Mankuthimmana kagga (ಮಂಕುತಿಮ್ಮನ ಕಗ್ಗ ) with meanings 61 -70

 ಸಾಕ್ಷಿ ದ್ವಯ ರಸಧಾರೆ – 061

ನಕ್ಷತ್ರ ಮಂಡಲದಿನಾಚೆಯಿಂದೊಂದು ದನಿ |

ವಕ್ಷೋಗುಹಾಂತರದಿನೊಂದು ದನಿಯಿಂತೀ ||

ಸಾಕ್ಷಿ ದ್ವಯವು ನಿನ್ನಳೊ೦ದುಗೂಡಿದೊಡದೇ |

ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ

ವಕ್ಷ = ಹೃದಯ, ಪ್ರೇಕ್ಷೆ = ಸಾಕ್ಷಾತ್ಕಾರ, ದರ್ಶನ, ಪರಬೊಮ್ಮನದು = ಪರಬ್ರಹ್ಮನದು

ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿ ದ್ವಯವು ನಿನ್ನೊಳಗೆ ಒಂದು ಗೂಡಿದೊಡೆ ಅದೇ ಪರ ಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಕಗ್ಗದ ಹೂರಣ.

ಒಂದು ದೈವೀ ದನಿ ಮತ್ತೊಂದು ಅಂತರ್ದನಿ ಎರಡರ ಸಮ್ಮಿಲನವೇ ಪರಮಾತ್ಮ ದರ್ಶನ. ನಾವು ಯಾವುದಾದರೊಂದು ದನಿಯನ್ನು ಕೇಳಬಹುದಲ್ಲವೆ. ಈ ಎರಡೂ ದನಿಗಳನ್ನು ಕೇಳುವುದು ಹೇಗೆ.ಅವುಗಳನ್ನು ಮೇಳೈಸುವುದು ಹೇಗೆ ಎಂಬುದೇ ಆಧ್ಯಾತ್ಮ ವಿದ್ಯೆಯ ಅಂತಿಮ ಪಾಠ. ಇಡೀ ಸೃಷ್ಟಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಹಾಗೆ ಕಲ್ಪಿಸಿಕೊಳ್ಳಲಾದರೆ, ಅದನ್ನು ಅಂತಃಚಕ್ಷುವಿನಿಂದ ನೋಡಲು ಸಾಧ್ಯವಾದರೆ ಮತ್ತು ಅದನ್ನು ನಮ್ಮ ಅಂತರಂಗದಲ್ಲಿ ಈ ಪಂಚಭೂತಗಳ, ಪಂಚ ಜ್ಞಾನೇಂದ್ರಿಯಗಳ, ಪಂಚ ಸ್ಪರ್ಶೇ೦ದ್ರಿಯಗಳ ಪ್ರಭಾವ ಮತ್ತು ಪರಿಧಿಯಿಂದ ಹೊರತುಪಡಿಸಿ ನೋಡಿದಾಗ ಆ ಬೃಹತ್ ಚೇತನದ ಅದ್ಭುತ ಕಾರ್ಯದ ಅರಿವಾಗಿ, ನಾವು ಪರಮಾತ್ಮ ದರ್ಶನ ಮಾಡಿಕೊಳ್ಳಬಹುದು. ಇದನ್ನು ವಿವರಿಸುವುದು ಕಷ್ಟ. ನಾ ಹಿಂದೆ ಹೇಳಿದ ಹಾಗೆ ಇದು ಕೇವಲ ಅನುಭವ ವೇಧ್ಯ.

ಇದನ್ನು ಇನ್ನೊಂದು ರೀತಿ ನೋಡಬಹುದು. ನಮಗೆ ಬಹಳಷ್ಟು ಜನರ ಬೋಧನೆಗಳು, ನಮ್ಮ ಓದಿನಿಂದ ಬಹಳಷ್ಟು ವಿಚಾರಗಳು, ತಿಳಿದವರಿಂದ, ಪಂಡಿತರಿಂದ, ಸಾಧು ಸಂತರಿಂದ, ಸಾಧನೆ ಮಾಡಿದವರಿಂದ ಕೇಳಿದ ವಿಚಾರಗಳಿಂದ ಒಂದು ಸ್ವಲ್ಪಮಟ್ಟಿಗೆ ಹಲವು ವಿಚಾರಗಳು ಅರಿವಿಗೆ ಬರುತ್ತವೆ. ನಾವು ನಮ್ಮ ಅಂತರಂಗದಲ್ಲಿ ಅಂತರ್ಮುಖಿಯಾಗಿ ಅನುಭವಿಸುವ ಕೆಲವು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಎರಡೂ ವಿಚಾರಗಳನ್ನು ಮಂಥನ ಮಾಡಿ ಸಾಧ್ಯಾಸಾಧ್ಯತೆಗಳನ್ನು, ಸಾಧಕ ಭಾದಕಗಳನ್ನು, ವಿಚಾರದ ಒರೆಗೆಹಚ್ಚಿ ನಮಗೆ ಸರಿಕಂಡದ್ದನ್ನು ನಂಬಿ, ನಮ್ಮ ನಂಬಿಕೆಯನ್ನು ಗಟ್ಟಿ ಮಾಡಿಕೊಂಡು, ನಮ್ಮ ಅನುಭವನ್ನು ದೀರ್ಘಕಾಲ ಅನುಭವಿಸುವಂತಾದರೆ ಆ ಪರಮಾತ್ಮನ ಸತ್ಯರೂಪದ ದರ್ಶನ ನಮಗೆ ಖಂಡಿತ ಆಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ” ಸಾಕ್ಷಿ ದ್ವಯವು ” ಎಂಬ ಪದ ಪ್ರಯೋಗದಿಂದ ಉಲ್ಲೇಖಿಸಿದ್ದಾರೆ.

ಇದನ್ನು ಅನುಭವಿಸ ಬೇಕು. ಅಂತರಂಗದಲ್ಲಿ ತಂದುಕೊಂಡು ಸಂತಸಿಸಬೇಕು, ಕಂಡುಕೊಳ್ಳಬೇಕು ಸ್ಥಿರಮಾಡಿಕೊಳ್ಳಬೇಕು. ನನ್ನ ಅನುಭವಕ್ಕೆ ಇನ್ನೂ ಸ್ಥಿರವಾಗಿ ಬಂದಿಲ್ಲ. ಪ್ರಯತ್ನಪಡುತ್ತಿದ್ದೇನೆ. ವಾಚಕರೆ ನೀವೂ ಪ್ರಯತ್ನ ಪಡಿ. ಜಯವಾಗಲಿ.

ರಸಧಾರೆ – 062

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |

ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||

ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ |

ಚೇತನವನರಿವನೇಂ ? ಮಂಕುತಿಮ್ಮ ||

ಭೌತವಿಜ್ಞಾನಿಯು ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳ ಗುಣಾಕಾರ ಭಾಗಾಕಾರ ಲೆಕ್ಕಾಚಾರವನ್ನು ಮಾಡುತ್ತಾನೆ. ಆದರೆ ಮಾನವ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿ ದ್ವೇಷ ರೋಷಗಳ ಶಕ್ತಿಯನ್ನು ಅಳೆಯುತ್ತಾನೆಯೇ? ಸಕಲ ಸೃಷ್ಟಿಯನ್ನೂ ಒಂದು ಸೂತ್ರದಲ್ಲಿ ಹೆಣೆದು ಅದರ ಗತಿ ವಿಧಿಗಳನ್ನು ನಿಯಂತ್ರಿಸುವ ಆ ಬೃಹತ್ ಚೇತನವನ್ನು ಅವನಿಂದ ಅರಿಯಲು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

ವಿಜ್ಞಾನಿಗಳ ಸಂಶೋಧನೆಗಳಿಂದ ಅವರಿಗೆ ಈ ಸೃಷ್ಟಿಯ ರಹಸ್ಯಗಳು ಅರಿವಿಗೆ ಬಂದಿರುವುದು ಕೇವಲ ಅಣುಮಾತ್ರ. ಊಹೆಗೂ ನಿಲುಕದ ಈ ಸೃಷ್ಟಿಯನ್ನು ಅವರ ಕೈಲಿ ಅರಿಯಲು ಸಾಧ್ಯವೇ ಇಲ್ಲ. ಅಮಿತವಾದಂತ ಈ ಜಗತ್ತನ್ನು ಮಿತ ಬುಧ್ಧಿಯಿಂದ ಅರಿಯಲು ಸಾಧ್ಯವೇ? ಏನೋ ಒಂದಿಷ್ಟು ಲೆಕ್ಕಾಚಾರ ಹಾಕಿ ಇದು ಹೀಗಿರಬಹುದು ಅಥವಾ ಅದು ಹಾಗಿರಬಹುದು ಎಂದು ಅಂದಾಜು ಮಾಡಬಹುದು. ಸ್ವಲ್ಪಮಟ್ಟಿಗೆ ಅರಿಯಲೂ ಸಾಧ್ಯ. ಆದರೆ ಒಂದು ವಿಚಾರ, ಇಂದು ಇವರುಗಳು ಕಂಡು ಕೊಂಡಂತಹ ವಿಚಾರಗಳು, ಎಂದಿಗೂ ಹೀಗೇ ಇರುವುದಿಲ್ಲ. ಬದಲಾಗುತ್ತಾ ಇರುವ ಈ ಜಗತ್ತಿನ ಪರಿಯನ್ನು ನಿಖರವಾಗಿ ಹೇಳಲು ಸಾಧ್ಯವೇ. ಇಲ್ಲ. ಕೇವಲ ಊಹಿಸಬಹುದು. ಹೀಗಿರಬಹುದು ಅಥವಾ ಹಾಗಿರಬಹುದು ಎಂದು ಕಲ್ಪಿಸಿಕೊಳ್ಳಬಹುದು ಮತ್ತು ಕಲ್ಪಿಸಿದ್ದನ್ನು ಸಿದ್ಧಾಂತವನ್ನಾಗಿ ಪ್ರತಿಪಾದಿಸಬಹುದು. ಆದರೆ ಕೆಲವು ವರ್ಷಗಳ ಬಳಿಕೆ ಆ ಸಿದ್ಧಾಂತಗಳು ಸತ್ಯಕ್ಕೆ ದೂರವೆನ್ನುವುದನ್ನು ಮತ್ತಾರೋ ಧೃಢಪಡಿಸುತ್ತಾರೆ. ಹಾಗಾಗಿ ವಿಜ್ಞಾನಿಗಳಿಂದ ಸೃಷ್ಟಿಯ ರಹಸ್ಯವನ್ನು, ಅವರ ಗುಣಾಕಾರ ಭಾಗಾಕಾರಗಳ ಲೆಕ್ಕಾಚಾರದಿಂದ ಅರಿಯಲು ಸಾಧ್ಯವಿಲ್ಲ ಎನ್ನುವುದು ಮಾನ್ಯ ಗುಂಡಪ್ಪನವರ ಮತ ಮತ್ತು ಸತ್ಯವೂ ಕೂಡ.

ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳನ್ನು ಮತ್ತು ಅದರ ಲೆಕ್ಕಾಚಾರವನ್ನು ಈ ಭೌತ ವಿಜ್ಞಾನಿಗಳು ಅಲ್ಪ ಸ್ವಲ್ಪ ಹಾಕಿಬಿಡಬಹುದು. ಆದರೆ ಮಾನವನ ಮನಸ್ಸಿನಲ್ಲಿ ಇರುವ ಪ್ರೀತಿ ಪ್ರೇಮ ಕೋಪ ದ್ವೇಷದ ಭಾವಗಳ ಸಂವೇದನೆಯ ಒತ್ತಡ, ವೇಗದ ಲೆಕ್ಕಾಚಾರವನ್ನು ಯಾರಿಂದಲೂ ಹಾಕಲು ಸಾದ್ಯವಿಲ್ಲವೆನ್ನುತ್ತಾರೆ, ಮಾನ್ಯ ಗುಂಡಪ್ಪನವರು. ಹೌದು ಮಾನವನ ಮನಸೂ ಈ ಸೃಷ್ಟಿಯಷ್ಟೇ ಅಗಾಧ ಮತ್ತು ಆಳ. ವೇದಾಂತದಲ್ಲಿ ಅದನ್ನು ಬಹಳ ಆಳವಾದದ್ದು, ನಿಗೂಢವಾದದ್ದು ಊಹೆಗೆ ನಿಲುಕದ್ದು ಎನ್ನುವ ಅರ್ಥದಲ್ಲಿ “ಗುಹ” ಎನ್ನುತ್ತಾರೆ. ಒಬ್ಬರ ಮನಸ್ಸಿನ ಆಳವನ್ನು ಅರಿಯುವುದು ಸಾಧ್ಯವಿಲ್ಲ. ಮೇಲಿನ ರೂಪವೇ ಬೇರೆ , ಅಂತರ್ಯದ ಚಿತ್ರವೇ ಬೇರೆ. ಇದನ್ನೂ ಸಹ ವಿಜ್ಞಾನಿಗಳು ಅರಿಯುವಲ್ಲಿ ಅಸಫಲರು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೀಗೆ ಯಾವುದನ್ನೂ ನಿಖರವಾಗಿ ಸಂಪೂರ್ಣವಾಗಿ ದೃಢ ಪಡಿಸಲಾಗದ ವೈಜ್ಞಾನಿಕ ಸಿದ್ಧಾಂತಗಳು, ಇನ್ನು ಇವೆಲ್ಲವನ್ನೂ ಸೃಜಿಸಿ, ಅವುಗಳ ಸೂತ್ರವನ್ನು ಕೈಲಿಟ್ಟುಕೊಂಡು, ಆಡಿಸುತ್ತಿರುವ ಆ ಬೃಹತ್ ಚೇತನ ರೂಪವಾದ ಪರಮಾತ್ಮನನ್ನು ಪರಮ ಚೇತನವನ್ನು ವಿಜ್ಞಾನಿಗಳಿಂದ ಅರಿಯಲು ಸಾಧ್ಯವೇ. ವೈಜ್ಞಾನಿಕ ಪ್ರಯೋಗಗಳ ಪರಿಧಿಯೊಳಗೆ ಇವುಗಳನ್ನು ತರುವುದು ಸಾಧ್ಯವೇ ಇಲ್ಲವೆಂದು ಮಾನ್ಯ ಗುಂಡಪ್ಪನವರ ಪ್ರತಿಪಾದನೆ ಈ ಕಗ್ಗದಲ್ಲಿ.

ನಾವೂ ಸಹ ಇವುಗಳನ್ನೆಲ್ಲ ಪ್ರಮಾಣಿಸಿ ನೋಡುವ ಅರೆ ವೈಜ್ಞಾನಿಕತೆಯ ಹಂಗಿಗೆ ಬೀಳದೆ, ಕೇವಲ ಅನುಭವಕ್ಕೆ ತಂದು ಕೊಳ್ಳಬಹುದು ಅಥವಾ ತಂದು ಕೊಳ್ಳುವ ಪ್ರಯತ್ನವನ್ನು ಮಾಡಬಹುದು.

ರಸಧಾರೆ – 063

ನರಭಾಷೆ ಬಣ್ಣಿಪುದೆ ಪರತತ್ವರೂಪವನು? |

ಅರಿಯದದು ನಮ್ಮೆದೆಯ ಭಾವಗಳನೊರೆಯೆ ||

ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |

ಒರಟುಯಾನವೊ ಭಾಷೆ – ಮಂಕುತಿಮ್ಮ ||

ನರಭಾಷೆ ಬಣ್ಣಿಪುದೆ ಪರತತ್ವ ರೂಪವನ್ನು, ಅರಿಯದು ಅದು ನಮ್ಮ ಎದೆಯ ಭಾವಗಳನು ಒರೆಯೆ ಪರಮಾನುಭವಗಳ ಉಲಿ ಅನುಭವಿಗಳ ಒಳ ಕಿವಿಗೆ ಒರಟು ಯಾನವೋ ಭಾಷೆ ಮಂಕುತಿಮ್ಮ.

ನರಭಾಷೆ = ಮಾನವರ ಭಾಷೆ, ಬಣ್ಣಿಪುದೆ = ವರ್ಣಿಸುವುದೆ, ಪರತತ್ವ = ಪರಮಾತ್ಮ ತತ್ವ, ಪರಮಾನುಭವಗಳ ಉಲಿ = ಪರಮಾತ್ಮನ ಅನುಭವದ ಭಾಷೆ, ಅನುಭವಿಗಳ = ಸಾಧಕರ, ಒಳಕಿವಿಗೆ = ಅಂತರಂಗದ ಭಾವಕ್ಕೆ.

ನಾವಾಡುವ ನರಭಾಷೆಗೆ ಒಂದು ಮಿತಿ ಇದೆ. ಈ ಭಾಷೆಯಲ್ಲಿ ಆ ಪರಮಾತ್ಮ ಸ್ವರೂಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮ್ಮ ಅಂತರಂಗದ ಭಾವವನ್ನು ಹೇಳಲು ಈ ಭಾಷೆ ಸಾಲದು. ಪರತತ್ವದ ಅನುಭವದ ಮಾತುಗಳು ಕೇವಲ ನಮ್ಮ ಒಳಗಿವಿಗೆ ಕೇಳಿಸುತ್ತದೆ. ಮಾನವರ ಭಾಷೆಯಲ್ಲಿ ವಿವರಿಸುವುದು ಒಂದು ನೇರವಲ್ಲದ ಸುಗಮವಲ್ಲದ ಪ್ರಯಾಣದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮಲ್ಲಿ ಆಚಾರ್ಯತ್ರಯರಾದ ಶಂಕರರು, ರಾಮಾನುಜರು ಮತ್ತ್ತು ಮಧ್ವರು ಭಗವದ್ಗೀತೆಗೆ, ಬ್ರ್ರಹ್ಮಸೂತ್ರಗಳಿಗೆ ಮತ್ತು ವೇದಗಳಿಗೆ ಪರಿಭಾಷೆಯನ್ನು ಬರೆದಿದ್ದಾರೆ. ಅವುಗಳನ್ನು “ಭಾಷ್ಯ” ಎನ್ನುತ್ತಾರೆ. ಅಂದರೆ ಭಾಷೆಯಲ್ಲಿ ವಿವರಿಸಿದ ವಿಷಯಗಳು ಎಂದು ಅರ್ಥ. ಅವು ಅವರುಗಳು ತಮ್ಮ ಅನುಭವದಿಂದ ಮನಗಂಡ ವಿಚಾರಗಳು. ಅವರ ಅನುಯಾಯಿಗಳು ಅವುಗಳನ್ನೇ ಅನುಸರಿಸುತ್ತಾರೆ. “ಶಂಕರರು ಹೀಗೆ ಹೇಳಿದ್ದಾರೆ, ರಾಮಾನುಜರು ಹಾಗೆ ಹೇಳಿದ್ದಾರೆ, ನೋಡಿ ಮದ್ವರು ಭಿನ್ನವಾಗಿ ವ್ಯಾಖ್ಯಾನ ಮಾಡಿದ್ದಾರೆ ” ಎಂದು ಅವರೇನು ಹೇಳಿದರೋ ಮತ್ತು ಇವರೇನು ಅರ್ಥಮಾಡಿಕೊಂಡರೋ ಅದು ಅವರವರಿಗೇ ಗೊತ್ತು. ಅವರ ಅನುಭವ ಇವರ ಅನುಭವವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಕೆಲವು ವಿಷಯಗಳು ಕೇವಲ ಅನುಭವ ವೇದ್ಯ.

” ನನಗೆ ಹೇಳಲು ಶಬ್ಧಗಳೇ ಸಿಗುತ್ತಿಲ್ಲ” ಎಂದು ಕೆಲವರು ಹಲವು ಬಾರಿ ಹೇಳಿರುವುದನ್ನು ಕೇಳಿರಬಹುದು. ಹೌದು ನಮ್ಮ ಪ್ರೀತಿ ಪ್ರೇಮ ಕರುಣೆ, ಕೋಪ ದ್ವೇಷ ಇಂಥಹ ಭಾವನೆಗಳನ್ನು ವಿವರಿಸಲು ನಮ್ಮಲ್ಲಿ ಶಬ್ಧಗಳಿರುವುದಿಲ್ಲ. ಏಕೆಂದರೆ ಮನಸ್ಸಿನ ಭಾವ ಕೇವಲ ಭಾವವಾಗಿರುತ್ತೆ. ಹಾಗೆಯೇ ಜಗತ್ತಿನ ಸೂತ್ರವನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಂಡಿರುವ ಆ ಬೃಹತ್ ಚೇತನವನ್ನು ನಮ್ಮ ಸಾಧಾರಣ ಭಾಷೆಯಿಂದ ವಿವರಿಸಲು ಸಾಧ್ಯವಿಲ್ಲವೆಂಬುದೆ ಈ ಕಗ್ಗದ ಹೂರಣ.

ಇದನ್ನೇ ” ಅವರವರ ಭಾವಕ್ಕೆ – ನರರೇನು ಭಾವಿಸುವರದರಂತೆ ಕಾಣುವನು” ಎಂದು ನಿಜಗುಣ ಶಿವಯೋಗಿಗಳು ಹೇಳಿಲ್ಲವೇ. ಆ ಪರಮಾತ್ಮನನ್ನು ಅನುಭವಿಸುವ ಭಾವ ಮತ್ತು ಭಾವನೆಯನ್ನು ನಮ್ಮ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾಷೆಗೆ ಒಂದು ಮಿತಿ ಇದೆ. ಭಾವಕ್ಕೆ ಒಂದು ಮಿತಿ ಇದೆ. ಆದರೆ ಭಾವದ ಮಿತಿ ಭಾಷೆಯ ಮಿತಿಗಿಂತ ಬಹಳ ವಿಶಾಲ ಮತ್ತು ಅಗಾಧ. ಹಾಗೇನಾದರೂ ಆ ಪರಮಾತ್ಮಾನುಭಾವವನ್ನು ಭಾಷೆಯಲ್ಲಿ ವಿವರಿಸಲು ಪ್ರಯತ್ನಪಟ್ಟರೆ, ಒಂದು ಹಳ್ಳ ತಿಟ್ಟುಗಳು, ಕಲ್ಲು ಮುಳ್ಳುಗಳಿಂದ ತುಂಬಿದ ಅಂಕುಡೊಂಕಾದ ರಸ್ತೆಯಮೇಲೆ ಗಾಡಿ ಓಡಿಸಿದಂತಾ ಒರಟು ಪ್ರಯಾಣವಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹಾಗಾಗಿ ವಾಚಕ ಮಹಾಶಯರೇ ಆ ಪರಮ ಚೇತನವನ್ನು ಮತ್ತು ಅದರ ಲೀಲೆಯನ್ನು ಕೇವಲ ಅನುಭವಿಸಬೇಕು. ನಮ್ಮ ಅನುಭವ ನಮ್ಮದೇ ಆಗಿರಬೇಕು ಮತ್ತು ಎಲ್ಲರ ಅನುಭವವೂ ಅವರವರದೇ ಆಗಿರಬೇಕು. ನಮ್ಮ ಅನುಭವದ ದನಿ ನಮ್ಮ ಒಳಗಿವಿಗಳಿಗೆ ಕೇಳಿಸಬೇಕು. ಭಾಷೆಯಿಲ್ಲದ ಶಬ್ಧವಿಲ್ಲದ ಒಂದು ಶಾಂತ ಸುಂದರ ಅನುಭೂತಿ ನಮ್ಮಲ್ಲಿ ಆಗಬೇಕು. ಅಂತಹ ಅನುಭವವನ್ನು ಪಡೆಯುವ ವಿಧಾನವನ್ನು ಹಲವು ಸಜ್ಜನರಿಂದ ಅರಿತುಕೊಳ್ಳುವ. ಆದರೆ ನಮ್ಮ ಅನುಭವವನ್ನು ನಾವೇ ಪಡೆದುಕೊಳ್ಳಬೇಕು. ಪಡೆದುಕೊಳ್ಳುವ ಪ್ರಯತ್ನವನ್ನು ನಿರಂತರ ಮಾಡಿದಾಗ ನಮಗದರ ಅನುಭವ ಆಗಬಹುದು.

