ರಸಧಾರೆ – 001
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲದೇವ ಸರ್ವೇಶ ಪರಬೊಮ್ಮನೆಂದು ಜನಂ ||ಆವುದನು ಕಾಣದೊಡಮಳ್ತಿಯಿಂ ನಂಬಿಹುದೋಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ ||
ರಸಧಾರೆ – 002
ಜೀವ ಜಡರೂಪ ಪ್ರಪಂಚವನದಾವುದೋ |ಆವರಿಸಿಕೊಂಡುಮೊಳನೆರೆದುಮಿಹುದಂತೆ ||ಭಾವಕೊಳಪಡದಂತೆ ಅಳತೆಗಳವಡದಂತೆ |ಆ ವಿಶೇಷಕೆ ಮಣಿಯೋ – ಮಂಕುತಿಮ್ಮ ||
ರಸಧಾರೆ – 003
ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ |
ಮಹಿಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ತ್ವಕೆ ಶರಣೋ – ಮಂಕುತಿಮ್ಮ ||
ತಿಳಿಯಗೊಡದೊಂದು=ತಿಳಿಯಗೊಡದ ಒಂದು
ವಿಹರಿಪುದದೊಳ್ಳಿತೆಂಬುದು = ವಿಹರಿಪುದು (ವಿಹಾರ ಮಾಡುವುದು) + ಅದು + ಒಳ್ಳಿತು = ಒಳ್ಳೆಯದು + ಎಂಬುದು
ನಿಸದವಾದೊಡಾ = ನಿಸದವಾದೊಡೆ + ಆ
ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.
ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. ಆ ದೇವರೆಂಬ ವಸ್ತು ಇದೆಯೋ ಇಲ್ಲವೋ ಎಂದು. ಇದೆ ಎಂದರೆ, ಅದಕ್ಕೆ ನಾನಾ ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ” ಚಾರ್ವಾಕ” ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ ವಸ್ತುವನ್ನು ನಂಬದಿರುವರು ಇದ್ದಾರೆ. ಕೆಲವರಿಗೆ ಧೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು, ಕೆಲವರಿಗೆ ಬರೀ ತೋರಿಕೆಗೆ ಭಕ್ತಿ. ಮತ್ತು ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುಧ್ಧ ಭಕ್ತಿ.
ಇಲ್ಲಿ ಡಿ.ವಿ.ಜಿ ಯವರೂ ಸಹ “ ನಿಸದವಾದೊಡೆ” ಎಂದಿದ್ದಾರೆ. ” ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ” ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ ತನ್ನ ಇಷ್ಟದಂತೆ ಪರಮಾತ್ಮ ಆಡಿಸುವನೆಂಬ ಅರ್ಥದಲ್ಲಿದೆ ದಾಸರ ಉಕ್ತಿ. ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ಗಹನಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ . ಇಲ್ಲಿ ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ? ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಮಾತಿಗೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ನಾನು ನಂಬಲ್ಲ ಎಂಬುವವನೂ ಸಹ ” ನಾನು ದೇವರನ್ನು ನಂಬುವುದಿಲ್ಲ ” ಎನ್ನುತ್ತಾನೆ. ಅಂದರೆ ಅವನು ” ” ದೇವರು” ಎನ್ನುವ ವಸ್ತುವೊಂದಿದೆ ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ?
ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುಧ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ .
ರಸಧಾರೆ – 004
ಏನು ಜೀವನದರ್ಥ? ಏನು ಪ್ರಪಂಚಾರ್ಥ ?
ಏನು ಜೀವಪ್ರಪಂಚಗಳ ಸಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು?
ಜ್ಞಾನಪ್ರಮಾಣವೇಮ್? ಮಂಕುತಿಮ್ಮ
ಕಾಣದಿಲ್ಲಿರ್ಪುದೇನಾನುಮುಂಟೆ = ಕಾಣದೆ + ಇಲ್ಲಿ + ಇರ್ಪುದು(ಇರುವುದು)+ ಏನಾನುಂ(ಏನಾದರೂ)+ ಉಂಟೆ
“ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? ” ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ ಯವರು.
