Leave a Comment