ರಸಧಾರೆ – 064

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |

ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||

ತತ್ವತಂಡುಲ ದೊರೆಗುಮುದು ವಿವೇಚಿತತತ್ವ |

ನಿತ್ಯ ಭೋಜನ ನಮಗೆ – ಮಂಕುತಿಮ್ಮ ||

ಚಿತ್ತದ ಅನುಭವ ಭಾವ ಸಂಭಾವನೆಗಳು ಎಲ್ಲ ಬತ್ತವು. ಅದನು ವಿಚಾರ ಯುಕ್ತಿಗಳು ಕುಟ್ಟೆ ತತ್ವ ತಾಂದುಳ ದೊರೆಗುಂ ಅದು ವಿವೇಚಿತ ತತ್ವ ನಿತ್ಯ ಭೋಜನ ನಮಗೆ ಮಂಕುತಿಮ್ಮ.

ಚಿತ್ತ=ಮನಸ್ಸು, ಸಂಭಾವನೆ= ಆಲೋಚನೆ, ಕುಟ್ಟೆ = ಕುಟ್ಟಿದರೆ, ತಂಡುಲ = ಅಕ್ಕಿ, ದೊರೆಗುಂ = ದೊರೆತರೆ, ವಿವೇಚಿತ = ವಿವೇಚನೆಯ ಮೂಸೆಯಿಂದ ಹೊರಬಂದ, ನಿತ್ಯ ಭೋಜನ = ಮನಸ್ಸಿಗೆ, ಬುದ್ಧಿಗೆ ನಿತ್ಯದ ಆಹಾರ.

ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಭೌದ್ಧಿಕತೆಗೆ ಆಹಾರ ಎಂಬುದೇ ಈ ಕಗ್ಗದ ತಾತ್ಪರ್ಯ. ನಮ್ಮ ಮಾನಸಿಕತೆಯಲ್ಲಿ ನಮ್ಮ ವಿಚಾರ ಮಂಥನಕ್ಕೆ ಒತ್ತು ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮಗೆ ಮನಸ್ಸು ಉಂಟು. ಬುದ್ಧಿಯೂ ಉಂಟು. ವಿಚಾರ ಮಾಡುವ ಶಕ್ತಿಯೂ ಉಂಟು. ಅನ್ಯ ಪ್ರಾಣಿಗಳಿಗೂ ಇವೆಲ್ಲವೂ ಇದೆ. ಆದರೆ ಅವುಗಳ ಆ ಶಕ್ತಿಗಳಿಗೆ ಒಂದು ಮಿತಿ ಇದೆ. ಆದರೆ ಅಮಿತವಾದ ಬುದ್ಧಿ ಮತ್ತು ಅಗಾಧ ವಿಚಾರ ಶಕ್ತಿಯನ್ನು ಹೊಂದಿರುವ ಈ ಮನುಷ್ಯಪ್ರಾಣಿ ಹಲ ದಿಕ್ಕಿನಲ್ಲಿ ವಿಚಾರ ಮಾಡುವ ಕ್ಷಮತೆಯನ್ನು ಹೊಂದಿದ್ದಾನೆ. ನಮ್ಮ ಮನಸ್ಸುಗಳಲ್ಲಿ ಬರುವ ಅನುಭವಜನ್ಯವಾದ ಭಾವನೆಗಳು ಮತ್ತು ಆ ಭಾವನೆಗಳಿಗನುಗುಣವಾಗಿ ಬರುವ ಆಲೋಚನೆಗಳನ್ನು ಆ ಮಿತ ವಿಚಾರ ಶಕ್ತಿಯ ಮಥನಕ್ಕೆ ಒಳಪಡಿಸಬೇಕು. ಬತ್ತವನ್ನು ಕುಟ್ಟಿದ ಹಾಗೋ, ಮೊಸರನ್ನು ಕಡೆದ ಹಾಗೋ ಮಾಡಿದರೆ ಅದರಿಂದ ನಮಗೆ ಜ್ಞಾನ ಉಂಟಾಗುತ್ತದೆ. ಸಾಧ್ಯಾ ಸಾಧ್ಯತೆಗಳ, ಯುಕ್ತಾಯುಕ್ತತೆಗಳ, ಮಥನವಾಗಿ ಅನವಶ್ಯಕವಾದ ವಿಷಯಗಳನ್ನು ದೂರ ತಳ್ಳಿ ನಮಗೆ ಏನು ಒಳ್ಳೆಯದೋ ಅಥವಾ ಒಳ್ಳೆಯದನ್ನು ಮಾಡಲು ಯಾವುದು ಅವಶ್ಯವೋ ಅದನ್ನು ಮಾತ್ರ ಉಳಿಸಿಕೊಳ್ಳಬಹುದು. ಹಾಗೆ ಉಳಿಸಿಕೊಂಡರೆ ಅದು ಜ್ಞಾನ.

ಆದರೆ ಇಂದಿನ ಪರಿಸ್ಥಿತಿ ಅದಲ್ಲ . ಸೆಳೆತಗಳು ಬಹಳ. ಮಾನಸಿಕ ವೈಕಲ್ಯಕ್ಕೆ ಹಲವಾರು ದಾರಿಗಳು. ದೂರದರ್ಶನ, ವೃತ್ತಪತ್ರಿಕೆಗಳು, ಅಂತರ್ಜಾಲ, ಅಂತರ್ಜಾಲದಲ್ಲಿ ಈ ಮುಕಪುಸ್ತಕದಂತ ಅಂಗಗಳು, ಇನ್ನು ವಾಹನಗಳು, ಉಣವು ಮಳಿಗೆಗಳು, ಸುತ್ತಾಟ ಭೋಜನ ಕೂಟಗಳು, ವೃತ್ತಿ, ಇವುಗಳ ಮಧ್ಯೆ ಯೋಚನೆ ಅಥವಾ ಆಲೋಚನೆ ಮಾಡಲು ನಮಗೆ ವ್ಯವದಾನವೇ ಇಲ್ಲ. ನಾವು ಬಹಳ ವ್ಯಸ್ತರು. ನಮಗೆ ಪುಸ್ತಕ ಓದಲು ವ್ಯವದಾನವಿಲ್ಲ. ಅರಿತವರೊಡನೆ ವಿಚಾರ ವಿನಿಮಯ ಮಾಡಲು ಆಸ್ಥೆ ಇಲ್ಲ, ಯಾರಾದರೂ ಹೇಳಿದ್ರೆ ಕೇಳುವ ಮನೋಭಾವವೂ ಇಲ್ಲ, ಹೆಚ್ಚಿನ ವಿಚಾರಗಳನ್ನು ಅರಿತುಕೊಳ್ಳುವ ಮನಸ್ತತ್ವವೂ ಇಲ್ಲ. ಹಾಗಿರಬೇಕಾದರೆ ಇನ್ನು ಭಾವವೂ ಇಲ್ಲ, ಅನುಭವವೂ ಇಲ್ಲ, ವಿಚಾರವೂ ಇಲ್ಲ. ಎಲ್ಲವೂ ಮೇಲೆ ಮೇಲೆ, ತಳುಕು ಹೆಚ್ಚು. ಗಾಢವಾದ ಬಂಧನಗಳಿಲ್ಲ, ಸಂಬಂಧಗಳಿಲ್ಲ. ಭಾವನೆಗಳಿಲ್ಲ, ಆಳವಾದ ವಿಚಾರಗಳಿಲ್ಲ. ಹಾಗಿರಬೇಕಾದರೆ ಇನ್ನು ಅನುಭವಗಳನ್ನು ಭಾವಿಸುವುದಕ್ಕಾಗಲೀ, ಅನುಭವಿಸುವುದಕ್ಕಾಗಲೀ ಸಮಯವೇ ಇಲ್ಲದಾಗ, ವಿಚಾರ ಬೆಳೆಯಲು ಹೇಗೆ ಸಾಧ್ಯ ಹೇಳಿ. ವಿಚಾರ ಬೆಳೆಯದೆ ಸತ್ಯ ದರ್ಶನವಾಗುವುದು ಹೇಗೆ ಹೇಳಿ. ವಿಪರ್ಯಾಸವೆಂದರೆ ಇಂದು ನಾವು ಯಾವುದನ್ನು ತೊರೆಯಬೇಕೋ ಅದಕ್ಕೆ ಅಂಟಿಕೊಂಡು ಮತ್ತು ಯಾವುದಕ್ಕೆ ಅಂಟಿಕೊಳ್ಳಬೇಕು ಅದರಿಂದ ದೂರವಾಗಿ ವೈಚಾರಿಕತೆಯ ಬಡತನದಿಂದ ಬಳಲುತ್ತಿದ್ದೇವೆ. ( poverity of intellectualism ).

“ಏನು ನಮಗೆ ವಿಚಾರ ಶಕ್ತಿ ಇಲ್ಲವೇ?” ಎಂದು ನೀವು ಕೇಳಿದರೆ, ಖಂಡಿತ ಇದೆ. ಆದರೆ ಮೇಲೆ ಹೇಳಿದ ಕಾರಣಗಳಿಗೆ ಕೆಲವರು ವಿಚಾರಮಾಡುವುದಿಲ್ಲ. ಇನ್ನು ಕೆಲವರು ವಿಚಾರ ಮಾಡುತ್ತಾರೆ ಆದರೆ ತಮ್ಮ ಕುತರ್ಕದಿಂದ ಎಲ್ಲವನ್ನೂ ಪರಿಕಿಸುವ, ವಿಡಂಬನಾತ್ಮಕವಾಗಿ ನೋಡುವ, ಕುಹಕವಾಡುವ ಮತ್ತು ಅವಹೇಳನಮಾಡುವ ಕೆಲಸವನ್ನು ಮಾಡುತ್ತಾ, ಶುದ್ಧ ತತ್ವವನ್ನು, ಸತ್ವವನ್ನು ಅರಿಯುವ ದಿಶೆಯಿಂದ ವಿಮುಖರಾಗಿದ್ದಾರೆ. ಇಂತಹವರು ಸತ್ಯವಾಗಿ ಯಾರಾದರೂ ವಿಚಾರವನ್ನು ಮಾಡಬೇಕೆಂದು ನಿಶ್ಚಯಿಸಿದ್ದರೆ, ಅವರನ್ನೂ ವಿಮುಖರನ್ನಾಗಿಸಲು ಪ್ರಯತ್ನಿಸುತ್ತಾರೆ.