ವಾಚಕರೆ, ಅಲ್ಪ ಸ್ವಲ್ಪ ವಿಚಾರಮಾಡುವ ಶಕ್ತಿ ಇರುವವರೂ ಸಹ ಈ ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಅನೇಕ ಬಾರಿ ಕೇಳಿಕೊಳ್ಳುತ್ತಾರೆ. ಅಲ್ಲವೇ?
ನಾವು ಹುಟ್ಟುತ್ತೇವೆ, ಬೆಳೆಯುತ್ತೇವೆ, ಬದುಕುತ್ತೇವೆ ಮತ್ತು ಒಂದು ದಿನ ಸಾವಿನ ತೆಕ್ಕೆಗೆ ಬೀಳುತ್ತೇವೆ. ಈ ಎಲ್ಲಕ್ಕೂ ಏನಾದರೂ ಅರ್ಥವಿದೆಯೇ? ನಾವು ಇಲ್ಲಿರುವಾಗ ನಮ್ಮ ಜೀವನದಲ್ಲಿ ಜ್ಞಾನದ ಜೊತೆಯಲ್ಲಿ ಪ್ರೀತಿ, ಪ್ರೇಮ, ಕೋಪ, ದ್ವೇಷ, ಅಸೂಯೆ, ಅನುರಾಗ ಮುಂತಾದ ಹಲವಾರು ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಭಾವನೆಗಳ ಜೊತೆಗೆ ಜೀವಿಸುತ್ತೇವೆ. ಈ ರೀತಿಯ ಜೀವನಕ್ಕೇನಾದರೂ ಅರ್ಥವಿದೆಯೇ? ವಾಸ್ತವ ಬದುಕಿಗೆ ಮಾತ್ರ ಮಾಸ್ತವವೇ ಕಾರಣವೋ ಅಥವಾ ನಮ್ಮ ಕಣ್ಣಿಗೆ ಕಾಣದ ಆದರೂ ಈ ಎಲ್ಲವನ್ನೂ ನಿಯಂತ್ರಿಸುವ ಬೇರೆ ಯಾವುದಾದರೂ ಶಕ್ತಿ ಇದೆಯೇ. ಇದ್ದರೆ ಅದರ ಸ್ವರೂಪವೇನು ಮತ್ತು ಅದರ ಕಾರ್ಯ ವೈಖರಿಯೇನು ಎನ್ನುವುದು ಎಲ್ಲ ವಿಚಾರವಂತರಿಗೂ ಬರುವ ಸಂದೇಹಗಳು.
ಪ್ರತಿ ಜೀವಿಯ ಹುಟ್ಟು ಏಕಾಗುತ್ತದೆ? ಭೌತಿಕ ಕಾರಣವು ಎಲ್ಲರಿಗೂ ಗೊತ್ತು. ಆದರೆ ಈ ಭೌತಿಕ ಕಾರಣವಲ್ಲದೆ ಬೇರೆ ಏನಾದರೂ ಕಾರಣವಿದೆಯೇ? ಆ ಕಾರಣವೇ ನಮ್ಮ ಪ್ರತಿ ನಿಮಿಷದ ಕಾರ್ಯಗಳನ್ನೂ ನಿಯಂತ್ರಿಸುತ್ತದೆಯೇ?
ನಮ್ಮ ಭಾರತೀಯ ಸಿದ್ಧಾಂತದ ಪ್ರಕಾರ ಪ್ರತಿ ಜೀವಿಯೂ ಒಂದು ಪೂರ್ವ ನಿಯೋಜಿತ ಕಾರಣಕ್ಕಾಗಿ ಜನಿಸಿ ಮತ್ತು ಆ ಪೂರ್ವ ನಿಯೋಜಿತ ಕ್ರಮದಲ್ಲಿಯೇ ತನ್ನ ಜೀವನವನ್ನು ನಡೆಸುತ್ತದೆ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆ ಕಾರಣದ ಮೂಲವೇನು? ಆ ಕಾರಣಕ್ಕೆ ಕಾರಕರಾರು? ಬಹಳ ಕ್ಲಿಷ್ಟವಾದ ಪ್ರಶ್ನೆ.
ನಮ್ಮ ಋಷಿ ಮುನಿಗಳೂ ಸಹ ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಾಣಲು ಮಾಡಿದ ಪ್ರಯತ್ನದ ಫಲವೇ ಭಾರತೀಯ ವೇದ ಶಾಸ್ತ್ರಗಳು, ಉಪನಿಷತ್ತುಗಳು . ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಉದ್ಭವವಾಗುವ ಮತ್ತು ಎಲ್ಲರೂ ವಿಚಾರ ಮಾಡಬಹುದಾದ ಅಥವಾ ಮಾಡಲೇಬೇಕಾದ ಪ್ರಶ್ನೆಗಳ ಸ್ವರೂಪವೇ ಈ ಕಗ್ಗ.
ರಸಧಾರೆ – 005
ದೇವರೆಂಬುದದೇನು ಕಗ್ಗತ್ತಲ ಗವಿಯೆ?
ನಾವರಿಯಲಾದೆಲ್ಲದರೊಟ್ಟು ಹೆಸರೇ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?
ಸಾವು ಹುಟ್ಟುಗಳೇನು?- ಮಂಕುತಿಮ್ಮ
ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?
ಕಾವನು(= ಕಾಯುವವನು) ಓರ್ವನು(= ಒಬ್ಬನು) ಇರಲ್ಕೆ( = ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ.
ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.
ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವಿನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವೀ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ. ಕಾಡು ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ. ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣು ಹಂಪಲುಗಳು ಯತೇಚ್ಚವಾಗಿ ಸಿಗುತ್ತದೆ. ಹಾಗೇ ಗಗನದಿಂದ ಬಂದ ಮಳೆ ತನಗೆ ಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು” ದೇವರು” ಎಂದ. ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನ ಸ್ತಿತಿ ಹಾಗೆ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ ಪಕ್ಷಿ ಗಿಡ ಮರ,ನದಿ ಸಮುದ್ರ, ಮಳೆ ಬಿಸಿಲು ಬೆಳಕು ಹೂವು ಹಣ್ಣು ಹೀಗೆ ಎಲ್ಲವೂ ಅವನಿಗೆ ದೈವ ಸಮಾನ.
ಆದರೆ ಆ ದೇವರೇನು ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ ” ಅದು ” ಇದೇ” ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ ಅಲ್ಲವೆ?. ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ( ಪರಿಭಾಷೆ = definition )ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ.
ವಾಚಕರೆ, ನೋಡಿ ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ? ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಕೇಳುತ್ತಾರೆ.
ಹಾಗೆ ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ? ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಕಗ್ಗದ ಮೂಲಕ ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.
ರಸಧಾರೆ – 006
ಒಗಟೆಯೇನೀ ಸೃಷ್ಟಿ? ಬಾಳಿನರ್ಥವೇನು ?
ಬಗೆದು ಬಿಡಿಸುವರಾರು ಸೋಜಿಗವನಿದನು ?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ ? – ಮಂಕುತಿಮ್ಮ
ಒಗಟೆಯೇನೀ (ಒಗಟೇ + ಏನು + ಈ) ಸೃಷ್ಟಿ? ಬಾಳಿನ ಅರ್ಥವೇನು. ಬಗೆ ಬಿಡಿಸುವವರು ಯಾರು ಸೋಜಿಗವ ಇದನು.
ಜಗವ ನಿರವಿಸಿದ (ನಿರ್ಮಿಸಿದ) ಕೈ ಒಂದು ಆಡೋದೇ (ಆದರೆ) ಏಕೆ ಇಂತು(ಹೀಗೆ) ಬಗೆ ಬಗೆಯ ಜೀವಗತಿ – ಮಂಕುತಿಮ್ಮ.
ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ ?
ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.
ಎಲ್ಲ ಜೀವಿಗಳಲ್ಲೂ ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ.
ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ದೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ.
ಆದರೂ ಏನಿದು ಪ್ರಪಂಚ ಎಂಬ ಪ್ರಶ್ನೆ ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಗಂಟಾದರೆ ಯಾರಾದರೂ ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.
ಈ ಜಗತ್ತನ್ನು ನಿರ್ಮಿಸದ ಅಥವಾ ಸೃಷ್ಟಿಸಿದ “ಕೈ” ಒಂದೇ ಎಂದಾದರೆ, ವಿಧವಿದವಾದ ಅಸಮತೆಯಿಂದ ಏಕೆ ಕೂಡಿದೆ ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ ಅಲ್ಲವೇ, ಹಾಗೆಯೆ ಇದೆ ಈ ಕಗ್ಗದ ಭಾವ.