ಹಾಗಾಗಿ ವಾಚಕರೆ ನಮಗೆ ಸತ್ಯವಾಗಿಯೂ ಸತ್ಯದ ಮತ್ತು ತತ್ವದ ದರ್ಶನವಾಗಬೇಕಾದರೆ, ನಾವು ವಿಚಾರವಂತರಾಗಬೇಕು. ವಿಚಾರವಾದಿಗಳಾಗಬಾರದು. ನಮ್ಮ ಅನುಭವಗಳನ್ನು ಭಾವಿಸುತ್ತಾ ಅದನ್ನು ವಿಚಾರದ ಒರೆಗೆ ಹಚ್ಚಿ ನಮ್ಮದೇ ಆದಂತ, ನಮ್ಮ ಅಂತರ್ಯದಲ್ಲಿ ಸ್ಫುರಿಸಿದಂತಾ ಸತ್ಯವನ್ನು ತತ್ವವನ್ನು ನಾವು ಕಂಡುಕೊಳ್ಳಬೇಕು. ಅದಕ್ಕೆ ಪೂರ್ವಾಗ್ರಹಗಳನ್ನು ಬಿಟ್ಟು, ಅಂತರ್ಮುಖಿಗಳಾದರೆ ನಮಗೆ ಎಲ್ಲವೂ ನಿಚ್ಚಳವಾಗಿ ತೋರುವುದು. ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ?

ರಸಧಾರೆ – 065

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |

ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||

ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |

ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ||

ಮಸ್ತಕದಿ = ತಲೆಯಲ್ಲಿ , ಚಿತ್ತದೊಳು = ಅಂತರಂಗದಲ್ಲಿ, ತರು = ಗಿಡ, ಪುಸ್ತಕದಿ ದೊರೆತ ಅರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದ ಅರಿವು ತರು ತಳೆದ ಪುಷ್ಪ. ವಸ್ತು ಸಾಕ್ಷಾತ್ಕಾರವು ಅಂತರ್ ವೀಕ್ಷಣೆಯಿಂದ ಶಾಸ್ತ್ರಿತನದಿಂದ ಅಲ್ಲ ಮಂಕುತಿಮ್ಮ.

ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯಮೇಲೆ ತಂದಿಟ್ಟುಕೊಂಡಂತ ಕಿರೀತದಲ್ಲಿನ ಮಣಿಯಂತೆ. ಆದರೆ ನಮ್ಮ ಅನುಭವಗಳನ್ನು ವಿಚಾರದ ಒರೆಗೆ ಹಚ್ಚಿ ನಮ್ಮ ಚಿತ್ತದಲ್ಲಿ ನಮಗೆ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ ” ಪುಷ್ಪದಂತೆ” ಎನ್ನುತಾರೆ, ಮಾನ್ಯ ಗುಂಡಪ್ಪನವರು.

ಪುಸ್ತಕಗಳನ್ನು ಓದಿ, ಬಾಯಿಪಾಟ ಮಾಡಿ ಅಥವಾ ನೆನಪಿನಲ್ಲಿಟ್ಟುಕೊಂಡು, ಸಮಯ ಸಂಧರ್ಭ ಬಂದಾಗ ಅದನ್ನು ಉಪಯೋಗಿಸುವುದು ಜಾಣತನ. ಆದರೆ ಅದು ಜ್ಞಾನವಲ್ಲ. ಅದು ಕೇವಲ ತೋರಿಕೆಗೆ ಅಥವಾ ಹೊಟ್ಟೆಪಾಡಿಗೆ . ಹೇಗೆ ರಾಜ ತನ್ನ ರಾಜತನವನ್ನು ಬಿಂಬಿಸಲು ಒಂದು ಕಿರೀಟವನ್ನು ತಂದು ಇಟ್ಟುಕೊಳ್ಳುತ್ತಾನೆಯೋ ಹಾಗೆ. ಅದು ನಮ್ಮ ಅರಿವಾಗಲು ಸಾಧ್ಯವಿಲ್ಲ. ಅದು ಅವಿದ್ಯೆ. ಕೇವಲ ಕಲಿತ ವಿದ್ಯೆ. ನಮ್ಮಲ್ಲಿ ಒಂದು ಗಾದೆ ಇದೆ. ” ಕಟ್ಟಿ ಕೊಟ್ಟ ಬುತ್ತಿ , ಹೇಳ್ ಕೊಟ್ಟ ಬುದ್ದಿ ಎಷ್ಟು ದಿವಸಾ” ಅಂತ. ಹಾಗಾಗಿ ತಂದಿಟ್ಟುಕೊಂಡ ಅರಿವು ನಮ್ಮದಾಗಲು ಸಾಧ್ಯವಿಲ್ಲ ಅಥವಾ ಸದಾ ನಮ್ಮೊಡನಿರಲು ಸಾಧ್ಯವಿಲ್ಲ. ಬದಲಾಗಬಹುದು.ಶಾಸ್ತ್ರಗಳನ್ನು ಓದಿ ಪಾಂಡಿತ್ಯವನ್ನು ಪಡೆದು ಕೇವಲ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೂ, ಅನುಭವಿಸಿ ಮಥಿಸಿ ಅಂತರಂಗದಲ್ಲಿ ಪಡೆದುಕೊಂಡ ಜ್ಞಾನಕ್ಕೂ ಬಹಳ ಅಂತರವುಂಟು ಎನ್ನವುದು ಈ ಕಗ್ಗದ ಹೂರಣ.

ಆದರೆ ವಸ್ತು ವಿಷಯವನ್ನು ಕುರಿತು ನಮ್ಮ ಮನಸ್ಸು ಬುಧ್ಧಿಗಳ ಅಂತರ್ಯದಲ್ಲಿ ವಿಚಾರ ಮಂಥನದಿಂದ ಉಂಭಾವವಾಗುವ ಜ್ಞಾನ ನಮ್ಮಲ್ಲಿ ಸ್ಥಿರವಾಗಿ ನಮ್ಮ ಸ್ವಭಾವವೇ ಆಗಿ ನಿಲ್ಲುತ್ತದೆ. ಅದು ಒಂದು ಗಿಡ ತನ್ನ ಒಡಲಿನಿಂದ ತನ್ನ ಗುಣಗಳನ್ನು, ತಾ ನಿಂತ ಭೂಮಿಯ ಸಹಾಯದಿಂದ ಆ ಭೂಮಿಯೊಳಗಿನ ರಸಗಳ ಸಹಾಯದಿಂದ ವಿಕಸಿತಗೊಳಿಸಿ ತಾನೇ ಮೊಗ್ಗಾಗಿ ಅರಳಿ ಹೂವಾಗಿ ಸೋಗಸನೀಯುವಂತೆ, ನೋಡಿ ಎರಡು ಭಿನ್ನವಾದ ಗಿಡಗಳನ್ನು ಪಕ್ಕಪಕ್ಕದಲ್ಲೆ ಹಾಕಿದರೂ, ಅವು ಒಂದೇ ನೆಲ, ಗಾಳಿ ನೀರು ಪರಿಸರವನ್ನು ಹಂಚಿಕೊಂಡರೂ ಅರಳಿಸುವ ಹೂವೆ ಬೇರೆ ಬೇರೆ. ಅದರ ರೂಪ ಬಣ್ಣ ಸುವಾಸನೆಯೇ ಬೇರೆ ಬೇರೆ. ಏಕೆಂದರೆ ಅದು ಅಂತರಂಗದಲ್ಲಿ ಮಥಿಸಿ ತನ್ನದಾಗಿಸಿಕೊಂಡು ಅರಳಿಸಿದ ಹೂವಾದ್ದರಿಂದ.

ವಾಚಕರೆ ತಂದೆ ತಾಯಿಯರ ಮಮತೆಯ ಪರಿಯಲ್ಲಿ, ದತ್ತು ತೆಗೆದುಕೊಂಡ ಮಕ್ಕಳಿಗೂ ತಾವೇ ಹೆತ್ತ ಮಗುವಿಗೂ ಎಷ್ಟು ವ್ಯತ್ಯಾಸವಿರುತ್ತದೆ ಅಲ್ಲವೇ? ಇಲ್ಲ ಹಾಗಿರುವುದಿಲ್ಲ ನಾವು ಅದನ್ನು ನಮ್ಮ ಮಗುವಿನಂತೆಯೇ ನೋಡಿಕೊಳ್ಳುತ್ತೇವೆ ಎಂದು ಎಷ್ಟು ವಾದಿಸಿದರೂ ಅಂತರಂಗ ಭಾವನೆಯಲ್ಲಿ ಖಂಡಿತ ವ್ಯತ್ಯಾಸವಿರುತ್ತದಲ್ಲವೇ?

ಹಾಗೆಯೇ ಪುಸ್ತಕದ ವಿದ್ಯೆಗೂ ಅಂತರ್ಯದಲ್ಲಿ ನಮ್ಮದೇ ಅದ ಅನುಭವ ಜನ್ಯವಾದ ಜ್ಞಾನಕ್ಕೂ ಬಹಳ ವ್ಯತ್ಯಾಸವುಂಟು. ಇದನ್ನು ಹೆಚ್ಚು ವಿವರಿಸುವುದಕ್ಕಿಂತ ವಾಚಕರೆ ಅನುಭವಕ್ಕೆ ತಂದುಕೊಳ್ಳುವುದು ಉಚಿತ!!!!

ರಸಧಾರೆ – 066

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ|

ಅರ್ಥವೇ೦ ಕ್ರಿಮಿಕೀಟಕೋಟಿ ರಚನೆಯಲಿ ||

ಕರ್ತನಾಲೋಚಿಸಿದ ದುಂದಿನವನೆಂಬ ನುಡಿ|

ಯರ್ದದೃಷ್ಟಿಯ ವಿವರ – ಮಂಕುತಿಮ್ಮ ||

ವ್ಯರ್ಥವೆಂದೆನಿಪುದಲ = ವ್ಯರ್ಥವು + ಎಂದು + ಎನಿಪುದು + ಅಲ – ಯರ್ದದೃಷ್ಟಿಯ = ಅರ್ಧ ದೃಷ್ಟಿಯ

“ವ್ಯರ್ಥವೆಂದೆನಿಸುತ್ತದೆ ಸೃಷ್ಟಿಯಲಿ ಬಹುಭಾಗ, ಈ ಕ್ರಿಮಿ ಕೀಟ ಕೋಟಿಗಳ ಸೃಷ್ಟಿಯಲಿ ಅರ್ಥವೇನು ? ಆ ಸೃಷ್ಟಿಕರ್ತನು ಈ ಸೃಷ್ಟಿಯನ್ನು ರಚಿಸುವಾಗ ತನ್ನ ಶಕ್ತಿಯ ದುಂದುಪಯೋಗ ಮಾಡಿರಬಹುದೆಂದು ಯಾರಾದರೂ ಆಲೋಚಿಸಿದರೆ ಅದು ಅವರ ಅಪರಿಪೂರ್ಣ ಜ್ಞಾನದ, ಯೋಚನಾ ದಾರಿದ್ರ್ಯದ ಸೂಚಕವೆಂದು ಈ ಕಗ್ಗದ ಹೂರಣ.