ನಾ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಚೇಧಿಸಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ ಒಂದೊಂದು ರೂಪದಲ್ಲಿ ಕಾಣುವ ಈ ಜಗತ್ತಿನ ನಿಜ ರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುಧ್ಧಿಗಳಿದ್ದಂತೆ ಮತ್ತೊಬ್ಬರದ್ದಿಲ್ಲ. ಅವರವರ ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ.
ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬನ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು.ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೆ ಅಲ್ಲ ಸಕಲ ಪ್ರಾಣಿಗಳಿಗೂ ಅನ್ವಯಿಸಿದ್ದತೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು, ಬದುಕಗಳ ಮಧ್ಯದಲ್ಲಿನರಳುವಾಗ , ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ ಹೇ! ಪರಮಾತ್ಮ ಏನಿದು ಈ ಜೇವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ.ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ತಿತಿ.
ಅಷ್ಟೇ ಅಲ್ಲ ಇಂದು ಸುಖ ನಾಳೆ ದುಖ, ಇಂದು ಆರೋಗ್ಯ ನಾಳೆ ಅನಾರೋಗ್ಯ, ಇಂದು ಮಿತ್ರ ನಾಳೆ ಶತ್ರು, ಇಂದು ಸಂತೋಷ ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ? ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ? ವಿಧಾತನೆಷ್ಟು ಕಾರಣ? ಹೇಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈ ಆರನೆಯ ಕಗ್ಗ. ಈ ಕಗ್ಗದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲ ದಿರಬಹುದು.
ರಸಧಾರೆ – 007
ಬದುಕಿಗಾರ್ ನಾಯಕರು, ಏಕನೋ ಅನೇಕರೋ?
ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?
ಕುದುರುವುದೆಂತು ಈಯವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ ||
ಬದುಕಿಗಾರ್ = ಬದುಕಿಗೆ = ಯಾರ್, ಧರುಮವೋ = ಧರ್ಮವೋ, ಅಂಧಬಲವೋ = ಅಂಧ ಶ್ರದ್ಧೆಯೋ, ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ.
ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.
ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. ” ಕಿಮೇಕಂ ದೈವತಂ ಲೋಕೆ? ಕಿಂ ವಾಪ್ಯೇಕಂ ಪರಾಯಣಂ? ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ ? ಕಿಂ ಜಪನ್ಮುಚ್ಯತೇರ್ಜ೦ತುರ್ ಜನ್ಮ ಸಂಸಾರ ಬಂಧನಾತ್ ” ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ ಎಂತಹ ಸಂದೇಹಗಳು ಬರಬೇಕು ಹೇಳಿ? ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು ಸುಲಭವೇ?
ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ ಅಥವಾ ಅಮೂರ್ಥನೆ ಅಂದರೆ ಆಕಾರ ಉಂಟೆ ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೆ ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಕ್ಯಾನ ಮಾಡಿದ್ದಾರೆ .ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ ಭಿನ್ನ ಮತಗಳು. ಅಂತ ಧರ್ಮವೇ ಈ ಜಗತ್ತಿನ ನಾಯಕನೇ ? ವಿಧಿ ಎಂದರೆ ಪೂರ್ವ ನಿಯಮಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ಬಗೆ. ಹಣೆಯ ಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ ? ಯಾವುದಾದರೂ ಆಗಲಿ ಅಥವಾ ಇರಲಿ, ಈ ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನುಎಂದರೆ ಹಣೆಬರಹವನ್ನೇ ನಂಬುವ ಮತ್ತು ತಮ್ಮ ಸ್ವಶಕ್ತಿಯನ್ನೇ ನಂಬುವ ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ. ಕಾರಣವೇ ತಿಳಿಯದ, ಈಜಗತ್ತಿನ ಅಸಮಾನತೆ ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ ಇದು ಏಕೆ ಹೀಗೆ, ಇದು ಸರಿಯಾಗುವುದೋ ಇಲ್ಲವೋ ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.
ಇಂತಹ ಸಂದೇಹಗಳು ನಮ್ಮ ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?
ರಸಧಾರೆ – 008
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?
ಭ್ರಮಿಪುದೇನಾಗಾಗ ಕರ್ತೃವಿನ ಮನಸು?
ಮಮತೆಯುಳ್ಳವನಾತನಾದೊಡೀ ಜೀವಗಳು
ಶ್ರಮಪಡುವುದೇಕಿಂತು -ಮಂಕುತಿಮ್ಮ ?
ಕ್ರಮವು ಒಂದು ಲಕ್ಷ್ಯವು ಒಂದು ಉಂಟೇನು ಸೃಷ್ಟಿಯಲಿ ಭ್ರಮಿಪುದು ಅದೇನು ಆಗಾಗ ಕರ್ತೃವಿನ ಮನಸು
ಮಮತೆಯುಳ್ಳವನು ಆತನು ಆದೊಡೆ ಜೀವಗಳು ಶ್ರಮಪದುವುದೇಕೆ ಇಂತು – ಮಂಕುತಿಮ್ಮ
ಕ್ರಮವು = ರೀತಿ, ಲಕ್ಷ್ಯವು = ಗುರಿ(purpose ), ಭ್ರಮಿಪುದು = ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,
ಕರ್ತೃ = ಜಗತ್ತನ್ನು ಸೃಷ್ಟಿದವ , ಆದೊಡೆ= ಆದರೆ, ಶ್ರಮ = ಕಷ್ಟ .
ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ
” ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ?
ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?
ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿ ಕಾಲಗಳು. ಬೆಳೆಗಳು, ಹೂ, ಹಣ್ಣುಗಳಿಗೂ ಒಂದೊಂದು ಕಾಲ.
ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ- ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿಧ್ಯಮಾನಗಳು ನಡೆಯುವಾಗ , ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ. ಯವರು ಕೇಳುತ್ತಾರೆ.
ಆದರೆ ಈ ಜಗತ್ತಿನಲ್ಲಿ ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ.
ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು ” ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ” ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. ” ಪ್ರತಿ ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ ” ಎಂದಾದರೆ ಇಲ್ಲಿ, ಪರಮಾತ್ಮನ ಪ್ರಮೇಯ ಕಡಿಮೆ. ಆದರೆ “ಇದೋ” ಅಥವಾ ”ಅದೋ” ಎನ್ನುವ ದ್ವಂದ್ವ ಸಹ ಸದಾ ಮಹಾ ಮಹಾ ಪಂಡಿತರನ್ನೇ ಕಾಡಿದೆ, ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ.
ಈ ಕಗ್ಗಕ್ಕೆ ಮತ್ತು ಈ ಕಗ್ಗದ ಹಿಂದಿನ ನಾಲ್ಕು ಕಗ್ಗಗಳಿಗೂ ಮತ್ತು ಮುಂದೆ ಬರುವ ಕಗ್ಗಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು ಪ್ರಕಟಿಸಿದ್ದು ೧೯೪೨ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ ೨ನೆ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಬಡತನ ಆಹಾರದ ಕೊರತೆ, ರೋಗ ರುಜಿನಗಳ ಮಹಾಪೂರ ಹೀಗೆ ಹತ್ತು ಹಲವಾರು ಪ್ರಕೊಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ ಡಿ.ವಿ.ಜಿ. ಯವರು ಅಂದಿನ ಪರಿಸ್ತಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.
ಆದರೆ ವಾಚಕ ಮಿತ್ರರೇ, ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ ದೇಶಗಳನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿ ಸಂತೋಷದಲಿ ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ.
ಹಾಗಾಗಿ ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ ವಿಚಾರದ ಓರಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.
ರಸಧಾರೆ – 009
ಏನು ಭೈರವಲೀಲೆಯೀ ವಿಶ್ವಭ್ರಮಣೆ!
ಏನು ಭೂತಗ್ರಾಮನರ್ತನೋನ್ಮಾದ ! |
ಏನಗ್ನಿ ಗೋಳಗಳು ! ಏನಂತರಾಳಗಳು !
ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ ||
ಭೈರವಲೀಲೆಯೀ = ಭೈರವ + ಲೀಲೆಯು + ಈ , ಭೂತಗ್ರಾಮನರ್ತನೋನ್ಮಾದ = ಭೂತ + ಗ್ರಾಮ + ನರ್ತನ + ಉನ್ಮಾದ, ಏನಗ್ನಿ = ಏನು+ ಅಗ್ನಿ
ಬೈರವ = ಪರಮ ಶಿವ, ರುದ್ರ, ಉನ್ಮಾದ = ಉದ್ವೇಗ, ಗೋಳ = ಉಂಡೆ, ವಿಸ್ಮಯ = ಆಶ್ಚರ್ಯ.
ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ. ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ.
ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹೌದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ, ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯಾವುದೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8 .28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ ಈ ನಮ್ಮ ಸೂರ್ಯನೆಂಬ ನಕ್ಷತ್ರ. ಬೇಸಿಗೆ ಕಾಲದಲ್ಲಿ ಅವನ ಶಾಕವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ.! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು.
ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ ಕಾಣುವ ಎಷ್ಟೋ ನಕ್ಷತ್ರಗಳು ಎಷ್ಟು ದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ ಆಲ್ಫಾ ಸೆಂಚ್ಯುರಿ ಅಥವಾ ಮ್ಯಾಗ್ಜಿಮಾ ಸೆಂಚ್ಯುರಿ . ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4 .7 ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!! ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ.
ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು.ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು? ನಮ್ಮ ಸಾಮರ್ಥ್ಯದ ಮಿತಿ ಏನು? ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ.
ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ ನಾವೆಲ್ಲರೂ ಮುಂದಿನ ಕಗ್ಗಕ್ಕೆ ಹೋಗುವ.
ರಸಧಾರೆ – 010
ಏನು ಪ್ರಪಂಚವಿದು! ಏನು ಧಾಳಾಧಾಳಿ|
ಏನದ್ಭುತಾಪಾರಶಕ್ತಿ ನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು?ಮುಗಿವೇನು? |
ಏನರ್ಥವಿದಕೆಲ್ಲ? – ಮಂಕುತಿಮ್ಮ ||
ಏನದ್ಭುತಾಪಾರಶಕ್ತಿ ನಿರ್ಘಾತ = ಏನು ಅದ್ಭುತ + ಅಪಾರ+ ಶಕ್ತಿ, ನಿಘಾತ = ಹೊಡೆತ.
ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು.
ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು ?ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು? ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಬಾವಗಳನ್ನು ವ್ಯಕ್ತ ಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಂಕ ವಿಧ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
ಯಾರೋ ಒಬ್ಬ ಸರ್ವಾಧಿಕಾರಿಯ ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಮತ್ತು ಅಹಂಕಾರವನ್ನು ತಣಿಸುವ ಅತೀ ಆಸೆಗೆ ಬಲಿಯಾದದ್ದು ಇಡೀ ವಿಶ್ವ. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಆ ಎರಡು ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರೋ ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ ಕಾರಣವೇ ಗೊತ್ತಿಲ್ಲ. ಹೊಡೆದಾಡುವುದು, ಪಾಪ ಮುಗ್ದ ಸೈನಿಕರು. ಕೇವಲ ಜೀವಿಕೆಗಾಗಿ.
ಇದು ಮಾನವನ ಜೀವನದ ಇತಿಹಾಸದಲ್ಲಿ ನಿರಂತಾರವಾಗಿ ನಡೆದಿದೆ. ಕ್ರಿಸ್ತಪೂರ್ವ ಸುಮಾರು ೩೨೫ ವರ್ಷದಲ್ಲಿ ಅಲೆಕ್ಸಾಂಡರನ ವಿಶ್ವ ವಿಜಯ ಯಾತ್ರೆಯಿಂದ ಹಿಡಿದು, ಇಂದಿನವರೆಗೆ ನಡೆದ ಯುದ್ಧಗಳು ಆಯಾಯಾ ರಾಷ್ಟ್ರಗಳ ನಾಯಕರ ಭೌದ್ಧಿಕ ಮತ್ತು ನೈತಿಕ (intellectual & moral) ದಿವಾಳಿತನದಿಂದಲೇ ನಡೆದಿದೆ ಅಲ್ಲವೆ.