ಕೆಲವರಿಗೆ ” ಛೆ ಈ ಪರಮಾತ್ಮ ಅದೇನೆಲ್ಲಾ ಸೃಷ್ಟಿಸಿ ಬಿಟ್ಟಿದ್ದಾನೆ, ತನ್ನ ಸೃಷ್ಟಿಯ ಶಕ್ತಿಯನ್ನು ಅನಾವಶ್ಯಕವಾಗಿ ದುಂದು ಮಾಡಿಕೊಂಡುಬಿಟ್ಟಿದ್ದಾನೆ” ಎಂದು ಅನ್ನಿಸಬಹುದು. ಅದು ಸಂಕುಚಿತ ಭಾವ. ಆ ಪರಮಾತ್ಮನ ಈ ಸೃಷ್ಟಿಗೆ ಕಾರಣವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವೇ? ಇಲ್ಲಿ ಒಂದಕ್ಕೊಂದು ಪೂರಕವಾಗಿದೆ. ಒಂದು ಅಣುವಿಗೆ ಮತ್ತೊಂದು ಅಣು ಪೂರಕ. ಆದರೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಮನುಷ್ಯ ಈ ಎಲ್ಲ ಸೃಷ್ಟಿಯೂ ತನಗಾಗಿ ಆಗಿದೆ ಎಂದು ಅಂದುಕೊಳ್ಳುತ್ತಾನೆ, ಮೂರ್ಖತನದಿಂದ. ಪರಮಾತ್ಮನ ಸೃಷ್ಟಿಗೆಲ್ಲವೂ ಒಂದು ಕಾರಣವಿದೆ. ಅದನ್ನು ನೋಡಲುಬಾರದೆ, ಅರೆಜ್ಞಾನದಿಂದ ವ್ಯಾಖ್ಯಾನಮಾಡುವ ಈ ಮನುಷ್ಯನ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ.

ಪಶು ಪಕ್ಷಿಗಳು, ಪ್ರಾಣಿಗಳು, ಅನಂತ ಪ್ರಭೇದಗಲಿರುವ ಜಲ ಚರಗಳು, ಕೋಟಿ ಕೋಟಿ ತರಹೆಯ ಕ್ರಿಮಿ ಕೀಟಗಳು, ಮರಗಳು, ಗಿಡ ಬಳ್ಳಿಗಳು, ಸಸಿ ಪೊದೆಗಳು, ಬೃಹತ್ ಹೆಮ್ಮರಗಳು, ಎಷ್ಟೊಂದು ತರಹೆ ಹೂಗಳು ಹಣ್ಣುಗಳು, ಬೆಟ್ಟ ಗುಡ್ಡಗಳು, ನದಿ ತೊರೆಗಳು. ಒಂದೊಂದಕ್ಕೆ ಒಂದೊಂದು ಬಣ್ಣ. ಬೇರೆ ಬೇರೆ ಆಕಾರ ರುಚಿ ವಾಸನೆ, ಅಬ್ಬಬ್ಬಾ ಒಂದು ಶತಾಂಶವನ್ನು ವಿವರಿಸಲು ಸಹಸ್ರ ಪುಟಗಳ ಹೊತ್ತಿಗೆಯೂ ಸಾಲದು, ಈ ಎಲ್ಲವನ್ನೂ ಆ ಪರಮಾತ್ಮ ಸೃಜಿಸಿ ತಾನೂ ಅದರಲ್ಲಿ ಇರುತ್ತಾ ಆನಂದ ಪಡುತ್ತಿದ್ದಾನೆ. ಅವೆಲ್ಲವನ್ನೂ ಅವನು ತನ್ನ ಆನಂದಕ್ಕೆ ಸೃಷ್ಟಿಸಿಕೊಂಡಿದ್ದಾನೆ. ಮನುಷ್ಯನನ್ನೂ ಸಹ. ಆದರೆ ಮನುಷ್ಯ ಹೆಡ್ಡತನದಿಂದ, ” ಪರಮಾತ್ಮ ನಮಗಾಗಿ ಎಲ್ಲವನ್ನೂ ಸೃಷ್ಟಿಸಿದ್ದಾನೆ ಎಂದು ತಿಳಿದಿದ್ದಾನೆ.

ಈ ಗಿಡಮರಗಳು ನನಗಾಗಿ. ಅದರಲ್ಲಿ ಬಿಡುವ ಹಣ್ಣು ಹೂಗಳು ನನಗಾಗಿ. ಕೆಲವು ಪ್ರಾಣಿಗಳು ನನಗೆ ತಿನ್ನಲು ಬೇಕು ಅದರ ನಾಶ. ಕೆಲವು ಪ್ರಾಣಿಗಳು ನನಗೆ ಔಷಧಿಯನ್ನು ಕೊಡುತ್ತವೆ, ಅದರ ನಾಶ. ಕೆಲವು ಪ್ರಾಣಿಗಳಿಂದ ನನಗೆ ಪ್ರಾಣ ಭಯ. ಅದರ ನಾಶ. ಕೆಲವು ಪ್ರಾಣಿಗಳು ನನಗೆ ಊಳಿಗ ಮಾಡಬೇಕು. ಅದರ ಸ್ವಾತಂತ್ರ್ಯದ ನಾಶ. ಹಾರುವ ಹಕ್ಕಿಯನ್ನೂ ಬಿಟ್ಟಿಲ್ಲ. , ನೀರಿನ ಮೀನನ್ನೂ ಬಿಟ್ಟಿಲ್ಲ. ಮನೆ ಕಟ್ಟಲು ನಾಟ ಬೇಕು. ಕಡಿ ಮರ. ಜಲ್ಲಿ ಬೇಕು ಕಡಿ ಬೆಟ್ಟ. ಹೀಗೆ ಅವನ ಕಣ್ಣು, ಕಲ್ಲು ಮಣ್ಣು ಮರ, ಲೋಹ ಅದಿರು ನೀರು,ಎಲ್ಲದರ ಮೇಲೆ ಇವನ ವಕ್ರ ದೃಷ್ಟಿ . ಮನುಷ್ಯನೂ ಸಹ ಸೃಷ್ಟಿಯ ಎಲ್ಲರಂತೆ ಆದರೂ ಅವನು ಯಾವುದನ್ನೂ ಇರಗೊಡಲಾರ. ಇವನಿಗೆ ಅತೀ ಆಸೆ .ಅದಕ್ಕೆ ಪೂರಕವಾಗಿ ಅವನಿಗೆ ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಬುಧ್ಧಿ ಶಕ್ತಿ. ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಸಾಮರ್ತ್ಯ. ಅದನ್ನು ಕೊಟ್ಟವನೂ ಆ ಪರಮಾತ್ಮನೇ ಆದರೂ ಮನುಷ್ಯ ” ನಾನು ” ಎಂದು ಬೀಗುತ್ತಾನೆ. ನಾನೂ ಸಹ ಈ ಪರಮಾತ್ಮನ ಸೃಷ್ಟಿಯಲ್ಲಿ ಎಲ್ಲದರಂತೆ ಒಂದು. ಇದನ್ನು ನಾಶಮಾಡುವ ಹಕ್ಕು ಯೋಗ್ಯತೆಯೂ ನನಗೆ ಇದ್ದರೂ ಹಕ್ಕಿಲ್ಲ. ಹಾಗಾಗಿ ನಾನು ಇದನ್ನು ನಾಶಮಾಡಬಾರದು ಎಂದು ಮನುಷ್ಯ ಅರಿತುಕೊಳ್ಳುತ್ತಾನೋ ಅಂದು ಅವನು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಇರಬಹುದು.

ರಸಧಾರೆ – 067

ಸೃಷ್ಟಿಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ |

ದೃಷ್ಟಿಗೋಚರವದರಳೊಂದು ಗೆರೆ ಮಾತ್ರ ||

ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |

ಕ್ಲಿಷ್ಟದ ಸಮಸ್ಯೆಯದು- ಮಂಕುತಿಮ್ಮ ||

ಸೃಷ್ಟಿಸಂಕಲ್ಪ = ಜಗತ್ತಿನ ಸೃಷ್ಟಿಯ ಸಂಕಲ್ಪ (ನಕಾಶೆ) , ಲಿಪಿ = ಲೇಖಾ ಧಾಖಲೆ, ಜಗತ್ತಿನ ಸೃಷ್ಟಿಯ ಸಂಕಲ್ಪ ( ನಕಾಶೆ ) ನಮ್ಮ ಎದುರಲಿ ಇಲ್ಲ. ದೃಷ್ಟಿಗೆ ಗೋಚರವು ಅದರೊಳು ಒಂದು ಗೆರೆ ಮಾತ್ರ. ಅಷ್ಟರಿಂದ ಇದು ನಷ್ಟ ಅದು ಶಿಷ್ಟ ಎನ್ನುವುದೆ? ಇದು ಕ್ಲಿಷ್ಟದ ಸಮಸ್ಯೆ ಮಂಕುತಿಮ್ಮ.

“ಜಗತ್ತು ಸೃಷ್ಟಿಯಾಗುವ ಮುಂಚಿನ ಲೇಖಾ ಅಥವಾ ರೇಖಾ ಚಿತ್ರ ನಮ್ಮ ಬಳಿ ಇಲ್ಲ. ನಾವು ಕಾಣಲಾಗಿರುವುದು ಒಂದು ಬೃಹತ್ ಚಿತ್ರದಲ್ಲಿ ಒಂದೇ ಗೆರೆ ಮಾತ್ರ. ಅಷ್ಟು ಸಣ್ಣ ಗೆರೆಯನ್ನು ಕಂಡು ನಾವು ಈ ಸೃಷ್ಟಿಯನ್ನು ಕುರಿತು ವ್ಯಾಖ್ಯಾನ ಮಾಡುತ್ತಾ, ಇದು ಸರಿ ಇದು ಸಪ್ಪು ಎನ್ನುವುದು ಸರಿಯೇ?” ಎಂದು ಕೇಳುತ್ತ, ಇದು ಬಹಳ ಕ್ಲಿಷ್ಟದ ಸಮಸ್ಯೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲಿ.

ನಾವು ಒಂದು ಮನೆ ಕಟ್ಟಬೇಕಾದರೆ ಅದಕ್ಕೊಂದು ನಕಾಶೆ ಬೇಕು. ನೀವು ಯಾರಾದರೂ ಗೃಹ ನಿರ್ಮಾಣ ಅಭಯಂತರನ್ನು ಸಂಪರ್ಕಿಸಿದಲ್ಲಿ, ಅವರು ಮೊದಲು ನಿವೇಶನದ ಅಳತೆ ಹಾಕಿ, ನಿಮ್ಮೊಡನೆ ಸಂಪ್ರತಿಸಿ, ನಿಮ್ಮ ಬೇಕು ಬೇಡಗಳನ್ನೆಲ್ಲ ವಿಚಾರಿಸಿ, ಒಂದಲ್ಲ ನಾಲ್ಕು ಬಾರಿ ಗೆರೆ ಎಳೆದು , ನಿಮಗೆ ತೋರಿಸಿ, ನೀವು ಹೇಳಿದ ಮತ್ತು ಅವರಿಗೆ ತೋಚಿದ ಮಾರ್ಪಾಡುಗಳನ್ನು ಮಾಡಿಕೊಂಡು ನಂತರ ಒಂದು ರೇಖಾ ನಕಾಶೆಯನ್ನು ತಯಾರುಮಾಡುತ್ತಾರೆ. ನಂತರ, ಅದರ ” ಮುನ್ನೋಟದ” ನಕಾಶೆ ತಯಾರುಮಾಡಿ, ” ನೋಡಿ ನಿಮ್ಮ ಮನೆ ಅಥವಾ ಕಟ್ಟಡ ಸಂಪೂರ್ಣವಾದಾಗ ಹೀಗೆ ಕಾಣುತ್ತದೆ” ಎಂದು ನಿಮಗೆ ತೋರಿಸುತ್ತಾರೆ. ತದನಂತರ, ಈ ಎರಡರ ನೀಲಿ ನಕಾಶೆ ತಯಾರುಮಾಡಿ, ಕಟ್ಟಡ ಕೆಲಸ ನಡೆಯುವಷ್ಟು ದಿನವೂ ಆ ನಕಾಶೆಯನ್ನು ಬಳಿಯಲ್ಲಿ ಇಟ್ಟುಕೊಂಡು, ಕಟ್ಟಡವು ಅದರ ಪ್ರಕಾರ ಬರುತ್ತಿದೆಯೇ ಇಲ್ಲವೇ ಎಂದು ನೋಡುತ್ತಾ ಇರುತ್ತಾರೆ. ಅಷ್ಟು ಮಾಡಿದರೂ ಎಲ್ಲೋ ಒಂದು ಕೊರತೆ ನಿಮಗೆ ಕಾಣುತ್ತದೆ.