ಅಂತಹ ಒಂದು ಸ್ಥಿತಿಯೇ ೨ನೆ ಮಹಾಯುದ್ಧದ ಕಾಲದಲ್ಲಿ ಹಿಟ್ಲರನ ತಿಳಿಗೇಡಿತನದಿಂದಾಗಿ ಆರಂಭವಾಗಿ ವಿಶ್ವವೆಲ್ಲ ಹರಡಿ ಹಲಕೆಲವರು ಕೆಲಕೆಲವರ ಪಕ್ಷ ಹಿಡಿದು ಹೋರಾಡಿ, ಇಡೀ ಪ್ರಪಂಚವನ್ನು ವಿನಾಶದಂಚಿಂಗೆ ತಳ್ಳಿದರು ಘನಘೋರ ಯುದ್ಧ, ಅಪಾರ ಶಕ್ತಿಯ ವ್ಯಯ, ಸಾವು ನೋವು. ಪ್ರತಿ ದೇಶಕ್ಕೂ ಯುದ್ಧಕ್ಕಾಗಿ ಅಪಾರ ವೆಚ್ಚ. ಆ ವೆಚ್ಚವನ್ನು ಭರಿಸಲಿಕ್ಕಾಗಿ ಅಧಿಕ ಕರಗಳು ಮತ್ತು ಕರಭಾರದಿಂದ ತತ್ತರಿಸಿದ ಪ್ರಜೆಗಳು. ಯುದ್ಧದಲ್ಲಿ ಸಾವು ನೋವುಗಳು. ಇದು ಸಾಲದೆಂಬಂತೆ ಅಂದು ಇಡೀ ಪ್ರಪಂಚದಲ್ಲೇ ಬರದ ಕರಾಳ ನೃತ್ಯ. ಎಲ್ಲದಕ್ಕೂ ಕೊರತೆ, ಕಾಲರಾ ಪ್ಲೇಗ್ ನಂತಹ ಸೋಂಕು ರೋಗಗಳ ರುದ್ರ ನರ್ತನ. ನೋವು ಮಾತ್ರ ಅಧಿಕ . ಇದನ್ನು ಕಂಡೆ ಗುಂಡಪ್ಪನವರು, “ಮಾನವನ ಗುರಿಯೇನು”? ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲ ಏನು ಅರ್ಥ ಎಂದು ಕೇಳುತ್ತಾರೆ.
ವಾಚಕರೆ, ನಿಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಅಂದು ಅನ್ನಕ್ಕೆ ಬರ.ಬಟ್ಟೆಗೆ ಬರ. ಹಾಲು ನೀರಿಗೂ ಬರ. ಪ್ರತಿ ಊರಿನಲ್ಲೂ ಗಂಜಿ ಕೇಂದ್ರಗಳು. ಪ್ರತಿಯೊಬ್ಬರಿಗೂ ಬೆಳಗ್ಗೆ ಎರಡು ಸೌಟು ಮತ್ತು ಸಂಜೆ ಎರಡು ಸೌಟು. ಬಟ್ಟೆ ಬೇಕಾದರೆ, ಸರ್ಕಾರದಿಂದ ಪರವಾನಗಿ(permit) ತೆಗೆದುಕೊಂಡು ಗುಟ್ಟಲ್ಲಿ ಖರೀದಿ ಮಾಡಬೇಕಾದ ಪರಿಸ್ಥತಿ.
ಅಂತಹ ಪರಸ್ಥಿತಿಗೆ ಅರ್ಥವೇನು? ಅಂದರೆ ಅರ್ಥಹೀನ ಎಂಬ ರೀತಿ ಗುಂಡಪ್ಪನವರು ಪ್ರಶ್ನಿಸುತ್ತಾರೆ.
ಇಂದು ಕೂಡ ಪರಸ್ಥಿತಿ ಬದಲಾಗಿಲ್ಲ.ಅಂದು ಕೊರತೆಯಿಂದ – ಇಂದು ಆಧಿಕ್ಯದಿಂದ ಮಾನವನಿಗೆ ತೊಂದರೆ. ಅಹಂಕಾರದ, ದ್ವೇಷದ, ಯುದ್ಧಗಳ, ನೋವಿನ, ಕೊರತೆಗಳ ರೂಪ ಬೇರೆ ಅಷ್ಟೇ! ಇಂದು ಕೂಡ ನಾವು ಅಂದು ಅವರು ಕೇಳಿದ ಪ್ರಶ್ನೆಗಳನ್ನೇ ಕೇಳುವ ಸ್ಥತಿ ಇದೆ ಇಲ್ಲವೇ?
You may Also Like :