ಈ ಜಗತ್ತು ಎಷ್ಟು ದೊಡ್ಡದೆಂದರೆ ನಾವದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೆಂದು ನಾ ಈ ಹಿಂದೆ ಹೇಳಿದ್ದೇನೆ. ಶತ ಶತ ಕೋಟಿ ಕೋಟಿ ಕಿಲೋಮೀಟರ್ ( ಇದು ಬರೀ ಊಹೆ ಅಷ್ಟೇ-ಕಂಡವರಾರು) ವಿಸ್ತೀರ್ಣವಿರುವ ಈ ಜಗತ್ತನ್ನು ನಿರ್ಮಾಣ ಮಾಡುವಾಗ , ಇನ್ನೆಂತಹ ರೇಖಾಚಿತ್ರವನ್ನು ಆ ಪರಮಾತ್ಮ ತಯಾರುಮಾಡಿರಬೇಕು. ಅದನ್ನು ನಾವು ನೋಡಿಲ್ಲ. ಆದರೆ ಆ ರೇಖಾ ಚಿತ್ರದ ಯಾವುದೋ ಒಂದು ಗೆರೆಯನ್ನು ನೋಡಿ ನಾವು, “ಇದು ಸರಿ ಅದು ತಪ್ಪು ” ಎಂದು ವ್ಯಾಖ್ಯಾನ ಮಾಡುವುದು ಎಷ್ಟು ಸರಿ. ಹಾಗೆ ಹೇಳುವುದು ಸರಿಯೇ. ಅಂದರೆ ಈ ಸೃಷ್ಟಿಯ ಆಯ ಅಳತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ವಿವರಿಸಲೂ ಸಾಧ್ಯವಿಲ್ಲ. ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಾ ಆ ಸೃಷ್ಟಿಯಲ್ಲಿ ಕೊರತೆಗಳನ್ನು ಕಾಣುವುದು ಅವಿವೇಕತನವಲ್ಲದೆ ಮತ್ತೇನು. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ವ್ಯಾಖ್ಯಾನ ಮಾಡುವುದು ಎಷ್ಟೊಂದು ಮೂರ್ಖತನವಲ್ಲವೇ?

ಮತ್ತೊಂದು ವಿಷಯವೇನೆಂದರೆ, ಒಂದು ರೇಖಾಚಿತ್ರವನ್ನು ತಯಾರು ಮಾಡಿದರೆ, ಅಷ್ಟೇ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಈ ಜಗತ್ತಿನ ರೂಪ ನಿರಂತರ ಬದಲಾಗುತ್ತಾ ಇರುತ್ತದೆ. ಏಕೆಂದರೆ ಇದರ ಹಿಂದಿರುವುದು ಆ ಭೃಹತ್ ಚೇತನ. ಹಾಗಾಗಿ ಚೈತನ್ಯಮಯವಾದ ಈ ಜಗತ್ತು ನಿರಂತರ ಬದಲಾಗುತ್ತಾ ಹಲವಾರು ವಿಸ್ಮಯಗಳನ್ನು ಪ್ರಕಟಿಸುತ್ತಾ, ಪ್ರದರ್ಶಿತ್ತಾ ಇರುತ್ತದೆ. ಆ ಪರಮಾತ್ಮನ ಸೃಷ್ಟಿಯಲ್ಲೂ ಕೊರತೆಗಳನ್ನು ಹುಡುಕದೆ, ಅವನ ಸೃಷ್ಟಿಗೆ ಯಾವುದಾದರೂ ಆದರೆ ಅವನಿಗೆ ಮಾತ್ರ ಗೊತ್ತಿರುವ ಒಂದು ಕಾರಣವಿದೆ. ಅದನ್ನರಿಯಲು ನಮಗೆ ಸಾಧ್ಯವಿಲ್ಲ.

ನಮ್ಮಲ್ಲಿ ಬಹಳಷ್ಟು ಜನ ನಿಮಗೆ ಸಿಗುತ್ತಾರೆ . ಯಾವುದಾದರೂ ವಿಷಯವನ್ನು ಕೊಡಿ. ಅವರಿಗೆ ಗೊತ್ತಿದೆಯೋ ಇಲ್ಲವೋ ಗಂಟೆಗಳಗಟ್ಟಲೆ ಭಾಷಣವನ್ನೇ ಮಾಡಿಬಿಡುತ್ತಾರೆ. ನೋಡುವವರಿಗೆ “ಆಹಾ ಓಹೋ” ಎನ್ನಿಸಬೇಕು ಹಾಗೆ ಇರುತ್ತೆ ಅವರ ಬುರಡೆ. ಅವರಿಗೆ ಎಲ್ಲವನ್ನು ತಮ್ಮ ಶೈಲಿಯಲ್ಲಿ ಟೀಕೆ ಮಾಡಲು ಬರುತ್ತೆ, ಸರಿ ತಪ್ಪುಗಳ ಅರಿವಿಲ್ಲದೆಯೇ? ಅದರಿಂದ ಯಾವ ಪ್ರಯೋಜನವೂ ಇಲ್ಲ. ಕೇವಲ ನಮ್ಮ ಅಹಂಕಾರದ ತೃಷೆಯನ್ನು ತಣಿಸಲಷ್ಟೇ ಉಪಯೋಗ. ಹಾಗಾಗಿ ವಾಚಕರೆ ನಾವು ನಮಗೆ ಅರಿಯದ ವಿಷಯದ ವ್ಯಾಖ್ಯಾನ ಮಾಡುವಂತಾ ಸಾಹಸವನ್ನು ಮಾಡದೆ, ನಮ್ಮ ನಮ್ಮ ಅರಿವಿನ ಪರಿಧಿ ಮತ್ತು ಮಿತಿಗಳಲ್ಲಿ ಈ ಜಗತ್ತನ್ನು ಮತ್ತು ಅದನ್ನು ಸೃಷ್ಟಿಮಾಡಿದ ಪರಮಾತ್ಮನ ಮಹತ್ತು ಮಹಿಮೆಯನ್ನು ಅನುಭವಿಸುತ್ತಾ, ಆನಂದದಿಂದ ಜೀವನವನ್ನು ಕಳೆಯುವ ಪ್ರವೃತ್ತಿ ನಮದಾಗಬೇಕು. ಆಗಲೇ ನಿಜವಾದ ಸುಖ ಮತ್ತು ಆನಂದ.

ಅಂತರ್ವೀಕ್ಷಣೆ ರಸಧಾರೆ – 068

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಲ್ಲಿ |

ಎಲ್ಲಿ ಪರಿಪೂರಣವೊ ಅದನರಿಯುವನಕ ||

ಸೋಲ್ಲಿಸುವರಾರು ಸೃಷ್ಟಿಯ ಪೇಟಿಯೋಳಗುಟ್ಟ? |

ಎಲ್ಲ ಬಾಳು ರಹಸ್ಯ – ಮಂಕುತಿಮ್ಮ ||

ಅರೆಬೆಳಕು = ಸ್ಪಷ್ಟವಿಲ್ಲದ ಜ್ಞಾನ. ಅರೆಸುಳಿವು = ಆ ಜ್ಞಾನದ ಮಾರ್ಗಗಳೂ ನಿಚ್ಚಳವಲ್ಲ, ಪರಿಪೂರಣವೊ = ಪರಿ ಪೂರ್ಣವೋ, ಅದನರಿರುವನಕ = ಅದನ್ನು ಅರಿಯುವ ತನಕ. ಸೋಲ್ಲಿಸುವರಾರು – ಹೇಳುವವರಾರು, ಪೇಟಿಯೂಳಗುಟ್ಟ = ಪೆಟ್ಟಿಗೆಯೊಳಗಿನ ಗುಟ್ಟ.

ಎಲ್ಲ ವಿಷಯಗಳಲ್ಲೂ ಅರೆ ಬರೆ ಜ್ಞಾನ ಮತ್ತು ತಿಳುವಳಿಕೆ. ಆ ತಿಳುವಳಿಕೆಯನ್ನು ಪಡೆವ ಮಾರ್ಗಗಳೂ ಸಹ ಅರ್ದಂಬರ್ದ ಮತ್ತು ಯಾವುದೂ ನಿಚ್ಚಳವಲ್ಲ. ಅದು ನಮಗೆ ಸಂಪೂರ್ಣ ಜ್ಞಾನ ಬರುವ ತನಕ ಹಾಗೇ ಇರುತ್ತದೆ. ಆದರೆ ನಮಗೆ ಆ ಪರಿಪೂರ್ಣಜ್ಞಾನವನ್ನು ಹೇಳಿಕೊಡುವವರಾರು. ಈ ಜೀವನವೆಲ್ಲ ಒಂದು ನಿಗೂಢ ಅಥವಾ ರಹಸ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಾಚಕರೆ, ನಮಗೇನು ಗೊತ್ತು ಹೇಳಿ? ನಮಗೇನು ಗೊತ್ತು ಎನ್ನವುದೇ ಗೊತ್ತಿಲ್ಲ.!!!. ನಮ್ಮ ಜನ್ಮದಿಂದ ಹಿಡಿದು ನಮ್ಮೊಡನೆ ನಡೆಯುವ ಎಲ್ಲ ವಿಧ್ಯಮಾನಗಳನ್ನು ನಾವು ಎಂದೂ ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಸಾಧ್ಯವೂ ಇಲ್ಲ. ಏಕೆಂದರೆ ಒಂದು ವಸ್ತು, ವಿಷಯ, ಅಥವಾ ವ್ಯಕ್ತಿಯನ್ನು ಸಂಪೂರ್ಣ ಅರ್ಥಮಾಡಿಕೊಳ್ಳಬೇಕಾದರೆ, ನಾವು ಆ ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಎಲ್ಲಾ ಅಯಾಮಗಳಿಂದಲೂ ಪರಿಕಿಸಿ ನೋಡಬೇಕು. ಎರಡು, ಯಾವುದೇ ಪೂರ್ವಾಗ್ರಹವಿಲ್ಲದೆ ಶುದ್ಧಮನಸ್ಕರಾಗಿ ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಇಚ್ಛೆ ಇರಬೇಕು. ಆಗ ಅದು ಅರ್ಥವಾಗುತ್ತದೆ. ನಾವು ಹಾಗೆ ಇರಲು ಸಾಧ್ಯವಿಲ್ಲ. ನಮಗೆ” ಅರೆಬೆಳಕು ಅರೆಸುಳಿವು” ಹಾಗಾಗಿ ನಮಗೆ ಅರ್ಥವಾಗುವುದಿಲ್ಲ.

ಈ ಜಗತ್ತಿನಲ್ಲಿ ( ಲಕ್ಷಾಂತರ ವರ್ಷಗಳಿಂದ ಇರುವ ) ಮನುಷ್ಯನಿಗೆ ಯೋಚನೆ ಮಾಡುವ ಶಕ್ತಿ ಬಂದಾಗಿಲಿಂದಲೂ ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದಾನೆ. ಹಲಕೆಲವರು ಅಲ್ಪಸ್ವಲ್ಪ ತಿಳಿದಿದ್ದಾರೆ. ಆದರೆ ಎಲ್ಲವನ್ನೂ ಅಲ್ಲ. ಇಡೀ ಜಗತ್ತಿನಲ್ಲಿ ಬಹಳಷ್ಟು ದಾರ್ಶನಿಕರು ಆಗಿಹೋಗಿದ್ದಾರೆ. ವೇದಕಾಲದ ಋಷಿಗಳು ಭಾರತೀಯ ಉಪನಿಷತ್ತಿನ ಕಾಲದ ದಾರ್ಶನಿಕರು, ಗ್ರೀಕ್ ದೇಶದ ತತ್ವಶಾಸ್ತ್ರಿಗಳು ಹಲವಾರು ವಿಚಾರದಲ್ಲಿ ಈ ಜಗತ್ತಿನ ಸೃಷ್ಟಿಗೆ ಒಂದು ಸೂಕ್ತ ವ್ಯಾಖ್ಯಾನ ಮಾಡಲು ಪ್ರಯತ್ನಪಟ್ಟಿದ್ದಾರೆ . ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಭಾಗವತ , ಪುರಾಣಗಳು, ಅವಕ್ಕೆ ಬೇರೆ ಬೇರೆ ಆಚಾರ್ಯರುಗಳು ಬರೆದ ಭಾಷ್ಯಗಳು ಮತ್ತು ಹೊರದೇಶಗಳ ದಾರ್ಶನಿಕರ, ಜ೦ಡವೆಸ್ತಾ, ಬೈಬಲ್, ಖುರಾನ್ ಗಳೆಲ್ಲವೂ ತಮ್ಮದೇ ಆದ ರೀತಿಯಲ್ಲಿ ಜಗತ್ತಿನ ಕರ್ತನ ಕ್ರಿಯೆಗೆ ಒಂದು ಸೂಕ್ತ ಪರಿಭಾಷೆಯನ್ನು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಕಂಡಿದ್ದಾರೆ. ಆದರೆ ಸಂಪೂರ್ಣ ಸತ್ಯವನ್ನು ಕಂಡುಕೊಳ್ಳಲು ವಿಫಲರಾಗಿದ್ದಾರೆ. ಎಲ್ಲರದೂ ಅವರವರು ಕಂಡುಕೊಂಡ ಅಂತರಂಗದ ಸತ್ಯವಷ್ಟೇ. ಆದರೂ ಇಂದೊಂದು ರಹಸ್ಯ. ನಮ್ಮ ಅರಿವಿನ ಪರಿಧಿಯೊಳಕ್ಕೆ ಬರದು. ಹಾಗಾಗಿ ರಹಸ್ಯ.

ಹಾಗಾಗಿ ಜಗತ್ತಿನ ಸತ್ಯವನ್ನು ಯಾರು ಹೇಳುವವರು ಎಂದು ಮಾನ್ಯ ಗುಂಡಪ್ಪನವರೂ ಪ್ರಶ್ನಿಸುತ್ತಾರೆ. ಹಾಗೆ ನಾವೂ ಯೋಚಿಸಿದಾಗ, ನಮಗೆ ತಿಳಿಯುವುದು ಏನೆಂದರೆ ಹೌದು ನಮಗೆ ಯಾರೂ ಹೇಳಲು ಸಾಧ್ಯವಿಲ್ಲ. ನಾವು ನಮ್ಮ ನಮ್ಮ ರೀತಿಯಲ್ಲೇ ಅನುಭವಿಸಬೇಕು. ಈ ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನ ಕ್ರಿಯೆಯ ಬಗ್ಗೆ ನಮಗೆ ಸಂಪೂರ್ಣ ಜ್ಞಾನ ಉಂಟಾಗುವವರೆಗೂ, ನಮಗೆ ಈ ಅರೆಬರೆ ಜ್ಞಾನ ಮತ್ತು ಅರೆಬರೆ ದೃಷ್ಟಾಂತಗಳೇ ಇರುತ್ತವೆ. ಈ ಜಗತ್ತಿನ ಸೃಷ್ಟಿಯ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನು ಅರಿಯಲು ಸಾಧ್ಯವೇ ಇಲ್ಲ. ಇದು ರಹಸ್ಯ. ಏಕೆಂದರೆ ಒಂದು ಅದ್ಭುತ ಮತ್ತು ಬೃಹತ್ತಾದ ವಿಷಯದ ಸಮಗ್ರ ಅವಲೋಕನ ಮಾಡಿ ಅರಿವಿಗೆ ತಂದುಕೊಳ್ಳುವುದಕ್ಕೆ ಅಷ್ಟೇ ದೊಡ್ಡ ಜ್ಞಾನ ಮತ್ತು ದೃಷ್ಟಿ ಬೇಕು. ಅದನ್ನು ತಂದುಕೊಳ್ಳುವ ಪ್ರಯತ್ನವನ್ನು ನಾವು ಮಾಡಬಹುದು. ಅದನ್ನು ಮಾಡುತ್ತಾ ನಾವು ನಮ್ಮದೇ ಆದ ಸತ್ಯವನ್ನು ಅರಿಯಲು ಪ್ರಯತ್ನ ಪಡೋಣವೇ?

ರಸಧಾರೆ – 069

ಹೆಸರನರಿಯದ ಸಸಿಯೊಳಿರದೆ ರಸಗಂಧಗಳು ? |

ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||

ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು |

ಉಸಿರುತಿಹೆವದ ನಾವು – ಮಂಕುತಿಮ್ಮ. ||

ಹೆಸರನರಿಯದ = ಹೆಸರೇ ಗೊತ್ತಿಲ್ಲದ, ರಸಗಂಧಗಳು = ಮಕರಂದ ಮತ್ತು ಪರಿಮಳ, ದಿಸೆದಿಸೆಗಳೊಳು = ದಿಕ್ಕು ದಿಕ್ಕುಗಳಲ್ಲಿ, ಉಸಿರುತಿಹೆವದ = ಆ ಗಾಳಿಯನ್ನು ಸೇವಿಸುತ್ತಿದ್ದೇವೆ.

ನಮಗೆ ಹೆಸರೇ ಗೊತ್ತಿಲ್ಲದ ಸಸಿಯಲ್ಲಿ ಮಕರಂದ ಮತ್ತು ಸುಗಂಧಗಳಿರುವುದಿಲ್ಲವೇ? ಆ ಸೂರ್ಯನ ಬೆಳಕಿನಿಂದ ಅವು ಬೆಳೆಯುವುದಿಲ್ಲವೇ? ಆ ಗಿಡಗಳಲ್ಲಿರುವ ಸುಗಂಧವನ್ನು ಗಾಳಿಯು ದಿಕ್ಕು ದಿಕ್ಕುಗಳಿಗೆ ಪಸರಿಸದೆ?

ಅಂತಹ ಗಾಳಿಯನ್ನು ನಾವು ಉಸಿರಾಡುತ್ತಿಲ್ಲವೇ? ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಾವು ಉಸಿರಾಡುವ ಗಾಳಿಯಲ್ಲಿ ಯಾವ ಯಾವ ತೋಟದ ಯಾವ ಯಾವ ಗಿಡಗಳ ಹೂಗಳ ಪುಷ್ಪಗಳ ಸುಗಂಧ ಮಿಳಿತವಾಗಿದೆಯೋ ನಮಗರಿವಿರುವುದಿಲ್ಲ. ಎರಡನೆಯದಾಗಿ ಹೆಸರೇ ಇಲ್ಲದ ಅಥವಾ ನಮಗೆ ಗೊತ್ತಿರದ ಗಿಡವಾದರೂ, ಅದರ ಹೂಗಳಿಗೂ ಒಂದು ಸುಗಂಧವಿರುತ್ತದೆ. ಆ ಗಿಡದ ಬೆಳವಣಿಗೆಗೂ ಆ ನಭೋಮಂಡಲದಲ್ಲಿರುವ ಸೂರ್ಯನೇ ಕಾರಣ ಮತ್ತು ಬೀಸುವ ಗಾಳಿಯೂ ಬೇಧಭಾವವಿಲ್ಲದೆ ಎಲ್ಲ ಗಿಡಗಳ ಸುಗಂಧವನ್ನೂ ತನ್ನೊಡಲಲ್ಲಿ ಸೇರಿಸಿಕೊಂಡು ಬೀಸುತ್ತದೆ ಮತ್ತು ಆ ಹಲ ಸುಗಂಧಭರಿತ ವಾಯುವನ್ನು ನಾವು ಸೇವಿಸುತ್ತೇವೆ. ಇಲ್ಲಿ ಯಾರೂ ಬೇಧಭಾವವನ್ನು ಮಾಡುವುದಿಲ್ಲ.

ಇಲ್ಲಿ ನಾವು ಅರಿಯಬೇಕಾದದ್ದು ಏನೆಂದರೆ, ಹೇಗೆ ಆ ಸೂರ್ಯ, ಗಾಳಿ ಮತ್ತು ನಾವು ಉಸಿರಾಡುವ ಪ್ರಕ್ರಿಯೆ ಎಲ್ಲವೂ ಬೇಧವಿಲ್ಲದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತವೆಯೋ, ಹಾಗೆಯೇ ಈ ಜಗತ್ತಿನಲ್ಲಿ ಆ ಪರಮಚೇತನವೂ ಸಹ ಬೇಧಭಾವವಿಲ್ಲದೆ, ಎಲ್ಲವನ್ನೂ ಸಮನಾದ ಭಾವದಿಂದ ನೋಡಿಕೊಳ್ಳುತ್ತದೆ. ಸೃಷ್ಟಿಸಿದ ಪ್ರತಿ ಜೀವಿಗೂ ಅದರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಏನೇನು ಬೇಕೋ ಅದನ್ನೆಲ್ಲ ಮೊದಲೇ ಸಿದ್ಧಪಡಿಸಿದೆ. ಬೇಧವೇನಿದ್ದರೂ ನಮ್ಮ ಮನಸ್ಸುಗಳಲ್ಲಿ ಮಾತ್ರ. ನಾವುಗಳು ಅದರ ಉದ್ದೇಶ್ಯ, ಅದರ ಕಾರ್ಯವೈಖರಿಯಬಗ್ಗೆ ಚಿಂತಿಸದೆ ಅನುಭವಿಸುತ್ತಾ ಇರುತ್ತೇವೆ.

ಹಾಗೆಯೇ ಅಜ್ಞಾತರಾದ ಹಲವಾರು ಜನ ಈ ಜಗತ್ತಿನ ಒಳಿತಿಗಾಗಿ ಯಾವ ಫಲಾಪೇಕ್ಷೆಯೂ ಇಲ್ಲದೆ, ಅಹರ್ನಿಶಿ ದುಡಿಯುತಾರೆ ಮತ್ತು ನಿರಂತರ ದುಡಿಯುತ್ತಲೇ ಇರುತ್ತಾರೆ. ಅವರ ಹೆಸರು ಯಾವ ಪತ್ರಿಕೆ ಅಥವಾ ದೂರದರ್ಶನದಲ್ಲಿ ಪ್ರಚಾರವಾಗುವುದಿಲ್ಲ. ಅವರು ನಮ್ಮ ಸುತ್ತು ಮುತ್ತಲ್ಲೇ ಇದ್ದರೂ ನಮಗೆ ತಿಳಿದಿರುವುದಿಲ್ಲ. ಆದರೆ ಅವರ ಕಾರ್ಯದ ಫಲ ಮಾತ್ರ ಇಡೀ ಸಮಾಜಕ್ಕೆ ದೊರೆಯುತ್ತದೆ. ತಮ್ಮ ಕಾರ್ಯದ ಫಲದವನ್ನು ಯಾರು ಪಡೆದುಕೊಂಡಿದ್ದಾರೆ ಎಂದು ಅವರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ನಿಸ್ವಾರ್ಥಿಗಳು. ಸಹಸ್ರಾರು ವರ್ಷಗಳ ಪುರಾತನವಾದ ವೇದಗಳ ಕರ್ತೃಗಳು ಯಾರೆಂದು ಯಾರಿಗೂ ಅರಿಯದು. ಆದರೆ ಅದರಲ್ಲಿನ ಅರಿವು ಕ್ರಮ ಮತ್ತ ಜ್ಞಾನವು ಎಲ್ಲ ಜನರ ಮೇಲೆ ಹೇಗೆ ಪ್ರಭಾವ ಬೀರಿದೆ ಮತ್ತು ಒಂದು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಕಾರಣವಾಗಲಿಲ್ಲವೇ? ಮತ್ತು ಇಂದಿಗೂ ಬೀರುತ್ತಾ ಇದೆ ಅಲ್ಲವೆ? ವಿಡಂಬನೆ, ಏನೆಂದರೆ ನಾವು ಎಷ್ಟೊಂದು ವಸ್ತುಗಳನ್ನು ನಮ್ಮ ಸೌಕರ್ಯಕ್ಕಾಗಿ ಉಪಯೋಗಿಸುತ್ತೇವೆ . ಆದರೆ ಎಂದಿಗೂ ಅದರ ಹಿಂದೆ ಇರುವ ಹಲವರ ಅರಿವಿನ ಮತ್ತು ಶ್ರಮದ ಬಗ್ಗೆ ಯೋಚಿಸುವುದೇ ಇಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ಇದುವೇ ಪ್ರಪಂಚ!!!! ಹಾಗೆಂದು ಅದರ ಬಗ್ಗೆಯೇ ಯೋಚಿಸುತ್ತಾ ಇರಬೇಕೆಂದೂ ಅರ್ಥವಲ್ಲ.

ಹಾಗಾಗಿ ವಾಚಕರೆ, ನಮ್ಮ ಕರ್ತವ್ಯವೇನೆಂದು ಯೋಚಿಸಿದರೆ, ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗೆ ನಾವು ಬಾಧಕರಾಗದೆ, ಕೇವಲ ಸ್ವಾರ್ಥ ರಹಿತವಾಗಿ ಪರೋಪಕ್ಕಾರಕ್ಕಾಗಿ ದುಡಿಯುವ ಈ ಸೃಷ್ಟಿಯಲ್ಲಿರುವ ಎಲ್ಲವನ್ನೂ ಗೌರವಿಸೋಣ, ಸಾಧ್ಯವಾದರೆ ಅವುಗಳಿಗೆ ನಮ್ಮ ಅಲ್ಪ ಶಕ್ತಿಯಿಂದ ಇಂಬು ಕೊಡೋಣ. ನಮ್ಮ ಕೃತಜ್ಞತೆಯನ್ನು ತೋರೋಣ.

ಪ್ರಕೃತಿ ರಸತಂತ್ರ ರಸಧಾರೆ – 070

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |

ಆವಿಯಾಗೇಳ್ದು ಮುಗಿಲಾಗಿ ಮಳೆಗೆರೆದು ||

ಬಾವಿಗೂಟೆಯನಿತ್ತು ನರರೊಡಲ ಸೇರುವುದು |

ದೈವ ರಸತಂತ್ರವಿದು – ಮಂಕುತಿಮ್ಮ ||

ಭೂವಿಷಯದಲಿ = ಈ ಬುವಿಗೆ ಸಂಬಂಧಿಸಿದ ವಿಷಯದಲ್ಲಿ, ಪುದಿದ = ಅಡಗಿದ, ರಸವಾಸನೆಗಳೆಲ್ಲ = ಗುಣ ಮತ್ತು ಸ್ವಭಾವಗಳೆಲ್ಲ, ಆವಿಯಾಗೇಳ್ದು = ಆವಿಯಾಗಿ ಎದ್ದು, ಮುಗಿಲಾಗಿ = ಮೋಡವಾಗಿ, ಬಾವಿಗೂಟೆಯನಿತ್ತು = ಭಾವಿಗಳಿಗೆ ಒರತೆಯಾಗಿ, ನರರೊಡಲ = ಮನುಷ್ಯರ ದೇಹವನ್ನು.

ಈ ಭೂಮಿಗೆ ಸಂಬಂಧಿಸಿದ ಮತ್ತು ಈ ಭೂಮಿಯಲ್ಲಿ ಅಡಗಿದ ರಸಗಳು ಸೂರ್ಯನ ಶಾಖದಿಂದ, ಆವಿಯಾಗಿ, ಅದು ಮೋಡವಾಗಿ ಮತ್ತೆ ಮಳೆಯಾಗಿ ಧರೆಗಿಳಿದು ಆ ಮಳೆಯನೀ ಭೂಮಿಯಲ್ಲಿ ಇಂಗಿ ಭಾವಿಗಳಿಗೆ ಒರತೆಯಾಗಿ ಆ ನೀರನ್ನು ಕುಡಿದ ನರರ ದೇಹವನ್ನು ಸೇರುವುವು. . ಇದೆ ದೈವ ನಿರ್ಮಿಸಿದ ರಸತಂತ್ರ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಭೂಮಿಯ ಒಳಗೆ ಮತ್ತು ಮೇಲೆ ಹಲವಾರು ರಾಸಾಯನಿಕ ವಸ್ತುಗಳು ಇವೆ. ಇಂಗಾಲ, ಜಲಜನಕ ಅಲ್ಯೂಮಿನಿಯಂ ಉಕ್ಕು, ಹಿತ್ತಾಳೆ, ಚಿನ್ನ, ಸತು, ಪಾದರಸದಂತ ಮೂಲ ಧಾತುಗಳು ಒಟ್ಟು ೧೧೮ ಇವೆ. ಲೆಡ್ ಆನನ್ ಸೆಪ್ತಿಯಂ ಎನ್ನುವುದು ಈ ಧಾತುಗಳಲ್ಲೇ ಇತ್ತೀಚಿಗೆ ಕಂಡು ಹಿಡಿದ ದಾತುವೆಂದು ಹೇಳಲ್ಪಡುತ್ತದೆ. ಜಲಜನಕ ಮತ್ತು ಹೀಲಿಯಂ ಈ ಜಗತ್ತಿನಲ್ಲಿ ಹೇರಳವಾಗಿದೆ ಇವೆಲ್ಲವೂ ಮತ್ತೂ ಇನ್ನೂ ಏನೇನೋ ಸೇರಿ ಆ ಜಗತ್ತಾಗಿದೆ. ಪ್ರೋಟಾನ್ಸ್, ನ್ಯುಟ್ರಾನ್ಸ್ ಅಥವಾ ಎಲೆಕ್ಟ್ರಾನ್ಸ್ ಇಲ್ಲದ ಕಪ್ಪು ವಸ್ತು ಗಳೂ ಇವೆ. ಇದರ ಸಂಪೂರ್ಣ ಜ್ಞಾನವನ್ನು ಯಾರಾದರೂ ರಸಾಯನ ಶಾಸ್ತ್ರಿಗಳನ್ನು ಕೇಳಿದರೆ ಹೇಳುತ್ತಾರೆ. ಅಂದರೆ ಈ ಜಗತ್ತಿನ ಸೃಷ್ಟಿಯ ಸಮಯದಲ್ಲಿ ಸೂರ್ಯನಲ್ಲಿ ಉಂಟಾದ ಮಾಹಾ ಸ್ಫೋಟವಾದಾಗ ಮೊದಲ ಇಪ್ಪತ್ತು ನಿಮಿಷಗಳಲ್ಲಿ ಇವೆಲ್ಲವೂ ಆದವು ಎಂದು ಹೇಳುತ್ತಾರೆ. ತಿಳಿದವರು ಇದನ್ನು ಇನ್ನೂ ಹೆಚ್ಚಾಗಿ ವಿವರಿಸ ಬಲ್ಲರು.

ಆ ಸೂರ್ಯನ ಶಾಖದಿಂದ ಉಂಟಾಗುವ ಆವಿಯಲ್ಲಿ ಈ ಎಲ್ಲ ವಸ್ತುಗಳ ಗುಣಗಳೂ ಬೇರೆ ಬೇರೆ ಪ್ರಮಾಣದಲ್ಲಿ ಸೇರಿ ಅವೆಲ್ಲವೂ ನಭೋಮಂಡಲ ಸೇರಿ, ಸೇರಿ ಸೇರಿ, ಮೋಡವಾಗುತ್ತದೆ. ಆ ಮೋಡದಲ್ಲಿ ಈ ಎಲ್ಲ ಗುಣಗಳೂ ಅಡಕವಾಗಿರುತ್ತದೆ. ಆ ಮೋಡ ತನ್ನ ತೂಕ ಹೆಚ್ಚಿಸಿಕೊಂಡಂತೆ ಭಾರ ತಾಳಲಾರದೆ ಮಳೆಯ ರೂಪದಲ್ಲಿ ಧರೆಗಿಳಿಯುತ್ತದೆ. ಮಳೆಯಾಗಿ ಹರಿವ ನೀರಿನಲ್ಲಿ ಈ ಎಲ್ಲ ಗುಣಗಳೂ ಸೇರಿ ಅದನ್ನು ಸೇವಿಸುವ ಎಲ್ಲ ಮಾನವರ ಒಡಲು ಸೇರುವುದು. ಅದು ಅವರವರ ದೇಹದಲ್ಲಿರುವ ರಾಸಾಯನಿಕಗಳ ಜೊತೆಗೆ ಮಿಶ್ರಣಗೊಂಡು ಅವರವರ ಮನೋ ವ್ಯಾಪಾರದ ಮೇಲೂ ಸಹ ತನ್ನ ಪ್ರಭಾವ ಬೀರುತ್ತದೆ. ಇದು ಪರಮಾತ್ಮ ಸೃಷ್ಟಿಸಿದ ಒಂದು ರಸ ತಂತ್ರ. ಇದು ಏರುಪೇರಾಗುತ್ತಿರುತ್ತದೆ. ನನ್ನ ಸ್ನೇಹಿತನಿಗೊಬ್ಬನಿಗೆ, ಅವನ ದೇಹದಲ್ಲಿ ಸೋಡಿಯಂ ಕಡಿಮೆಯಾಯಿತು ಎಂದು ೩ ದಿನದಲ್ಲಿ ತಲೆ ಕೂದಲೆಲ್ಲಾ ಬೆಳ್ಳಗೆ ಆಗಿ ಹೋಯಿತು. ಮತ್ತೆ ಅವನ ದೇಹದ ರಾಸಾಯನಿಕ ಸಮತೋಲನವನ್ನು ಸರಿಪಡಿಸಿದಾಗ ಅವ ಮೊದಲಿನಂತಾದ . ಪಿತ್ತ ಅಂದರೆ ಅಸಿಡಿಟಿ ಹೆಚ್ಚಾದರೆ ಮನುಷ್ಯ ತಿಕಲು ತಿಕ್ಕಲಾಗಿ ಆಡುತ್ತ್ತಾನೆ. ಹಾಗಾಗಿ ಈ ದೇಹದ ರಾಸಾಯನಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತೀರ ಅಗತ್ಯ. ಪಂಡಿತರು, ಜ್ಞಾನಿಗಳು ಮತ್ತು ವೈದ್ಯರು ಇದನ್ನು ನಮಗೆ ತಿಳಿಸಬೇಕು.

ಆಹಾ ಇನ್ನೂ ಅದೇನೇನು ಅದ್ಭುತಗಳಿವೆಯೋ ಈ ಜಗದ ಸೃಷ್ಟಿಯಲ್ಲಿ.

You may Also Like :

 

Leave a Comment